ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡದ ಸಂಗಾತಿಗೆ ಲವಲವಿಕೆಯ ಗೆಳತಿ

Last Updated 23 ನವೆಂಬರ್ 2018, 19:30 IST
ಅಕ್ಷರ ಗಾತ್ರ

ದಿನನಿತ್ಯದ ಜೀವನದಲ್ಲಿ ಒತ್ತಡ ಎಲ್ಲರಿಗೂ ಇದ್ದದ್ದೇ. ಅದರಲ್ಲೂ ಮಹಿಳೆಯರಿಗೆ ಒತ್ತಡ ಸ್ವಲ್ಪ ಹೆಚ್ಚೇ ಎಂದು ಹೇಳಬಹುದು. ಮನೆಯಲ್ಲೂ ಕೆಲಸ ಮಾಡಿ, ಹೊರಗೂ ದುಡಿಯುವ ಗೃಹಿಣಿಯರಿಗಂತೂ ಒತ್ತಡವು ಜೀವನದ ಒಂದು ಭಾಗವೇ ಆಗಿದೆ. ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುವವರಿಗೆ ಮಾತ್ರ ಈ ಒತ್ತಡ ಆವರಿಸಿಕೊಳ್ಳುವುದಿಲ್ಲ. ಮನೆಯಲ್ಲೇ ಇದ್ದು ಎಲ್ಲ ಕೆಲಸಗಳನ್ನೂ ನಿಭಾಯಿಸುವ ಗೃಹಿಣಿಯರಿಗೂ ಈ ಒತ್ತಡ ತನ್ನ ಬಿಸಿಯನ್ನು ಮುಟ್ಟಿಸುತ್ತಲೇ ಇರುತ್ತದೆ.

ಸದಾ ಕಾಲ ಮನೆಯಲ್ಲೇ ಇರುವ ಗೃಹಿಣಿಯರಿಗೆಂತಾ ಒತ್ತಡ – ಎಂದು ಮೂಗು ಮುರಿಯುವವರಿಗೇನೂ ಕಡಿಮೆ ಇಲ್ಲ. ಗೃಹಿಣಿಯಾಗುವುದು ಸುಲಭದ ಮಾತಲ್ಲ! ಪ್ರತಿಯೊಬ್ಬರಿಗೂ ಅವರವರ ಮಟ್ಟದಲ್ಲಿ ಒತ್ತಡ ಇದ್ದೇ ಇರುತ್ತದೆ. ‘ಅರಸನ ಚಿಂತೆ ಅರಸನಿಗೆ, ಆಳಿನ ಚಿಂತೆ ಆಳಿಗೆ’ ಎಂಬಂತೆ ಗೃಹಿಣಿಯ ಚಿಂತೆಗೃಹಿಣಿಗೆ! ಮನೆಯಲ್ಲಿ ಗೃಹಿಣಿಯಾದವಳು ಒತ್ತಡರಹಿತವಾಗಿದ್ದರೆ, ಕುಟುಂಬದಲ್ಲಿ ಶಾಂತಿ, ನೆಮ್ಮದಿ, ಸಂತೋಷ ನೆಲೆಸಿರುತ್ತದೆ.

ಒತ್ತಡವು ಬರೀ ಶಾಂತಿ, ನೆಮ್ಮದಿಯನ್ನು ಕಿತ್ತುಕೊಳ್ಳುವುದಲ್ಲದೆ, ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನೂ ಕಡಿಮೆ ಮಾಡಿಬಿಡುತ್ತದೆ. ಹಾಗಾದರೆ ಹಲವಾರು ಕೆಲಸಗಳನ್ನು ಮಾಡುವ ಮಲ್ಟಿಟಾಸ್ಕಿಂಗ್ ಗೃಹಿಣಿಯರ ಒತ್ತಡವನ್ನು ಕಡಿಮೆ ಮಾಡುವ ಬಗೆ ಹೇಗೆ?

ದಿನಚರಿಯ ಕಲಾಪಗಳಲ್ಲಿ ವೇಳಾಪಟ್ಟಿಯನ್ನು ಮಾಡಿಕೊಳ್ಳಿ. ದಿನನಿತ್ಯದ ಕೆಲಸ ವ್ಯವಸ್ಥಿತವಾಗಿದ್ದಲ್ಲಿ, ನಾವು ನಮ್ಮ ದಿನವನ್ನು ಉತ್ತಮವಾಗಿ ಕಳೆಯಬಹುದು. ನಾಳೆ ಮಾಡುವ ಕೆಲಸಗಳನ್ನು ಇಂದಿನ ರಾತ್ರಿಯೇ ಪಟ್ಟಿ ಮಾಡಿ, ಅದಕ್ಕೆ ಸಮಯವನ್ನು ಮೀಸಲಿಡಿ. ಹೆಚ್ಚು ಯೋಚಿಸದೆ, ಆಯೋಜಿಸಿಕೊಂಡಿರುವ ಕೆಲಸಗಳನ್ನು ಮಾಡಿ ಮುಗಿಸಿ. ಒತ್ತಡ ತನ್ನಿಂದ ತಾನೇ ಓಡಿಹೋಗುತ್ತದೆ. ಯಾವುದೇ ಕೆಲಸಗಳು ಸಮಯಕ್ಕೆ ಸರಿಯಾಗಿ ಆದಲ್ಲಿ, ನಿಮ್ಮ ಕೆಲಸಗಳು ಆದ ಮೇಲೂ ನಿಮಗಾಗಿ ಎಂದು ಸ್ವಲ್ಪ ಸಮಯ ಉಳಿಯುತ್ತದೆ.

ನೀವು ಮಾಡಲೇ ಬೇಕಾಗಿರುವ ಕೆಲಸದ ಜೊತೆಗೆ ನಿಮಗಿಷ್ಟವಾಗುವ ಕೆಲಗಳನ್ನೂ ಸೇರಿಸಿಕೊಳ್ಳಿ. ಇಷ್ಟಪಟ್ಟು ಮಾಡುವ ಕೆಲಸಗಳಿಂದ ಒತ್ತಡ ಖಂಡಿತ ಕಡಿಮೆಯಾಗುತ್ತದೆ. ಆಶಾವಾದಿಗಳಾಗಿದ್ದಲ್ಲಿ ಎಂತಹ ಕೆಲಸಗಳನ್ನಾದರೂ ಮುಗಿಸಬಹುದು.

ಯಾವಾಗಲೂ ವೇಳಾಪಟ್ಟಿ ಹಾಕಿಕೊಂಡೇ ಮಾಡುವ ಕೆಲಸಗಳಿರುವುದಿಲ್ಲ. ಕೆಲವೊಮ್ಮೆ ದುತ್ತೆಂದು ಕೆಲವು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆಗ ಭಯ ಬೀಳಬೇಡಿ. ಭಯ, ಆತಂಕದಿಂದ ಒತ್ತಡ ಹೆಚ್ಚುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ. ಪರಿಸ್ಥಿತಿ ನಿಮಗೆ ಅನಾನುಕೂಲಕರವಾಗಿದ್ದಲ್ಲಿ ಆತಂಕ ಬೇಡ. ಎದುರಿಗಿರುವ ಸವಾಲನ್ನು ಸ್ವೀಕರಿಸಿ ಅದಕ್ಕೆ ಶಾಂತಮನಸ್ಸಿನಿಂದ ಪರಿಹಾರ ಹುಡುಕಿ.

ಉದ್ವಿಗ್ನದಿಂದ ಕೂಡಿದ ಮನಸ್ಸಿನಲ್ಲಿ ಯಾವ ಪ್ರಶ್ನೆಗೂ ಉತ್ತರ ದೊರಕುವುದಿಲ್ಲ. ಬದುಕಿನಲ್ಲಿ ದುರಂತಗಳೆದುರಾದಾಗ, ನಾವು ಪ್ರತಿಕ್ರಿಯಿಸುವುದು ಎರಡೇ ರೀತಿಯಲ್ಲಿ. ಮೊದಲನೆಯದು, ಭರವಸೆಯನ್ನು ಕಳೆದುಕೊಂಡು, ಹತಾಶರಾಗಿ, ಒತ್ತಡಕ್ಕೊಳಗಾಗುವುದು. ಎರಡನೆಯದು, ನಮ್ಮ ಮನೋಬಲವನ್ನು ಉಪಯೋಗಿಸಿ, ಬಂದಿರುವ ಸವಾಲನ್ನು ಸ್ವೀಕರಿಸಿ, ಅದರೆದುರು ನಿಲ್ಲುವುದು.

ಎರಡನೆಯ ರೀತಿಯಲ್ಲಿ ನಮ್ಮ ಪ್ರತಿಕ್ರಿಯೆಯಿದ್ದಲ್ಲಿ, ಸಮಸ್ಯೆಯ ಪರಿಹಾರದ ಜೊತೆಗೆ ಒತ್ತಡರಹಿತ ಜೀವನವೂ ನಮ್ಮದಾಗುತ್ತದೆ!

ಮುಖ್ಯವಾಗಿ ಗೃಹಿಣಿಯರು ತಮ್ಮ ಬಗ್ಗೆ ಕಾಳಜಿ ವಹಿಸಿಕೊಳ್ಳುವುದನ್ನು ಮರೆಯಬಾರದು. ಒತ್ತಡದ ಸಮಯದಲ್ಲಿ ಚಿಂತೆ, ಕಳವಳ ಹೆಚ್ಚಾಗಿ, ನಮ್ಮ ಬಗ್ಗೆಯೇ ನಮಗೆ ಗಮನ ಕಡಿಮೆಯಾಗುತ್ತದೆ. ಕೆಲವರು ಒತ್ತಡದ ಕಾರಣದಿಂದ ಅನಾರೋಗ್ಯಕರ ತಿನಿಸುಗಳನ್ನು ತಿನ್ನಲು ಪ್ರಾರಂಭಿಸಿದರೆ, ಮತ್ತೆ ಕೆಲವರು ತಿನ್ನುವುದನ್ನೇನಿಲ್ಲಿಸುತ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ದೈಹಿಕ ಶಕ್ತಿ ಕಡಿಮೆಯಾದಂತೆ, ಮಾನಸಿಕ ಶಕ್ತಿಯೂ ಕುಂದುತ್ತದೆ.

ಈ ಸಮಯದಲ್ಲಿ ಆರೋಗ್ಯಕರವಾದುದನ್ನೇ ತಿನ್ನಬೇಕು. ದೇಹ ಹಾಗೂ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಬೇಕು. ಕೆಲಸದ ಮಧ್ಯೆ ವಿರಾಮವನ್ನು ತೆಗೆದುಕೊಳ್ಳಬೇಕು. ಆಪ್ತರಲ್ಲಿ ವಿಷಯವನ್ನು ಹಂಚಿಕೊಳ್ಳಬೇಕು. ಮಾತನಾಡಿ ಸಮಸ್ಯೆಯ ಪರಿಹಾರವನ್ನು ಸುಲಭವಾಗಿ ಕಂಡುಕೊಳ್ಳಬಹುದು. ಇದರಿಂದ ಒತ್ತಡ ಕಡಿಮೆಯಾಗುತ್ತದೆ.

ಒಂದು ಕೆಲಸ ಮಾಡುತ್ತಿರುವಾಗ ಗಮನ ಅಲ್ಲೇ ಇರಲಿ. ದೇಹ ಇಲ್ಲಿ, ಮನಸ್ಸು ಎಲ್ಲೋ ಆದಲ್ಲಿ ಒತ್ತಡ ಹೆಚ್ಚುತ್ತದೆ. ಲಕ್ಷ್ಯ ಇದ್ದಷ್ಟೂ ಕೆಲಸ ಬೇಗ ಮುಗಿಯುತ್ತದೆ. ಕೆಲಸ ಮುಗಿದ ಮೇಲೆ ಒತ್ತಡದ ಮಾತೆಲ್ಲಿ? ಕೆಲವೊಮ್ಮೆ ಒತ್ತಡ ಹೆಚ್ಚಾದಾಗ, ಸುಲಭದ ಕೆಲಸಗಳೂ ಭಾರೀ ಎನಿಸುತ್ತವೆ. ಆಗ ಕೆಲಸಗಳನ್ನು ಸಣ್ಣ ಸಣ್ಣದಾಗಿ ವಿಭಾಗಿಸಿಕೊಳ್ಳಿ. ಒಮ್ಮೆಗೆ ಒಂದೊಂದೇ ಕೆಲಸಗಳನ್ನು ಮಾಡುತ್ತಾ ಬನ್ನಿ. ಒಂದು ಕೆಲಸ ಮಾಡುತ್ತಿರುವಾಗ ಮತ್ತೊಂದರ ಬಗ್ಗೆ ಯೋಚಿಸಬೇಡಿ.

ಆಗ ಮನಸ್ಸಿಗೂ ನಿರಾಳ ಹಾಗೂ ಒತ್ತಡಕ್ಕೂ ವಿರಾಮ! ಎಲ್ಲ ಪರಿಸ್ಥಿತಿಯೂ ನಮ್ಮಿಷ್ಟದಂತೆಯೇ ಇರುವುದಿಲ್ಲ. ಬಂದದ್ದನ್ನು ಬಂದಂತೆಯೇ ಸ್ವೀಕರಿಸಿ, ಅಂಗೀಕರಿಸಿ. ಅಂಗೀಕರಿಸಲು ಆಗದ ವಿಷಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ. ಆಗ ಯಾವ ಪರಿಸ್ಥಿತಿಯೂ ಒತ್ತಡವನ್ನು ಹುಟ್ಟು ಹಾಕುವುದಿಲ್ಲ.

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಇಷ್ಟವಾದ ಹವ್ಯಾಸ ಇದ್ದೇ ಇರುತ್ತದೆ. ಒತ್ತಡದ ಸಮಯದಲ್ಲಿ ನಿಮಗಿಷ್ಟವಾದ ಕೆಲಸವನ್ನು ಮಾಡಿ. ನಿಮಗಿಷ್ಟವಾದ ಹವ್ಯಾಸವನ್ನು ಮಾಡುವುದರಿಂದ ಒತ್ತಡ ತಹಬಂದಿಗೆ ಬರುತ್ತದೆ. ಒತ್ತಡ ಹೆಚ್ಚಾದಾಗ, ಕೆಲಸ ಆಗುತ್ತಿಲ್ಲ ಎಂಬ ಆತಂಕಕ್ಕೆ ಒಳಗಾಗಿ, ಒತ್ತಡವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಡಿ. ಯೋಚನೆಗಳು ಮನವನ್ನು ಮುತ್ತಿಕೊಂಡಾಗ, ಒತ್ತಡ ಎದುರಾಗುತ್ತದೆ. ಆ ಸಮಯದಲ್ಲಿ ಮನದ ಯೋಚನೆಯನ್ನು ಬೇರೆಡೆಗೆ ಹರಿಸಬೇಕು. ಬಲವಂತವಾಗಿಯಾದರೂ ನಮಗೆ ಇಷ್ಟವಾದ ವಿಷಯಗಳ ಬಗ್ಗೆ ಯೋಚಿಸಿದಲ್ಲಿ ಒತ್ತಡ ತಾನಾಗೇ ಕಡಿಮೆಯಾಗುತ್ತದೆ.

ಒತ್ತಡಕ್ಕೆ ಮತ್ತೊಂದು ಪರಿಹಾರವೆಂದರೆ, ವ್ಯಾಯಾಮ. ಅದು ಸಾಧ್ಯವಾಗದಿದ್ದಲ್ಲಿ ಕನಿಷ್ಠ 20 ನಿಮಿಷಗಳ ನಡಿಗೆಯನ್ನಾದರೂ ನಿತ್ಯವೂ ಮಾಡಿದಲ್ಲಿ ಒತ್ತಡದಿಂದ ದೂರವಿರಬಹುದು. ನಡೆಯುವುದೂ ಕೂಡ ವ್ಯಾಯಾಮವೇ! ಮನೆಯೊಡತಿ ಸಂತೋಷದಿಂದಲ್ಲಿ, ಮನೆಯ ಇತರ ಸದಸ್ಯರೂ ಸಂತೋಷವಾಗಿರುತ್ತಾರೆ. ಸಂತೋಷವಾಗಿರಲು ಒತ್ತಡರಹಿತ ಜೀವನ ಬೇಕಾಗುತ್ತದೆ. ಅದಕ್ಕಾಗಿ ಆರೋಗ್ಯಕರ ಊಟವನ್ನು ಮಾಡಿ, ಒಳ್ಳೆಯ ನಿದ್ದೆಯನ್ನು ಮಾಡಿ. ಸಕಾರಾತ್ಮಕ ದೃಷ್ಟಿಕೋನವನ್ನು ಬೆಳಸಿಕೊಳ್ಳಿ. ಆಗ ಆರೋಗ್ಯಕರವಾದ ಒತ್ತಡರಹಿತ ಲವಲವಿಕೆಯ ಜೀವನ ನಿಮ್ಮದಾಗುತ್ತದೆ.

**

ಒತ್ತಡವನ್ನು ಹೀಗೆ ಕಡಿಮೆಯಾಗಿಸಿ...

ಒತ್ತಡವನ್ನು ಕಡಿಮೆ ಮಾಡುವ ಮತ್ತೊಂದು ವಿಧಾನವೆಂದರೆ ಧ್ಯಾನ. ಒತ್ತಡ ಹೆಚ್ಚೆನಿಸಿದಾಗ, ಮನಸ್ಸಿಗೆ ಕಿರಿ ಕಿರಿಯಾದಾಗ, 10-20 ನಿಮಿಷಗಳ ಕಾಲ ಧ್ಯಾನ ಮಾಡಿ. ನಿಮಗಿಷ್ಟವಾದ ಜಾಗದಲ್ಲಿ ಕುಳಿತು ದೀರ್ಘವಾಗಿ ಉಸಿರಾಟವನ್ನು ಮಾಡಿ. ನಿಮ್ಮ ದೇಹದಲ್ಲಾಗುವ ಉಚ್ಛ್ವಾಸ ಹಾಗೂ ನಿಶ್ವಾಸವನ್ನು ಗಮನಿಸುತ್ತಾ ಬನ್ನಿ. ಹೀಗೆ ಮಾಡಲು ಕುಳಿತಾಗಲೂ ಯೋಚನೆಗಳು ನಿಮ್ಮನ್ನು ಬಿಡುವುದಿಲ್ಲ. ಮೊದಲಿಗೆ ಉಸಿರಾಟದ ಮೇಲೆ ನಿಮ್ಮ ಗಮನವನ್ನು ಕೇವಲ ಹತ್ತು ಸೆಕೆಂಡುಗಳ ಕಾಲ ಮಾತ್ರ ಇಡಿ.

ನಂತರ ಇದನ್ನು ಹಾಗೇ ಹೆಚ್ಚಿಸುತ್ತಾ ಹೋಗಿ. ನಿಮಗರಿವಿರದಂತೆಯೇ ಒತ್ತಡ ನಿಮ್ಮಿಂದ ದೂರ ಹೋಗಿರುತ್ತದೆ. ಶುರುವಿನಲ್ಲಿ ಕಷ್ಟವೆನಿಸಬಹುದು. ಪ್ರಯತ್ನಪಟ್ಟರೆ, ಯಾವುದೂ ಅಸಾಧ್ಯವಲ್ಲ. ಧ್ಯಾನವು ಮನಸ್ಸು ಹಾಗೂ ದೇಹವನ್ನು ಶಾಂತಗೊಳಿಸುತ್ತದೆ. ಮನಸ್ಸಿಗೆ ವಿವೇಚನಾ ಶಕ್ತಿ ದೊರಕುತ್ತದೆ. ಮೇಲಾಗಿ ಆತಂಕ ಹಾಗೂ ಒತ್ತಡ ದೂರಾಗುತ್ತದೆ.

‘ನಾಳೆ ಎಂದವನ ಮನೆ ಹಾಳು’ ಎಂಬ ಕನ್ನಡದ ನಾಣ್ಣುಡಿಯಂತೆ, ಯಾವ ಕೆಲಸವನ್ನೂ ನಾಳೆಗೆ ಎಂದು ತಳ್ಳಬೇಡಿ. ಇಂದಿನ ಕೆಲಸವನ್ನು ಇಂದೇ ಮಾಡಿ. ನಾಳೆಗೆ ಎಂದು ಮುಂದೂಡಿದ ಕೆಲಸ ಎಂದಿಗೂ ಮುಗಿಯುವುದಿಲ್ಲ. ಇದು ಇನ್ನಷ್ಟು ಒತ್ತಡವನ್ನು ಹೆಚ್ಚಿಸುತ್ತದೆ. ನಾಳೆಯ ಚಿಂತೆಯನ್ನು ಖಂಡಿತಾ ಮಾಡಬೇಡಿ. ಈ ದಿನದ ಕಡೆಗೆ ಗಮನ ಕೊಡಿ ಹಾಗೂ ಈಗಿನ ಕ್ಷಣವನ್ನು ಅನುಭವಿಸಿ ಬದುಕಿ. ಆಗ ಒತ್ತಡ ನಿಮ್ಮ ಹತ್ತಿರ ಬರಲೂ ಹೆದರುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT