ಮಂಗಳವಾರ, ಮೇ 17, 2022
27 °C

ವಿಶ್ವ ಜನಸಂಖ್ಯಾ ದಿನ: ವಿಪತ್ತಿನಲ್ಲಿ ಕುಟುಂಬ ಯೋಜನೆ ಸೇವೆ

ಡಾ. ಸ್ಮಿತಾ ಜೆ.ಡಿ. Updated:

ಅಕ್ಷರ ಗಾತ್ರ : | |

ಕೋವಿಡ್ ಅಲೆಯು ನಮ್ಮೆಲ್ಲರ ಜೀವನದಲ್ಲಿ ಅನೇಕ ತರಹದ ಬದಲಾವಣೆಗಳನ್ನು ತಂದೊಡ್ಡಿದೆ. ಕೋವಿಡ್‌ನಿಂದ ನಮ್ಮ ಸಾಮಾಜಿಕ ಬದುಕು, ಆರ್ಥಿಕ ಪರಿಸ್ಥಿತಿ, ಜೀವನ ಶೈಲಿ ಎಲ್ಲದರಲ್ಲೂ ಊಹಿಸಲಾಗದ ಬದಲಾವಣೆಗಳಾಗಿವೆ. ಅಂತೆಯೇ ಆರೋಗ್ಯ ವ್ಯವಸ್ಥೆಯ ಮೇಲೂ ಸಹ ಅದರ ಪರಿಣಾಮ ಉಂಟಾಗಿದೆ. ಸಾಮಾನ್ಯವಾಗಿ ಸಮಾಜದ ಆರೋಗ್ಯವನ್ನು ಕಾಪಾಡುವಂತಹ ಕಾರ್ಯಕ್ರಮಗಳು ಅಂದರೆ ಚಿಕ್ಕ ಮಕ್ಕಳಿಗೆ ಲಸಿಕಾ ಅಭಿಯಾನ, ಕುಟುಂಬ ಯೋಜನೆಗಳು ಹೀಗೆ ಹತ್ತು ಹಲವಾರು ಸರ್ಕಾರಿ ಕಾರ್ಯಕ್ರಮಗಳು ಕೋವಿಡ್ ನಡುವೆ ಕುಂಠಿತವಾಗಿದೆ. ಚಿಕ್ಕ ಸಂಸಾರ ಆನಂದ ಸಾಗರ ಎಂಬ ಮಾತಿಗೆ ಪರಿಸ್ಥಿತಿಯು ವಿರುದ್ಧ ದಿಕ್ಕಿನಲ್ಲಿದೆ ಎಂಬಂತಿದೆ.

ಕೋವಿಡ್‌ನಿಂದಾದ ಸಾಮಾಜಿಕ ಬದಲಾವಣೆಗಳಲ್ಲಿ ಹೆಚ್ಚಿದ ಜನಸಂಖ್ಯೆ ಪ್ರಮುಖವಾದುದು ಎಂದು ಅಧ್ಯಯನಗಳು ತಿಳಿಸುತ್ತವೆ. ಜನಸಂಖ್ಯೆ ನಿಯಂತ್ರಣವಾಗದೇ ಇರುವುದಕ್ಕೆ ಮುಖ್ಯ ಕಾರಣ ದಂಪತಿಗಳು ಹೆಚ್ಚು ಹೊತ್ತು ಮನೆಯಲ್ಲೇ ಕಾಲಕಳೆಯುವುದು, ವರ್ಕ್ ಫ್ರಮ್ ಹೋಮ್ ಸಂಪ್ರದಾಯ, ಏಕತಾನತೆ, ಬೇರೆ ರೀತಿಯ ಮನರಂಜನೆಗಳ ಕೊರತೆ ಕಾರಣವಿರಬಹುದಾಗಿದೆ. ಆರೋಗ್ಯಕರ ಸಮೃದ್ಧ, ಆರ್ಥಿಕ ಸಧೃಡತೆಯನ್ನು ಒಳಗೊಂಡ ಸಮಾಜ ನಿರ್ಮಾಣಕ್ಕೆ ಜನಸಂಖ್ಯಾ ನಿಯಂತ್ರಣ ಅತಿ ಮುಖ್ಯ. ಇದಕ್ಕೆ ಮುಖ್ಯ ಕಾರಣ ಸ್ಥಗಿತಗೊಂಡ ಕುಟುಂಬ ಯೋಜನೆಗಳು.

ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಭಾರತ ದೇಶವು ಪ್ರಪಂಚದಲ್ಲಿ ಕುಟುಂಬ ಯೋಜನೆಯನ್ನು 1952ರಲ್ಲೇ ಅನುಷ್ಠಾನಗೊಳಿಸಿದ ಪ್ರಥಮ ದೇಶವಾಗಿದೆ. ಜನಸಂಖ್ಯೆಯನ್ನು ತಹಬದಿಗೆ ತಂದು ಒಂದು ಆರೋಗ್ಯಕರ, ದಕ್ಷ ದೇಶವನ್ನಾಗಿಸಲು ಕುಟುಂಬ ಯೋಜನೆಗಳ ಪಾತ್ರ ಅತಿ ಮುಖ್ಯ. ಆಧುನಿಕ ತಂತ್ರಜ್ಞಾನ, ಗುಣಮಟ್ಟ, ಆರೋಗ್ಯ ವ್ಯವಸ್ಥೆಯಲ್ಲಿನ ಸುಧಾರಣೆಗಳು ಕುಟುಂಬ ಯೋಜನೆಗೆ ಪೂರಕ. ಕುಟುಂಬ ಯೋಜನೆಗಳು ಒಂದು ದೇಶದ ಜನಸಂಖ್ಯೆಯನ್ನು ಕಾಪಾಡಲು ಬುನಾದಿ, ಕುಟುಂಬ ಯೋಜನೆಗಳ ಬಗ್ಗೆ ಇಲ್ಲಿದೆ ಒಂದು ಸಂಕ್ಷಿಪ್ತ ಮಾಹಿತಿ.

1. ಮೌಖಿಕ ಗರ್ಭನಿರೋಧಕಗಳು

ಇವು ಹಾರ್ಮೋನಿನ ಗುಳಿಗೆಗಳು. ‘ಮಾಲ-ಎನ್’ ಎಂಬುದು ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯ.

2. ಕಾಂಡೋಮ್‌ಗಳು

ಇವುಗಳು ನಿರೋಧ್’ ಎಂಬ ಹೆಸರಿನಲ್ಲಿ ಉಚಿತವಾಗಿ ಲಭ್ಯವಿದ್ದು ಕುಟುಂಬ ನಿಯಂತ್ರಣವಲ್ಲದೆ, ಎಚ್.ಐ.ವಿ ಹಾಗೂ ಇತರ ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕು ತಡೆಯಬಹುದಾಗಿದೆ.

3. ಗರ್ಭಾಶಯದ ಗರ್ಭನಿರೋಧಕಗಳು ( INTRA-UTERINE CONTRACEPTIVE DEVICES ) 

ಇವುಗಳಲ್ಲಿ ಎರಡು ವಿಧ:

• Cu IUCD 380A
• Cu IUCD 375

ಒಂದು, ಮೂರನೇ ಹಾಗೂ ಆರು ತಿಂಗಳಿಗೆ ವೈದ್ಯರ ತಪಾಸಣೆ ಅವಶ್ಯಕವಿದ್ದು ತರಬೇತಿ ಪಡೆದವರಿಂದ ಇದನ್ನು ಹಾಕಿಸಿಕೊಳ್ಳುವುದು ಉತ್ತಮ. ಇದರ ಉಪಯೋಗದಿಂದ 5-10 ವರ್ಷಗಳ ತನಕ ಗರ್ಭಧಾರಣೆಯನ್ನು ತಡೆಯಬಹುದಾಗಿದೆ.

4. ಶಾಶ್ವತ ವಿಧಾನಗಳು

ಹೆಂಗಸರಲ್ಲಿ ಕಿಬ್ಬೊಟ್ಟೆಯಲ್ಲಿ ಸಣ್ಣ ಛೇದವನ್ನು ಮಾಡಿ ಗರ್ಭನಾಳವನ್ನು ಕತ್ತರಿಸಿ ಗರ್ಭಧಾರಣೆಯನ್ನು ತಡೆಯುವ ಬಗೆ. ಇದನ್ನು ನುರಿತ ವೈದ್ಯರಿಂದ ಮಾಡಿಸಿಕೊಳ್ಳುವುದು ಉತ್ತಮ. ಇದನ್ನು ‘ಮಿನಿ ಲ್ಯಾಪ್ರಾಟಮಿ/ ಟುಬೆಕ್ಟಮಿ’ ಎಂದು ಕರೆಯುತ್ತಾರೆ. ಇದಲ್ಲದೆ ಉದ್ದವಾದ ಟ್ಯೂಬ್‌ನ ಸಹಾಯದಿಂದ ಕಿಬ್ಬೊಟ್ಟೆಯ ರಂಧ್ರದ ಮೂಲಕ ಒಳ ಹೋಗಿ ಗರ್ಭನಾಳಗಳನ್ನು ತಡೆಹಿಡಿಯುವುದಕ್ಕೆ ಲ್ಯಾಪ್ರೋಸ್ಕೋಪಿ ಎನ್ನಬಹುದಾಗಿದೆ.

ಗಂಡಸರಲ್ಲಿ ಒಂದು ಸಣ್ಣ ಛೇದದ ಮೂಲಕ ಅಂಡಕೋಶದ ಒಳಹೋಗಿ ವಿರ್ಯಾಣುವನ್ನು ತಡೆಯುವ ವಿಧಾನವನ್ನು ನೋ ಸ್ಕಾಲ್ಪೆಲ್ ವ್ಯಾಸೆಕ್ಟಮಿ ಎನ್ನಲಾಗುವುದು.

5. ಇವುಗಳಲ್ಲದೆ ತುರ್ತು ಗರ್ಭನಿರೋಧಕ ಗುಳಿಗೆಗಳು ಲಭ್ಯ. ಯೋಜಿತವಲ್ಲದ ಲೈಂಗಿಕತೆಯನ್ನು ಹೊಂದಿದ 72 ಗಂಟೆಯ ಒಳಗೆ ಈ ಗಳಿಗೆಗಳನ್ನು ಬಳಸಿದಲ್ಲಿ ಗರ್ಭಧಾರಣೆಯನ್ನು ತಡೆಯಬಹುದಾಗಿದೆ.

6. ಇಂಜೆಕ್ಷನ್ ರೂಪದಲ್ಲಿ ತೆಗೆದುಕೊಳ್ಳಬಹುದಾದಂತಹ ಗರ್ಭನಿರೋಧಕಗಳು, ಅಂತರ ಇಂಜೆಕ್ಷನ್‌ಗಳು ಲಭ್ಯವಿದ್ದು ಇವು ಹಾಲುಣಿಸುವ ತಾಯಂದಿರು ಸಹ ಪಡೆಯಬಹುದಾಗಿದೆ. ಪ್ರಸವದ ನಂತರ ಹೆಣ್ಣು ಮಕ್ಕಳು ಹಸುಗೂಸಿಗೆ ಎದೆಹಾಲನ್ನು ಉಣಿಸುವುದರಿಂದ ಗರ್ಭಧಾರಣೆಯನ್ನು ಮುಂದೂಡಬಹುದಾಗಿದೆ. ಮುಟ್ಟಿನ ನಂತರದ ಹನ್ನೆರಡರಿಂದ ಹದಿನಾಲ್ಕು ದಿನದವರೆಗೆ ಗರ್ಭಧಾರಣೆಗೆ ಸೂಕ್ತವಾದ ದಿನಗಳಾಗಿದ್ದು ಈ ದಿನಗಳಲ್ಲಿ ಲೈಂಗಿಕತೆಯನ್ನು ಮುಂದೂಡುವುದರಿಂದ ಗರ್ಭಧಾರಣೆಯನ್ನು ತಡೆಯಬಹುದಾಗಿದೆ. ಇದನ್ನು ‘ಕ್ಯಾಲೆಂಡರ್ ವಿಧಾನ’ ಎನ್ನಬಹುದಾಗಿದೆ.

7. ಡಯಾಫ್ರಮ್ (DIAPHRAGM), ಸರ್ ವೈಕಲ್ ಕ್ಯಾಪ್ (CERVICAL CAP ) ಎಂಬ ವಿಧಾನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ವಿರ್ಯಾಣುವು ಗರ್ಭಾಶಯದ ಒಳಗೆ ಹೋಗುವುದನ್ನು ತಡೆಯಬಹುದಾಗಿದೆ.

(ಲೇಖಕಿ ಓರಲ್ ಮೆಡಿಸಿನ್ ಆಂಡ್ ರೇಡಿಯೋಲಾಜಿ ತಜ್ಞರು, ಗುಂಡ್ಲುಪೇಟೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು