ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳಿತು ಕುಳಿತು ರೋಗ...

Last Updated 9 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಈಗ ನಾವೆಲ್ಲರೂ ಮನೆಯಲ್ಲೇ ಬಂಧಿಗಳು. ಹೀಗಾಗಿ ಹೆಚ್ಚಿನ ಸಮಯ ಕುಳಿತೇ ಇರುವಂಥ ಅನಿವಾರ್ಯ ಎದುರಾಗಿದೆ. ಆದರೆ ಇದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ...

ಕೋವಿಡ್ ಕಾರಣದಿಂದಾಗಿ ಮನೆಯಿಂದಲೇ ನೌಕರಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಶಾಲೆಗಳು ಇನ್ನು ಪೂರ್ಣಪ್ರಮಾಣದಲ್ಲಿ ಆರಂಭವಾಗದೆ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳ ಮೂಲಕವೇ ಪಾಠಗಳನ್ನು ಕೇಳುವಂತಾಗಿದೆ.ಹೆಚ್ಚು ಜನರು ಒಂದೆಡೆ ಸೇರುವುದು ಸುರಕ್ಷಿತವಲ್ಲ ಎಂಬುದನ್ನು ಅರಿತಿರುವ ಎಲ್ಲ ಕ್ಷೇತ್ರದವರು ತಮ್ಮ ಹಲವಾರು ಕಾರ್ಯಕ್ರಮಗಳನ್ನು ಈಗ ಆನ್‍ಲೈನ್ ಮೂಲಕವೇ ನಡೆಸುತ್ತಿದ್ದಾರೆ. ವೆಬಿನಾರ್‌ಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನೆಯಿಂದಲೇ ವೀಕ್ಷಣೆ ಮಾಡುವುದು ಅಭ್ಯಾಸವಾಗಿ ಹೋಗಿದೆ ಮನೆಯಲ್ಲಿ ಎಲ್ಲರೂ ಈಗ ಲ್ಯಾಪ್‍ಟಾಪ್ ಮುಂದೆ ಕುಳಿತಿರುವಂಥ ಸನ್ನಿವೇಶ ಬಂದೊದಗಿದೆ!

ಇದರ ಜೊತೆಯಲ್ಲಿಯೇ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆ್ಯಪ್, ಫೇಸ್‍ಬುಕ್, ಇನ್‌ಸ್ಟಾಗ್ರಾಂ ಮೊದಲಾದವುಗಳು ಜೀವನದ ಅವಿಭಾಜ್ಯ ಅಂಗಗಳಾಗಿವೆ. ಇವುಗಳ ಬಳಕೆಯನ್ನೂ ನಾವೆಲ್ಲರೂ ಒಂದೆಡೆ ಕುಳಿತೇ ಬಳಸುವುದಾಗುತ್ತಿದೆ. ಅಗತ್ಯ ವಸ್ತುಗಳನ್ನು, ತಿಂಡಿ–ತಿನಿಸುಗಳನ್ನು ಕುಳಿತಲ್ಲಿಗೇ ತರಿಸಿಕೊಳ್ಳುವ ಎಲ್ಲ ವ್ಯವಸ್ಥೆಗಳು ಇದೀಗ ಚಾಲನೆಯಲ್ಲಿವೆ. ಮೊದಲಿನಂತೆ ಬ್ಯಾಂಕ್‌ಗಳಿಗೆ ಖುದ್ದಾಗಿ ಹೋಗಬೇಕೆನ್ನುವುದಾಗಲಿ, ವಿದ್ಯುತ್ ಶುಲ್ಕವನ್ನು ಪಾವತಿಸಲು ಕಚೇರಿಗೆ ಹೋಗಲೇಬೇಕೆಂದೇನಿಲ್ಲ; ಅದೂ ಕೂಡ ಮನೆಯಲ್ಲಿ ಕುಳಿತೇ ಸಾಧ್ಯವಾಗಿದೆ. ಇದರ ಒಟ್ಟು ತಾತ್ಪರ್ಯ, ನಾವೆಲ್ಲರೂ ಹೆಚ್ಚಿನ ಸಮಯ ಒಂದೆಡೆಯೇ ಕುಳಿತುಕೊಂಡಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಂತ್ರಜ್ಞಾನದ ನೆರವಿನಿಂದ ಎಲ್ಲ ಕೆಲಸಗಳನ್ನೂ ಮನೆಯಲ್ಲಿ ಕುಳಿತುಕೊಂಡೇ ಮಾಡುತ್ತಿದ್ದೇವೆ ಎಂದು ಖುಷಿ ಪಡುತ್ತಿದ್ದೀರೇನು? ಆದರೆ ಅಧ್ಯಯನಗಳು ಈ ರೀತಿ ದೀರ್ಘಕಾಲದವರೆಗೆ ಕುಳಿತೇ ಇರುವುದು ಆರೋಗ್ಯದ ದೃಷ್ಟಿಯಿಂದ ಖಂಡಿತ ಅಪಾಯವೆಂದೂ, ಸುಮಾರು ಮೂವತ್ತಕ್ಕೂ ಹೆಚ್ಚು ಬಗೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದೆಂದೂ ತಿಳಿಸುತ್ತವೆ. ಈ ಎಲ್ಲ ಸಮಸ್ಯೆಗಳನ್ನು ಒಟ್ಟಾಗಿ ತಜ್ಞರು ‘ಸಿಟ್ಟಿಂಗ್ ಡಿಸೀಸ್’ ಎಂದು ಕರೆದಿದ್ದಾರೆ. ಅನೇಕ ವರ್ಷಗಳ ನಂತರ ಒಂದೊಂದೇ ಸಮಸ್ಯೆಗಳು ಕಾಣಿಸಿಕೊಳ್ಳಬಹುದಾದ ಇದು ಧೂಮಪಾನದಷ್ಟೇ ಅಪಾಯಕರ ಎಂದೂ ಕೆಲವರು ತಜ್ಞರು ಹೇಳುತ್ತಿದ್ದಾರೆ.

ಎಂತಹ ಸಮಸ್ಯೆಗಳು?

ನಿಂತಿರುವ ಅಥವಾ ಯಾವುದಾದರೊಂದು ಬಗೆಯ ಚಲನೆಯಲ್ಲಿರುವ ವ್ಯಕ್ತಿಗೆ ಹೋಲಿಸಿದರೆ, ನಿರಂತರವಾಗಿ ಎರಡು ತಾಸುಗಳವರೆಗೆ ಕುಳಿತುಕೊಂಡಾಗ ಪ್ರತಿ ಬಾರಿ ಸುಮಾರು 352 ಕ್ಯಾಲೋರಿಗಳಷ್ಟು ಶಕ್ತಿಯು ಶೇಖರಿಸಲ್ಪಡುತ್ತದೆ. ಹಾಗಾಗಿಯೇ ದಿನವೊಂದರಲ್ಲಿ ಹೆಚ್ಚು ಸಮಯ ಕುಳಿತೇ ಇರುವ ವ್ಯಕ್ತಿಯು ದೀರ್ಘಕಾಲಿಕ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಅಧಿಕ ದೇಹತೂಕ, ಹೃದಯಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಮೊದಲಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಎಲ್ಲ ಸಾಧ್ಯತೆಗಳೂ ಹೆಚ್ಚು. ಕುಳಿತೇ ಇರುವಾಗ ದೇಹದಲ್ಲಿ ಮನಸ್ಸನ್ನು ಪ್ರಫುಲ್ಲಗೊಳಿಸುವ ನರವಾಹಕಗಳ ಉತ್ಪಾದನೆಯೂ ಕ್ಷೀಣಿಸುವುದರಿಂದ ವ್ಯಕ್ತಿಯನ್ನು ಒಂದು ಬಗೆಯ ನಿರುತ್ಸಾಹ ಕೂಡ ಕಾಡಬಹುದು. ಕುಳಿತೇ ಇರುವುದರಿಂದ ವ್ಯಕ್ತಿಯ ಮಾನಸಿಕ ಕಾರ್ಯಕ್ಷಮತೆಯೂ ಕಡಿಮೆಯಾಗಬಹುದು. ಹೆಚ್ಚು ಸಮಯದವರೆಗೆ ಮೊಬೈಲ್, ಕಂಪ್ಯೂಟರ್ ಜೊತೆಯಲ್ಲಿ ಕೆಲಸ ಮಾಡುವವರು ಕುತ್ತಿಗೆ ನೋವು, ಬೆನ್ನುನೋವು, ತಲೆನೋವು ಮತ್ತು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಬಳಲಬಹುದು. ಕೆಲವೊಮ್ಮೆ ವ್ಯಕ್ತಿಯ ನಿಲುವಿನಲ್ಲಿ, ಭಂಗಿಯಲ್ಲಿ ದೋಷಗಳು ಕಂಡುಬರಬಹುದು. ಗೂನುಬೆನ್ನು, ಭುಜಗಳ ನೋವು, ಕೈಬೆರಳುಗಳಲ್ಲಿ ಜೋಮು ಹಿಡಿದಂತಾಗುವುದು – ಮೊದಲಾದ ಸಮಸ್ಯೆಗಳೂ ಕುಳಿತೇ ಕೆಲಸ ಮಾಡುವವರಲ್ಲಿ ಸಾಮಾನ್ಯ.

ನೆನಪಿಡಿ: ದಿನವೊಂದರಲ್ಲಿ ಮೂರು ತಾಸುಗಳಿಗೂ ಕಡಿಮೆ ಕುಳಿತುಕೊಳ್ಳುವುದನ್ನು ರೂಢಿಸಿಕೊಂಡರೆ, ವ್ಯಕ್ತಿಯ ಜೀವಿತಾವಧಿಯನ್ನು ಎರಡು ವರ್ಷದವರೆಗೆ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಹೀಗೆ ಮಾಡಿ

* ಪ್ರತಿ ಮೂವತ್ತು ನಿಮಿಷಗಳಿಗೊಮ್ಮೆ ಕುರ್ಚಿ ಬಿಟ್ಟು ಏಳಿ. ಕನಿಷ್ಠ ಐದು ನಿಮಿಷಗಳ ಕಾಲ ಮನೆಯಲ್ಲಿಯೇ ಅತ್ತಿಂದಿತ್ತ ಅಡ್ಡಾಡಿರಿ. ಅತ್ತಿಂದಲಿತ್ತ ಚಲಿಸುತ್ತಾ ಮಾಡಬಹುದಾದ ಕೆಲಸಗಳನ್ನು ಮಧ್ಯೆ ಮಧ್ಯೆ ಮಾಡುತ್ತಿರಿ.

* ಒಂದೇ ಸಮನೆ ದೂರದರ್ಶನದ ಕಾರ್ಯಕ್ರಮಗಳನ್ನು ನೋಡದಿರಿ. ಒಂದು ಕಾರ್ಯಕ್ರಮ ಮುಗಿಯುತ್ತಲೂ ಎದ್ದು ಬೇರಾವುದಾದರೂ ನಿಂತು ಮಾಡುವ ಕೆಲಸದಲ್ಲಿ ತೊಡಗಿರಿ.

* ನೀವು ಇತರ ಕೆಲಸಗಳಿಗಾಗಿ ಬಹಳ ಸಮಯ ಕುಳಿತೇ ಇರುತ್ತೀರಾದರೆ ದೂರದರ್ಶನ ವೀಕ್ಷಣೆಯನ್ನು ನಿಂತು ಅಥವಾ ನಿಧಾನವಾಗಿ ಅತ್ತಿಂದಿತ್ತ ಓಡಾಡುತ್ತಾ ಮಾಡಬಹುದು.

* ಕುಳಿತು ಕೆಲಸ ಮಾಡುವಾಗ ಕಡ್ಡಾಯವಾಗಿ ಪ್ರತಿ ಒಂದು ತಾಸಿಗೊಮ್ಮೆ ಎದ್ದು ಹತ್ತು ನಿಮಿಷಗಳ ಕಾಲ ಬಿಡುವು ತೆಗೆದುಕೊಳ್ಳಬೇಕು. ಈ ಹತ್ತು ನಿಮಿಷಗಳ ಸಮಯದಲ್ಲಿ ನೀವು ಮನೆಯಲ್ಲಿಯೇ ಓಡಾಡುವುದು ಅಥವಾ ಮೆಟ್ಟಿಲುಗಳಿದ್ದರೆ ಹತ್ತಿ ಇಳಿಯುವುದು ಅಥವಾ ಕೈ ಕಾಲುಗಳ ಸ್ನಾಯುಗಳನ್ನು ಹಿಗ್ಗಿಸುವಂತಹ (ಸ್ಟ್ರೆಚಿಂಗ್) ವ್ಯಾಯಾಮಗಳನ್ನು ಮಾಡುವುದು ಸೂಕ್ತ. ಮನೆಯಲ್ಲಿ ಹೂದೋಟವಿದ್ದರೆ ಅಲ್ಲಿಯೂ ಒಂದು ಸುತ್ತು ಹಾಕಿ ಬರಬಹುದು.

* ಮೊಬೈಲ್ ಫೋನ್‍ನಲ್ಲಿ ಮಾತನಾಡುವಾಗ ಮನೆಯಲ್ಲಿಯೇ ಅತ್ತಿಂದಿತ್ತ ಓಡಾಡಿ.

* ವೆಬಿನಾರ್‌ಗಳು, ಆನ್‍ಲೈನ್ ಸಭೆಗಳನ್ನು ಆಲಿಸುವಾಗಲೂ ನೀವು ನಿಲ್ಲಬಹುದು ಅಥವಾ ಓಡಾಡಬಹುದು.

* ಇದೀಗ ಕೆಲವು ಪುಸ್ತಕಗಳು ಧ್ವನಿಯ ರೂಪದಲ್ಲಿಯೂ ಲಭ್ಯವಿವೆ. ಪುಸ್ತಕ ಓದುವ ಆಸಕ್ತಿಯಿರುವವರು ಓಡಾಡುತ್ತಲೇ ಅದನ್ನು ಆಲಿಸಬಹುದು.

(ಲೇಖಕಿ: ವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT