ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಸರಿಯಾಗಿ ನಿಲ್ಲಿ!

Last Updated 1 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ನಮ್ಮ ಇಡೀ ಜೀವನವೆಲ್ಲ ಸ್ವಂತ ಕಾಲಿನ ಮೇಲೆ ನಿಲ್ಲಬೇಕಾದದ್ದು ಅನಿರ್ವಾಯ! ನಾವು ನೇರ ನಿಲ್ಲಲು, ನಡೆಯಲು, ಕುಣಿಯಲು ನಮ್ಮ ಅಸ್ಥಿ–ಸ್ನಾಯು-ನರವ್ಯೂಹ ವ್ಯವಸ್ಥೆಗಳು ನಿರಂತರವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿರಬೇಕಾಗುತ್ತವೆ. ಈ ಕ್ರಿಯೆಗಳು ನಿಂತರೆ ನಾವೆಲ್ಲರೂ ಮಣ್ಣೋ ಬೂದಿಯೋ ಆಗಿಬಿಡುತ್ತೇವೆ. ಹೆಚ್ಚಿನವರಿಗೆ ಒಮ್ಮೊಮ್ಮೆ ತಮ್ಮ ಶರೀರವೇ ಭಾರವಾಗಿ ಬಿಡುತ್ತವೆ. ಯಾವುದಾದರೂ ಕಾರಣಗಳಿಂದ ಕೈ-ಕಾಲುಗಳ ನ್ಯೂನತೆಯಾದಾಗ ನಮ್ಮ ಶರೀರದ ಭಾರವನ್ನು ಇನ್ನೊಬ್ಬರ ಮೇಲೋ ಅಥವಾ ಕೋಲಿನ ಮೇಲೋ ಹೇರುವ ಪ್ರಸಂಗ ಹಲವರಿಗೆ ಬರಬಹುದು. ಅಷ್ಟೇ ಅಲ್ಲದೇ, ಹಿಮ್ಮಡಿನೋವು, ವ್ಯಾರಿಕೋಸ್‍ವೇನ್ ಸಮಸ್ಯೆ, ಕಾಲುನೋವು, ಮಂಡಿನೋವು, ಬೆನ್ನುನೋವು – ಹೀಗೆ ಹತ್ತು ಹಲವು ರೀತಿಯ ನೋವುಗಳಿಂದ, ಸಮಸ್ಯೆಗಳಿಂದ ನರಳುವಂತಾಗಬಹುದು. ಇವಕ್ಕೆಲ್ಲ ಹಲವು ತರಹದ ಚಿಕಿತ್ಸೆಗಳು ದಿನೇದಿನೇ ಹೆಚ್ಚುತ್ತಿದ್ದರೂ ಮನುಕುಲದ ನೋವು, ನರಳುವಿಕೆಯೂ ಏರುಗತಿಯಲ್ಲಿಯೇ ಇದೆ.

ಏಕೆ ಹೀಗೆ?

ಇದಕ್ಕೆಲ್ಲಾ ಮುಖ್ಯ ಕಾರಣ, ನಮ್ಮ ದಿನನಿತ್ಯದ ಸಹಜಭಂಗಿಯಲ್ಲಿ ನಿಂತಾಗಲಿರಲಿ, ಕುಳಿತಾಗಿರಲಿ, ನಡೆಯುವಾಗಿರಲಿ ವ್ಯವಸ್ಥಿತ ರೀತಿಯಲ್ಲಿ ಶರೀರದ ಭಾರ ಸೊಂಟದಿಂದ ಕೆಳಭಾಗದಲ್ಲಿ ಮತ್ತು ಕಾಲುಗಳಲ್ಲಿ ಸಮನಾಗಿ ಹಂಚಿಕೆಯಾಗದೇ ಇರುವುದು. (ಹೆಚ್ಚಿನವರು ಧರಿಸುವ ಪಾದರಕ್ಷೆಗಳಲ್ಲಿ ಒಂದೊಂದು ಕಡೆ ಹೆಚ್ಚು ಕಡಿಮೆ ಸವೆದಿರುವುದನ್ನು ಗಮನಿಸಿರಬಹುದು.)

ಕೆಲವರ ನಿಂತ ಸಹಜಭಂಗಿಯನ್ನು ಗಮನಿಸಿದರೆ, ಅವರು ಎರಡು ಕಾಲಿನ ಪಾದಗಳು ಹೊರಕ್ಕೆ ಚಾಚಿರುವುದು ಕಂಡುಬರುತ್ತದೆ. ಪಾದಗಳ ಹಿಮ್ಮಡಿ ಒಳಗೂ ಮತ್ತು ಮುಮ್ಮಡಿಗಳು ಹೊರಗಡೆಗೂ ಚಾಚಲ್ಪಟ್ಟು, ನಡೆಯುವಾಗಲೂ ಇದೇ ರೀತಿ ಮುಂದುವರೆಯಲ್ಪಡುತ್ತದೆ. ಈ ರೀತಿ ಹೊರಚಾಚಿ ನಿಂತಾಗ ನಮ್ಮ ಪಾದಗಳ ಮೇಲೆ ಸಮನಾಗಿ ಭಾರ ಹಂಚಿಕೆಯಾಗಿರುವುದಿಲ್ಲ. ಬದಲಾಗಿ ಪಾದದ ಹೊರ ಅಂಚಿನ ಮೇಲೆ ಹೆಚ್ಚಿನ ಭಾರ ಬೀಳುತ್ತದೆ. ಅದರಲ್ಲೂ ಹಿಮ್ಮಡಿಯ ಹೊರ ಅಂಚಿನ ಮೇಲೆ ಅತ್ಯಧಿಕ ಭಾರ ಇರುತ್ತದೆ. ಹೀಗೆ ಪಾದದ ನಾಲ್ಕೂ ಮೂಲೆಗಳ ಮೇಲೆ ಸರಿಯಾಗಿ ಭಾರ ಹಂಚಿಕೆಯಾಗದೇ ಕಾಲಕ್ರಮೇಣ ಕಾಲುಗಳ ಸಾಮರ್ಥ್ಯ ಕಡಿಮೆಯಾಗುತ್ತಾ ಬರುತ್ತದೆ. ಮುಂದೆ, ನಮ್ಮ ಶರೀರವೇ ನಮಗೆ ಭಾರವಾಗುವ ಹಾಗೆ ಆಗುತ್ತದೆ. ಕಾಲುನೋವು, ಹಿಮ್ಮಡಿನೋವುಗಳು ಬಾಧಿಸುವುದು ಇದೇ ಕಾರಣಕ್ಕಾಗಿ.

ಈ ಸಮಸ್ಯೆಗಳಿಗೆ ನೀವು ಸಿಲುಕಬಾರದು ಎಂದಾದಲ್ಲಿ ನೀವು ಅನುಸರಿಸಬೇಕಾದ ಸ್ಥಿತಿಯೊಂದಿದೆ: ಅದೇ ಸಮಸ್ಥಿತಿ.

ಸಮಸ್ಥಿತಿಯಲ್ಲಿ ನಿಲ್ಲಿ

ಕಾಲಿನ ಪಾದದಡಿಯಲ್ಲಿ ನಾಲ್ಕು ಮೂಲೆಗಳ ಮೇಲೆ ನಾಲ್ಕು ಬಿಂದುಗಳನ್ನು ಗುರುತಿಸಿ. ಒಟ್ಟು ಎರಡು ಪಾದಗಳು ಸೇರಿ ಎಂಟು ಬಿಂದುಗಳ ಮೇಲೆ ಶರೀರದ ಭಾರ ಸಮನಾಗಿ ಹಂಚಿ ನಿಂತರೆ ಅದು ಪಾದಗಳ ಸಮಸ್ಥಿತಿ. ಈ ಸ್ಥಿತಿಯಲ್ಲಿ ಪಾದಗಳು ಹಿಮ್ಮಡಿಯಿಂದ ಮುಮ್ಮಡಿಯವರೆಗೆ ಪೂರ್ತಿ ಜೋಡಿಸಿರುತ್ತದೆ. ಪಾದದ ಒಳಅಂಚು ನೆಲಕ್ಕೆ ಒತ್ತುತ್ತ ಕಾಲು ಸ್ವಲ್ಪ ಒಳಗೆ ತಿರುಗಿಸಬೇಕು. ಕಾಲುಗಳಲ್ಲಿ ಸಮತೆಯನ್ನು ಸ್ಥಾಪಿಸುತ್ತಾ, ಮುಂದಿನ ಹಂತದಲ್ಲಿ ಮೊಣಕಾಲಿನ ಚಿಪ್ಪುಗಳನ್ನು ಒಳಕ್ಕೆ, ಮೇಲಕ್ಕೆ ಸೆಳೆದುಕೊಳ್ಳಬೇಕು.

ಮಂಡಿಯ ಮುಂಭಾಗವನ್ನು ಹೊರಗಿನಿಂದ ಒಳಗೂ, ಹಿಂಭಾಗವನ್ನು ಒಳಗಿನಿಂದ ಹೊರಗೂ, ಹೊರಳಿಸುತ್ತಾ ಬಾಳೆದಿಂಡು ಹೇಗೆ ಗೋಲಾಕಾರವಾಗಿರುತ್ತದೆಯೋ ಹಾಗೆಯೇ ಕಾಲಿನ ಸ್ನಾಯುಗಳನ್ನೂ ಗೋಲಾಕಾರವಾಗಿರಿಸಲು ಪ್ರಯತ್ನಿಸಬೇಕು. ಕಿಬ್ಬೊಟ್ಟೆಯನ್ನು ಸೆಳೆದು ನೇರವಾಗಿಸಿ, ಬೆನ್ನೆಲುಬುಗಳನ್ನು ಒಳಸೆಳೆದು ಸಮಾನಾಂತರಗೊಳಿಸುತ್ತಾ, ಭುಜಗಳನ್ನು ಹಿಂದಕ್ಕೆ ಸೆಳೆಯುತ್ತಾ ಎದೆಯನ್ನು ಹಿಗ್ಗಿಸಿ. ಯಾವುದೇ ಒತ್ತಡ ಬೇಡ. ಕತ್ತು ಹಾಗೂ ತಲೆ ಸರಳರೇಖೆಯಲ್ಲಿದ್ದು ದೃಷ್ಠಿಯೂ ನೇರವಾಗಿ ಎದುರಿಗಿರಲಿ. ಶ್ವಾಸೋಚ್ಛ್ವಾಸ ಸಹಜವಾಗಿರಲಿ. ಶರೀರದ ಭಾರವೂ ಹಿಮ್ಮಡಿ ಹಾಗೂ ಹೆಬ್ಬೆರಳುಗಳ ಮೇಲೆ ಸಮವಾಗಿರುವಂತೆ ನೋಡಿಕೊಳ್ಳಿ ಇದೇ ಸಮಸ್ಥಿತಿ. ಈ ಸಮಸ್ಥಿತಿಯಲ್ಲಿ ದೀರ್ಘಕಾಲ ಇರಬಹುದು ಮತ್ತು ಈ ಸ್ಥಿತಿಯಲ್ಲಿ ನಿರ್ಭಾರದ ಅನುಭವವನ್ನು ಪಡೆಯಬಹುದು.

ಹೆಚ್ಚಿನ ಸಮಯ ನಿಂತು ಕೆಲಸ ಮಾಡುವವರು – ಉದಾಹರಣೆಗೆ, ಅಡುಗೆಮನೆಯಲ್ಲಿ ನಿಂತು ಅಡುಗೆ ಮಾಡುವ ಗೃಹಿಣಿಯರು,ಟ್ರಾಫಿಕ್ ಪೊಲೀಸರು, ಬಸ್ ಕಂಡಕ್ಟರ್‌ಗಳು, ದೀರ್ಘಾವಧಿ ಶಸ್ತ್ರಚಿಕಿತ್ಸೆಯನ್ನು ಮಾಡುವ ವೈದ್ಯರು, ಶಾಲಾ-ಕಾಲೇಜು ಶಿಕ್ಷಕರು – ಹೀಗೆ ಎಲ್ಲರೂ ಅನುಸರಿಸಬೇಕಾದ ಸೂಕ್ತ ಭಂಗಿಯೇ ಸಮಸ್ಥಿತಿ.

ಬೆನ್ನುನೋವು, ಸೊಂಟನೋವು, ಕೀಲುನೋವು ಅಥವಾ ಗರ್ಭಾಶಯ, ಮೂತ್ರಕೋಶ ಜಾರುವಿಕೆ – ಇಂಥವುಗಳಿಂದ ಬಳಲುತ್ತಿರುವವರು ಸಮಸ್ಥಿತಿಯಲ್ಲಿ ನಿಲ್ಲುವುದು ಬಹಳ ಮುಖ್ಯ. ಇವರು ಸಮಸ್ಥಿತಿಯಲ್ಲಿ ನಿಲ್ಲಬೇಕಾದ ಮುಖ್ಯವಾಗಿ ಪಾದಗಳನ್ನು ಒಳಮುಖವಾಗಿ, ಹಿಮ್ಮಡಿಗಳನ್ನು ಹೊರಮುಖವಾಗಿಟ್ಟು ನಿಂತುಕೊಂಡು, ಮಂಡಿಗಳನ್ನು ಒಳಕ್ಕೆ ಸೆಳೆದುಕೊಂಡಾಗ, ಕಾಲಿನ ಹಿಂಭಾಗ ನೇರವಾಗಿ ಕಾಲುಗಳ ಮೇಲೆ ಸಮಭಾರ ಬಿದ್ದು, ಬೆನ್ನಿನ ಸ್ನಾಯುಗಳು ಕೂಡ ನೇರಗೊಳ್ಳುವುದರಿಂದ ಈ ಸ್ಥಿತಿಯಲ್ಲಿ ಅತ್ಯಂತ ನೆಮ್ಮದಿ ಎನಿಸುವುದು. ಹೀಗೆ ನಿಲ್ಲುವುದರಿಂದ ದೇಹದ ಜಡತೆಯೂ ಮಾಯವಾಗಿ, ಮನಸ್ಸು ಕೂಡ ಚುರುಕಾಗುತ್ತದೆ. ಸಮಸ್ಥಿತಿಯು ಯೋಗಾಸನದ ಆರಂಭದ ಸ್ಥಿತಿಯಾದರೂ ಇದೇ ಒಂದು ಆಸನ ಕೂಡ ಆಗಿ ಸಂಪೂರ್ಣ ಫಲವನ್ನು ಕೊಡಬಲ್ಲದು. ಈ ಸಮಸ್ಥಿತಿಯ ಭಂಗಿಯನ್ನು ಅನುಸರಿಸುತ್ತ, ಜೊತೆಗೆ ಪೌಷ್ಟಿಕವಾದ, ಪ್ರಕೃತಿಸಹಜವಾದ, ಋತುಗನುಗುಣವಾದ ಆಹಾರವನ್ನು ಹಿತಮಿತವಾಗಿ ಸೇವಿಸುತ್ತ, ಶಾರೀರಿಕ ಸಮತೂಕವನ್ನು ಕಾಯ್ದುಕೊಳ್ಳುತ್ತಾ ಹೋಗಬೇಕು. ಶಾರೀರಿಕ ಸಮಸ್ಥಿತಿಯ ಜೊತೆಗೆ ಮನಸ್ಸಿನ ಅಲೋಚನೆಗಳನ್ನು ಸಮಸ್ಥಿತಿಗೆ ತಂದಾಗ, ಜೀವನ ಏಳು-ಬೀಳುಗಳನ್ನು ಸಮಭಾವದಿಂದ ಸ್ವೀಕರಿಸಿದಾಗ, ಅದು ನಿಜವಾದ ಯೋಗ ಎನಿಸಿಕೊಳ್ಳುತ್ತದೆ. ಆ ಯೋಗ ಎಲ್ಲರಿಗೂ ಬರಲಿ, ಸಿಗಲಿ. ನಮ್ಮ ಶರೀರ ನಮ್ಮ ಕಾಲುಗಳ ಮೇಲೆ ನಿರ್ಭಾರಸ್ಥಿತಿಯಲ್ಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT