ಸ್ಮಾರ್ಟ್‌ಫೋನ್‌ ಸ್ನೇಹದಲ್ಲಿ ದಡ್ಡರು!

7

ಸ್ಮಾರ್ಟ್‌ಫೋನ್‌ ಸ್ನೇಹದಲ್ಲಿ ದಡ್ಡರು!

Published:
Updated:

ಇಂದಿನ ತಂತ್ರಜ್ಞಾನದ ಆವಿಷ್ಕಾರಗಳು ನಮ್ಮ ಹೊರಜಗತ್ತು ಮತ್ತು ಒಳಜಗತ್ತನ್ನು ಹಿಂದೆಂದೂ ಕಾಣದಂತೆ ಮಾರ್ಪಾಟು ಮಾಡುತ್ತಿವೆ. ಈ ಯುವ ನವತಾಂತ್ರಿಕ ಜಗತ್ತಿಗೆ ನಾಂದಿ ಹಾಡುವ ಸೇತುವೆಯಷ್ಟೇ ಎಂದಿದ್ದ ಆರ್ಥರ್ ಸೀ ಕ್ಲಾರ್ಕ್. ಆಲನ್ ಟ್ಯೂರಿಂಗ್ ಮತ್ತು ಐಸ್ಯಾಕ್ ಅಸಿಮೋರಂತಹ ವಿಜ್ಞಾನಿಗಳು ಕೆಲವು ದಶಕಗಳ ಹಿಂದೆಯೇ ಇದನ್ನು ಉದ್ಗರಿಸಿದ್ದರು.

ತಂತ್ರಜ್ಞಾನ ಕೆಲವೇ ವರ್ಷಗಳಲ್ಲಿ ಕೇವಲ ಚಾಲಕರು ಕೆಲಸವಿಲ್ಲದಂತೆ ಮಾಡುವಂಥದ್ದಷ್ಟೇ ಅಲ್ಲದೇ ವೈದ್ಯರೂ ಕೆಲಸ ಕಳೆದುಕೊಳ್ಳುವ ಸಂಭವ ಹೆಚ್ಚು ಹೆಚ್ಚು ನಿಖರವಾಗುತ್ತಿದೆ. ರೋಗತಪಾಸಣೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದೈತ್ಯ ದತ್ತಾಂಶಗಳು ಇದಾಗಲೇ ಶಸ್ತ್ರಚಿಕಿತ್ಸೆಯಲ್ಲಿ ಉಂಟಾಗುವ ಅನೇಕ ಸಾವು–ನೋವುಗಳನ್ನು ತಡೆಗಟ್ಟುತ್ತಿವೆ. ಹಿಂದೆ ಪರೀಕ್ಷೆಗೆ ನೂರು ಜನರನ್ನು ಒಳಪಡಿಸಿ ಅಧ್ಯಯನ ಮಾಡುವುದೇ ದೊಡ್ಡ ಸಂಗತಿಯಾಗಿತ್ತು. ಆದರೆ, ಇಂದು ಕೋಟಿಗಟ್ಟಲೆ ಜನರ ವೈದ್ಯಕೀಯ ಮಾಹಿತಿಯನ್ನು ಸಂಗ್ರಹಿಸಿ ಯಾಂತ್ರಿಕ ಅಲ್ಗಾರಿದಮ್ ಮೂಲಕ ವಿಶ್ಲೇಷಿಸಿ, ಸ್ಪಷ್ಟ ಮಾಹಿತಿಯನ್ನು ಒದಗಿಸಬಲ್ಲದಾಗಿದೆ.

ಇಂದು ಉತ್ತಮ ಆಧುನಿಕ ಆಸ್ಪತ್ರೆ ಎಂದು ಹೇಳಿಕೊಳ್ಳಲು ‘ನಮ್ಮಲ್ಲಿ ರೋಬೋಟ್‍ಗಳೇ ಶಸ್ತ್ರಚಿಕಿತ್ಸೆ ಮಾಡುತ್ತವೆ, ವೈದ್ಯರಲ್ಲ’ ಎಂದು ಹೇಳುವುದೇ ಮಾನದಂಡವಾಗುತ್ತಿದೆ. ಹಾರ್ವರ್ಡ್ ಪ್ರಕಾಶನ ಹೊರತಂದಿರುವ ‘ನೆಟ್‍ವರ್ಕ್ ಮೆಡಿಸನ್’ ಎಂಬ ಪುಸ್ತಕದಲ್ಲಿ ವೈವಿಧ್ಯಮಯ ದತ್ತಾಂಶಗಳನ್ನು ವಿಶ್ಲೇಷಿಸಿ ಹೇಗೆ ರೋಗ ತಪಾಸಣೆ ಮತ್ತು ಚಿಕಿತ್ಸೆಯನ್ನು ಕೊಡಬಹುದಾಗಿದೆ ಎಂದು ವಿವರಿಸಲಾಗಿದೆ. ಇದು ಆಧುನಿಕ ತಂತ್ರಜ್ಞಾನ ನಮ್ಮ ಸಹಾಯಕ್ಕೆ ನಿಲ್ಲುವುದಕ್ಕೆ ನಿದರ್ಶನವಾದರೆ, ಇನ್ನೊಂದೆಡೆ ಇದೇ ತಂತ್ರಜ್ಞಾನವನ್ನು ನಾಲ್ಕಾರು ಕಂಪನಿಗಳು ತನ್ನ ಹಿಡಿತದಲ್ಲಿಟ್ಟುಕೊಂಡು ಇಡೀ ಮನುಕುಲವನ್ನು ಗ್ರಾಹಕರಂತೆ ಗ್ರಹಿಸಿ, ಅವರಿಗೆ ಜ್ಞಾನಾರ್ಜನೆಗೆ ಸಹಾಯ ಮಾಡುವುದು ಬಿಟ್ಟು, ಏನು ಮಾರಬಹುದು ಎಂದು ಬಲೆ ಬೀಸುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ನಿಷ್ಪಕ್ಷಪಾತಿಯಾಗಿ ಉಳಿದಿಲ್ಲ. ಆ ತಂತ್ರಜ್ಞಾನವನ್ನು ಬಳಸಿ, ಚುನಾವಣೆಯನ್ನು ಗೆಲ್ಲುವುದು, ಜನರನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಮನಃಪರಿವರ್ತನೆ ಮಾಡುವುದು ಮತ್ತು ಬಳಸುವವನ ಆಸೆ, ಆಕಾಂಕ್ಷೆಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಮಾತ್ರ ಮಾಹಿತಿಯನ್ನು ಕೊಡುವುದು ಕೆಲವು ಪ್ರಮುಖ ವಿದ್ಯಮಾನಗಳಾಗಿವೆ. ಇಂದು ತಂತ್ರಜ್ಞಾನ ನಮ್ಮನ್ನು ಕಾರಿನಲ್ಲಿ, ಬೀದಿಯಲ್ಲಿ, ನಮ್ಮ ಮಾತನ್ನು ಆಲಿಸಿ ಕೆಲಸ ಮಾಡುವ ಅಲೆಕ್ಸಾದಂತಹ ತಂತ್ರಜ್ಞಾನದಿಂದ ಹಿಡಿದು, ಮೈಕ್ರೋಓವನ್ ಕೂಡ ನಮ್ಮನ್ನು ಗಮನಿಸಿ, ನಮ್ಮೊಂದಿಗೆ ಇನ್ನಷ್ಟು ವ್ಯವಹಾರ ಮಾಡುವುದನ್ನು ಕಂಡುಕೊಳ್ಳುತ್ತಿವೆ.

ಮಕ್ಕಳ ಕಲಿಕೆ ಇಂದು ಅವರ ಅಂಗೈಯಲ್ಲಿದೆ ಎನ್ನುವುದು ಸರಿ. ಆದರೆ, ಮೊಬೈಲ್‍ಗೆ ದಾಸರಾಗಿರುವುದು ಮತ್ತು ಪರದೆಯ ನೋಟದ ವ್ಯಸನಿಗಳಾಗಿರುವುದು ಜಗತ್ತಿನಾದ್ಯಂತ ಕಂಡುಬರುತ್ತಿದೆ. ಇದಾಗಲೇ ಈ ವ್ಯಸನದಿಂದ ಹೊರತರಲು ಮಹಾನಗರಗಳಲ್ಲಿ ‘ಇಂಟರ್‌ನೆಟ್‌ ಡಿ ಅಡಿಕ್ಷನ್ ಸೆಂಟರ್‌’ಗಳು ಪ್ರಾರಂಭಗೊಂಡಿವೆ. ಬೆಂಗಳೂರಿನ ಶರ್ಮಾಸ್ ಕ್ಲಿನಿಕ್ ಮತ್ತು ದೆಹಲಿಯ ಉದಯ್ ಫೌಂಡೇಶನ್ ಯೂನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಬೆಂಗಳೂರಿನ ಶೆಟ್ (ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ) ಕೂಡ ಮೊಬೈಲ್ ಫೋನ್ ವ್ಯಸನಿಗಳಿಗೆ ಚಿಕಿತ್ಸೆ ಕೊಡುತ್ತಿದೆ. ದಿನನಿತ್ಯ ನಿದ್ದೆಯಿಲ್ಲದೆ, ಅನಾರೋಗ್ಯ ಪೀಡಿತರಾಗಿ, ತಂತ್ರಜ್ಞಾನದ ಸೋಂಕಿನಿಂದ ನರಳುತ್ತಿದ್ದಾರೆ. ಇಂದು ಎರಡು ರೀತಿಯ ಸೋಂಕನ್ನು ಮುಖ್ಯವಾಗಿ ಗುರುತಿಸಲಾಗುತ್ತಿದೆ. ಒಂದು ‘ನೋಮೋಫೋಬಿಯಾ’; ಅಂದರೆ, ಮೊಬೈಲ್ ಕೈಯಲ್ಲಿಲ್ಲ ಎಂದು ಒದ್ದಾಡುವುದು. ಇಂಗ್ಲಿಷ್‍ನಲ್ಲಿ ಇದನ್ನು ‘ನೋ ಮೊಬೈಲ್ ಫೋಬಿಯಾ’ ಎನ್ನುಬಹುದು.

ಇನ್ನೊಂದು ಸದಾ ಈಗೇನಾಯಿತು ಎಂದು ಹುಡುಕಾಟದಲ್ಲಿ ತಲ್ಲೀನರಾಗಿರುವುದು. ಇದನ್ನು ‘ಫೋಮೋ’ ಎಂದರೆ, ‘ಫಿಯರ್ ಆಫ್ ಮಿಸ್ಸಿಂಗ್ ಔಟ್’. ಅಂದರೆ, ನಮಗೆ ಯಾವುದೋ ಮಾಹಿತಿ ದಕ್ಕದೇ ವಂಚಿತರಾದೆವು ಎನ್ನುವ ಭಯ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮುಹೂರ್ತಕ್ಕೆ ವಧು ಬರದಿದ್ದಾಗ, ಗಾಬರಿಗೊಂಡು ಹುಡುಕಿದಾಗ, ಆಕೆ ವಾಟ್ಸ್‌ಆ್ಯಪ್‌ ಮೆಸೇಜ್‍ನಲ್ಲಿ ಮುಳುಗಿ ತನ್ನ ಮದುವೆಯ ಮುಹೂರ್ತವನ್ನೇ ಮರೆತಿದ್ದಳಂತೆ. ಜೊತೆಗೆ ಅತ್ಯಂತ ಹೆಚ್ಚು ಸೆಲ್ಫಿ ತೆಗೆದುಕೊಳ್ಳುವಾಗ, ಸಾವಿಗೊಳಗಾಗುವವರು ಭಾರತೀಯರಾಗಿದ್ದಾರೆ. ಹೆನ್ರಿ ಡೇವಿಡ್ ಥೋರೊ ಶತಕದ ಹಿಂದೆಯೇ ‘ನಾವು ಯಂತ್ರಗಳ ಯಂತ್ರಗಳಾಗಿದ್ದೇವೆ’ ಎಂದಿದ್ದ. ಅದು ಸರಿಯೇನೋ ಎನ್ನಿಸುತ್ತದೆ. ಸ್ವ–ಅಧ್ಯಾಯಕ್ಕೆ ಮೊಬೈಲ್ ತಂತ್ರಜ್ಞಾನ ಅತ್ಯಂತ ಸಹಾಯಕಾರಿ ಎನ್ನುವುದನ್ನು ಈ ಎಲ್ಲ ದುಷ್ಪರಿಣಾಮಗಳೊಂದಿಗೆ ಮರೆಯುವಂತಿಲ್ಲ. ಆದರೆ, ನಾವು ಅದರಲ್ಲಿ ಹುಡುಕುತ್ತಿರುವುದು ಏನು ಎನ್ನುವುದು ಮುಖ್ಯ. ಇಡೀ ಭಾರತದೇಶ ಗೂಗಲ್‍ನಲ್ಲಿ ಹುಡುಕುವ ಎರಡನೆಯ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯಾಗಿದ್ದರೆ, ಮೊದಲನೆಯ ಸ್ಥಾನದಲ್ಲಿರುವುದು ಸನ್ನಿ ಲಿಯೋನ್ ಅಂತೆ!

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !