ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂತ್ರ ಮತ್ತು ಪಾತ್ರ

Last Updated 19 ಜುಲೈ 2021, 19:30 IST
ಅಕ್ಷರ ಗಾತ್ರ

ಸ್ವಾಮಿ ವಿವೇಕಾನಂದರು ತಮ್ಮ ರಾಜಯೋಗ ಕುರಿತ ಭಾಷಣದಲ್ಲಿ ಒಂದು ಸೊಗಸಾದ ಕಥೆಯನ್ನು ನಿರೂಪಿಸಿದ್ದರು.

ಒಬ್ಬ ರಾಜನನ್ನು ಯಾವುದೋ ಕಾರಣದಿಂದ ಎದುರು ಹಾಕಿಕೊಂಡ ಮಂತ್ರಿಯನ್ನು ಆ ರಾಜ ಒಂದು ಎತ್ತರದ ಕಾರಾಗೃಹದಲ್ಲಿ ಬಂಧಿಸಿದ. ಅಲ್ಲಿಗೆ ಕಾವಲುಗಾರರು ಮಾತ್ರ ಮೆಟ್ಟಿಲಿನ ಮೂಲಕ ಸಾಗಿ ಆಹಾರವನ್ನು ತಲುಪಿಸಿ ಹಿಂತಿರುಗುತ್ತಿದ್ದರು. ಆದರೆ ಮಂತ್ರಿ ಬುದ್ಧಿವಂತ. ಹೇಗೋ ಮಾಡಿ ತನ್ನ ಮಗಳಿಗೆ ಒಂದು ಗುಪ್ತಚೀಟಿಯನ್ನು ಕಳಿಸಿದ. ಆಕೆಯೂ ಅಷ್ಟೇ ಜಾಣೆ ತಂದೆಯ ಪತ್ರದಲ್ಲಿ ಸೂಚಿಸದಂತೆ ನಡೆದುಕೊಂಡ ಕಾರಣ ಅವಳ ತಂದೆ ಕಾರಾಗೃಹದ ಕಿಟಿಕಿಯಿಂದ ತಪ್ಪಿಸಿಕೊಂಡು ರಾಜ್ಯದ ಗಡಿ ದಾಟಿ ಕ್ಷೇಮ ನೆಲೆ ಹೊಂದಿದ.

ಆ ಚೀಟಿಯಲ್ಲಿ ಏನು ಬರೆದಿತ್ತು ಎಂದರೆ, ‘ಒಂದು ಇರುವೆಯನ್ನು ಬಂಧಿಖಾನೆಯ ಹಿಂಬದಿಯ ಗೋಡೆಗೆ ಮೇಲ್ಮುಖವಾಗಿ ಇರಿಸಿ ಅದರ ಮೀಸೆಗೆ ಜೇನುತುಪ್ಪದ ಹನಿಯನ್ನು ಸವರಿ ಸೊಂಟಕ್ಕೆ ಸಣ್ಣ ರೇಶ್ಮೆಯ ದಾರವನ್ನು ಕಟ್ಟಿ ಬಿಡತಕ್ಕದ್ದು. ಅದು ಕಿಟಕಿಯನ್ನು ತಲುಪಿ ಒಳಗೆ ಇಳಿದ ಬಳಿಕ ದಾರದ ಇನ್ನೊಂದು ತುದಿಗೆ ಸ್ವಲ್ಪ ದಪ್ಪನೆಯ ದಾರವನ್ನು ಕಟ್ಟುವುದು. ಬಳಿಕ ಆ ದಾರದ ಕೊನೆಗೆ ಇನ್ನು ದಪ್ಪದ ಹುರಿಯನ್ನು ಕಟ್ಟುವುದು. ಈ ಹುರಿಯ ಕೊನೆಗೆ ಹಗ್ಗವನ್ನು ಕಟ್ಟುವುದು.’ ಮಂತ್ರಿಯು ಮೊದಲಿಗೆ ರೇಶ್ಮೆ ದಾರವನ್ನು ಸೆಳೆದು ಅದಕ್ಕೆ ಕಟ್ಟಿದ ಹಗ್ಗವನ್ನು ಮೇಲೆಳೆದು ಅದರ ತುದಿಯಲ್ಲಿ ಇದ್ದ ಹಗ್ಗವನ್ನು ಸೆಳೆದು ಬಂಧಿಖಾನೆಯ ಬಾಗಿಲಿನ ಸರಳಿಗೆ ಕಟ್ಟಿ, ಕಿಟಕಿಯ ಮೂಲಕ ಹಗ್ಗದ ಆಧಾರದಿಂದ ಕೆಳಗಿಳಿದು ಪರಾರಿಯಾಗಿದ್ದ.

ಪ್ರಾಣಶಕ್ತಿಯ ಮೂಲಕ ಆಲೋಚನೆಗಳನ್ನು ನಿಯಂತ್ರಿಸಬಹುದು. ತನ್ಮೂಲಕ ಜೀವನದ ಎಲ್ಲ ಮನೋದೈಹಿಕ ವ್ಯಾಪಾರಗಳನ್ನು ನಿಯಂತ್ರಿಸಬಹುದು ಎಂದು ಸೂಚಿಸಲು ಈ ಸಾಮತಿಯನ್ನು ಸ್ವಾಮೀಜಿ ನೀಡುತ್ತಿದ್ದಾರೆ.

ಮನಸ್ಸು ಮತ್ತು ದೇಹ ನಮ್ಮ ವ್ಯಕ್ತಿತ್ವದ ಸೂಕ್ಷ್ಮ ಮತ್ತು ಸ್ಥೂಲ ರೂಪಗಳು. ನಮ್ಮ ಭಾವವೇಗಕ್ಕೆ ತಕ್ಕಂತೆ ಮನಸ್ಸಿನ ಆಲೋಚನೆಗಳಿಗೆ ತಕ್ಕಂತೆ ಉಸಿರಾಟದ ಏರಿಳಿತವು ವ್ಯತ್ಯಾಸಗೊಳ್ಳುವುದನ್ನು ಗಮನಿಸಬಹುದು. ಯಾರಿಗೆ ಮನಃಶಾಂತಿ ಮತ್ತು ಸಮಾಧಾನ, ಸಮಚಿತ್ತ ಬೇಕೋ ಅವರು ಉಸಿರಾಟವನ್ನು ಗಮನಿಸುತ್ತಾ ದೀರ್ಘವಾದ ಉಸಿರಾಟವನ್ನು ನಡೆಸಿದರೆ ಮನಸ್ಸು ತಹಬಂದಿಗೆ ಬರುತ್ತದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಯೋಗವಿಜ್ಞಾನ ಮತ್ತು ಆಧುನಿಕ ವಿಜ್ಞಾನ – ಈ ಎರಡು ಒಪ್ಪಿಕೊಳ್ಳುವ ಒಂದು ಸಾಮಾನ್ಯ ಅಂಶ ಯಾವುದೆಂದರೆ ನಮ್ಮ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯದ ಮೇಲೂ ಮತ್ತು ಮಾನಸಿಕ ಆರೋಗ್ಯ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬ ಅಂಶ. ಔಷಧೋಪಚಾರದ ಜೊತೆಗೆ ಜೀವನಕ್ರಮದ ದೈನಂದಿನ ಚಟುವಟಿಕೆಯ ಸಮನ್ವಯತೆ ಸಾಧಿಸಬೇಕು ಎಂಬುದನ್ನು ಇದು ಸೂಚಿಸುತ್ತದೆ.

ಪ್ರಸ್ತುತ ಕಾಲಮಾನದಲ್ಲಿ ಅನೇಕ ಬಗೆಯ ಸವಾಲುಗಳನ್ನು ಎದುರಿಸುತ್ತಿರುವ ಸಮುದಾಯವು ಜಾಗತಿಕ ಮಟ್ಟದಲ್ಲಿ ಆಲೋಚಿಸಿ ಕ್ರಮ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ನಿಯತ ವ್ಯಾಯಾಮ, ಪೌಷ್ಟಿಕ ಆಹಾರದ ಜೊತೆಗೆ ಯೋಗ ಇವೆಲ್ಲವನ್ನು ರೂಢಿಸಿಕೊಳ್ಳಬೇಕಾಗಿದೆ. ಹೊಸ ಜಗತ್ತು ಹೊಸ ಸವಾಲುಗಳನ್ನು ನಮ್ಮ ಮುಂದಿಟ್ಟಿದೆ. ಆದರೆ ಮನುಷ್ಯನ ಸಂಕಲ್ಪಶಕ್ತಿಯ ಮುಂದೆ ಅವನು ಬೆಳೆಸಿಕೊಂಡು ಬಂದಿರುವ ಜ್ಞಾನ ಶಾಖೆಗಳ ಎದುರಿನಲ್ಲಿ ಸವಾಲುಗಳನ್ನು ನಿವಾರಿಸಲು ಬೇಕಾದ ಎಲ್ಲಾ ಸಾಮರ್ಥ್ಯಗಳು ಅವನಲ್ಲಿ ಇದೆ ಎಂಬುದನ್ನು ಚರಿತ್ರೆ ದಾಖಲಿಸಿದೆ. ಹೀಗಾಗಿ ಇತ್ತೀಚಿನ ಕೊರೊನಾ ಆಗಲಿ ಅಥವಾ ಅದರ ರೂಪಾಂತರವಾಗಲಿ ನಮ್ಮನ್ನು ಕಂಗೆಡಸಬಾರದು. ವಿಜ್ಞಾನಿಗಳ ಪರಿಶ್ರಮದಿಂದ ತಯಾರಾಗುತ್ತಿರುವ ಲಸಿಕೆಗಳು ಜನರನ್ನು ದೈಹಿಕವಾಗಿ ಸಮರ್ಥಗೊಳಿಸಿದರೆ ಯೋಗವಿಜ್ಞಾನದ ಮತ್ತು ಜೀವನಶೈಲಿ ಸಮಾಲೋಚಕರ ಪ್ರಯತ್ನಗಳಿಂದ ಜನಸಮುದಾಯ ಮಾನಸಿಕ ದೃಢತೆಯನ್ನು ಬೆಳೆಸಿಕೊಳ್ಳುತ್ತದೆ. ಗೆಲುವಾಗಲಿ ಸೋಲಾಗಲಿ ಮನಸ್ಸಿನ ಪರಿಣಾಮವೇ. ಅನಾರೋಗ್ಯ ಆವರಿಸಿದಾಗಲೂ ಎದೆಗೆಡದೆ ನಿವಾರಿಸಿಕೊಳ್ಳುವೆನೆಂಬ ಸಂಕಲ್ಪದಿಂದ ಅದನ್ನು ಗೆಲ್ಲಬೇಕು.

ವಿಸ್ಮಯವೆಂಬಂತೆ ಇಂತಹ ಅನೇಕ ಪ್ರಸಂಗಗಳನ್ನು ನಾವು ಗಮನಿಸಬಹುದು. ವಾಸಿಯೇ ಆಗುವುದಿಲ್ಲವೆಂದು ಭಾವಿಸಿದ್ದ ಕೆಲವು ರೋಗಿಗಳು ಕೇವಲ ತಮ್ಮ ಮನಃಶಕ್ತಿಯಿಂದ ರೋಗವನ್ನು ನಿರೋಧಿಸಿ ಗೆದ್ದಿದ್ದಾರೆ. ಹಾಗೆ ಸಣ್ಣ ಕಾಯಿಲೆಗಳಿಗೆ ಶರಣಾಗಿ ಮರಣವನ್ನು ಅಪ್ಪಿದವರು ಇದ್ದಾರೆ. ಮುಖ್ಯವಾಗಿ ನಮ್ಮ ಹಾಗೂ ಸಹವರ್ತಿಗಳ ಆಲೋಚನೆಗಳು ಸದಾ ಸಕಾರಾತ್ಮಕವೂ ಆರೋಗ್ಯಕಾರಿಯೂ ಆಗಿರಬೇಕು. ನಮ್ಮ ಆಯುಸ್ಸು ನೂರು ಎಂದ ಮೇಲೆ ನಾವು ನೂರು ವರ್ಷ ಬದುಕುವುದು ಸಾಧ್ಯವಾದರೆ ಅದನ್ನು ದಾಟುವ ಪ್ರಯತ್ನವನ್ನು ಮಾಡಬೇಕು. ಪರೀಕ್ಷೆಗೆ ನೂರು ಅಂಕಗಳು ಇರುವಾಗ ಕಡಿಮೆ ಅಂಕಗಳಿಗೆ ತೃಪ್ತರಾಗಬೇಡಿರೆಂದು ವಿದ್ಯಾರ್ಥಿಗಳನ್ನು ಶಿಕ್ಷಕರು ಹುರಿದುಂಬಿಸುತ್ತಾರೆ. ಅದೇ ರೀತಿಯಲ್ಲಿ ನಾವು ಪೂರ್ಣ ಆಯುಸ್ಸು ಬಾಳಬೇಕೆಂದು ವೈದ್ಯಕೀಯ ವಿಜ್ಞಾನ, ಯೋಗವಿಜ್ಞಾನ ಮತ್ತು ನಮ್ಮ ಬಂಧುವರ್ಗ ಬಯಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸದಾ ಸಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT