ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ಮಣ್ಣಿನಲ್ಲಿ ಆಟವಾಡುವ ಮಕ್ಕಳೇ...

Published 10 ಜೂನ್ 2024, 23:30 IST
Last Updated 10 ಜೂನ್ 2024, 23:30 IST
ಅಕ್ಷರ ಗಾತ್ರ

ಮಣ್ಣಿನಿಂದ ಹರಡುವ ಹೆಲ್ಮಿನ್ತ್ಸ್ ಸೋಂಕುಗಳು ಭಾರತದ ಲಕ್ಷಾಂತರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಈ ಹುಳುಗಳು ದೇಹದೊಳಗೆ ಸೇರಿಕೊಂಡು ಪರಾವಲಂಬಿಜೀವಿಗಳಾಗಿ ಜೀವಿಸುತ್ತಾ ಮಕ್ಕಳಲ್ಲಿ ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡುವುದರ ಜೊತೆಗೆ ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತವೆ. ಇದು ಮಕ್ಕಳಲ್ಲಿ ಅನಾರೋಗ್ಯ, ಅಪೌಷ್ಟಿಕತೆ, ರಕ್ತಹೀನತೆ ಮತ್ತು ದುರ್ಬಲವಾದ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಕಾರಣಗಳಿಂದಾಗಿ ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಜೀವನದ ಗುಣಮಟ್ಟವು ಕಡಿಮೆಯಾಗುತ್ತದೆ.

ಮಕ್ಕಳ ದೇಹದೊಳಗೆ ಜಂತುಹುಳುಗಳು ಮೊಟ್ಟೆ ಅಥವಾ ಮರಿಗಳ ರೂಪದಲ್ಲಿ ಪ್ರವೇಶಿಸಬಹುದು. ಆರಂಭದಲ್ಲಿ ಕೆಲವೇ ಹುಳುಗಳು ಇದ್ದರೆ ಅವುಗಳು ತಮ್ಮ ಇರುವಿಕೆಯನ್ನು ಪ್ರದರ್ಶಿಸುವುದಿಲ್ಲ. ಮಕ್ಕಳ ಕರುಳಿನ ವಾತಾವರಣಕ್ಕೆ ಅವುಗಳು ಹೊಂದಿಕೊಂಡ ನಂತರ ಅವುಗಳ ಸಂತತಿ ಗಣನೀಯವಾಗಿ ಹೆಚ್ಚಾಗುತ್ತದೆ. ನಂತರದ ದಿನಗಳಲ್ಲಿ ಅವುಗಳ ಇರುವಿಕೆಯಿಂದಾಗಿ ಕಂಡು ಬರುವ ರೋಗಲಕ್ಷಣಗಳು ಮಕ್ಕಳಲ್ಲಿ ಹೆಚ್ಚು ಸ್ಪಷ್ಟವಾಗುತ್ತದೆ. ಜಂತುಹುಳಗಳ ಸಂಖ್ಯೆ ಹೆಚ್ಚಾದಂತೆ ಮಕ್ಕಳ ಜೀರ್ಣಾಂಗ ವ್ಯವಸ್ಥೆಯು ಹದಗೆಡುವ ಕಾರಣ ಅತಿಸಾರವು ಉಂಟಾಗಬಹುದು. ಮಕ್ಕಳಲ್ಲಿ ಕಿಬೊಟ್ಟೆಯಲ್ಲಿ ನೋವು ಮತ್ತು ಸೆಳೆತ ಕಾಣಿಸಿಕೊಳ್ಳಬಹುದು. ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶವನ್ನು ಹೀರಿಕೊಳ್ಳುವ ಕರುಳು ಈ ಹುಳಗಳ ಇರುವಿಕೆಯ ಕಾರಣದಿಂದಾಗಿ ತನ್ನ ಕಾರ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗುತ್ತದೆ. ಇದರಿಂದಾಗಿ ಮಕ್ಕಳಲ್ಲಿ ರಕ್ತಹೀನತೆ ಮತ್ತು ಕುಂಠಿತ ಬೆಳವಣಿಕೆ ಕಾಣಿಸಿಕೊಳ್ಳುತ್ತದೆ. ರಕ್ತಹೀನತೆಯು ಮಕ್ಕಳ ಕಲಿಕೆ ಮತ್ತು ಶಾಲಾ ಚಟುವಟಿಕೆಗಳ ಮೇಲೆ ಪರಿಣಾಮವನ್ನು ಬೀರಬಲ್ಲದು. ಜಂತುಹುಳಗಳು ದೇಹದೊಳಗೆ ಉಂಟುಮಾಡುವ ಎಲರ್ಜಿಯ ಕಾರಣದಿಂದಾಗಿ ಅದು ಚರ್ಮದ ಮೇಲೆ ದದ್ದು ಮತ್ತು ತುರಿಕೆಯನ್ನು ಉಂಟುಮಾಡಬಲ್ಲದು.

ಜಂತುಹುಳಗಳ ಸೋಂಕುಗಳು ಹರಡುವುದರ ಪ್ರಮಾಣವನ್ನು ಕಡಿಮೆ ಮಾಡಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು.

ತೆರೆದ ಶೌಚಾಲಯಗಳು ನಮ್ಮ ಗ್ರಾಮೀಣ ಭಾಗಗಳಲ್ಲಿ ಕಡಿಮೆಯಾಗಬೇಕು. ಇದರಿಂದಾಗಿ ಹುಳಗಳ ಮೊಟ್ಟೆಗಳು ಪರಿಸರದಲ್ಲಿ ಹರಡಿ ನಮ್ಮ ನೀರು ಮತ್ತು ಆಹಾರದಲ್ಲಿ ಸೇರಿಕೊಳ್ಳುವುದು ಕಡಿಮೆಯಾಗುತ್ತದೆ. ಮಕ್ಕಳು ಮಣ್ಣಿನ ಮೇಲೆ ಬರಿಗಾಲಿನಲ್ಲಿ ತಿರುಗಾಡುವುದನ್ನು ನಿಲ್ಲಿಸಿ ಸೂಕ್ತ ಪಾದರಕ್ಷೆಗಳನ್ನು ಧರಿಸುವುದರಿಂದ ಕಲುಷಿತ ಮಣ್ಣು ಮತ್ತು ಹುಳಗಳ ಮೊಟ್ಟೆಗಳು ಮಕ್ಕಳ ಸಂಪರ್ಕಕ್ಕೆ ಬರುವುದನ್ನು ಕಡಿಮೆ ಮಾಡಬಹುದು.

ಮಕ್ಕಳು ಸೇವಿಸುವ ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದ ನಂತರವೇ ಅವರಿಗೆ ಸೇವಿಸಲು ನೀಡಬೇಕು. ಮಾಂಸ ಮತ್ತು ತರಕಾರಿಗಳನ್ನು ಸಂಪೂರ್ಣವಾಗಿ ಬೇಯಿಸುವುದರಿಂದ ನಮ್ಮ ಆಹಾರಪದಾರ್ಥಗಳಲ್ಲಿ ಗುಪ್ತವಾಗಿ ಅಡಗಿರುವ ಹುಳಗಳ ಮೊಟ್ಟೆಗಳನ್ನು ನಾಶಗೊಳಿಸಬಹುದು. ಮಕ್ಕಳಿಗೆ ಬೀದಿಬದಿಯ ಆಹಾರಪದಾರ್ಥಗಳನ್ನು ನೀಡುವ ಮೊದಲು ಎರಡು ಬಾರಿ ಯೋಚಿಸಬೇಕು. ಅಂತಹ ಕಡೆಗಳಲ್ಲಿ ಚೆನ್ನಾಗಿ ತೊಳೆಯದ ಮತ್ತು ಬೇಯಿಸದ ಆಹಾರಗಳು ಹೆಚ್ಚಾಗಿರುವುದರಿಂದ ಜಂತುಹುಳಗಳ ಸೋಂಕು ಮಕ್ಕಳಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಕ್ಕಳಿಗೆ ಕುದಿಸಿ ಆರಿಸಿದ ನೀರನ್ನು ಕುಡಿಯಲು ನೀಡುವುದರಿಂದಲೂ ಜಂತುಹುಳದ ಪಸರಣಕ್ಕೆ ಕಡಿವಾಣವನ್ನು ಹಾಕಬಹುದು.

ಮಕ್ಕಳ ಆರೋಗ್ಯವು ಅಡುಗೆಮನೆಯಲ್ಲಿ ನಿರ್ಧಾರವಾಗುವು ಕಾರಣದಿಂದ ಅಡುಗೆಮನೆಯ ಶುಚಿತ್ವವನ್ನು ಕಾಪಾಡುವುದು ಅತ್ಯಗತ್ಯ. ಅಡುಗೆ ತಯಾರಿಸಲು ಮತ್ತು ಬಡಿಸಲು ಬಳಸುವ ಪಾತ್ರೆಗಳನ್ನು ಮತ್ತು ಕಟ್ಲರಿಗಳನ್ನು ಉಪಯೋಗಿಸಿದ ನಂತರ ಸರಿಯಾಗಿ ತೊಳೆಯಬೇಕು. ಇದರಿಂದಾಗಿ ತರಕಾರಿ ಮತ್ತು ಅಹಾರ ಪದಾರ್ಥಗಳೊಂದಿಗೆ ಅಡುಗೆಮನೆ ಸೇರಿದ
ಹುಳುಗಳ ಮೊಟ್ಟೆಗಳು ನಮ್ಮ ದೇಹದೊಳಗೆ ಸೇರಿಕೊಳ್ಳುವುದನ್ನು ತಡೆಯಬಹುದು. ಜಂತುಹುಳುಗಳ ಪಸರಣವನ್ನು ತಡೆಯುವಲ್ಲಿ ನಮ್ಮ ಕೈಗಳ ನೈರ್ಮಲ್ಯವು ಅತ್ಯಂತ ಪ್ರಮುಖವಾಗಿದೆ. ಒಪ್ಪವಾದ ಮತ್ತು ಸ್ವಚ್ಛವಾದ ಉಗುರುಗಳನ್ನು ಕಾಪಾಡಿಕೊಳ್ಳುವುದರಿಂದ ಹುಳುಗಳ ಮೊಟ್ಟೆಗಳು ಮಣ್ಣಿನಲ್ಲಿ ಆಡುವಾಗ ಮಕ್ಕಳ ಉಗುರುಗಳ ಸಂಧಿಗಳಲ್ಲಿ ಸೇರಿ ಅವರ ಹೊಟ್ಟೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು‌. ಆಹಾರವನ್ನು ಸೇವಿಸುವ ಮೊದಲು ಮತ್ತು ಸ್ನಾನಗೃಹವನ್ನು ಬಳಸಿದ ನಂತರ ತಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯುವ ಅಭ್ಯಾಸವನ್ನು ಮಕ್ಕಳಲ್ಲಿ ರೂಢಿಸಬೇಕು. ಈ ಸರಳ ಕ್ರಮಗಳು ‘ವರ್ಮ್’ ಪ್ರಸರಣದ ಸರಪಳಿಯನ್ನು ಮುರಿಯುವಲ್ಲಿ ಬಹಳ ಸಹಕಾರಿಯಾಗಬಲ್ಲದು.

ಉಗುರು ಆರೈಕೆ ವಿಷಯಗಳು: ಚೆನ್ನಾಗಿ ಒಪ್ಪವಾದ ಮತ್ತು ಸ್ವಚ್ಛವಾದ ಉಗುರುಗಳನ್ನು ಕಾಪಾಡಿಕೊಳ್ಳಿ. ಇದು ಹುಳುಗಳ ಮೊಟ್ಟೆಗಳನ್ನು ಮರೆಮಾಡಲು ಜಾಗವನ್ನು ಕಡಿಮೆ ಮಾಡುತ್ತದೆ; ಆಕಸ್ಮಿಕ ಸೇವನೆಯನ್ನು ತಡೆಯಲೂ ಸಹಾಯ ಮಾಡುತ್ತದೆ.

ಮಣ್ಣಿನ ಸಂಪರ್ಕ ಮತ್ತು ಕೈಗಳನ್ನು ಸ್ವಚ್ಛಗೊಳಿಸಿ: ತೋಟಗಾರಿಕೆ ಅಥವಾ ಯಾವುದೇ ಮಣ್ಣಿನ ಸಂಪರ್ಕ ಚಟುವಟಿಕೆಯ ನಂತರ, ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದು ಯಾವುದೇ ವರ್ಗಾವಣೆಗೊಂಡ ಹುಳುಗಳ ಮೊಟ್ಟೆಗಳು ನಿಮ್ಮ ದೇಹವ್ಯವಸ್ಥೆಯಲ್ಲಿ ತಮ್ಮ ದಾರಿಯನ್ನು ಕಂಡುಕೊಳ್ಳುವುದನ್ನು ತಡೆಯುತ್ತದೆ. ಮಕ್ಕಳು ಇಷ್ಟಪಡುವ ಮತ್ತು ಆಟವಾಡುವ ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳ ಮೂಲಕವೂ ಹುಳಗಳು ಮತ್ತು ಚಿಗಟುಗಳು ಮಕ್ಕಳ ಸಂಪರ್ಕಕ್ಕೆ ಬರಬಹುದು. ಹಾಗಾಗಿ ಸಾಕು ಪ್ರಾಣಿಗಳಲ್ಲಿಯೂ ಈ ಸೋಂಕುಗಳು ಬರದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಜಂತುಹುಳಗಳು ಮಕ್ಕಳಲ್ಲಿ ಉಂಟು ಮಾಡುವ ಆರೋಗ್ಯ ಸಮಸ್ಯೆಗಳ ಅಗಾಧತೆಯನ್ನು ಕಂಡ ಭಾರತ ಸರಕಾರವು 2015ನೇ ವರ್ಷದಿಂದ ಪ್ರತಿ ವರ್ಷದ ಫೆಬ್ರುವರಿ ಹತ್ತರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲು ಪ್ರಾರಂಭಿಸಿದೆ. ಅಂಗನವಾಡಿ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಜಂತುಹುಳಗಳನ್ನು ನಿವಾರಿಸಬಲ್ಲ ‘ಆಲ್ಬೆಂಡಜೋಲ್’ ಮಾತ್ರೆಗಳನ್ನು ಆ ದಿನದಂದು ದೇಶದಾದ್ಯಂತ ನೀಡುವ ಕಾರ್ಯಕ್ರಮವನ್ನು ಮಾಡಬಹುದು. ಮುಂದಿನ ವರ್ಷಗಳಲ್ಲಿ ಮಕ್ಕಳ ಆರೋಗ್ಯವನ್ನು ಬಾಧಿಸುವ ಸಮಸ್ಯೆಗಳ ಪ್ರಮಾಣ ಆಗ ಗಣನೀಯವಾಗಿ ಕಡಿಮೆಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT