ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧ ವಿಧ ಬಣ್ಣ ಆರಿಸಿಕೋ ಅಣ್ಣ

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಣ್ಣು ಹಾಗೂ ತರಕಾರಿಗಳು ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ ಎಂಬುದು ನಮಗೆಲ್ಲ ತಿಳಿದಿದೆ. ಆದರೆ ಅವುಗಳ ಬಣ್ಣ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಅನಗತ್ಯವಾದ ಅಂಶಗಳನ್ನು ಹೊರದೂಡುವ ಕೆಲಸ ಮಾಡುತ್ತದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಇದರಿಂದ, ಹಣ್ಣು- ತರಕಾರಿಗಳ ಬಣ್ಣಕ್ಕೂ ಒಂದು ವಿಶಿಷ್ಟವಾದ ಉದ್ದೇಶ ಇದೆ ಎಂದಾಯಿತು.

ರಾಷ್ಟ್ರೀಯ ಹೃದಯ ಪುಪ್ಪುಸ ಮತ್ತು ರಕ್ತ ಸಂಶೋಧನಾ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ, ವಿವಿಧ ಬಣ್ಣದ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವಿಸುವುದರಿಂದ ಶರೀರಕ್ಕೆ ಅನವಶ್ಯಕವಾದ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಬಹುದು. ವೈದ್ಯರು ನಮಗೆ ಹಸಿರು ತರಕಾರಿ ಹಾಗೂ ಸೊಪ್ಪುಗಳನ್ನೇ ಹೆಚ್ಚಾಗಿ ತಿನ್ನಲು ಹೇಳುತ್ತಾರೆ.

ಏಕೆಂದರೆ ಇವುಗಳಲ್ಲಿ ಕ್ಲೋರೋಫಿಲ್ ಎಂಬ ಅಂಶ ಇರುತ್ತದೆ. ಕ್ಲೋರೋಫಿಲ್‌ನಲ್ಲಿ ಕ್ಯಾನ್ಸರ್ ವಿರೋಧಿ ಮತ್ತು ದೇಹದಲ್ಲಿರುವ

ವಿಷವಸ್ತುಗಳ ವಿರುದ್ಧ ಹೋರಾಡುವ ಗುಣ ಇರುತ್ತದೆ.  ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣಗಳಿಂದಾಗಿ ಹಸಿರು ತರಕಾರಿಗಳ ಮೇಲೆ ತುಂಬಾ ಸಂಶೋಧನೆಗಳು ಜರುಗಿವೆ. ಹಸಿರು ಎಲೆಗಳಿರುವ ಸೊಪ್ಪುಗಳು ಹೆಚ್ಚಿನ ಕೆರೆಟೊನೈಡ್ಸ್, ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಿರುತ್ತವೆ.

ಇವು ಊತ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ. ಕೆಲವು ಹಸಿರು ಖಾದ್ಯ ಪದಾರ್ಥಗಳಲ್ಲಿ ಕ್ಯಾಲ್ಷಿಯಂ ಅಂಶ ಹೆಚ್ಚಾಗಿರುತ್ತದೆ. ಇದು ಹಲ್ಲು ಹಾಗೂ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ, ಕಣ್ಣಿನ ಆರೋಗ್ಯ ಕಾಪಾಡುತ್ತದೆ. ಆಹಾರ ವಿಶೇಷಜ್ಞರು ನೀಡುವ ಸಲಹೆಯಂತೆ, ದಿನದಲ್ಲಿ ಒಂದು ಬಾರಿಯಾದರೂ ಹಸಿರು ತರಕಾರಿಗಳನ್ನು ಸೇವಿಸಬೇಕು. ಅವುಗಳಲ್ಲಿ ಬೀನ್ಸ್, ಬೆಂಡೆ, ಸಿಮ್ಲಾ ಮಿರ್ಚಿ, ಪಾಲಕ್, ಮೆಂತ್ಯ ಸೊಪ್ಪು, ಕೊತ್ತಂಬರಿ, ಹಸಿರು ಕುಂಬಳಕಾಯಿ, ಬಟಾಣಿ ಇತ್ಯಾದಿ ಪ್ರಮುಖವಾದವು.

ಹಳದಿ ಹಣ್ಣು ಹಾಗೂ ತರಕಾರಿಗಳು: ಹಳದಿ ಬಣ್ಣದ ಹಣ್ಣು ಹಾಗೂ ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಟೋಕೆಮಿಕ

ಲ್ಸ್ ಇರುತ್ತದೆ. ಜೊತೆಗೆ ಕೆರೆಟೊನೈಡ್ ಮತ್ತು ಲೆವೊನೈಡ್ಸ್ ಎಂಬ ರಾಸಾಯನಿಕಗಳೂ ಇರುತ್ತವೆ. ಇವು ಕಣ್ಣು ಮತ್ತು ಹೃದಯದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸುತ್ತವೆ.

ಪ್ರತಿ ದಿನ ಎರಡು ಮೂರು ಬಗೆಯ ಹಳದಿ ತರಕಾರಿ ಅಥವಾ ಹಣ್ಣುಗಳನ್ನು ಸೇವಿಸಬೇಕೆಂದು ಆಹಾರ ತಜ್ಞರು ಹೇಳುತ್ತಾರೆ. ಹಳದಿ ತರಕಾರಿಗಳಲ್ಲಿ ಹಳದಿ ಬಣ್ಣದ ಸಿಮ್ಲಾ ಮೆಣಸಿನಕಾಯಿ (ಕ್ಯಾಪ್ಸಿಕಂ), ಹಳದಿ ಬಣ್ಣದ ಸೌತೆಕಾಯಿ, ಸ್ಕ್ವಾಷ್ ಮುಖ್ಯವಾದವು.

ಕೇಸರಿ: ಇದರಲ್ಲಿ ಕಿತ್ತಳೆ ಹಣ್ಣು, ಮಾವು ಮತ್ತು ಕೇಸರಿ ವರ್ಣದ ತರಕಾರಿಗಳು ಪ್ರಮುಖವಾಗಿವೆ. ಆಹಾರ ವಿಶೇಷಜ್ಞರು ಕೇಸರಿ ಬಣ್ಣದ ಹಣ್ಣುಗಳ ಜ್ಯೂಸ್ ಸೇವಿಸಬಾರದು , ಬದಲಾಗಿ ಹಣ್ಣುಗಳನ್ನೇ ನೇರವಾಗಿ ತಿನ್ನಬೇಕು ಎಂದು ಸಲಹೆ ನೀಡುತ್ತಾರೆ.

ನೇರಳೆ ಹಾಗೂ ಕಡು ನೀಲಿ: ಇಂಡಿಗೊ ಮತ್ತು ನೇರಳೆ ಬಣ್ಣದ ಹಣ್ಣುಗಳಲ್ಲಿ ಒತ್ತಡ ಕಡಿಮೆ ಮಾಡುವ ಆ್ಯಂಟಿ ಆಕ್ಸಿಡೇಟಿವ್ ಗುಣ ಇರುವುದರಿಂದ ಇದು ವೃದ್ಧಾಪ್ಯವನ್ನು ಮುಂದೂಡುತ್ತದೆ. ಹೃದಯದ ಕಾಯಿಲೆ ಹಾಗೂ ಕ್ಯಾನ್ಸರ್ ನಿರೋಧಕ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ.

ನೇರಳೆ ಹಾಗೂ ಕಡುನೀಲಿ ಬಣ್ಣದ ಹಣ್ಣುಗಳಲ್ಲಿ ಇರುವ ಜೀವಸತ್ವಗಳು ಮೂತ್ರ ವಿಸರ್ಜನೆಯ ಮಾರ್ಗವನ್ನು ಸೋಂಕು ರಹಿತವಾಗಿ ಇರಿಸುತ್ತವೆ. ಕಡು ನೀಲಿ ಬಣ್ಣದ ಹಣ್ಣುಗಳಲ್ಲಿ ಎಂಥೋಸೈನ್ಸ್ ಮತ್ತು ಫೈಟೊ ಕೆಮಿಕಲ್ಸ್‌ಗಳು ಇರುವುದರಿಂದ ಇವು ವೃದ್ಧಾಪ್ಯದ ಲಕ್ಷಣಗಳನ್ನು ತಡೆಗಟ್ಟುತ್ತವೆ.

ನಮ್ಮ ರಕ್ತನಾಳಗಳಿಗೆ, ಕಾರ್ಟಿಲೇಜ್‌ಗಳಿಗೆ, ಮೃದ್ವಸ್ಥಿ ಮತ್ತು ಮೂಳೆಕಟ್ಟುಗಳಿಗೆ ಉಂಟಾಗುವ ಹಾನಿಯನ್ನು ತಡೆಗಟ್ಟುತ್ತವೆ. ಅವು ನಷ್ಟಗೊಳ್ಳುವ ಸಂಭಾವಿತ ಅಪಾಯವನ್ನು ತಪ್ಪಿಸುತ್ತವೆ. ಕಡು ನೀಲಿ ಬಣ್ಣದ ಹಣ್ಣುಗಳಲ್ಲಿ ನಮ್ಮ ದೇಸಿ ಹಣ್ಣಾದ ನೇರಳೆ, ಕಪ್ಪು ದ್ರಾಕ್ಷಿ ಮತ್ತು ಬ್ಲೂಬೆರ‌ರಿ ಮುಖ್ಯವಾಗಿವೆ. ನೇರಳೆ ಹಣ್ಣಂತೂ ಸಕ್ಕರೆ ಕಾಯಿಲೆ ಹೊಂದಿರುವವರಿಗೆ ರಾಮಬಾಣವಾಗಿದೆ.

ಕೆಂಪು ಮತ್ತು ನಸುಗೆಂಪು: ಈ ಬಣ್ಣದ ಹಣ್ಣುಗಳಲ್ಲಿ ಸ್ಟ್ರಾಬೆರ‌್ರಿ, ಕಲ್ಲಂಗಡಿ, ಖರ್ಬೂಜ, ಸಪೋಟ, ನಸುಗೆಂಪು ದ್ರಾಕ್ಷಿ, ಪ್ಲಮ್ ಪ್ರಮುಖವಾದವು. ತರಕಾರಿಗಳಲ್ಲಿ ಸಿಹಿಗುಂಬಳ, ಕ್ಯಾರೆಟ್, ಬೀಟ್‌ರೂಟ್, ಟೊಮ್ಯಾಟೊ ಮತ್ತು ಗೆಣಸು ಪ್ರಮುಖವಾಗಿವೆ. ಇವು ಲೈಕೋಪಿನ್ ಎಂಬ ರಾಸಾಯನಿಕವನ್ನು ದೇಹದಲ್ಲಿ ವೃದ್ಧಿಸುವುದರಿಂದ ಅದು ಕ್ಯಾನ್ಸರ್ ಜೀವಕೋಶಗಳು ವೃದ್ಧಿ ಆಗುವುದನ್ನು ತಡೆಗಟ್ಟುತ್ತದೆ.

ಬಿಳಿ ಹಣ್ಣು ಹಾಗೂ ತರಕಾರಿಗಳು: ಇವುಗಳಲ್ಲಿ ಸೇಬು, ಬಾಳೆ, ಪೇರು ಹಣ್ಣು, ಹೂಕೋಸು, ಸೌತೆ, ಬೆಳ್ಳುಳ್ಳಿ ಮುಖ್ಯವಾದವು.
ಈ ಹಣ್ಣು ಹಾಗೂ ತರಕಾರಿಗಳಲ್ಲಿ ನಾರಿನಂಶ ಹೆಚ್ಚಾಗಿ ಇರುವುದರಿಂದ ಮಲಬದ್ಧತೆಯನ್ನು ಹೋಗಲಾಡಿಸುವುದಲ್ಲದೆ, ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತವೆ.

ಪಾರ್ಶ್ವವಾಯುವಿನ ಸಂಭಾವ್ಯತೆಯನ್ನು ಕಡಿಮೆ ಮಾಡುತ್ತವೆ. `ಬಡವರ ಕಸ್ತೂರಿ' ಎಂದು ಕರೆಸಿಕೊಳ್ಳುವ ಬೆಳ್ಳುಳ್ಳಿಯು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. ಜೊತೆಗೆ ಕಫವನ್ನು ಕರಗಿಸುತ್ತದೆ.
-ಮುರಲೀಧರ ಕುಲಕರ್ಣಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT