ಶುಕ್ರವಾರ, ಸೆಪ್ಟೆಂಬರ್ 17, 2021
30 °C

ವಾರಾಂತ್ಯದ ನಮ್ಮ ತಪ್ಪುಗಳು ಮತ್ತು ಸರಿಪಡಿಸುವ ದಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾರವೆಲ್ಲಾ ಕೆಲಸ ಮಾಡಿ ಮಾಡಿ ಸುಸ್ತಾಗಿ, ‘ದೇವರೆ ಯಾವಾಗ ವೀಕೆಂಡ್‌ ಬರುತ್ತಪ್ಪಾ’ ಅಂತ ಕಾಯುತ್ತಾ ದಿನ ಕಳೆಯುವವರೇ ಹೆಚ್ಚು. ಈಗಂತೂ ವರ್ಕ್‌ ಫ್ರಂ ಹೋಮ್ ಇದೆ. ಹಾಗಂತ, ಶನಿವಾರ, ಭಾನುವಾರಕ್ಕೆ ಇರುವ ಬೇಡಿಕೆ ಏನೂ ಕಮ್ಮಿ ಆಗಿಲ್ಲ!

ವಾರದ ತಲೆಬಿಸಿಯನ್ನೆಲ್ಲಾ ಎರಡು ದಿನದಲ್ಲಿ ಕಳೆದುಕೊಳ್ಳುವ ತವಕ ಎಲ್ಲರದ್ದು. ಹೇಗೆ ಕಳೆದುಕೊಳ್ಳೋದು ಅಂದ್ರೆ, ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ತಡವಾಗಿ ಏಳೋದು. ಕೆಲವರಿಗೆ ಮನೆಯಲ್ಲೇ ದಿನ ಕಳೆಯೋದು ಇಷ್ಟ. ಕೆಲವರಿಗೆ ಹೊರಗೆ ಹೋಗೋದು ಇಷ್ಟ– ಹೀಗೆ ನಾನಾ ರೀತಿಯಲ್ಲಿ ವಾರದ ತಲೆನೋವನ್ನು ಕಡೆಮೆ ಮಾಡಿಕೊಳ್ಳೋದು ರೂಢಿ. ಆದರೆ, ಕೆಲವು ಅಧ್ಯಯನದ ಪ್ರಕಾರ ನಾವು ಅನುಸರಿಸುತ್ತಿರುವ ಈ ಕೆಲವು ನಡವಳಿಕೆ ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ. ಹಾಗಾದರೆ, ವೀಕೆಂಡ್‌ ದಿನಗಳಲ್ಲಿ ಅಥವಾ ನಮ್ಮ ರಜಾ ದಿನಗಳಲ್ಲಿ ಯಾವೆಲ್ಲಾ ಕೆಲವು ತಪ್ಪುಗಳನ್ನು ನಾವು ಮಾಡುತ್ತೇವೆ ಎಂದು ನೋಡೋಣ.

ತಪ್ಪುಗಳು

1. ತಡವಾಗಿ ಮಲಗೋದು, ತಡವಾಗಿ ಏಳೋದು– ನಾವು ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ಮಾಡುವ ತಪ್ಪುಗಳು. ವಾರದ ಐದು ದಿನ ಒಂದು ರೀತಿಯಲ್ಲಿ ಮಲಗುವ–ಏಳುವ ರೂಢಿ. ಕೊನೆಯ ಎರಡು ದಿನ ಒಂದು ರೀತಿಯದ್ದಾದರೆ, ದೇಹಕ್ಕೆ ಬಹಳ ಆಯಾಸವಾಗುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆ ಕೂಡ ಕಾಡಬಹುದು ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

‘ದಿನಾ ಬೆಳಿಗ್ಗೆ ಒಂದೇ ಸಮಯಕ್ಕೆ ಏಳುವ ಅಭ್ಯಾಸ ರೂಢಿಸಿಕೊಂಡರೆ ನಮ್ಮ ದೇಹದ ಗಡಿಯಾರವು ಈ ಸಮಯಕ್ಕೆ ಹೊಂದಿಕೊಳ್ಳುತ್ತದೆ ಮತ್ತು ಇದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ’ ಎನ್ನುತ್ತದೆ ಅಧ್ಯಯನವೊಂದು. ಆದ್ದರಿಂದ ರಜಾ ದಿನವೂ ನಾವು ಏಳುವ ಮತ್ತು ಮಲಗುವ ಸಮಯದಲ್ಲಿ ಬದಲಾವಣೆ ಮಾಡಬಾರದು.

2. ಕೆಲವರಿಗೆ ಬೆಳಿಗ್ಗೆ ಎದ್ದು ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಕೆಲವರು ವೀಕೆಂಡ್‌ನಲ್ಲಿ ಅಥವಾ ರಜಾ ದಿನಗಳಲ್ಲಿ ಈ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇದೂ ಕೂಡ ನಮ್ಮ ಕೆಟ್ಟ ಅಭ್ಯಾಸಗಳಲ್ಲಿ ಒಂದು. ಬೆಳಿಗ್ಗೆ ಎದ್ದು ಚೆನ್ನಾಗಿ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ನಮಗೆ ಬಾಯಾರಿಕೆ ಆಗಲಿ, ಆಗದೇ ಇರಲಿ, ಎದ್ದ ಕೂಡಲೇ ನೀರು ಕುಡಿಯಬೇಕು. ನೀರು ಕುಡಿಯುವುದಕ್ಕೆ ಬೇಸರ ಎಂದಾದರೆ, ನೀರಿನಲ್ಲಿ ಹಣ್ಣನ್ನು ನೆನೆಸಿಟ್ಟು ಎದ್ದ ಕೂಡಲೇ ಸೇವಿಸಬಹುದು.

3. ರಜಾ ದಿನ ಅಲ್ವಾ, ಏನೂ ಕೆಲಸ ಇಲ್ಲ. ತಡವಾಗಿ ಎದ್ದರೂ ಏನೂ ತೊಂದರೆ ಇಲ್ಲ– ಹೀಗೆಂದುಕೊಂಡೇ ರಜಾದ ಹಿಂದಿನ ರಾತ್ರಿ ಮಲಗುವವರೇ ಹೆಚ್ಚು; ಜವಾಬ್ದಾರಿ, ಚಿಂತೆ ಎಲ್ಲವನ್ನೂ ಬಿಟ್ಟು ಮಲಗುವುದು. ಇದೂ ಕೂಡ ತಪ್ಪು ಎನ್ನುತ್ತವೆ ಅಧ್ಯಯನಗಳು. ನಾಳೆ ಬೆಳಿಗ್ಗೆ ಎದ್ದು ಮಾಡುವ ಕೆಲಸ ಇರಲಿ, ಇಲ್ಲ ದಿರಲಿ; ದಿನಾ ಏಳುವ ಸಮಯಕ್ಕೆ ಎದ್ದು ಬಿಡಬೇಕು. ಕಚೇರಿ ಕೆಲಸ ಇಲ್ಲ, ಮಕ್ಕಳಿಗೆ ಹೇಗೂ ಶಾಲೆ ಇಲ್ಲ. ಆರಾಮಾಗಿ ಎದ್ದರಾಯಿತು ಎನ್ನುವ ಮನಃಸ್ಥಿತಿ ನಮ್ಮಲ್ಲಿ ಮೂಡಬಾರದು. ಕೆಲಸ ಇಲ್ಲವಾದರೆ, ವ್ಯಾಯಾಮಕ್ಕೋ, ನಡಿಗೆಗೋ ಸಮಯವನ್ನು ಮೀಸಲಿಡಿ. ಆದರೆ, ಏನೂ ಕೆಲಸವಿಲ್ಲ ಎಂದು ಬೆಳಿಗ್ಗೆ ಬೇಗ ಏಳದಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.

4. ಅದು ಕಚೇರಿ ಕೆಲಸದ ದಿನವಾಗಿರಲಿ, ರಜಾ ದಿನವಾಗಿರಲಿ ನಾವು ಸದಾ ಚಟುವಟಿಕೆಯಿಂದ ಇರಬೇಕು. ಮುಂದಿನ ವಾರ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಚಿಂತನೆ, ಅದಕ್ಕೆ ತಯಾರಿ ಮಾಡಿಕೊಳ್ಳಬೇಕು. ಹಾಗೆ ಮಾಡಿಕೊಳ್ಳುವುದರಿಂದ ಕಚೇರಿ ದಿನದಲ್ಲಿ ಒತ್ತಡದಿಂದ ಇರುವುದು ತಪ್ಪುತ್ತದೆ. ಕೆಲಸಗಳನ್ನು ವಾರ ಪೂರ್ತಿ ಹಂಚಿಕೊಂಡು ಮಾಡಿಕೊಳ್ಳುವುದರಿಂದ ಕೆಲವೇ ದಿನಕ್ಕೆ ಒತ್ತಡ ಆಗುವುದೂ ತಪ್ಪುತ್ತದೆ.

5. ಮೊದಲೇ ಹೇಳಿದ ಹಾಗೆ, ರಜಾ ದಿನವಾದರೆ ಸಾಕು ಕೆಲವರಿಗೆ ದಿನ ಇಡೀ ನಿದ್ದೆ ಮಾಡಿಯೇ ಮುಗಿಯುವುದಿಲ್ಲ. ಬದುಕು ಒಂದು ರೀತಿ ಸ್ತಬ್ಧವಾದಂತೆ. ಮನೆ ಒಳಗೇ ಇದ್ದು ಕಳೆದು ಬಿಡುತ್ತಾರೆ. ಆದರೆ, ಹೀಗೆ ಮಾಡುವುದುರಿಂದ ಸೂರ್ಯನ ಕಿರಣಗಳು ನಮ್ಮ ಮೈ ತಾಕದಂತೆ ಆಗುತ್ತದೆ. ಹೊಸ ಗಾಳಿ ದೊರೆಯುವುದಿಲ್ಲ. ಬೆಳಗಿನ ಸೂರ್ಯನ ಕಿರಣಗಳು ರಾತ್ರಿಗೆ ಒಳ್ಳೆಯ ನಿದ್ದೆಗೆ ಸಹಾಯಕ ಎಂದು ಕೆಲವು ಅಧ್ಯಯನಗಳು ಹೇಳಿವೆ. ಆದ್ದರಿಂದ, ರಜೆ ಎಂದು ಮನೆಯ ಒಳಗೇ ಕೂರುವುದಕ್ಕಿಂತ ಮನೆಯಿಂದ ಹೊರಬಂದು ಗಾಳಿ– ಬೆಳಕಿಗೆ ಮೈವೊಡ್ಡಬೇಕು ಎನ್ನುತ್ತಾರೆ ವೈದ್ಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು