ಭಾನುವಾರ, ಜೂಲೈ 5, 2020
22 °C
ತ್ಯಜಿಸಲು ಇಂದೇ ಸಕಾಲ

World No Tobacco Day | ತಂಬಾಕು: ಅಗಿಯುವುದೂ ಬೇಡ, ಹೊಗೆಯೂ ಬೇಡ...

 ಸಂಪತ್ ಕುಮಾರ ಡಿ.  ಬೆಂಗಳೂರು Updated:

ಅಕ್ಷರ ಗಾತ್ರ : | |

ಇಂದು ವಿಶ್ವ ತಂಬಾಕು ರಹಿತ ದಿನ. ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಸಾವು-ನೋವುಗಳು, ವಿವಿಧ ಅಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುವುದರ ಕುರಿತು ಅರಿವನ್ನುಂಟು ಮಾಡಿ ವಿಶ್ವದ ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.

ಒಂದು ಹಿನ್ನೋಟ: 1987ರಿಂದ ‘ವಿಶ್ವ ತಂಬಾಕು ರಹಿತ ದಿನ’ ವನ್ನಾಗಿ ಪ್ರತಿ ವರ್ಷ ಮೇ 31ರಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವಾದಾದ್ಯಂತ ಆಚರಿಸುವಂತೆ ತಿಳಿಸಿತ್ತು. ಆದರೆ ವಿಶ್ವ ಆರೋಗ್ಯ ಸಮ್ಮೇಳನದ ಸಭೆಯಲ್ಲಿ ಏಪ್ರಿಲ್ 7ರಂದು ‘ವಿಶ್ವ ಧೂಮಪಾನ ರಹಿತ ದಿನ’ ಆಚರಿಸುವಂತೆ ತೀರ್ಮಾನಿಸಲಾಯಿತು. ಏಪ್ರಿಲ್ 7, 1988ರವರೆಗೆ ‘ತಂಬಾಕು ಅಥವಾ ಆರೋಗ್ಯ: ಆರೋಗ್ಯವನ್ನು ಆಯ್ದುಕೊಳ್ಳಿ’ ಎಂಬ ಧ್ಯೇಯ ವಾಕ್ಯದೊಂದಿಗೆ ‘ವಿಶ್ವ ತಂಬಾಕು ರಹಿತ ದಿನ’ವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ 1988ರ ನಂತರ ಪ್ರತಿ ವರ್ಷ ಮೇ 31ರಂದು ‘ವಿಶ್ವ ತಂಬಾಕು ರಹಿತ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಈ ಬಾರಿ ಯುವ ಪೀಳಿಗೆ ಗುರಿ: ಈ ವರ್ಷ ‘ಯುವ-ಪೀಳಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ಯುವ-ಪೀಳಿಗೆಗಳ ರಕ್ಷಣೆ ಮಾಡುವುದು’ ಎಂಬ ವಾಕ್ಯದೊಂದಿಗೆ ‘ವಿಶ್ವ ತಂಬಾಕು ರಹಿತ ದಿನ’ವನ್ನು ಆಚರಿಸಲಾಗುತ್ತಿದೆ.

ಸಾವು ನೋವಿನ ಸರಮಾಲೆ: ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿ ವರ್ಷ 8 ಮಿಲಿಯನ್ ಜನರು ಸಾಯುತ್ತಿದ್ದಾರೆ. ನೇರವಾಗಿ ತಂಬಾಕು ಉತ್ಪನ್ನಗಳ ಸೇವನೆಯಿಂದಲೇ 7 ಮಿಲಿಯನ್ ಜನರು ಸಾವೀಗೀಡಾಗುತ್ತಾರೆ. 1.2 ಮಿಲಿಯನ್ ಜನರು ಪರೋಕ್ಷ ಧೂಮಪಾನಕ್ಕೆ(Passive Smoking) ತುತ್ತಾಗುತ್ತಾರೆ. ವಿಶ್ವಾದಾದ್ಯಂತ ಪ್ರತಿ ವರ್ಷ 9 ಮಿಲಿಯನ್ ಜನರು ತಂಬಾಕು ಸೇವನೆಯಿಂದ ವಿವಿಧ ಕಾಯಿಲೆಗೆ ತುತ್ತಾಗಿ ಸಾಯುತ್ತಿದ್ದಾರೆ.

ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಭಾರತ ಮತ್ತು ಇಂಡೋನೇಷ್ಯಾ ದೇಶಗಳು ಅತೀ ಹೆಚ್ಚು ತಂಬಾಕು ಉತ್ಪಾದನೆ ಮಾಡುವ ಪ್ರಮುಖ ಐದು ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿವೆ. ತಂಬಾಕು ಕೇವಲ ಮನುಷ್ಯ ಆರೋಗ್ಯಕ್ಕೆ ಅಷ್ಟೇ ಮಾರಕವಾಗಿಲ್ಲ. ಬಡತನಕ್ಕೂ ಕಾರಣ ಮತ್ತು ದೇಶದ ಅಭಿವೃದ್ಧಿಗೂ ಅಷ್ಟೇ ಮಾರಕ. ಅತೀ ಹೆಚ್ಚು ತಂಬಾಕು ಸೇವನೆ ಭಾರತದ ಆರ್ಥಿಕತೆಗೂ ಕೊಡಲಿಯೇಟು ನೀಡುತ್ತದೆ. ತಂಬಾಕು ಸೇವನೆಯಿಂದ ಕ್ಷಯ ರೋಗಕ್ಕೆ ತುತ್ತಾಗುವವರ ಸಂಖ್ಯೆ ಅಧಿಕವಾಗುತ್ತಿದೆ.

ಕಾಯಿಲೆಗಳ ಮೂಲ: ಭಾರತದಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯರಿಗೆ ಅಸಾಂಕ್ರಾಮಿಕ ಕಾಯಿಲೆಗಳಾದ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶಕ್ಕೆ ಸಂಬಂಧಿಸಿದ ತೀವ್ರತರವಾದ ಕಾಯಿಲೆಗಳು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ.

ತಂಬಾಕು ಉತ್ಪನ್ನ ಕಂಪನಿಗಳು ವಿವಿಧ ಕಾರ್ಯತಂತ್ರಗಳ ಮೂಲಕ ಉತ್ತಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಮ್ಮ ಸ್ಪಷ್ಟ ಗುರಿ ಮತ್ತು ಉದ್ದೇಶಗಳೊಂದಿಗೆ ಯುವ-ಪೀಳಿಗೆಯನ್ನು ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳತ್ತ ಆಕರ್ಷಿಸುತ್ತಿವೆ.

ವಿವಿಧ ವಿನ್ಯಾಸ, ಉತ್ತಮ ಪ್ರಚಾರ ಮತ್ತು ಲೆಕ್ಕಾಚಾರದ ಜಾಹೀರಾತುಗಳ ಮೂಲಕ ಯುವ-ಸಮುದಾಯವು ತಂಬಾಕು ಉತ್ಪನ್ನಗಳ ಕಡೆಗೆ ತಮ್ಮ ಮನಸ್ಸನ್ನು ಹರಿಸುವಂತೆ ಮಾಡುತ್ತಿದೆ. ತಂಬಾಕು ಉತ್ಪನ್ನ ಕಂಪನಿಗಳು ಹೊಸ ಗ್ರಾಹಕರನ್ನು ಪ್ರತಿ ದಿನ ನಿರೀಕ್ಷೆ ಮಾಡುತ್ತಿವೆ. ಈ ಹೊಸ ಗ್ರಾಹಕರು ಯುವ-ಪೀಳಿಗೆಯೆ ಆಗಿರುತ್ತದೆ. ಆದ್ದರಿಂದ ತಂಬಾಕು ಕಂಪನಿಗಳು ತಮ್ಮ ಉತ್ಪನ್ನಗಳ ಜಾಹೀರಾತುಗಳನ್ನು ಶಾಲಾ-ಕಾಲೇಜು ಬಳಿಯ ಅಂಗಡಿ/ಮಳಿಗೆಗಳಲ್ಲಿ ಆಕರ್ಷಕವಾಗಿ ಪ್ರದರ್ಶಿಸುತ್ತವೆ.

ಶಾಲಾ-ಕಾಲೇಜು/ಯಾವುದೇ ಶೈಕ್ಷಣಿಕ ಸಂಸ್ಥೆಗಳ 100 ಗಜ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಹಾಗೂ ಮಾರಾಟ ಮಾಡಿದರೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದರೂ ಕೆಲವು ಪ್ರಭಾವಿಗಳು/ಪ್ರಭಾವಿಗಳ ಸಹಾಯದಿಂದ ಅನೇಕ ಶೈಕ್ಷಣಿಕ ಸಂಸ್ಥೆಗಳ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವಾಗುವುದನ್ನು ನಾವು ಕಾಣಬಹುದು.

ಯಾವುದೇ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶನ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ. ಅದರೂ ತಂಬಾಕು ಉತ್ಪನ್ನಗಳ ಕಂಪನಿಗಳು ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅವುಗಳ ಹತ್ತಿರ ಜಾಹೀರಾತುಗಳನ್ನು ಪ್ರದರ್ಶನ ಮಾಡುತ್ತಿವೆ. ಹೊಗೆಸಹಿತ ತಂಬಾಕು ಉತ್ಪನ್ನಗಳಾದ ಬೀಡಿ ಮತ್ತು ಸಿಗರೇಟ್‍ಗಳಲ್ಲಿ ಗಾತ್ರ ಮತ್ತು ವಿನ್ಯಾಸಗಳನ್ನು ಆಕರ್ಷಕವಾಗಿ ರೂಪಿಸಿರುತ್ತಾರೆ. ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನು ಬಿಡಿ-ಬಿಡಿಯಾಗಿ ಮಾರಾಟ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ. ಹಾಗಿದ್ದರೂ ಅಂಗಡಿಗಳಲ್ಲಿ ಬಿಡಿ-ಬಿಡಿ ಮಾರಾಟವನ್ನು ಯಥೇಚ್ಛವಾಗಿ ಕಾಣಬಹುದು.

ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಸಿಗರೇಟ್ ಕಂಪನಿಗಳು ಆಕರ್ಷಕವಾಗಿ ತಮ್ಮ ಜಾಹೀರಾತುಗಳನ್ನು ಪ್ರದರ್ಶನ ಮಾಡುತ್ತಿವೆ. ಅದಕ್ಕೆ ಪ್ರತಿಫಲವಾಗಿ ಅಂಗಡಿ ಮಾಲೀಕರಿಗೆ ತಂಬಾಕು ಉತ್ಪನ್ನ ಕಂಪನಿಗಳು ಪ್ರತಿ ತಿಂಗಳು ಒಂದಿಷ್ಟು ಮೌಲ್ಯದ ಸಿಗರೇಟುಗಳನ್ನು ಅಥವಾ ಹಣವನ್ನು ನೀಡುವುದಾಗಿ ಪ್ರೋತ್ಸಾಹಿಸುತ್ತವೆ. ನಗರ ಪ್ರದೇಶಗಳಲ್ಲಿ ದೊಡ್ಡ ಡಿಜಿಟಲ್ ಫಲಕಗಳನ್ನು ಅಂಗಡಿಗಳ ಮುಂದೆ ನೇತು ಹಾಕಿರುವುದನ್ನು ನಾವು ಕಾಣಬಹುದು. ನಮ್ಮ ದೇಶದಲ್ಲಿ ಇ-ಸಿಗರೇಟ್ ಮಾರಾಟ ನಿಷೇಧವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ.

ಆದ್ದರಿಂದ ತಂಬಾಕು ಉತ್ಪನ್ನಗಳ ಕಾರ್ಯತಂತ್ರಗಳಿಗೆ ಪ್ರತಿತಂತ್ರಗಳ ಅಭಿಯಾನ ಮತ್ತು ತಂಬಾಕು ವಿರುದ್ಧ ಹೋರಾಡಲು ಯುವಪೀಳಿಗೆಗೆ ಹೆಚ್ಚಿನ ಮಾಹಿತಿ ನೀಡುವ ಅವಶ್ಯಕತೆಯಿದೆ. ತಂಬಾಕು ಉತ್ಪನ್ನ ಕಂಪನಿಗಳು ಯುವಪೀಳಿಗೆಯನ್ನು ಆಕರ್ಷಿಸಲು ರೂಪಿಸಿರುವ ಕಾರ್ಯತಂತ್ರಗಳನ್ನು ಯುವಪೀಳಿಗೆಗೆ ಮನವರಿಕೆ ಮಾಡಬೇಕಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೇಗೆ ತಂಬಾಕು ಉತ್ಪನ್ನ ಕಂಪನಿಗಳು ಯುವ-ಪೀಳಿಗೆಯನ್ನು ತಮ್ಮ ಉತ್ಪನ್ನಗಳ ಚಟಕ್ಕೆ ಬಲಿಯಾಗುವಂತಹ ಕಾರ್ಯತಂತ್ರಗಳನ್ನು ರೂಪಿಸುತ್ತವೆಂದರೆ...

ನೇರ ಜಾಹೀರಾತು/ಪರೋಕ್ಷ ಜಾಹೀರಾತು: ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಜಾಹೀರಾತು ನೀಡುವುದು, ಮಕ್ಕಳಿಗೆ ತಮ್ಮ ಬ್ರಾಂಡ್‌ ಹೆಸರಿನ ಆಟಿಕೆ ನೀಡುವುದು, ಸಿಹಿ ತಿಂಡಿ ಮತ್ತು ಸಿಹಿ ಪಾನೀಯಗಳ ಹತ್ತಿರ ಆಕರ್ಷಕವಾಗಿ ತಂಬಾಕು ಉತ್ಪನ್ನಗಳ ಪ್ರದರ್ಶನ, ಜನಪ್ರಿಯ ಪರಿಕಲ್ಪನೆಗಳನ್ನು ಅನುಕರಿಸುವಂತೆ ತಂಬಾಕು ಉತ್ಪನ್ನ ಕಂಪನಿಗಳು ಮಕ್ಕಳು ಮತ್ತು ಯುವ, ವಯಸ್ಕರನ್ನು ಆಕರ್ಷಿಸಲು ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುವುದು.

ಪರೋಕ್ಷ ಜಾಹೀರಾತು: ಸಾಮಾಜಿಕ ಮಾಧ್ಯಮ ಮತ್ತು ಪ್ರಭಾವಶಾಲಿಗಳ ಮೂಲಕ ತಂಬಾಕು ಉತ್ಪನ್ನಗಳನ್ನು ಬಳಸುವಂತೆ  ಉತ್ತೇಜಿಸುವುದು.

ಪ್ರಚಾರ: ಜನಪ್ರಿಯ ಕಾರ್ಯಕ್ರಮಗಳಲ್ಲಿ ಯುವಕರು ಆಕರ್ಷಿತರಾಗುವಂತೆ ತಂಬಾಕು ಉತ್ಪನ್ನಗಳ ಪ್ರಚಾರ ಮಾಡುವುದು, ಯುವಕರು ತಂಬಾಕು ಉತ್ಪನ್ನ ಸೇವನೆ ಪ್ರಚೋದಿಸುವ ಮತ್ತು ಕಂಪನಿಗಳ ಪ್ರಚಾರದ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವುದು

ಪ್ರಾಯೋಜಕತ್ವ: ತಂಬಾಕು ಉತ್ಪನ್ನ ಕಂಪನಿಗಳ ಮೂಲಕ ಶಾಲಾ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವೃತ್ತಿ ತರಬೇತಿ ಸಮಯದಲ್ಲಿ ಸಹಾಯ ಮಾಡುವುದು, ತಂಬಾಕು ಕಂಪನಿಗಳ ಲೋಗೊಗಳನ್ನು ಅಳವಡಿಸಿಕೊಂಡು ಪ್ರಮುಖ ಕ್ರೀಡಾಕೂಟಗಳ/ತಂಡಗಳ ಪ್ರಾಯೋಜಕತ್ವ ಮಾಡುವುದು.

ಇತರ ವ್ಯವಹಾರ ತಂತ್ರಗಳು: ಹೊಗೆರಹಿತ ತಂಬಾಕು, ಶಿಶಾ ಮತ್ತು ಇ-ಸಿಗರೇಟ್‍ಗಳಲ್ಲಿ ಮಕ್ಕಳನ್ನು ಆಕರ್ಷಿಸಲು ಪರಿಮಳಯುಕ್ತ ಪದಾರ್ಥಗಳನ್ನು ಬಳಸುವುದು, ಹೊಗೆರಹಿತ ತಂಬಾಕು, ಶಿಶಾ ಮತ್ತು ಇ-ಸಿಗರೇಟ್‍ಗಳಲ್ಲಿ ಮಕ್ಕಳನ್ನು ಆಕರ್ಷಿಸಲು ಪರಿಮಳಯುಕ್ತ ಪದಾರ್ಥಗಳನ್ನು ಬಳಸುವುದು, ತಂಬಾಕು ಉತ್ಪನ್ನಗಳನ್ನು ಮಕ್ಕಳಿಗೊಸ್ಕರ ವಿಶೇಷ ಪ್ಯಾಕ್‍ಗಳಲ್ಲಿ ತಯಾರಿಸುವುದು ಮತ್ತು ತಂಬಾಕು ಉತ್ಪನ್ನಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವುದು.

ಈ ಎಲ್ಲಾ ಕಾರಣಗಳಿಂದಾಗಿ ಯುವ-ಪೀಳಿಗೆಗಳನ್ನು ತಂಬಾಕು ಉತ್ಪನ್ನ ಕಂಪನಿಗಳ ತಂತ್ರ ಮತ್ತು ಜಾಹೀರಾತುಗಳಿಂದ ಆಕರ್ಷಿತರಾಗುವುದನ್ನು ತಪ್ಪಿಸಬೇಕಾಗಿದೆ. ಯುವ-ಪೀಳಿಗೆಗಳು ತಂಬಾಕು ವ್ಯಸನಕ್ಕೆ ತುತ್ತಾಗದಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಷ್ಟ್ರೀಯ ತಂಬಾಕು ತಂಬಾಕು ನಿಯಂತ್ರಣ ಕಾರ್ಯಕ್ರಮವು ದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ರಾಜ್ಯ ತಂಬಾಕು ನಿಯಂತ್ರಣ ಕೋಶ ಮತ್ತು ಜಿಲ್ಲೆಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಕಾರ್ಯನಿರ್ವಹಿಸುತ್ತಿದೆ.  ಶಾಲಾ-ಕಾಲೇಜುಗಳ ಹತ್ತಿರ ತಂಬಾಕು ಉತ್ಪನ್ನಗಳ ಮಾರಾಟವನ್ನು ತಡೆಗಟ್ಟುವಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪಾತ್ರವು ಅಧಿಕವಾಗಿದೆ. ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು, ರಾಜಕಾರಣಿಗಳು, ಸಂಘ-ಸಂಸ್ಥೆಗಳು ತಂಬಾಕು ಮುಕ್ತ ಕರ್ನಾಟಕ ರಾಜ್ಯವಾಗುವಲ್ಲಿ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. 

ತಡಮಾಡಬೇಡಿ- ತಂಬಾಕು ತ್ಯಜಿಸಲು ಇದು ಸಕಾಲ.

ಸದ್ಯದ ಅಂಕಿ ಅಂಶ

• ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-1 (2009-10)ರಿಂದ ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-2 (2016-17)ರ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುವ ಪ್ರಮಾಣವು ಶೇ 28.2% ನಿಂದ ಶೇ 22.8ಕ್ಕೆ ಕಡಿಮೆಯಾಗಿದೆ. ಅಂದರೆ ಶೇ 5.4 ಇಳಿಮುಖವಾಗಿದೆ.

• 15 ರಿಂದ 17 ವಯಸ್ಸಿನವರು ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವ ಪ್ರಮಾಣವು ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-1 (2009-10)ರಲ್ಲಿ ಶೇ 6.8 ಇತ್ತು. ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-2 (2016-17)ರಲ್ಲಿ ಪ್ರಮಾಣ ಶೇ 3.7ಕ್ಕೆ ಇಳಿಕೆಯಾಗಿದೆ.

•ತಂಬಾಕು ಉತ್ಪನ್ನಗಳ ಬಳಕೆಯನ್ನು ಪ್ರಾರಂಭಿಸುವ ವಯಸ್ಸು ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-1 (2009-10)ರಲ್ಲಿ ಶೇ 17.7 ಇತ್ತು. ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ-2 (2016-17)ರಲ್ಲಿ ಶೇ 19.8ಗೆ ಏರಿಕೆಯಾಗಿದೆ. ಇದು ಉತ್ತಮ ಬೆಳವಣಿಗೆ.

(ಲೇಖಕರು ಕ್ಷಯ ಮತ್ತು ಶ್ವಾಸಕೋಶ ರೋಗ ಸಂಬಂಧಿಸಿ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಸಂಘಟನೆ ‘ದಿ ಯೂನಿಯನ್‌’ನ ವಿಭಾಗೀಯ ಸಂಯೋಜಕರು. ಮೊ: 97403 78108)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು