ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಾಹವೊ ಉದ್ಯೋಗವೊ ಹೇಗೆ ನಿರ್ಧರಿಸಲಿ?

ಫಾಲೋ ಮಾಡಿ
Comments

* 27 ವರ್ಷದ ಎಂಎಸ್‌ಸಿ, ಬಿಎಡ್‌ ಪದವೀಧರೆ. 25 ವರ್ಷದ ತಂಗಿಯೊಬ್ಬಳಿದ್ದಾಳೆ. ಕೆಲಸವನ್ನು ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಸರ್ಕಾರಿ ಕೆಲಸಕ್ಕೆ ಸೇರಿ ಸ್ವಾವಲಂಬಿಯಾಗುವ ಬಯಕೆಯಿದೆ. ಈಗಲೇ ಮದುವೆಯಾಗಲು ಇಷ್ಟವಿಲ್ಲ. ಸದ್ಯದಲ್ಲೇ ನಿವೃತ್ತಿಯಾಗಲಿರುವ ತಂದೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ಆಗದಿದ್ದರೆ ಮನೆಬಿಟ್ಟು ಹೋಗುವುದಾಗಿ ಹೆದರಿಸುತ್ತಿದ್ದಾರೆ. ಆತ್ಮವಿಶ್ವಾಸವನ್ನು ಕಳೆದುಕೊಂಡು ಒಬ್ಬೊಂಟಿಯಾಗುತ್ತಿದ್ದೇನೆ ಎನ್ನಿಸುತ್ತದೆ. ಓದಲೂ ಸಾಧ್ಯವಾಗದೆ ಆತ್ಮಹತ್ಯೆಯ ಯೋಚನೆಗಳು ಬರುತ್ತಿವೆ. ಸಲಹೆ ನೀಡಿ.
-ಹೆಸರು, ಊರು ತಿಳಿಸಿಲ್ಲ.

ನಿವೃತ್ತಿಗೆ ಹತ್ತಿರವಿರುವ ತಂದೆಗೆ ಮಕ್ಕಳ ಭವಿಷ್ಯದ ಆತಂಕ ಸಹಜವಲ್ಲವೇ? ತಮ್ಮ ಪ್ರೀತಿ, ಕಾಳಜಿಯನ್ನು ಆತಂಕಕ್ಕೆ ಬದಲಾಯಿಸಿಕೊಂಡಿರುವ ಅವರು ಅದಕ್ಕೆ ಸ್ಪಂದಿಸದ ನಿಮ್ಮ ಮೇಲೆ ಬೆದರಿಕೆಯ ಅಸ್ತ್ರ ಬಳಸುತ್ತಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿಯಾಗುವ ನಿಮ್ಮ ಉದ್ದೇಶ ಮೆಚ್ಚುವಂತಹುದು. ಆದರೆ ಈ ಪ್ರಯತ್ನದಲ್ಲಿ ನಿಮ್ಮ ದೇಹ, ಮನಸ್ಸುಗಳ ಬೇಡಿಕೆಗಳನ್ನು ನೀವು ಕಡೆಗಣಿಸುತ್ತಿರಬಹುದೇ? ‘ನನ್ನ ಮನಸ್ಸಿನ ಆಳದಲ್ಲಿ ಸಂಗಾತಿಯ ಬಯಕೆಗಳಿಲ್ಲವೇ’ ಎಂದು ಹುಡುಕಿ. ಇದೆ ಎಂದಾದರೆ ನೀವೇಕೆ ಹಿಂಜರಿಯುತ್ತಿದ್ದೀರಿ ಎಂದು ಯೋಚಿಸಿ. ಪತಿಯ ಮೇಲಿನ ಆರ್ಥಿಕ ಅವಲಂಬನೆ ನಿಮಗೆ ಹಿತಕರ ಅನ್ನಿಸಿರಲಾಗದು ಅಥವಾ ಮದುವೆಯ ನಂತರ ಪೋಷಕರಿಗೆ ಸಹಾಯ ಮಾಡಲಾಗದಿರಬಹುದೇ ಎನ್ನುವ ಹಿಂಜರಿಕೆಗಳಿರಬಹುದು ಅಥವಾ ಪತಿಯ ಇಚ್ಛೆಯಂತೆ ಬದುಕಬೇಕಾದ ಅನಿವಾರ್ಯತೆಯಿಂದ ನಿಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುವ ಭಯವಿರಬಹುದು. ನಿಮ್ಮ ಮನಸ್ಸಿನ ಹೋರಾಟಗಳನ್ನು ಅರ್ಥಮಾಡಿಕೊಳ್ಳದೆ ಯಾರೊಡನೆಯೂ ಹಂಚಿಕೊಳ್ಳದಿರುವುದಕ್ಕೆ ಏಕಾಂಗಿತನ ಅನುಭವಿಸುತ್ತಿದ್ದೀರಲ್ಲವೇ? ಸದ್ಯ ಮದುವೆಯಾಗುವುದಿಲ್ಲ ಎಂದು ವಿರೋಧಿಸುವ ಬದಲು ಎಂದಾದರೂ ಮದುವೆಯಾಗುವುದಾದರೆ ಎಂತಹ ಸಂಗಾತಿ ನನಗಿಷ್ಟ ಎಂದು ಯೋಚಿಸಿದರೆ ಹೇಗಿರುತ್ತದೆ? ಇಂತಹ ವಿಷಯಗಳನ್ನೆಲ್ಲಾ ಪಟ್ಟಿ ಮಾಡಿಕೊಂಡು ತಂದೆಯೊಡನೆ ಮಾತನಾಡಿ. ಪೋಷಕರ ಅನಿವಾರ್ಯತೆಗೆ ಅಥವಾ ಬಲವಂತಕ್ಕೆ ಯಾರನ್ನೂ ಒಪ್ಪಿಕೊಳ್ಳಬೇಡಿ. ನಿಮಗೆ ಒಪ್ಪಿಗೆಯಾಗುವ ಸಂಗಾತಿ ಸಿಗುವ ಸಾಧ್ಯತೆಗಳಿದ್ದರೆ ತಂದೆಯವರನ್ನು ವಿರೋಧಿಸಿ ಹತಾಶರಾಗುವ ಅಗತ್ಯವೆಲ್ಲಿದೆ?

* ಯುವ ಸಾಹಿತಿ, ಕಾಲೇಜು ಅಧ್ಯಾಪಕ. ಸಮಾಜ ಗುರುತಿಸುವಷ್ಟು ಬೆಳೆದಿದ್ದೇನೆ. 5 ವರ್ಷದ ಹಿಂದೆ ನಾನು ಪ್ರೀತಿಸಿದ್ದ ಹುಡುಗಿ ತುಂಬಾ ಕಷ್ಟಪಡುತ್ತಿದ್ದಾಳೆ ಅಂತ ತಿಳಿದು ರಾತ್ರಿಯಿಡೀ ನಿದ್ದೆಯಿಲ್ಲದೆ ಒದ್ದಾಡುತ್ತೇನೆ. ಅವಳ ನೆನಪಿನಲ್ಲಿ ಅಳುತ್ತೇನೆ. ಕಚೇರಿಯಲ್ಲಿ ಎಲ್ಲರ ಮೇಲೆ ರೇಗುತ್ತೇನೆ. ಸಮಾಧಾನವನ್ನು ಕಳೆದುಕೊಂಡು ಬರೆಯುವುದಕ್ಕೂ ಆಗುತ್ತಿಲ್ಲ. ಸಮಾಜದ ಮಾರ್ಗದರ್ಶಕ ನಾನು ಹೀಗಾದರೆ ಹೇಗೆ ಎಂದು ನೊಂದುಕೊಂಡಿದ್ದೇನೆ. ಪರಿಹಾರವೇನು?
-ಹೆಸರು, ಊರು ಬೇಡ.

ನಿಮ್ಮನ್ನು ನೀವು ಸಮಾಜದ ಮಾರ್ಗದರ್ಶಕ ಎಂದು ಕರೆದುಕೊಂಡಿದ್ದೀರಿ. ಯಾರೂ ನೀಡದ ಅಂತಹ ಗುರುತರ ಜವಾಬ್ದಾರಿಯನ್ನು ನೀವೇ ಹೇಗೆ ತೆಗೆದುಕೊಳ್ಳಲು ಸಾಧ್ಯ? ಸಮಾಜದ ಮಾರ್ಗದರ್ಶಕರಾಗುವವರು ಮಾನವೀಯ ಸಂವೇದನೆಗಳನ್ನು ಅನುಭವಿಸಬಾರದು ಎನ್ನುವ ತಪ್ಪುಕಲ್ಪನೆಗಳು ನಿಮ್ಮಲ್ಲಿ ಹೇಗೆ ಮೂಡಿರಬಹುದು? ನೀವು ಹಿಂದೊಮ್ಮೆ ಪ್ರೀತಿಸಿದ ಹುಡುಗಿ ಎದುರಿಸುತ್ತಿರುವಂತಹ ಕಷ್ಟಗಳನ್ನು ಇನ್ನೂ ಲಕ್ಷಾಂತರ ಮಹಿಳೆಯರು ಅನುಭವಿಸುತ್ತಿದ್ದರೂ ಅವರಿಗಾಗಿ ನೀವು ನಿದ್ದೆ ಕಳೆದುಕೊಳ್ಳುತ್ತಿಲ್ಲವೇಕೆ ಎಂದು ಯೋಚಿಸಿದ್ದೀರಾ? ಆ ಹುಡುಗಿಯ ಬಗೆಗೆ ಇನ್ನೂ ನಿಮಗೆ ಆಕರ್ಷಣೆ ಉಳಿದಿದೆ ಎಂದಲ್ಲವೇ? ಇದರಿಂದ ಹೊರಬರುವುದು ಹೇಗೆ ಎಂದು ಯೋಚಿಸಿ. ನಿಮ್ಮ ವೈಯುಕ್ತಿಕ ಬೆಳವಣಿಯನ್ನು, ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕೆನ್ನುವ ಉದ್ದೇಶಗಳನ್ನು ಮೆಚ್ಚುತ್ತೇನೆ. ಆದರೆ ಅವುಗಳಿಗಿರುವ ಮಿತಿಗಳನ್ನು ಗುರುತಿಸಿ ಒಪ್ಪಿಕೊಳ್ಳಿ. ನಿಮ್ಮ ಮನಸ್ಸಿನ ನೋವು ಕ್ರಿಯೆಯಾಗುವುದು ಸಾಧ್ಯವಾದಾಗ ಮಾತ್ರ ಸಾರ್ಥಕತೆಯ ಅನುಭವ ಕೊಡುತ್ತದೆ.

* ಎಂಎಸ್‌ಸಿ ಪದವೀಧರೆ. 6 ವರ್ಷದಿಂದ ದುಬೈನಲ್ಲಿ ಕೆಲಸ ಮಾಡುವವನೊಬ್ಬನನ್ನು ಪ್ರೀತಿಸುತ್ತಿದ್ದೇನೆ. ಅವನು ನನ್ನೊಡನೆ ಸಂಪರ್ಕದಲ್ಲಿದ್ದರೂ ಅವನಿಗೆ ಭಾರತಕ್ಕೆ ಹಿಂದಿರುಗಲಾಗುತ್ತಿಲ್ಲ. ಮನೆಯಲ್ಲಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ಅವನಿಗೆ ಕಾಯಬೇಕೋ ನನ್ನ ಜೀವನದಲ್ಲಿ ಮುಂದುವರೆಯಬೇಕೋ ನಿರ್ಧರಿಸಲಾಗುತ್ತಿಲ್ಲ. ಅಭದ್ರತೆ ಮತ್ತು ನಕಾರಾತ್ಮಕ ಯೋಚನೆಗಳಿಂದಾಗಿ ಕೆಲಸ ಮತ್ತು ಭವಿಷ್ಯದ ಬಗೆಗೆ ಗಮನಹರಿಸಲಾಗುತ್ತಿಲ್ಲ. ಸಲಹೆ ನೀಡಿ.
-ಹೆಸರು, ಊರು ತಿಳಿಸಿಲ್ಲ.

ನಿಮ್ಮ ಪ್ರೀತಿಯ ಬಗೆಗೆ ಮನೆಯಲ್ಲಿ ಇನ್ನೂ ಚರ್ಚೆ ಮಾಡಿದಂತಿಲ್ಲ. ಪತ್ರದ ಧಾಟಿಯನ್ನು ನೋಡಿದರೆ ನಿಮ್ಮಿಬ್ಬರಲ್ಲೂ ಮುಂದಿನ ದಾರಿಯ ಕುರಿತು ಸ್ಪಷ್ಟತೆ ಇರುವಂತೆ ಕಾಣುವುದಿಲ್ಲ. ಇಬ್ಬರ ಬದುಕಿನ ದಾರಿಗಳು ಸೇರುವ ಸಾಧ್ಯತೆಯಿಲ್ಲದಿದ್ದರೆ ಇಂತಹ ಗೊಂದಲದಲ್ಲಿ ಎಷ್ಟು ಕಾಲ ಮುಂದುವರೆಯುತ್ತೀರಿ? ಸ್ಪಷ್ಟವಾದ ಮತ್ತು ನಿಮಗೆ ಒಪ್ಪಿಗೆಯಾಗಬಹುದಾದ ಬದುಕಿನ ಸಾಧ್ಯತೆಗಳ ಕುರಿತು ಹುಡುಗನ ಜೊತೆ ಮಾತನಾಡಿ. ಸಮಯದ ಮಿತಿಯಲ್ಲಿ (ಉದಾಹರಣೆಗೆ 3-6 ತಿಂಗಳು) ಹುಡುಗ ಖಚಿತವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ನಿಮಗೆ ಅನ್ನಿಸಿದರೆ ನಿಮ್ಮ ಭವಿಷ್ಯವನ್ನು ನೀವೇ ಹುಡುಕಿಕೊಳ್ಳಿ. ಇಷ್ಟೆಲ್ಲಾ ವರ್ಷಗಳ ಆಕರ್ಷಣೆಯನ್ನು, ಪ್ರೀತಿಯನ್ನು ಮರೆಯುವುದು ಸಹಜವಾಗಿ ನೋವಿನ ವಿಷಯ. ಆದರೆ ಗೊತ್ತುಗುರಿಗಳೇ ಇಲ್ಲದ ದಾರಿಯಲ್ಲಿನ ಆತಂಕ ಇನ್ನೂ ಹೆಚ್ಚಾಗಿರುತ್ತದೆ ಎಂದು ಮರೆಯದಿರಿ.

* ನನಗೆ ಓದುವ ಮುನ್ನ ಅತಿಯಾದ ಲೈಂಗಿಕ ಆಲೋಚನೆಗಳು ಬರುತ್ತವೆ. ಪರಿಹಾರವೇನು?
-ಹೆಸರು, ಊರು ತಿಳಿಸಿಲ್ಲ.

* ಯುವಕ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಕೊರೊನಾ ಬಂದ ಮೇಲಿಂದ ಯಾವುದೇ ಅಭ್ಯಾಸ ಮಾಡಲಾಗುತ್ತಿಲ್ಲ. ಮೊಬೈಲ್‌ ಹೆಚ್ಚಾಗಿ ಬಳಸುತ್ತಿದ್ದೇನೆ. ಹಸ್ತಮೈಥುನ ಚಟ ಬಂದಿದೆ. ಏನಾದರೂ ಸಾಧನೆ ಮಾಡಬೇಕೆಂದಿದೆ. ಆದರೆ ತೊಡಗಿಕೊಳ್ಳಲಾಗದೆ ಕಿರಿಕಿರಿಯಾಗುತ್ತಿದೆ. ಪರಿಹಾರವೇನು?
-ಹೆಸರು, ಊರು ತಿಳಿಸಿಲ್ಲ.

ನೀವಿಬ್ಬರೂ ವಯಸ್ಸನ್ನು ತಿಳಿಸಿಲ್ಲ. ವಿದ್ಯಾರ್ಥಿಗಳಾಗಿರುವುದರಿಂದ 18-25ರ ನಡುವಿನಲ್ಲಿದ್ದೀರಿ ಎಂದುಕೊಳ್ಳುತ್ತೇನೆ. ಇಂತಹ ವಯಸ್ಸಿನಲ್ಲಿ ಲೈಂಗಿಕ ಆಕರ್ಷಣೆ ಮತ್ತು ಅದನ್ನು ನಿವಾರಿಸಿಕೊಳ್ಳಲು ಹಸ್ತಮೈಥುನಕ್ಕೆ ಮೊರೆಹೋಗುವುದು ಸಹಜ. ಹಸ್ತಮೈಥುನ ಚಟವಲ್ಲದ ಆರೋಗ್ಯಕರ ಅಭ್ಯಾಸ. ಅದು ಹೆಚ್ಚಿನ ಆಕರ್ಷಣೆಯಾಗಿ ಚಟವಾಗಿ ಅಂಟಿಕೊಳ್ಳುವುದು ಯಾವಾಗ ಗೊತ್ತೇ? ನಿಮ್ಮ ಬಗೆಗೆ, ನಿಮ್ಮ ಓದು ಸಾಮರ್ಥ್ಯಗಳ ಬಗೆಗೆ ನಿಮಗಿರುವ ಹಿಂಜರಿಕೆ, ಕೀಳರಿಮೆಗಳ ನೋವನ್ನು ಮರೆಯಲು ಕಾಮವನ್ನು ಪರಿಹಾರವಾಗಿ ಬಳಸಿದಾಗ ಸದಾ ಮನಸ್ಸು ಲೈಂಗಿಕತೆಯನ್ನು ಬಯಸುತ್ತದೆ. ಅಂದರೆ ನಿಮ್ಮ ಸಮಸ್ಯೆಗೆ ಪರಿಹಾರ ಲೈಂಗಿಕ ಆಲೋಚನೆ, ಹಸ್ತಮೈಥುನವನ್ನು ತಪ್ಪಿಸುವುದರಲ್ಲಿಲ್ಲ. ನಿಮ್ಮ ಹಿಂಜರಿಕೆ, ಕೀಳರಿಮೆಗಳನ್ನು ನಿವಾರಿಸಿಕೊಂಡು ಓದುವ ವಿಷಯಗಳನ್ನು ಆಕರ್ಷಕವಾಗಿ ಮಾಡಿಕೊಳ್ಳುವುದು ಹೇಗೆ ಎಂದು ಯೋಚಿಸಿ. ನಿಮ್ಮ ಗುರಿ ಭವಿಷ್ಯಗಳ ಕುರಿತು ಎಲ್ಲರೊಡನೆ ಚರ್ಚೆಮಾಡಿ ಸ್ಪಷ್ಟತೆಯನ್ನು ಮೂಡಿಸಿಕೊಳ್ಳಿ. ಸೋಲನ್ನು ಜೀರ್ಣಿಸಿಕೊಳ್ಳುವುದನ್ನು ಕಲಿಯಿರಿ. ಆಗ ಲೈಂಗಿಕ ಆಕರ್ಷಣೆ ಅಡ್ಡಿಯಾಗುವುದಿಲ್ಲ, ಬದಲಾಗಿ ಆನಂದವಾಗುತ್ತದೆ ಮತ್ತು ಸ್ಫೂರ್ತಿಯನ್ನು ಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT