ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು: ಮಕ್ಕಳ ಶಾಲಾ ಭಯಕ್ಕೆ ಪರಿಹಾರವೇನು?

Published 18 ಆಗಸ್ಟ್ 2023, 22:04 IST
Last Updated 18 ಆಗಸ್ಟ್ 2023, 22:04 IST
ಅಕ್ಷರ ಗಾತ್ರ

ಮಗನಿಗೆ ನಾಲ್ಕು ವರ್ಷ. ಅಂಗನವಾಡಿಗೆ ಹೋಗುವುದಕ್ಕೆ ಹಟ ಮಾಡುತ್ತಾನೆ. ಮನೆಯಲ್ಲಿಯೇ ಇರಲು ಬಯಸುತ್ತಾನೆ. ಅಂಗನವಾಡಿಗೆ ಕಳಿಸುವುದು ಹೇಗೆ?
ಹೆಸರು ಊರು ತಿಳಿಸಿಲ್ಲ.

ಮಕ್ಕಳ ಮಿದುಳು ಇನ್ನೂ ಬೆಳವಣಿಗೆಯ ಪ್ರಾರಂಭದ ಹಂತದಲ್ಲಿರುತ್ತದೆ. ತರ್ಕ ವಿವೇಚನೆಗಳಿಗೆ ಬಳಸುವ ಹಣೆಯ ಹಿಂಭಾಗದಲ್ಲಿರುವ ಮಿದುಳಿನ ಭಾಗದ ಬೆಳವಣಿಗೆ ಈಗಷ್ಟೇ ಆರಂಭವಾಗುತ್ತದೆ. ಹಾಗಾಗಿ ದೊಡ್ಡವರ ಪ್ರಪಂಚದ ತರ್ಕಗಳನ್ನು ಬಳಸಿ ಅವರ ಜೊತೆ ಮಾತನಾಡಿದರೆ ಅದು ಅವರನ್ನು ತಲುಪುವುದಿಲ್ಲ. ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವುದು ಸುರಕ್ಷಿತ ವಾತಾವರಣ. ಹುಟ್ಟಿನಿಂದಲೇ ಮನೆಯಲ್ಲಿ ಕುಟುಂಬದವರ ಜೊತೆ ಒಡನಾಡುತ್ತಾ ಬೆಳೆದಿರುವುದರಿಂದ ಅಲ್ಲಿ ಮಾತ್ರ ಅವರು ಸುರಕ್ಷಿತ ಭಾವನೆಯನ್ನು ಅನುಭವಿಸುತ್ತಾರೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಅವರಿಗೆ ಸಮಯದ ಅಗತ್ಯವಿದೆ. ಪೋಷಕರು ನಿಧಾನವಾಗಿ ಅಂತಹ ಭದ್ರತೆಯ ಭಾವವನ್ನು ತುಂಬಬೇಕಾಗುತ್ತದೆ.

ಮಗನನ್ನು ಬಲವಂತವಾಗಿ ಅಂಗನವಾಡಿಯಲ್ಲಿ ಬಿಟ್ಟು ಬರಬೇಡಿ. ಒಂದೆರೆಡು ದಿನ ನಿಮ್ಮ ಜೊತೆ ಕರೆದುಕೊಂಡು ಹೋಗಿ ಅಲ್ಲಿನ ವಾತಾವರಣವನ್ನು ತೋರಿಸಿ ಮತ್ತೆ ಕರೆದುಕೊಂಡು ಬನ್ನಿ. ಅಲ್ಲಿನ ಶಿಕ್ಷಕಿಯ ಮತ್ತು ಇತರ ಮಕ್ಕಳ ಪರಿಚಯ ಮಾಡಿಸಿ. ತಮ್ಮ ಭಾವನೆ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅಗತ್ಯವಿರುವಷ್ಟು ಅವರ ಮಿದುಳು ಬೆಳೆದಿರುವುದಿಲ್ಲ. ಹಾಗಾಗಿ ಅವರ ಭಾವನೆಗಳಿಗೆ ನೀವು ಶಬ್ದರೂಪವನ್ನು ಕೊಡಬೇಕಾಗುತ್ತದೆ. ಅವನನ್ನು ಹತ್ತಿರ ಕೂರಿಸಿಕೊಂಡು ಪ್ರೀತಿಯಿಂದ ಕೆಲವು ಪ್ರಶ್ನೆಗಳನ್ನು ಕೇಳಿ. ಶಾಲೆಯಲ್ಲಿ ಅಮ್ಮ ಇರುವುದಿಲ್ಲ ಎಂದು ನಿನಗೆ ಹೆದರಿಕೆಯಾಗುತ್ತದೆಯಾ? ಶಾಲೆಗೆ ಕಳಿಸಿ ಹೋಗಿರುವ ಅಮ್ಮ ಮತ್ತೆ ಕರೆದುಕೊಂಡು ಹೋಗಲು ಬರದಿದ್ದರೆ ಎಂದು ಭಯವೇ? ಹಸಿವಾದರೆ, ಮಲ ಮೂತ್ರಗಳು ಬಂದರೆ ಶಾಲೆಯಲ್ಲಿ ಯಾರನ್ನು ಕೇಳುವುದು ಎಂದು ಹೆದರಿಕೆಯೇ? ಅಲ್ಲಿ ಸ್ನೇಹಿತರು ಜಗಳ ಮಾಡಿದರೆ ಹೊಡೆದರೆ ಎನ್ನುವ ಭಯವೇ? ಹೀಗೆ ನಿಧಾನವಾಗಿ ಪ್ರಶ್ನೆ ಕೇಳುತ್ತಾ ಹೋದರೆ ಅವನ ಹಿಂಜರಿಕೆಯ ಕಾರಣಗಳು ಅರ್ಥವಾಗುತ್ತವೆ. ನಂತರ ಅವುಗಳಿಗೆ ಸಮಾಧಾನಗಳನ್ನು ಹೇಳಬಹುದು. ಅಮ್ಮನಿಗೆ ನೀನು ಬಹಳ ಇಷ್ಟ, ಹಾಗಾಗಿ ದಿನಾ ಸಾಯಂಕಾಲ ಕರೆದುಕೊಂಡು ಹೋಗಲು ಬಂದೇ ಬರುತ್ತೇನೆ. ಹಸಿವಾದರೆ ಮಲ ಮೂತ್ರಗಳಿಗೆ  ಹೋಗಬೇಕಾದರೆ ಟೀಚರ್‌ನ್ನು ಕೇಳಬಹುದು. ಸ್ನೇಹಿತರು ನಿನಗೆ ತೊಂದರೆ ಕೊಡದಂತೆ ಟೀಚರ್‌ ನೋಡಿಕೊಳ್ಳುತ್ತಾರೆ. ನಿನಗೂ ಅವರು ಸ್ನೇಹಿತರಾಗುತ್ತಾರೆ. ಆಗ ಒಟ್ಟಾಗಿ ಆಟವಾಡಬಹುದು. ಹೀಗೆ ಅವರಿಗೆ ಭದ್ರತೆಯ ಭರವಸೆ ಮೂಡಿಸಬೇಕು. ಎಲ್ಲವನ್ನೂ ಒಂದೇ ದಿನ ಮಾಡಲು ಸಾಧ್ಯವಾಗದಿರಬಹುದು. ಹಂತಹಂತವಾಗಿ ಪ್ರಯತ್ನಮಾಡುತ್ತಾ ಹೋದರೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು ಮಕ್ಕಳು ಕಲಿಯುತ್ತಾ ಹೋಗುತ್ತಾರೆ.

* ನಾನು ವಾರಕ್ಕೆರೆಡು ಬಾರಿ ಹಸ್ತಮೈಥುನ ಮಾಡುತ್ತೇನೆ. ಮಾಡಿದ ನಂತರ ಸ್ನಾನ
ಮಾಡಬೇಕೆ ಅಥವಾ ಲೈಂಗಿಕ ಅಂಗಾಂಗಗಳನ್ನು ಶುಚಿಗೊಳಿಸಿಕೊಂಡರೆ ಸಾಕಾಗುತ್ತದೆಯೇ?
ಸ್ನಾನ ಮಾಡುವ ಮೊದಲು ದೇವಾಲಯ ಪ್ರವೇಶಿಸಬಹುದೇ?
ಹೆಸರು ಊರು ತಿಳಿಸಿಲ್ಲ.

ಲೈಂಗಿಕತೆಯ ಕುರಿತು ಸಮಾಜದಲ್ಲಿ ತುಂಬಿಕೊಂಡಿರುವ ಅಜ್ಞಾನ ಮತ್ತು ತಪ್ಪುಕಲ್ಪನೆಗಳು ನಿಮ್ಮ ಪ್ರಶ್ನೆಯಲ್ಲಿ ಕಾಣಿಸುತ್ತವೆ. ಲೈಂಗಿಕತೆ ಕೂಡ ದೇವರ ಸೃಷ್ಟಿಯೇ. ಅದು ಕೀಳಲ್ಲ ಮತ್ತು ಅಶುಚಿಯಾದ ಕೆಲಸವೂ ಅಲ್ಲ. ಹಸ್ತಮೈಥುನ ಅಥವಾ ಲೈಂಗಿಕ ಕ್ರಿಯೆಯ ನಂತರ ಸೂಕ್ಷ್ಮವಾದ ಆ ಭಾಗದ ಅಂಗಾಗಗಳ ಮೇಲೆ ತೇವಾಂಶ ಶೇಖರವಾಗಲು ಅವಕಾಶ ಕೊಟ್ಟರೆ ಬ್ಯಾಕ್ಟೀರಿಯಾ ಮತ್ತು ಫಂಗಸ್‌ಗಳು ಬೆಳೆಯುವ ಸಾಧ್ಯತೆಗಳಿರುತ್ತವೆ. ಇದರಿಂದ ತುರಿಕೆ ಅಥವಾ ಹುಣ್ಣು ಆಗುವ ಅವಕಾಶಗಳಿರುತ್ತವೆ. ಲೈಂಗಿಕ ಅಂಗಾಂಗಳನ್ನು ನೀರಿನಿಂದ (ಅಗತ್ಯವಿದ್ದರೆ ಸಾಬೂನನ್ನು ಬಳಸಿ) ತೊಳೆದರೆ ಇದನ್ನು ತಪ್ಪಿಸಬಹುದು. ಹಸ್ತಮೈಥುನ ಅಥವಾ ಲೈಂಗಿಕ ಕ್ರಿಯೆಯ ನಂತರ ದೇವಾಲಯ ಪ್ರವೇಶಿಸುವುದು ನಿಮ್ಮ ನಂಬಿಕೆಗೆ ಸೇರಿದ ವಿಚಾರ. ಸೃಷ್ಟಿಯೇ ಮೂಲವೇ ಲೈಂಗಿಕಕ್ರಿಯೆ ಆಗಿರುತ್ತದೆಯಲ್ಲವೇ? ಹಾಗಾಗಿ ದೇವರು ಲೈಂಗಿಕತೆಯನ್ನು ಖಂಡಿತಾ ದ್ವೇಷಿಸುವುದಿಲ್ಲ.

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT