ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದಿದೆ ಬೇಸಿಗೆ ಆಗಿ ತಣ್ಣಗೆ

Last Updated 10 ಮೇ 2013, 19:59 IST
ಅಕ್ಷರ ಗಾತ್ರ

ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲಗಳಲ್ಲಿ ನಮ್ಮನ್ನು ಹೆಚ್ಚು ದುರ್ಬಲರನ್ನಾಗಿ ಮಾಡುವುದು ಬೇಸಿಗೆ ಕಾಲ. ಈ ಕಾಲದಲ್ಲಿ ಜೀವಕ್ಕೆ ಸಮಾಧಾನವೇ ಇರುವುದಿಲ್ಲ. ಏನೋ ಒಂದು ಬಗೆಯ ತಹತಹ. ಬೆವರಿನಿಂದ ಜಿಗುಟಾದ ಶರೀರ, ಬೆವರುಸಾಲೆಗಳಿಂದ ಉಂಟಾಗುವ ತುರಿಕೆ, ಕಣ್ಣುರಿ, ಪಾದಗಳಲ್ಲಿ ಉರಿ, ಬೆವರಿನ ದುರ್ವಾಸನೆ... ಇವೆಲ್ಲವುಗಳಿಂದ ಮನಸ್ಸಿಗೆ ಕಿರಿಕಿರಿ.

ಮದುವೆ, ಉಪನಯನ ಮುಂತಾದವುಗಳೆಲ್ಲ ಬೇಸಿಗೆಯಲ್ಲೇ ಹೆಚ್ಚಾಗಿ ನಡೆಯುವುದರಿಂದ ಇಚ್ಛೆ ಇಲ್ಲದಿದ್ದರೂ ಪ್ರವಾಸ ಅನಿವಾರ್ಯವಾಗುತ್ತದೆ. ಸೂಕ್ತ ರಕ್ಷಣೆಯಿಲ್ಲದೆ ಬಿಸಿಲಿನಲ್ಲಿ ಅಡ್ಡಾಡುವುದರಿಂದ ಸನ್‌ಸ್ಟ್ರೋಕ್, ಉರಿ ಮೂತ್ರ, ಕಣ್ಣುರಿ, ಮೂಗಿನಿಂದ ರಕ್ತ ಸುರಿಯುವುದು ಮುಂತಾದ ಸಮಸ್ಯೆಗಳು ಕಾಡುತ್ತವೆ. ಬೇಸಿಗೆಯಲ್ಲಿ ಬಾವಿಗಳ ನೀರು ತಳ ಕಾಣುವುದರಿಂದ ರಾಡಿಯಾಗಿ ಬರುತ್ತದೆ.

ಬಾವಿಗೆ ಬಿದ್ದ ಕಲ್ಮಶಗಳೆಲ್ಲ ಅದರಲ್ಲಿ ಸೇರಿಕೊಂಡಿರುತ್ತವೆ. ಕೆರೆಕುಂಟೆಗಳಿಂದ ಬರುವ ನೀರು ಕೂಡ ಹಾಗೆಯೇ ಕಲ್ಮಶಗೊಂಡಿರುತ್ತದೆ. ಅಂತಹ ನೀರನ್ನು ಕುಡಿಯುವುದರಿಂದ ಆಮಶಂಕೆ, ಅಮೀಬಿಯಾಸಿಸ್, ಕಾಲರಾ ಮುಂತಾದ ರೋಗಗಳು ಕಾಡುವುದುಂಟು. ಇವೆಲ್ಲವುಗಳಿಂದ ನಮ್ಮ ಶರೀರವನ್ನು ರಕ್ಷಿಸಿಕೊಳ್ಳಬೇಕಾದರೆ ಆಹಾರ, ಪಾನೀಯದ ವಿಷಯದಲ್ಲಿ ತುಂಬಾ ಸಂಯಮದಿಂದ ವರ್ತಿಸಬೇಕಾಗುತ್ತದೆ.

ಆಹಾರ- ಪಾನೀಯ
ಬೇಸಿಗೆಯಲ್ಲಿ ವಾತಾವರಣದ ಉಷ್ಣತೆ ಹೆಚ್ಚಿರುವುದರಿಂದ ನಮ್ಮ ಜಠರಾಗ್ನಿ ಮಂದವಾಗಿರುತ್ತದೆ, ಪಚನ ಶಕ್ತಿ ಕುಗ್ಗಿರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸೇವಿಸುವ ಆಹಾರ ಹಗುರವಾಗಿಯೂ, ಬೇಗನೆ ಪಚನ ಹೊಂದುವಂಥಾದ್ದೂ ಆಗಿರಬೇಕು. ಹೆಚ್ಚು ಮಸಾಲೆ ಹಾಕಿದ ಪದಾರ್ಥಗಳು, ಖಾರದ ತಿಂಡಿಗಳು, ಕರಿದ ಪದಾರ್ಥ, ಹೆಚ್ಚು ಹುಳಿ ಇರುವ ಪದಾರ್ಥ, ಫಾಸ್ಟ್ ಫುಡ್‌ಗಳು, ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ಆದಷ್ಟೂ ಕಡಿಮೆ ಮಾಡಬೇಕು. ಮಾಂಸಾಹಾರಕ್ಕಿಂತ ಶಾಖಾಹಾರ ಹೆಚ್ಚು ಉತ್ತಮ.

ಬೇಸಿಗೆಯಲ್ಲಿ ಶರೀರಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿರುವುದರಿಂದ ಅಧಿಕ ನೀರಿನಂಶ ಉಳ್ಳ ತರಕಾರಿಗಳಾದ ಸೌತೆ, ಟೊಮ್ಯಾಟೊ, ಈರುಳ್ಳಿಯನ್ನು ಹಸಿಯಾಗಿಯೇ ಸೇವಿಸಬೇಕು. ಹಣ್ಣುಗಳಲ್ಲಿ ಕಲ್ಲಂಗಡಿ ಮತ್ತು ದ್ರಾಕ್ಷಿ ಉತ್ತಮ. ಬಾಟಲುಗಳಲ್ಲಿ ಪ್ಯಾಕ್ ಮಾಡಿದ ತಂಪು ಪಾನೀಯಗಳಿಗಿಂತ ಕಿತ್ತಳೆ, ಮೋಸಂಬಿ, ಸಪೋಟಾ ಮುಂತಾದವುಗಳ ಜ್ಯೂಸ್‌ನ್ನು ಮನೆಯಲ್ಲೇ ತಯಾರಿಸಿಕೊಂಡು ಕುಡಿಯಬೇಕು.

ಬೇಸಿಗೆಯಲ್ಲಿ ಶರೀರದ ಹೆಚ್ಚಿನ ನೀರು ಬೆವರಿನ ಮೂಲಕ ಹರಿದುಹೋಗುವುದರಿಂದ ನಿರ್ಜಲೀಕರಣದ (ಡಿಹೈಡ್ರೇಶನ್) ಸಂಭವ ಜಾಸ್ತಿಯಾಗಿರುತ್ತದೆ. ಆದ್ದರಿಂದ ಶರೀರದಲ್ಲಿ ನೀರಿನ ಕೊರತೆಯಾಗದಂತೆ ಸದಾ ನೀರು ಕುಡಿಯುತ್ತಿರಬೇಕು. ಆದರೆ ದಾಹ ಹೆಚ್ಚಾದಾಗ ಒಂದೇ ಸಮಯಕ್ಕೆ ನಾಲ್ಕೈದು ಲೋಟ ನೀರು ಕುಡಿಯಬಾರದು. ಅರ್ಧ ಗಂಟೆ ಅಥವಾ ಗಂಟೆಗೆ ಒಮ್ಮೆಯಂತೆ ಒಂದು ಅಥವಾ ಎರಡು ಲೋಟ ನೀರು ಕುಡಿಯುತ್ತಾ ಇರಬೇಕು.

ತಂಪಾಗಿದೆ ಎಂದು ನೀರಿಗೆ ಐಸ್ ಬೆರೆಸಿ ಕುಡಿಯಬಾರದು. ಅದು ದಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೊಡ್ಡ ಪ್ರಮಾಣದಲ್ಲಿ ಕಾರ್ಖಾನೆಯಲ್ಲಿ ತಯಾರಾಗುವ ಐಸ್‌ನಲ್ಲಿ ಅಶುದ್ಧ ನೀರಿನ ಬಳಕೆ ಆಗಿರುತ್ತದೆ. ಆದ್ದರಿಂದ ಹೊರಗೆ ಮಾರಾಟವಾಗುವ ಕಬ್ಬಿನ ಹಾಲು, ಹಣ್ಣಿನ ರಸವನ್ನು ಸೇವಿಸಬಾರದು. ಏಕೆಂದರೆ ಅದರಲ್ಲಿ  ಐಸ್‌ನ್ನು ಹೆಚ್ಚಾಗಿ ಬೆರೆಸಿರುತ್ತಾರೆ. ಒಂದು ವೇಳೆ ಐಸ್ ಬಳಸಬೇಕಾಗಿದ್ದರೆ ಶುದ್ಧ ಕುಡಿಯುವ ನೀರಿನ ಮೂಲಕ ಮನೆಯ ಫ್ರಿಜ್‌ನಲ್ಲಿ ತಯಾರಿಸಿಕೊಂಡ ಐಸನ್ನು ಬಳಸಬೇಕು. ಫ್ರಿಜ್‌ನಲ್ಲಿಟ್ಟ ಲೋಟದ ನೀರಿಗಿಂತ ಮಡಿಕೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಇನ್ನೂ ಉತ್ತಮ.

ಬೆಳಿಗ್ಗೆ ಎದ್ದ ಕೂಡಲೇ ಮುಖ ತೊಳೆದುಕೊಂಡು ಕನಿಷ್ಠ ಅರ್ಧ ಲೀಟರ್ ನೀರನ್ನಾದರೂ ಕುಡಿಯಬೇಕು. ಇದರಿಂದ ಜಠರದ ಆಮ್ಲತೆ ಕಡಿಮೆಯಾಗುತ್ತದೆ. ಪಿತ್ತದ ಪ್ರಕೋಪ ಹೆಚ್ಚಾದಾಗ ಒಂದು ತುಂಡು ಬೆಲ್ಲವನ್ನು ತಿಂದು ನೀರು ಕುಡಿಯಬೇಕು.

ಮನೆಯಿಂದ ಹೊರಡುವಾಗ ನೀರಿನ ಬಾಟಲಿ ಒಯ್ಯುವುದನ್ನು ಮರೆಯಬಾರದು. ಬೇಸಿಗೆಯಲ್ಲಿ ಎಲ್ಲ ರೋಗಗಳೂ ನೀರಿನಿಂದಾಗಿಯೇ ಬರುವುದರಿಂದ ಪ್ರವಾಸಕ್ಕೆ ಹೊರಟಾಗ ನಿಮ್ಮ ನೀರು ನಿಮ್ಮ ಜೊತೆಗಿರಲಿ. ಎಳನೀರು, ನಿಂಬೆಹಣ್ಣಿನ ಪಾನಕ ಮತ್ತು ಲಸ್ಸಿ ದಾಹವನ್ನು ಶಮನಗೊಳಿಸುತ್ತವೆ. ಅಲ್ಲದೆ ಶರೀರಕ್ಕೆ ಬೇಕಾದ ಪೋಷಣೆ ಹಾಗೂ ಶಕ್ತಿಯನ್ನೂ ನೀಡುತ್ತವೆ. ಆದ್ದರಿಂದ ಇವುಗಳನ್ನು ಹೆಚ್ಚಾಗಿ ಬಳಸಬೇಕು. ಚಹಾ ಮತ್ತು ಕಾಫಿ ಸೇವನೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಇವು ಪಿತ್ತವನ್ನು ಕೆರಳಿಸಿ ಆಮ್ಲತೆಯನ್ನು ಹೆಚ್ಚಿಸುತ್ತವೆ.

ಕಣ್ಣು ರಕ್ಷಿಸಿ
ಕಣ್ಣು ಕೆಂಪಾಗುವುದು, ಕಣ್ಣುರಿ ಬೇಸಿಗೆಯಲ್ಲಿ ಸಾಮಾನ್ಯ. ಆದ್ದರಿಂದ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಲು ಹೊರಗೆ ಹೊರಡುವಾಗ ಕೂಲಿಂಗ್ ಗ್ಲಾಸ್‌ಗಳನ್ನು ತಪ್ಪದೇ ಧರಿಸಬೇಕು. ಬಿಸಿಲಿನಿಂದ ನಮ್ಮ ತಲೆಯನ್ನು ರಕ್ಷಿಸಿಕೊಂಡರೆ ಕಣ್ಣುಗಳನ್ನು ಕೂಡ ರಕ್ಷಿಸಬಹುದು. ಆದ್ದರಿಂದ ಬೇಸಿಗೆಯಲ್ಲಿ ತಲೆಗೆ ಏನನ್ನಾದರೂ ಧರಿಸಲೇಬೇಕು. ಪಾದಕ್ಕೂ ಮತ್ತು ಕಣ್ಣಿಗೂ ಸಂಬಂಧ ಇರುವುದರಿಂದ ಕಣ್ಣುರಿ ತಪ್ಪಿಸಬೇಕಾದರೆ ಪಾದಗಳ ಆರೋಗ್ಯವೂ ಮುಖ್ಯವಾಗುತ್ತದೆ. ಬೇಸಿಗೆಯಲ್ಲಿ ಕಾಲಿಗೆ ರಬ್ಬರ್ ಮತ್ತು ರೆಕ್ಸಿನ್ ಬಳಸಿ ತಯಾರಿಸಿದ ಶೂ, ಚಪ್ಪಲಿಗಳನ್ನು ಬಳಸಬಾರದು. ಇವು ಶಾಖವನ್ನು ಹೀರಿಕೊಳ್ಳುವುದರಿಂದ ಬೇಗನೇ ಬಿಸಿಯಾಗಿಬಿಡುತ್ತವೆ. ಚರ್ಮದಿಂದ ತಯಾರಿಸಿದ ಹಗುರವಾದ  ಪಾದರಕ್ಷೆಗಳನ್ನು ಧರಿಸಬೇಕು.

ಬೇಸಿಗೆಯಲ್ಲಿ ವಾರಕ್ಕೆ ಒಂದು ಸಲವಾದರೂ ಎಣ್ಣೆ ಸ್ನಾನ ಮಾಡಬೇಕು. ಬ್ರಾಹ್ಮಿ, ನೆಲ್ಲಿಕಾಯಿ, ಬಾದಾಮಿ ಮುಂತಾದವುಗಳನ್ನು ಬೆರೆಸಿ ತಯಾರಿಸಿದ ಎಣ್ಣೆಗಳು ಉತ್ತಮ. ಬಿಸಿಲಿನಲ್ಲಿ ತಿರುಗಾಡಿ ಬಂದ ಕೂಡಲೇ ತಲೆಗೆ ಸ್ನಾನ ಮಾಡಬಾರದು. ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ತಲೆ ತಂಪಾದ ಮೇಲೆ ತಣ್ಣೀರು ಸುರಿದುಕೊಂಡು ಸ್ನಾನ ಮಾಡಬೇಕು. ನಂತರ ಕಣ್ಣ ರೆಪ್ಪೆಗಳ ಮೇಲೆ ಸೌತೆಕಾಯಿ ಹೋಳು ಅಥವಾ ರೋಸ್‌ವಾಟರ್‌ನಲ್ಲಿ ಅದ್ದಿದ ಹತ್ತಿ ಇಟ್ಟುಕೊಂಡು 15- 20 ನಿಮಿಷ ಮಲಗಿಕೊಳ್ಳಬೇಕು.

ಕೂದಲಿನ ಕಾಳಜಿ
ಕೂದಲನ್ನು ನೇರವಾಗಿ ಬಿಸಿಲಿಗೆ ಒಡ್ಡದಂತೆ ನೋಡಿಕೊಳ್ಳಬೇಕು. ದ್ವಿಚಕ್ರ ವಾಹನದ ಮೇಲೆ ಕೆಲಸಕ್ಕೆ ಹೋಗುವ ಮಹಿಳೆಯರು ಕೂದಲು ಗಾಳಿಗೆ ಹಾರಾಡದಂತೆ ಬಿಗಿಯಾಗಿ ಕಟ್ಟಿಕೊಳ್ಳಬೇಕು. ಬಿಸಿ ಗಾಳಿ ತಗಲುವುದರಿಂದ ಕೂದಲು ಎರಡಾಗಿ ಸೀಳುತ್ತದೆ ಮತ್ತು ಕಾಂತಿಹೀನವಾಗುತ್ತದೆ. ದ್ವಿಚಕ್ರದ ವಾಹನದಲ್ಲಿ ಸಂಚರಿಸುವಾಗ ತಲೆಗೆ ಸ್ಕಾರ್ಫ್ ಬಳಸಬೇಕು. ಹ್ಯಾಟನ್ನು ಕೂಡ ಧರಿಸಬಹುದು. ಬೇಸಿಗೆಯಲ್ಲಿ ಬೆವರಿನಿಂದಾಗಿ ಮತ್ತು ತಲೆಗೆ ಹಾಕುವ ಎಣ್ಣೆಯಿಂದ ಕೂದಲು ಜಿಡ್ಡಾಗುವುದರಿಂದ ದಿನನಿತ್ಯ ತಲೆಗೆ ಸ್ನಾನ ಮಾಡಬೇಕು. ಗಂಡಸರು ತಲೆಗೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳುವುದರಿಂದ ತಲೆಗೆ ದೂಳು ಸೇರಿ ಕೂದಲು ಜಿಡ್ಡಾಗುವುದನ್ನು ತಡೆಯಬಹುದು.

ಬೇಸಿಗೆಯಲ್ಲಿ ಕೂದಲು ಡೈ ಮಾಡುವುದನ್ನು ಕಡಿಮೆ ಮಾಡಬೇಕು. ಏಕೆಂದರೆ ಡೈನಲ್ಲಿರುವ ರಾಸಾಯನಿಕಗಳು ಬೆವರಿನ ಮೂಲಕ ಕಣ್ಣಿಗೆ ಹರಿದು ಬರುವ ಅಪಾಯ ಇರುತ್ತದೆ. ತಲೆಗೆ ಧರಿಸಲು ಬಿಳಿಯ ಬಣ್ಣದ ಟೋಪಿ, ಹ್ಯಾಟ್ ಅಥವಾ ತೆಳುವಾದ ಹತ್ತಿ ಬಟ್ಟೆಯ ಸ್ಕಾರ್ಫ್ ಉಪಯೋಗಿಸಬೇಕು. ಸ್ತ್ರೀಯರು ಬಣ್ಣದ ಕೊಡೆಗಳನ್ನು ಬಳಸುವುದರಿಂದ ಆಕರ್ಷಕವಾಗಿಯೂ ಕಾಣುತ್ತದೆ, ತಲೆಯೂ ತಂಪಾಗಿರುತ್ತದೆ.

ಹೀಗಿರಲಿ ಉಡುಪು...
ಬೇಸಿಗೆಯಲ್ಲಿ ಸಿಂಥೆಟಿಕ್ ಬಟ್ಟೆಗಿಂತ, ಬೆವರನ್ನು ಚೆನ್ನಾಗಿ ಹೀರಿಕೊಳ್ಳಬಲ್ಲ ಹತ್ತಿ ಬಟ್ಟೆಯಿಂದ ತಯಾರಿಸಿದ ಉಡುಪೇ ಹೆಚ್ಚು ಸೂಕ್ತ. ಅದರಲ್ಲೂ ಒಳ ಉಡುಪುಗಳು ತೆಳ್ಳಗೂ, ಹಗುರವಾಗಿಯೂ ಇರಬೇಕು. ಉಡುಪು ತುಂಬಾ ಬಿಗಿಯಾಗಿರಬಾರದು. ನಾವು ಧರಿಸುವ ಉಡುಪು ಶರೀರದ ಎಲ್ಲ ಭಾಗಗಳನ್ನೂ ರಕ್ಷಿಸಲಾರದು.

ಮುಖ, ಕುತ್ತಿಗೆ, ಪಾದ, ತಲೆ, ಸ್ತ್ರೀಯರಲ್ಲಿ ಬೆನ್ನು ಹಾಗೂ ಮೊಳಕೈ ಕೆಳಗಿನ ಭಾಗ ಬಿಸಿಲಿಗೆ ಒಡ್ಡುವಂತೆ ಇರುತ್ತವೆ. ಆದ್ದರಿಂದ ಬಿಸಿಲಿನಲ್ಲಿ ಹೊರಡುವುದಕ್ಕೆ ಮೊದಲು ಆ ಭಾಗಗಳಿಗೆ ಸನ್‌ಸ್ಕ್ರೀನ್ ಲೋಷನ್ ಲೇಪಿಸಿಕೊಳ್ಳಬೇಕು. ಇದರಿಂದ ಸೂರ್ಯನ ಅತಿ ನೇರಳೆ ಕಿರಣಗಳಿಂದ ಆ ಭಾಗದ ಚರ್ಮವನ್ನು ರಕ್ಷಿಸಿಕೊಳ್ಳಬಹುದು. ಸ್ನಾನದ ನಂತರ ಶರೀರವನ್ನು ಒರೆಸಿಕೊಳ್ಳಲು ಖಾದಿಯ ಸ್ವಲ್ಪ ಒರಟಾದ ಟವೆಲ್ ಅಥವಾ ಉಪ್ಪರಣೆ ಬಳಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT