ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | ಮೂರು ತಿಂಗಳಿಗೊಮ್ಮೆ ಮುಟ್ಟು: ಪರಿಹಾರವೇನು?

ಡಾ. ವೀಣಾ ಎಸ್‌. ಭಟ್‌
Published 2 ಫೆಬ್ರುವರಿ 2024, 23:39 IST
Last Updated 2 ಫೆಬ್ರುವರಿ 2024, 23:39 IST
ಅಕ್ಷರ ಗಾತ್ರ

1. ನನಗೆ 18 ವರ್ಷಗಳು. ನನಗೆ ಎರಡು ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತದೆ. ನನಗೆ ವೈದ್ಯರು ಈಗಾಗಲೇ ಸ್ಕ್ಯಾನಿಂಗ್‌ ಮಾಡಿ  ಒಂದು ತಿಂಗಳ ಔಷಧ ಕೊಟ್ಟಿರುತ್ತಾರೆ. ಏನೂ ತೊಂದರೆ ಇಲ್ಲಾ ಎಂದು ತಿಳಿಸಿದ್ದಾರೆ. ಈ ಸಮಸ್ಯೆಯಿಂದ ಪಾರಾಗುವುದು ಹೇಗೆ? 

ಹದಿವಯಸ್ಸಿನಲ್ಲಿ ಸಾಮಾನ್ಯವಾಗಿ 11 ರಿಂದ 15ರ ಒಳಗೆ ಪ್ರಥಮ ಋತುಚಕ್ರ ಆರಂಭವಾಗುತ್ತದೆ. (ಮೆರ್ನಾಕೆ) ಇದಕ್ಕೆ ಕಾರಣ ಹೈಫೋಥಲಾಮಸ್‌ನಿಂದ ನಿರ್ದೇಶಿತವಾಗಿ, ಪಿಟ್ಯೂಟರಿ ಗ್ರಂಥಿಯಿಂದ ಪ್ರಚೋದಕ ಹಾರ್ಮೋನುಗಳು ಬಿಡುಗಡೆಯಾಗಿ ಅಂಡಾಶಯವನ್ನು ಪ್ರಚೋದಿಸಿ ಅದರಿಂದ ಸ್ತ್ರೀತ್ವದ ಹಾರ್ಮೋನುಗಳು ಉತ್ಪಾದನೆಯಾಗುತ್ತದೆ. ಹರೆಯದಲ್ಲಿ ಲೈಂಗಿಕ ಬೆಳವಣಿಗೆಯಾಗಿ ಋತುಚಕ್ರ ಆರಂಭವಾಗುತ್ತದೆ.

 ಇದಕ್ಕಾಗಿ ಹೈಫೋಥಲಾಮಸ್, ಪಿಟ್ಯೂಟರಿ ಅಂಡಾಶಯದ ಅಕ್ಷವು (ಹೆಪ್.ಪಿ.ಎ ಆಕ್ಸಿಸ್) ಪಕ್ವವಾಗಿರಬೇಕು. ಋತುಮತಿಯಾಗಿ ಮೊದಲೆರಡು ವರ್ಷಗಳು ಈ ಹೆಚ್.ಪಿ.ಎ ಅಕ್ಷವು ಪಕ್ವವಾಗಿರುವುದಿಲ್ಲ. ಋತುಚಕ್ರವು ನಿಯಮಿತವಾಗಿ ಬರದೇ ಸ್ವಲ್ಪ ಏರುಪೇರಾಗಬಹುದು.

ಆದರೆ ನಿಮಗೀಗ 18 ವರ್ಷಗಳಾಗಿರುವುದರಿಂದ ಋತುಚಕ್ರ ಆರಂಭವಾಗಿ ಮೂರು ನಾಲ್ಕು ವರ್ಷಗಳಾಗಿರಬಹುದಲ್ಲವೇ? ನಿಮಗೇನಾದರೂ ಬೊಜ್ಜಿದ್ದಲ್ಲಿ ಸಮತೂಕ ಗಳಿಸಲು ಪ್ರಯತ್ನಿಸಿ. ತಂದೆ ತಾಯಿಯರಿಂದ ದೂರವಿದ್ದು ವಿದ್ಯಾಭ್ಯಾಸಕ್ಕಾಗಿ ಬೇರೆಡೆ ಹಾಸ್ಟೆಲಿನಲ್ಲಿದ್ದರೂ ವಾತಾವರಣದ ಬದಲಾವಣೆಯಿಂದ ಮುಟ್ಟಿನ ಅವಧಿಯಲ್ಲಿ ಬದಲಾವಣೆಯಾಗಬಹುದು.

ಹದಿವಯಸ್ಸಿನ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಅವಧಿಯ ವ್ಯತ್ಯಾಸ ಹೆಚ್ಚಾಗಿ ಕಂಡುಬರುತ್ತಿದೆ. ಯಾಕೆಂದರೆ ಅವರ ಜೀವನಶೈಲಿ ಬದಲಾಗುತ್ತಿದೆ. ಅಂದರೆ ಕಡಿಮೆ ದೈಹಿಕ ಚಟುವಟಿಕೆ, ಹೆಚ್ಚು ಹೆಚ್ಚು ಜಂಕ್‌ಫುಡ್ ಸೇವನೆ, ಅತಿಯಾಗಿ ಮೊಬೈಲ್ ಬಳಸುವ ವ್ಯಸನಕ್ಕೊಳಗಾಗಿ, ತಡವಾಗಿ ಮಲಗಿ ತಡವಾಗಿ ಎದ್ದು, ಜೈವಿಕ ಗಡಿಯಾರವನ್ನು ನಿರ್ಲಕ್ಷಿಸುವುದು, ಹೆಚ್ಚುತ್ತಿರುವ ಮಾನಸಿಕ ಒತ್ತಡ, ಇತ್ತೀಚೆಗೆ ಕೃಷಿ, ಹೈನುಗಾರಿಕೆ, ಇವುಗಳಲ್ಲೆಲ್ಲಾ ಎಗ್ಗಿಲ್ಲದೆ ಬಳಸುತ್ತಿರುವ ರಾಸಾಯನಿಕಗಳು ನಮ್ಮ ಶರೀರವನ್ನು ಸೇರಿ, ಜೊತೆಗೆ
ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಶರೀರವನ್ನು ಸೇರುತ್ತಿರುವ ಬಿಸ್ಪಿನಾಲ್ ಮತ್ತು ಥ್ಯಾಲೆಟ್‌ನಂತಹ ರಾಸಾಯನಿಕಗಳಿಂದ ಹೆಣ್ತನದ ಹಾರ್ಮೋನುಗಳ ಅಸಮತೋಲನ (ಎಂಡ್ರೋಕ್ರೈನ್‌ ಡಿಸ್‌ರಪ್ಶನ್) ಉಂಟುಮಾಡುತ್ತಿವೆ.

ಇವೆಲ್ಲವೂ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (ಪಿ.ಸಿ.ಓ.ಡಿ) ನಂತಹ ಸಮಸ್ಯೆಗಳನ್ನು ಹೆಚ್ಚು ಮಾಡುತ್ತಾ ಋತುಚಕ್ರದ ಏರುಪೇರು, ಬಂಜೆತನ, ಅನಗತ್ಯ ಜಾಗದಲ್ಲಿ ಕೂದಲುಗಳ ಬೆಳವಣಿಗೆ, ಇತ್ಯಾದಿಗಳನ್ನುಂಟುಮಾಡಿ ಹೆಣ್ತನವನ್ನೇ ಕಸಿಯುತ್ತಿವೆ. ಭವಿಷ್ಯದಲ್ಲೂ ಮಧುಮೇಹ, ಏರುರಕ್ತದೊತ್ತಡ, ಹೃದ್ರೋಗ, ಕ್ಯಾನ್ಸರ್‌ನಂತಹ ದೀರ್ಘಾವಧಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಹಾಗಾಗಿ ನೀವಷ್ಟೇ ಅಲ್ಲಾ ಎಲ್ಲಾ ಮಹಿಳೆಯರೂ ಬಾಲ್ಯದಿಂದಲೇ ಮತ್ತು ಹದಿವಯಸ್ಸಿನಲ್ಲೂ ಉತ್ತಮ ಪೋಷಕಾಂಶಗಳುಳ್ಳ (ಹಸಿರು
ಸೊಪ್ಪು, ತರಕಾರಿಗಳು, ಒಣ ಹಣ್ಣುಗಳು, ಮೊಳಕೆ ಕಾಳುಗಳು, ಇತ್ಯಾದಿ ಇತ್ಯಾದಿ) ಆಹಾರಸೇವನೆ ರೂಢಿಸಿಕೊಳ್ಳಬೇಕು. ನಿಯಮಿತ ದೈಹಿಕ ಚಟುವಟಿಕೆ (ದಿನಾಲು ಕನಿಷ್ಠ ಒಂದು ಗಂಟೆ) ನಡೆಸುತ್ತಾ ರಾತ್ರಿ 6 ರಿಂದ 8 ತಾಸು ನಿದ್ರೆ ಮಾಡಬೇಕು. ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ತಮ್ಮ ವಯಸ್ಸಿಗೆ ಹಾಗೂ ಎತ್ತರಕ್ಕೆ ತಕ್ಕ ಸಮತೂಕವನ್ನು ಹೊಂದಲು ಪ್ರಯತ್ನಿಸಬೇಕು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT