ಮಂಗಳವಾರ, ಜನವರಿ 21, 2020
25 °C

ಸುಶ್ಮಿತಾ ಸೇನ್‌: ಜಿಮ್ನಾಸ್ಟಿಕ್ಸ್ ರಿಂಗುಗಳಲ್ಲಿ ಫಿಟ್‌ನೆಸ್‌ ರಿಂಗಣ

ಮೋಹನ್‌ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಸುಶ್ಮಿತಾ ಸೇನ್‌ 1994ರಲ್ಲಿ ‘ಭುವನ ಸುಂದರಿ’ ಕಿರೀಟ ತೊಟ್ಟಾಗ ಹೇಗಿದ್ದರೋ ಈಗಲೂ ಅದೇ ಚೆಲುವನ್ನು ಉಳಿಸಿಕೊಂಡಿದ್ದಾರೆ. ಫಿಟ್‌ನೆಸ್‌ ಎಂದರೆ ಬಾಲಿವುಡ್‌ನ ಬಹುತೇಕ ನಟಿಯರಿಗೆ ನೆನಪಾಗುವುದು ಸುಶ್ಮಿತಾ ಸೇನ್‌. ಮತ್ತೊಬ್ಬರು ಶಿಲ್ಪಾಶೆಟ್ಟಿ. ಯೋಗ ಮತ್ತು ಜಿಮ್‌ಗಳ ಮೂಲಕ ಫಿಟ್‌ನೆಸ್ ಕಾಯ್ದುಕೊಂಡಿದ್ದ ಸುಶ್ಮಿತಾ ಇದೀಗ ಜಿಮ್ನಾಸ್ಟಿಕ್ಸ್‌ನಲ್ಲೂ ಕಸರತ್ತನ್ನು ನಡೆಸಿದ್ದಾರೆ. 

ಬಾಲಿವುಡ್‌ನಲ್ಲಿ ‘ಸುಶ್‌’ ಎಂತಲೇ ಹೆಸರು ಗಳಿಸಿರುವ ಸುಶ್ಮಿತಾ ಅವರ ಫಿಟ್‌ನೆಸ್‌ ಸಲಹೆಗಳಿಗಾಗಿಯೇ ಇನ್‌ಸ್ಟಗ್ರಾಮ್‌ ಖಾತೆಗೆ 50 ಲಕ್ಷ ಮಂದಿ ಫಾಲೋವರ್‌ಗಳು ಇದ್ದಾರೆ. ತಮ್ಮ ಫಿಟ್‌ನೆಸ್‌, ಡಯಟ್‌, ಹವ್ಯಾಸಗಳ ವಿಡಿಯೊಗಳನ್ನು ತಮ್ಮ ಖಾತೆಯಲ್ಲಿ ಸದಾ ಹಂಚಿಕೊಳ್ಳುತ್ತಾರೆ. 

ದಶಕದ ಹಿಂದೆ ವಿಪರೀತ ತೂಕ ಹೆಚ್ಚಿಸಿಕೊಂಡಿದ್ದೇನೆ ಅನ್ನಿಸಿದಾಗ ಸುಶ್ಮಿತಾ ಅವರು ಹೊರಳಿದ್ದು ಯೋಗದ ಕಡೆಗೆ. ಅದಾಗಲೇ ಶಿಲ್ಪಾಶೆಟ್ಟಿ ಯೋಗದಿಂದಲೇ ಫಿಟ್‌ನೆಸ್‌ ಪ್ರಿಯರನ್ನು ಆಕರ್ಷಿಸಿದ್ದರು. ‘ಸುಶ್‌’ ತಮ್ಮ ತೂಕವನ್ನು ಇಳಿಸಿಕೊಳ್ಳಲು ಯೋಗದ ಜೊತೆಗೆ ಮೊದಲಿನಿಂದಲೂ ಅಭ್ಯಾಸ ನಡೆಸುತ್ತಿದ್ದ ಜಿಮ್‌ ಮತ್ತು ಈಜನ್ನು ಮುಂದುವರಿಸಿದ್ದರು. ಕಳೆದೆರಡು ವರ್ಷಗಳಿಂದ ಜಿಮ್ನಾಸ್ಟಿಕ್ಸ್‌ನತ್ತ ಅವರು ಹೊರಳಿದ್ದಾರೆ. 

ಜಿಮ್ನಾಸ್ಟಿಕ್ಸ್ ಬಗ್ಗೆ 

ಒಲಿಂಪಿಕ್‌ನ ಆಟೋಟ ಸ್ಪರ್ಧೆಗಳಲ್ಲಿ ಜಿಮ್ನಾಸ್ಟಿಕ್ಸ್‌ಗೆ ಮಹತ್ವದ ಸ್ಥಾನವಿದೆ. ಅಥ್ಲಿಟ್‌ಗಳ ವೇಗದ ಚಲನೆ ಮತ್ತು ದೇಹ ನಿಯಂತ್ರಣಕ್ಕೆ ಬೇಕಾಗುವ ಚಾಕಚಕ್ಯತೆಯು ಬೆರಗುಗಣ್ಣಿನಿಂದ ನೋಡುವಂತೆ ಆಕರ್ಷಿಸುತ್ತದೆ. ಥ್ರೆಡ್‌ ಮಿಲ್‌ಗಳಲ್ಲಿ ಓಡುವುದಕ್ಕೂ ಇಡೀ ದೇಹವನ್ನು ಜಿಮ್ನಾಸ್ಟಿಕ್ಸ್ ರಿಂಗುಗಳಲ್ಲಿ ನಿಯಂತ್ರಿಸುವುದಕ್ಕೂ ಅಗಾಧ ವ್ಯತ್ಯಾಸವಿದೆ. 

ಜಿಮ್ನಾಸ್ಟಿಕ್ಸ್ ರಿಂಗುಗಳಲ್ಲಿ ಕಸರತ್ತು ನಡೆಸುವುದು ನೋಡುವುದಕ್ಕೆ ಸುಲಭವಾಗಿದ್ದರೂ ಮಾಡುವುದು ಕಷ್ಟಸಾಧ್ಯ. ಮನೋಬಲದ  ಜೊತೆಗೆ ನಮ್ಮ ತೋಳಿನ ರಟ್ಟೆಗಳಲ್ಲಿ ಅಸಾಧ್ಯ ಬಲ ಇರಬೇಕಾಗುತ್ತದೆ. ಇಡೀ ದೇಹವನ್ನು ತೋಳ್ಬಲದಲ್ಲಿ ನಿಯಂತ್ರಿಸಬೇಕಾಗುವುದರಿಂದ ಜಿಮ್ನಾಸ್ಟಿಕ್ಸ್‌ ಸವಾಲಿನದ್ದಾಗಿದೆ. 

ಮೂಳೆಗಳು, ಸ್ನಾಯುಗಳಿಗೆ ಉತ್ತಮ ವ್ಯಾಯಾಮ ನೀಡುವ ಜಿಮ್ನಾಸ್ಟಿಕ್ಸ್‌ನ ತಂತ್ರಗಳನ್ನು ಐದಾರು ವರ್ಷದಿಂದ ಜಿಮ್‌ ಕೇಂದ್ರಗಳಲ್ಲೂ ಅಳವಡಿಸಿಕೊಂಡಿರುವುದನ್ನು ನಾವು ಕಾಣಬಹುದು. ದೇಹದ ಚಲನೆಯನ್ನು ಗುರುತ್ವದಲ್ಲಿ ಸಮವಾಗಿ ಇಡುತ್ತಲೇ ಕಸರತ್ತು ನಡೆಸುವುದು ಸವಾಲಿನದ್ದು. ಒಂದೊಂದು ವ್ಯಾಯಾಮದ ಚಲನೆಯಲ್ಲೂ ನೈಪುಣ್ಯತೆ ಸಾಧಿಸಲು ತಿಂಗಳುಗಟ್ಟಲೆ ರಿಂಗುಗಳಲ್ಲಿ ಬೆವರು ಹರಿಸಬೇಕಾಗುತ್ತದೆ.  

‌ಸರಾಗತೆ

ಜಿಮ್ನಾಸ್ಟಿಕ್ಸ್‌ನ ರಿಂಗುಗಳ ಮೇಲೆ ಕಸರತ್ತು ನಡೆಸುವವರಿಗೆ ವ್ಯಾಯಾಮಗಳು ಸರಾಗವೆನಿಸುತ್ತದೆ. ಇವರ ಸ್ನಾಯುಗಳು ಇತರರಿಗಿಂತ ಬಿಗಿಯಾಗಿರುತ್ತವೆ. ಅಲ್ಲದೆ, ಈ ವ್ಯಾಯಾಮಗಳನ್ನು ಮಾಡುವಾಗ ಮಾಂಸಖಂಡಗಳು ಮತ್ತು ಮೂಳೆಗಳ ಮೇಲೆ ಒತ್ತಡ, ದೇಹದ ತೂಕ ಬೀಳುತ್ತದೆ. ಆದರೆ, ವೇಗ ಮತ್ತು ಗುರುತ್ವದಲ್ಲಿ ಪಲ್ಲಟಗಳು ಆಗುವುದರಿಂದ ಆಯಾಸವೇನೂ ಆಗುವುದಿಲ್ಲ. ಜಿಮ್ನಾಸ್ಟಿಕ್ಸ್ ವ್ಯಾಯಾಮ ತರಬೇತಿಯನ್ನು ಆರಂಭಿಸುವ ಮುಂಚೆಯೇ ಕೈ– ಕಾಲು ಮೂಳೆಗಳು, ಮಾಂಸ ಖಂಡಗಳನ್ನು ಹಿಗ್ಗಿಸುವಂತಹ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. 

ಸಹನೆ

ಜಿಮ್ನಾಸ್ಟಿಕ್ಸ್ ಅಭ್ಯಾಸ ಮಾಡುವಾಗ ಸ್ನಾಯು ಮತ್ತು ಮಾಂಸಖಂಡಗಳ ಮೇಲೆ ಬೀಳುವ ಒತ್ತಡವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ವ್ಯಾಯಾಮದ ಚಲನೆಯು ನೀಡುತ್ತದೆ. ಜಿಮ್ನಾಸ್ಟಿಕ್ಸ್ ವ್ಯಾಯಾಮಗಳನ್ನು ವಿಶ್ರಾಂತಿಯ ಮಿತಿಯೊಂದಿಗೆ ಮಾಡುವುದರಿಂದ ಹೃದಯ ನಾಳಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. 

ಶಕ್ತಿವರ್ಧಕ

ಜಿಮ್ನಾಸ್ಟಿಕ್ಸ್ ವ್ಯಾಯಾಮಗಳು ಸ್ನಾಯು ಮತ್ತು ಮೂಳೆಗಳ ಶಕ್ತಿಯನ್ನು ಹೆಚ್ಚಿಸುತ್ತವೆ.‌ ಮೂಳೆ ಮಜ್ಜೆಗಳ ಬಲವನ್ನು ಹೆಚ್ಚಿಸುವುದರಿಂದ ಗಾಯಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ದೇಹದ ಭಾರವು ರಿಂಗುಗಳ ಗುರುತ್ವದಲ್ಲಿ ಇರುವುದರಿಂದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿದ್ದೇ ಆದಲ್ಲಿ ದೇಹ ಸಪೂರವಾಗುತ್ತದೆ.  

ತೂಕದ ವೇಗದ ಇಳಿಕೆ

ಕಾರ್ಡಿಯೊ ವ್ಯಾಯಾಮಗಳಿಗಿಂತಲೂ ಹೆಚ್ಚು ಪರಿಣಾಮಕಾರಿ ವ್ಯಾಯಾಮವು ಜಿಮ್ನಾಸ್ಟಿಕ್ಸ್‌ನಿಂದ ಸಿಗುತ್ತದೆ. ಇದರಿಂದಾಗಿ ಕ್ಯಾಲೊರಿಗಳನ್ನು ವೇಗವಾಗಿ ಕರಗಿಸಿಕೊಳ್ಳಬಹುದು. ತೂಕವನ್ನು ಕೆಲವೇ ತಿಂಗಳಲ್ಲಿ ಇಳಿಸಿಕೊಳ್ಳಬಹುದು ಎಂಬುದು ಜಿಮ್ನಾಸ್ಟಿಕ್ಸ್ ಪಟುಗಳ ಅನಿಸಿಕೆ. ವ್ಯಾಯಾಮಗಳ ಮೂಲಕ ದೇಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಲೆಕ್ಕವಿಲ್ಲದಷ್ಟು ಜಿಮ್ನಾಸ್ಟಿಕ್ಸ್ ವ್ಯಾಯಾಮಗಳು ಇವೆ. ಈ ವ್ಯಾಯಾಮಗಳೊಂದಿಗೆ ಬರ್ಪಿಸ್‌, ಸ್ಟಾರ್‌ ಜಂಪ್ಸ್, ಹಿಮ್ಮುಖ ನೆಗೆತ, ಹಿಲ್‌ ಕ್ಲೈಂಬಿಗ್ಸ್‌ಗಳನ್ನು ಮಾಡಿದರೆ ದೇಹ ಸಾಮರ್ಥ್ಯವನ್ನು ಇಮ್ಮಡಿಸಿಕೊಳ್ಳಬಹುದಾಗಿದೆ.  

ಸಮಚಿತ್ತತೆ

ರಿಂಗ್‌ಗಳಲ್ಲಿ ದೇಹವನ್ನು ನಿಯಂತ್ರಿಸುವುದು ಜಿಮ್ನಾಸ್ಟಿಕ್ಸ್‌ನಲ್ಲಿ ಮುಖ್ಯವಾಗುತ್ತದೆ. ದೇಹ ನಿಯಂತ್ರಣಕ್ಕೆ ಏಕಾಗ್ರತೆಯನ್ನು ವಹಿಸಬೇಕಾದ್ದರಿಂದ ಸಮಚಿತ್ತತೆಯನ್ನು ಈ ವ್ಯಾಯಾಮಗಳು ನೀಡಬಲ್ಲವು. ದೈನಂದಿನ ಜೀವನ ವಿವಿಧ ಸಂದರ್ಭಗಳನ್ನು ಎದುರಿಸಲು ಸಹಾಯಕವಾಗಿವೆ.  

ಸವಾಲುಗಳನ್ನು ಎದುರಿಸಲು

ವ್ಯಾಯಾಮಗಳು ನೀಡುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದರೆ ದೇಹದ ಸಾಮರ್ಥ್ಯ ಹೆಚ್ಚುವುದಷ್ಟೇ ಅಲ್ಲದೆ ಸಮತೋಲತೆ ಮತ್ತು ಸಮನ್ವಯತೆಯನ್ನು ಕೊಡುತ್ತದೆ. ಉದಾಹರಣೆಗೆ ರಿಂಗುಗಳಲ್ಲಿ ಬಸ್ಕಿಯನ್ನು ಸುಲಭವಾಗಿ ಹೊಡೆಯಬಹುದು. ಬಂದೂಕಿನ ಮಾದರಿಯಲ್ಲಿ, ಒಂಟಿ ಕಾಲಿನಲ್ಲಿ ಬಸ್ಕಿ ಹೊಡೆಯುವುದು ಸವಾಲಿನದ್ದಾಗಿದೆ. ಈ ಮಾದರಿಯ ವ್ಯಾಯಾಮಗಳಲ್ಲಿ ದೇಹ ಮತ್ತು ಮನಸ್ಸಿನ ಸಮನ್ವಯ ಅಗತ್ಯ.  

‘ಕೋರ್‌ ಸ್ಟ್ರೆಂಥ್‌’

ದೇಹ ತೂಕವೇ ಸಾಧನವಾಗಿರುವ ವ್ಯಾಯಾಮಗಳು ಜಿಮ್‌ನಲ್ಲಿ ತೂಕದ ಬಟ್ಟುಗಳನ್ನು ಎತ್ತುವಾಗ ಉಪಯೋಗಿಸುವ ಬಲಕ್ಕಿಂತಲೂ ಹೆಚ್ಚು ಶ್ರಮವನ್ನು ಬೇಡುತ್ತವೆ. ಇವುಗಳನ್ನು ಮಾಡಲು ಚಾಕಚಕ್ಯತೆಯನ್ನು ಬೆಳೆಸಿಕೊಂಡದ್ದೇ ಆದಲ್ಲಿ. ದೇಹದ ಬಲ ಮತ್ತು ಸಾಮರ್ಥ್ಯ ದುಪ್ಪಟ್ಟು ಹೆಚ್ಚಾಗಲ್ಲದು. ದೇಹದ ಕೋರ್ ಸ್ಟ್ರೆಂಥ್‌ ಅನ್ನು ಜಿಮ್ನಾಸ್ಟಿಕ್ಸ್ ನೀಡಬಲ್ಲದು.

ಚೇತೋಹಾರಿ

ಜಿಮ್‌ಗಳಲ್ಲಿ ಮರುಕಳಿಸುವ ವ್ಯಾಯಾಮ ಮಾದರಿಗಳನ್ನು ಮಾಡಿ ಮಾಡಿ ಬೇಸರ ಪಟ್ಟುಕೊಂಡವರಿಗೆ ಜಿಮ್ನಾಸ್ಟಿಕ್ಸ್ ವ್ಯಾಯಾಮಗಳು ಉಲ್ಲಾಸದಾಯಕವಾಗಿದ್ದು, ಚೇತೋಹಾರಿಕ ಅನುಭವ ನೀಡಬಲ್ಲವು. ನೈಪುಣ್ಯತೆ ಹೆಚ್ಚಾದಂತೆ ಕಷ್ಟದ ವ್ಯಾಯಾಮಗಳು ಸುಲಭವಾಗುತ್ತದೆ. ದೇಹವು ಪ್ರತಿ ವ್ಯಾಯಾಮಗಳು ಸ್ಪ್ರಿಂಗ್‌ನಂತೆ ಪ್ರತಿ ವ್ಯಾಯಾಮಕ್ಕೂ ತುಡಿಯಬಲ್ಲದು. 

ಅನ್ವಯ ಎಲ್ಲೆಲ್ಲೂ

ಜಿಮ್ನಾಸ್ಟಿಕ್ಸ್ ವ್ಯಾಯಾಮಗಳನ್ನು ಜಿಮ್‌ ಕೇಂದ್ರಗಳಲ್ಲಿಯೇ ಅಥವಾ ಜಿಮ್ನಾಸ್ಟಿಕ್ಸ್ ಅಂಗಳದಲ್ಲಿಯೇ ಮಾಡುವಂತೆ ಮಾಡಬೇಕು ಎಂಬ ನಿಯಮವಿಲ್ಲ. ಹೊರಾಂಗಣದಲ್ಲಿಯೂ ಮಾಡಬಹುದು. 

ಪ್ರತಿಕ್ರಿಯಿಸಿ (+)