ಮಂಗಳವಾರ, ಏಪ್ರಿಲ್ 13, 2021
23 °C

ಬೇಸಿಗೆಯಲ್ಲಿ ಥಂಡಾ ಥಂಡಾ ಕೂಲ್ ಕೂಲ್

ಡಾ. ವಿಜಯಲಕ್ಷ್ಮಿ ಪಿ. Updated:

ಅಕ್ಷರ ಗಾತ್ರ : | |

Prajavani

ಬೇಸಗೆ ಬಂತು, ಇನ್ನು ಐಸ್ ಕ್ರೀಂ ಅಂಗಡಿಗಳಿಗೆ ಸುಗ್ಗಿಯೋ ಸುಗ್ಗಿ. ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದೆ ತಂಪು ಪದಾರ್ಥಗಳ ಮೊರೆ ಹೋಗುವ ಕಾಲವಿದು. ಬೇಸಗೆಯಲ್ಲಿ ತಂಪು ಹಿತವಾದರೂ ಅರಿತು ಸೇವಿಸಿದರೆ ಸ್ವಾಸ್ಥ್ಯ, ಇಲ್ಲವಾದರೆ ಅಸ್ವಾಸ್ಥ್ಯ. ಅದರಲ್ಲೂ ಈ ಕೊರೊನಾಯುಗದಲ್ಲಿ ಎಷ್ಟು ಅರಿತರೂ ಕಡಿಮೆಯೇ.

ಶರೀರ ತಂಪಾಗಿದ್ದರೆ ಮನಸ್ಸಿಗೆ ಆನಂದ. ಅಂತರಿಕವಾಗಿ ಶರೀರವನ್ನು ತಂಪು ಮಾಡುವ ಪದಾರ್ಥಗಳ ಉಪಯೋಗ ಈ ಕಾಲಕ್ಕೆ ಸೂಕ್ತ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ತಂಪು ಅಥವಾ ನೀರು ಬೆಂಕಿಯನ್ನು ನಂದಿಸುತ್ತದೆ. ಇದು ಬೇಸಗೆಯಲ್ಲಾದರೂ, ಯಾವ ಕಾಲದಲ್ಲಾದರೂ ಒಂದೇ. ಆದರೆ ನಾವು ಸೇವಿಸುವ ತಂಪು ಪದಾರ್ಥ ದೇಹದ ಅಂತರಗ್ನಿಯ ಶಕ್ತಿಯನ್ನು ಕುಗ್ಗಿಸಬಾರದು. ಶಿಶಿರದಲ್ಲಿ ಘನವಾದ ಹಿಮ ಬೇಸಿಗೆಯಲ್ಲಿ ಕರಗುವಂತೆ ಧೃಢವಾದ ಶರೀರ ಧಾತುಗಳೂ ಬೇಸಗೆಯಲ್ಲಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ದ್ರವದ ಅವಶ್ಯಕತೆ ಇದ್ದರೂ ಸ್ವಾಸ್ಥ್ಯ, ದಾರ್ಢ್ಯ ಕೆಡದಂತೆ ಶರೀರವನ್ನು ಕಾಪಾಡಿಕೊಳ್ಳುವ ಜಾಣತನ ಬೇಸಗೆಯಲ್ಲಿ ಅವಶ್ಯಕ

ಬಾಹ್ಯ ಲೇಪನಗಳು, ತಂಪಾದ ಗಾಳಿ – ಇವುಗಳ ಸೇವನೆಯಿಂದ ಚರ್ಮವನ್ನು ತಂಪಾಗಿರಿಸಿ ದೇಹವನ್ನು ತಂಪಾಗಿರಿಸುವುದು ಒಂದು ವಿಧಾನವಾದರೆ, ತಂಪಾಗಿರುವ ಪದಾರ್ಥಗಳನ್ನು ಸೇವಿಸುವ ಮೂಲಕ ಶರೀರವನ್ನು ತಂಪಾಗಿಸುವುದು ಇನ್ನೊಂದು ವಿಧಾನ.

ಸುಗಂಧದ್ರವ್ಯಗಳಾದ ಶ್ರೀಗಂಧ, ರಕ್ತಚಂದನ, ಲಾವಂಚ, ಇವುಗಳ ಚೂರ್ಣವನ್ನು ಗುಲಾಬಿ ಅರ್ಕ(Rose Water)ದಲ್ಲಿ ಕಲಸಿ ಮುಖ ಕೈಕಾಲುಗಳಿಗೆ ಲೇಪಿಸಿ  ಒಣಗಿದ ನಂತರ ತೊಳೆದುಕೊಳ್ಳಬೇಕು; ಅಥವಾ ಇವುಗಳಿಂದ ಮೈಯನ್ನು ತಿಕ್ಕಿ ಸ್ನಾನ ಮಾಡುವುದು. ಈ ರೀತಿ ದಿನಾ ಅಥವಾ ಎರಡು ದಿನಕ್ಕೊಮ್ಮೆ ಮಾಡುವುದರಿಂದ ಮೈ ಕಾಂತಿ ಹೆಚ್ಚುತ್ತದೆ ಮತ್ತು ಚರ್ಮವ್ಯಾಧಿಗಳು ಬರುವುದಿಲ್ಲ. ದಾಸವಾಳ, ಅಂಟುವಾಳ, ಗೋರಂಟಿ ಇವುಗಳನ್ನು ತಲೆಗೆ ಹಚ್ಚುವುದರಿಂದಲೂ ತಲೆ ತಂಪಾಗುತ್ತದೆ. ಅಲರ್ಜಿಗಳಿದ್ದು ಚರ್ಮರೋಗ ಹೆಚ್ಚಾಗುವ ಸಾಧ್ಯತೆ ಇರುವವರು ಹೊಂಗೆ, ಬೇವು ಇವುಗಳ ಚೂರ್ಣಗಳನ್ನು ಮೈ ಕೈಗೇ ತಿಕ್ಕಿಕೊಂಡು ಸ್ನಾನ ಮಾಡುವುದೊಳಿತು ಅಥವಾ ಹೊಂಗೆ ಎಣ್ಣೆ, ಬೇವಿನ ಎಣ್ಣೆ, ಇವುಗಳನ್ನು ಹಚ್ಚಿ ಸ್ನಾನ ಮಾಡಬಹುದು. ಹಾಗೆಯೇ ಲಾವಂಚದ ಚಾಪೆಗಳನ್ನು ಕಿಟಕಿ, ಬಾಗಿಲುಗಳಿಗೆ ಹಾಕುವುದರಿಂದ ಅದರ ಮೂಲಕ ಬರುವ ಗಾಳಿಯು ಮೈಯನ್ನು ತಂಪಾಗಿಸುತ್ತದೆ. ಎಸಿ ಬಳಸುವವರು 25 ಡಿಗ್ರಿ ಉಷ್ಣಾಂಶಕ್ಕಿಂತ ಕಡಿಮೆ ಬಳಸಬಾರದು. ಇದು ಚರ್ಮ ಒಣಗದಂತೆ ಕಾಪಾಡುತ್ತದೆ. ಉಷ್ಣಾಂಶ ಕಡಿಮೆ ಆದಷ್ಟೂ, ಮೈ ತಂಪಾದರೂ ಚರ್ಮ ಒಣಗಿ ಚರ್ಮರೋಗ, ಉಬ್ಬಸ, ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತವೆ.

ತಂಪು ಪೆಟ್ಟಿಗೆಯಲ್ಲಿಟ್ಟಿರುವ ಪಾನೀಯಗಳನ್ನು ಸೇವಿಸಿದರೆ ಕೆಮ್ಮು, ನೆಗಡಿ, ತಲೆನೋವು, ಹಸಿವು ಕಡಿಮೆಯಾಗುವುದು, ಆಮ್ಲಪಿತ್ತ ಮೊದಲಾದ ರೋಗಗಳನ್ನು ಆಹ್ವಾನಿಸಿದಂತೆ. ಅದೇ ಸೊಗದೆ ಬೇರು, ಲಾವಂಚ, ಗುಲಾಬಿ, ಏಲಕ್ಕಿ ಇವುಗಳಿಂದ ತಯಾರಿಸಿದ ನೀರು, ಅಥವಾ ಹಾಲು ಕಷಾಯ ಇವುಗಳ ಸೇವನೆ ಉಷ್ಣ ಮತ್ತು ಪಿತ್ತ ಎರಡನ್ನೂ ಕಡಿಮೆಮಾಡಿ, ಜೀರ್ಣಶಕ್ತಿ ಹಾಳಾಗದಂತೆ ಕಾಪಾಡುತ್ತದೆ. ಕೊನ್ನಾರಿ ಗಡ್ಡೆ ಹಾಕಿ ಕುದಿಸಿರುವ ನೀರು ಬೇಸಿಗೆಯ ಬೇದಿಗೆ ರಾಮಬಾಣ. ಒಂದೆಲಗ, ಮೆಂತೆ, ಉದ್ದು, ಬಸಳೆ, ವಿಟಮಿನ್ ಸೊಪ್ಪು, ಪಲಾಕು, ಜೀರಿಗೆ, ಓಮ ಇವುಗಳಲ್ಲಿ ಯಾವುದಾದರೂ ಒಂದು ದ್ರವ್ಯದ ತಂಬುಳಿ (ಮಜ್ಜಿಗೆಯಿಂದ ತಯಾರಿಸುವ ಪದಾರ್ಥ) ನಿತ್ಯ ಉಪಯೋಗಿಸುವುದರಿಂದ ಬೇಸಗೆಯ ಬೇಗೆಯನ್ನು ತಡೆಯಬಹುದು. ಈ ಕಾಲದಲ್ಲಿ ಅಡುಗೆಗೆ ಹೆಸರು ಬೇಳೆ, ಹೆಸರುಕಾಳುಗಳನ್ನು ಬಳಸಿದರೆ ಶರೀರ ತಂಪಾಗಿರುತ್ತದೆ, ಆನಾರೋಗ್ಯವೂ ಉಂಟಾಗುವುದಿಲ್ಲ. ಹೆಸರುಕಾಳನ್ನು ನೆನೆಸಿ, ರುಬ್ಬಿ ತೆಗೆದ ಹಾಲಿಗೆ ಬೆಲ್ಲ ಸೇರಿಸಿ ಸೇವಿಸುವುದು, ಆರಾರೋಟ್ ಗಂಜಿಗೆ ಹಾಲು ಸೇರಿಸಿ ಸೇವಿಸುವುದು ಮೈಯನ್ನು ತಂಪಾಗಿರಿಸುತ್ತದೆ. ಆರಳಿನ ಗಂಜಿ, ಹುರಿಹಿಟ್ಟು, ಹಣ್ಣಿನೊಡನೆ, ಬೆಲ್ಲದೊಡನೆ ಪಾನೀಯ ತಯಾರಿಸಿ ಕುಡಿಯುವುದು, ಕಲ್ಲಂಗಡಿಹಣ್ಣಿನೊಡನೆ ಅಧಿಕ ನೀರು ಸೇರಿಸಿ ಸೇವನೆ ಆರೋಗ್ಯಕರ.

ಕುದಿಸಿ ತಣಿಸಿರುವ ನೀರಿಗೆ, ಕರಿಬೇವಿನ ಪುಡಿ, ಇಂಗು ಅಲ್ಪ ಪ್ರಮಾಣದಲ್ಲಿ ಶುಂಠಿರಸ ಇವುಗಳನ್ನು ಸೇರಿಸಿ ತಯಾರಿಸಿದ ನೀರು ಮಜ್ಜಿಗೆ ಶ್ರೇಯಸ್ಕರ. ಆದರೆ ಇದನ್ನು ತಂಪುಪೆಟ್ಟಿಗೆಯಲ್ಲಿಟ್ಟರೆ ಅನಾರೋಗ್ಯವನ್ನು ಆಹ್ವಾನಿಸಿದಂತೆ

ಮಿಲ್ಕ್ ಶೇಕ್‌ ಬೇಡ

ಯಾವ ಕಾರಣಕ್ಕೂ ಯಾವುದೇ ಹಣ್ಣನ್ನು ಹಾಲಿನ ಜತೆ ಬೆರೆಸಿ (ಮಿಲ್ಕ್ ಶೇಕ್, ಹಣ್ಣು ಮತ್ತು ಹಾಲು ಬೆರೆಸಿ ಸಲಾಡ್) ಸೇವಿಸಬಾರದು. ಐಸ್ ಕ್ರೀಂ ಮತ್ತು ಹಣ್ಣು, ಹುಳಿ ಎಂದು ಹಾಲು ಮಜ್ಜಿಗೆ ಬೆರೆಸುವುದು, ಸರ್ವದಾ ನಿಷಿದ್ಧ. ಇವು ಬಾಯಿಗೆ ರುಚಿಯಾದರೂ ನಿರಂತರ ಸೇವನೆಯಿಂದ ಅಂತರಿಕ ಅಂಗಾಂಗಗಳ ಕೆಲಸದಲ್ಲಿರುವ ಹೊಂದಾಣಿಕೆಯನ್ನು ಹಾಳುಮಾಡಿ, ದೀರ್ಘಕಾಲೀನ ಕಾಯಿಲೆಗಳನ್ನು ಉಂಟು ಮಾಡುತ್ತದೆ.

(ಲೇಖಕಿ ಆಯುರ್ವೇದವೈದ್ಯೆ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು