ಭಾನುವಾರ, ಜೂಲೈ 12, 2020
28 °C

ವರ್ಕ್‌ ಫ್ರಮ್‌ ಹೋಮ್‌ ಬೆನ್ನು ನೋಡಿಕೊಳ್ಳಿ!

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19ರಿಂದಾಗಿ ಮನೆಯಿಂದಲೇ ಕಚೇರಿ ಕೆಲಸ ಮಾಡುವವರ ಸಂಖ್ಯೆ ಈಗಾಗಲೇ ಜಾಸ್ತಿಯಾಗಿದೆ. ಶುರುವಿನಲ್ಲಿ ಒಂದೆರಡು ತಿಂಗಳು ಮಾತ್ರ ಈ ಹೊಸ ವಿಧಾನ ಎಂದುಕೊಂಡು ಡೈನಿಂಗ್‌ ಟೇಬಲ್‌, ಅಡುಗೆ ಕಟ್ಟೆ, ಸೋಫಾ, ಹಾಸಿಗೆ ಎಂದೆಲ್ಲ ಲ್ಯಾಪ್‌ಟಾಪ್‌ ಇಟ್ಟುಕೊಂಡು ಕೆಲಸ ಮಾಡಿದವರಿಗೆ ಅದರ ಅಡ್ಡ ಪರಿಣಾಮಗಳು ಈಗಾಗಲೇ ಅನುಭವಕ್ಕೆ ಬಂದಿರಬಹುದು. ಕಚೇರಿಯ ವಾತಾವರಣದಲ್ಲಿ ಸರಿಹೊಂದುವ ಮೇಜು– ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಿದವರು ಆರಾಮದಾಯಕವಲ್ಲದ ಈ ಭಂಗಿಯಿಂದಾಗಿ ಬೆನ್ನು, ಬೆನ್ನು ಹುರಿ, ಕತ್ತಿಗೆ ನೋವು ಮಾಡಿಕೊಂಡವರೇ ಅಧಿಕ.

ಡೈನಿಂಗ್‌ ಟೇಬಲ್‌ ಮೇಲೆ ಲ್ಯಾಪ್‌ಟಾಪ್‌ ಅಥವಾ ಡೆಸ್ಕ್‌ಟಾಪ್‌ ಇಟ್ಟುಕೊಂಡು ಕೆಲಸ ಮಾಡಿದರೆ ಬೆನ್ನು ಮತ್ತು ಸೊಂಟವನ್ನು ಬಗ್ಗಿಸಿ ಕೆಲಸ ಮಾಡಬೇಕಾಗುತ್ತದೆ. ಇದು ಬೆನ್ನು ಮತ್ತು ಸೊಂಟನೋವನ್ನು ಹೆಚ್ಚಿಸುತ್ತದೆ. ತಕ್ಷಣಕ್ಕೆ ಈ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ದೀರ್ಘಾವಧಿಯಲ್ಲಿ ಇದು ಡಿಸ್ಕ್‌ ಸಮಸ್ಯೆ, ಬೆನ್ನು ಹುರಿ ತೊಂದರೆಗೆ ಕಾರಣವಾಗಬಹುದು. ಇದು ಅವರವರ ಫಿಟ್‌ನೆಸ್‌ ಮಟ್ಟ, ಬೆನ್ನು ಹುರಿಯ ಆರೋಗ್ಯವನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ವೈದ್ಯರು.

ಸಮಸ್ಯೆ ಶುರುವಾಗಿ ವೈದ್ಯರ ಮೊರೆ ಹೋಗುವ ಮುನ್ನ ನೀವೇ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು.

* ಕಂಪ್ಯೂಟರ್‌ ಮುಂದೆ ಕೆಲಸ ಮಾಡಲು ಆರಾಮದಾಯಕವಾದ, ಏಕಾಗ್ರತೆಗೆ ತೊಂದರೆ ಮಾಡದ ಜಾಗದಲ್ಲಿ ಕುಳಿತುಕೊಳ್ಳಿ. ಕುಳಿತುಕೊಳ್ಳುವ ಕುರ್ಚಿ ಆದಷ್ಟು ಆರಾಮದಾಯಕವಾಗಿದ್ದು, ಹೊಂದಾಣಿಕೆ ಮಾಡಿಕೊಳ್ಳುವಂತಿರಲಿ.

* ಡೈನಿಂಗ್‌ ಟೇಬಲ್‌ ಮುಂದೆ ಕೂರುವ ಕುರ್ಚಿಯಾದರೆ ಸ್ವಲ್ಪ ಕೆಳಮಟ್ಟದಲ್ಲಿರುತ್ತದೆ. ಆಗ ಕುರ್ಚಿಗೆ ದಿಂಬು ಅಥವಾ ಬ್ಲ್ಯಾಂಕೆಟ್‌ ಮಡಿಕೆ ಮಾಡಿ ಹಾಕಿಕೊಳ್ಳಿ. ಬೆನ್ನಿಗೂ ಸಣ್ಣ ದಿಂಬು ಹಾಕಿಕೊಂಡರೆ ಮುಂದೆ ಬಾಗುವುದು ತಪ್ಪುತ್ತದೆ. ನಿಮಗೆ ಯಾವುದು ಆರಾಮದಾಯಕವೋ ಅದನ್ನೇ ಆಯ್ಕೆ ಮಾಡಿಕೊಳ್ಳಿ. ಆದರೆ ಒರಗಿಕೊಳ್ಳುವ ಸೌಲಭ್ಯವಿಲ್ಲದ ಸ್ಟೂಲ್‌ ಅಷ್ಟು ಸೂಕ್ತವಲ್ಲ. ಒಳ್ಳೆಯ ಡೆಸ್ಕ್‌ ಮತ್ತು ಕುರ್ಚಿ ಖರೀದಿಸುವುದು ಒಳ್ಳೆಯದು.

* ನಿಮ್ಮ ಪಾದಗಳು ನೆಲದ ಮೇಲೆ ಆರಾಮವಾಗಿ ಊರುವಂತಿರಲಿ. ನೆಲಕ್ಕೆ ತಾಗದಿದ್ದರೆ ಯಾವುದಾದರೂ ಬಾಕ್ಸ್‌ ಇಟ್ಟುಕೊಳ್ಳಿ.

* ಡೆಸ್ಕ್‌ಟಾಪ್‌ ಯಾವತ್ತೂ ಕೆಲಸ ಮಾಡಲು ಆರಾಮದಾಯಕ. ಆದರೆ ಮನೆಯಿಂದಲೇ ಕಚೇರಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ಸ್ವಂತ ಲ್ಯಾಪ್‌ಟಾಪ್‌ ಬಳಸುತ್ತಿದ್ದಾರೆ. ಹೀಗಾಗಿ ಮಾನಿಟರ್‌ ಅನ್ನು ನಿಮಗೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳಿ. ಸ್ಕ್ರೀನ್‌ ಮೇಲೆ ಸರಿಯಾದ ಬೆಳಕು ಬೀಳುವಂತಹ ಸ್ಥಳ ಆಯ್ಕೆ ಮಾಡಿಕೊಳ್ಳಿ. ಕಣ್ಣಳತೆಗೆ ಸ್ಕ್ರೀನ್‌ ಬರಬೇಕಾದರೆ ಕೆಳಗಡೆ ದಪ್ಪ ಪುಸ್ತಕ ಇಟ್ಟು ಹೊಂದಿಸಿಕೊಳ್ಳಿ. ಈ ರೀತಿ ಮಾಡಿಕೊಂಡಾಗ ಪ್ರತ್ಯೇಕ ಕೀಬೋರ್ಡ್‌, ಮೌಸ್‌ ಹಾಕಿಕೊಳ್ಳುವುದು ಸೂಕ್ತ. ಏಕೆಂದರೆ ನಿಮ್ಮ ಮೊಣಕೈ ಮತ್ತು ತೋಳು ಲಂಬಕೋನದಲ್ಲಿ ಇದ್ದರೆ ಸ್ಪಾಂಡಿಯೋಲಸಿಸ್‌ ಸಮಸ್ಯೆಯಿಂದ ಪಾರಾಗಬಹುದು.

* ಮಧ್ಯೆ ಮಧ್ಯೆ 5–10 ನಿಮಿಷ ಬಿಡುವು ತೆಗೆದುಕೊಂಡು ಓಡಾಡಿ. ಕತ್ತು ಮತ್ತು ಬೆನ್ನಿನ ಸ್ನಾಯುಗಳಿಗೆ ವ್ಯಾಯಾಮ ನೀಡಲು ಸ್ಟ್ರೆಚ್‌ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು