ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನಿಂದ ವಿಟಮಿನ್ ಡಿ

Last Updated 16 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಕೆಲ ಅಧ್ಯಯನಗಳ ಪ್ರಕಾರ ಶೇ. 32 ಕ್ಕಿಂತ ಹೆಚ್ಚು ಭಾರತೀಯರು ವಿಟಮಿನ್  ಡಿ  ಕೊರತೆಯಿಂದ ಬಳಲುತ್ತಿದ್ದಾರೆ. ಚಪ್ಪೆ ಮೂಳೆ ಮುರಿತಕ್ಕೊಳಗಾಗುವ, ಶೇ. 75ರಷ್ಟು ಜನರಲ್ಲಿ ವಿಟಮಿನ್  ಡಿ  ಕೊರತೆ ಇರುವುದು ಕಂಡು ಬಂದಿದೆ.

ವಿಟಮಿನ್  ಡಿ  ಉತ್ಪಾದನೆಯಾಗುವ ಪ್ರಮುಖ ಅಂಗವೆಂದರೆ ದೇಹದ ಚರ್ಮ. ಸೂರ್ಯನ ರಶ್ಮಿ ಚರ್ಮದ ಮೇಲೆ ಬಿದ್ದಾಗ ವಿಟಮಿನ್  ಡಿ  ಉತ್ಪತ್ತಿಯಾಗುವುದು. ಆದರೆ ಭಾರತ `ಟ್ರಾಪಿಕಲ್~ ರಾಷ್ಟ್ರವಾಗಿದ್ದು, ಬಿಸಿಲಿನ ಕೊರತೆಯಿಲ್ಲ. ಆದರೂ ಈ ಕೊರತೆ ಏಕೆ ಎಂಬುದು ಚಿಂತನಾರ್ಹ.
ಭಾರತೀಯರ ಮೈ ಚರ್ಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ  ಮೆಲಾನಿನ್ ಎಂಬ ಬಣ್ಣಕಾರಕ ವಸ್ತುವಿದ್ದು, ಇದು ಸೂರ್ಯನಿಂದ ಹೊರಹೊಮ್ಮುವ ಅಲ್ಟ್ರವಯೊಲೆಟ್ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ವಿಟಮಿನ್  ಡಿ  ಕೊರತೆಯಿಂದ ಮೂಳೆಯ ಶಕ್ತಿ ಕುಂದುತ್ತದೆ. ಮೂಳೆ ಮೆತ್ತಗಾಗುತ್ತದೆ. ಮಕ್ಕಳಲ್ಲಿ ರಿಕೆಟ್ಸ್ ಹಾಗೂ ದೊಡ್ಡವರಲ್ಲಿ ಆಸ್ಟಿಯೋಮಲೇಸಿಯಾ ತೊಂದರೆ, ಅಲ್ಲದೆ, ಶ್ವಾಸಕೋಶದ ತೊಂದರೆ, ಸ್ತನ ಹಾಗೂ ಅಂಡಾಶಯ ಕ್ಯಾನ್ಸರ್ ಹಾಗೂ ಅನೇಕ ನರರೋಗಗಳೂ ಉಂಟಾಗುವುವು.

ಕೊರತೆಗೆ ಕಾರಣವೇನು?

ಜೀವನ ಶೈಲಿಯ ಬದಲಾವಣೆ. ಹಿಂದಿನ ಕಾಲದಲ್ಲಿ ಮಕ್ಕಳೆಲ್ಲಾ, ಬೀದಿಯಲ್ಲಿ ಗಂಟೆಗಟ್ಟಲೆ ಆಟ ಆಡುತ್ತಿದ್ದರು. ರಜಾ ದಿನಗಳಲ್ಲಂತೂ ಅವರು ಮನೆ ಸೇರುವುದೇ ಕಷ್ಟವಾಗುತ್ತಿತ್ತು. ಈಗಿನ ಕಾಲದ ಮಕ್ಕಳು ಇದಕ್ಕೆ ತದ್ವಿರುದ್ಧ! ರಜೆ ಬಂತೆಂದರೆ ಟಿ.ವಿ. ಹಾಗೂ ಕಂಪ್ಯೂಟರ್ ಆಟಗಳಿಗೆ ಶರಣಾಗುವರು. ಜನನಿಬಿಡ ಪ್ರದೇಶಗಳು, ವಾಹನ ಸಂಚಾರ ದಟ್ಟವಾಗಿರುವ ರಸ್ತೆಗಳಲ್ಲಿ ಮಕ್ಕಳನ್ನು ಆಡಲು ಬಿಡಲು ಪಾಲಕರಿಗೆ ಅಂಜಿಕೆ!

ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ನೀಳ ಕೂದಲು. ಹರಳೆಣ್ಣೆ ಹಚ್ಚಿ, ಅಭ್ಯಂಜನ ಮಾಡಿಸುತ್ತಿದ್ದರು. ಆದರೆ ಕೂದಲು ಒಣಗಿಸಲು  ಹೇರ್ ಡ್ರೈಯರ್ ಲಭ್ಯವಿರುತ್ತಿರಲಿಲ್ಲ. ಮನೆಯಂಗಳದಲ್ಲಿ ಸೂರ್ಯನ ಬಿಸಿಲಿನಿಂದ ಚೆನ್ನಾಗಿ ಕೂದಲನ್ನು ಒಣಗಿಸಿಕೊಳ್ಳುತ್ತಿದ್ದರು. ಆದರೆ ಈಗ ಸ್ನಾನ ಮಾಡಿ, ಡ್ರೈಯರ್‌ನ ಸಹಾಯದಿಂದ ಕೂದಲನ್ನು ಒಣಗಿಸಿಕೊಳ್ಳುತ್ತಾರೆ. ಆದರೆ ಸೂರ್ಯನ ಕಿರಣಗಳು ನಮಗೆ ಎಷ್ಟು ಪೂರಕವಾಗಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯಬೇಕು.

ದೇಹಾರೋಗ್ಯಕ್ಕೆ ಬೇಕಾದ ವಿಟಮಿನ್  ಡಿ  ಉತ್ಪತ್ತಿಗಾಗಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ಅಂತರದ ಸಮಯದಲ್ಲಿ 30 ನಿಮಿಷದಿಂದ 40 ನಿಮಿಷದವರೆಗೆ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವಂತಾಗಬೇಕು.

ಉತ್ತರ ಭಾರತದಲ್ಲಿಯೂ ಸಹ ಆರೋಗ್ಯವಂತ ಜನ ಸಮುದಾಯದಲ್ಲಿ ಶೇ. 50 ರಷ್ಟು ಜನರಿಗೆ ವಿಟಮಿನ್  ಡಿ  ಕೊರತೆಯಿರುವುದು ಕಂಡು ಬಂದಿದೆ.

ಗರ್ಭಿಣಿ ಸ್ತ್ರೀಯರಲ್ಲಿ ಕೊರತೆಯ ತೀವ್ರತೆ ಹೆಚ್ಚು. ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ತಾಯಿಯು ಸಾಕಷ್ಟು ವಿಟಮಿನ್  ಡಿ ಯನ್ನು ಒದಗಿಸಬೇಕಾಗುವುದು.

ಪ್ರಸವದ ನಂತರ, ಮಗುವಿಗೆ ಹಾಲುಣಿಸುವ ಅನೇಕ ತಾಯಂದಿರು, ಬೆನ್ನುನೋವಿಗಾಗಿ ವೈದ್ಯರನ್ನು ಸಂಪರ್ಕಿಸುವುದು ಹೆಚ್ಚಾಗುತ್ತಿದೆ. ಇಂಥಹ ಸಮಯದಲ್ಲಿ ಅನೇಕರಿಗೆ ಬೆನ್ನು ಮೂಳೆಯ ಕ್ಷಯವಿರಬಹುದೆಂಬ ಶಂಕೆಯಿಂದ, ಕ್ಷಯರೋಗ ಚಿಕಿತ್ಸೆಯನ್ನು ಕೊಟ್ಟಲ್ಲಿ, ಮೂಳೆಗಳು ಮತ್ತಷ್ಟು ಶಕ್ತಿ ಹೀನವಾಗಿ, ಅನೇಕ ಕಡೆ ಫ್ರಾಕ್ಚರ್‌ಗಳಾಗಬಹುದು.

ಬಿಸಿಲಿಗೆ ಮೈಯೊಡ್ಡಿದ್ದಲ್ಲಿ, ಚರ್ಮವು ಕಪ್ಪಾಗುವುದೆಂಬ ಭಯ ಅನೇಕ ಹೆಣ್ಣುಮಕ್ಕಳಿಗೆ. ಚರ್ಮವನ್ನು ಸೂರ್ಯನ ಯು.ವಿ.ಕಿರಣಗಳಿಂದ ರಕ್ಷಿಸಲು, ಲಭ್ಯವಿರುವ ಯಾವುದೇ ಕ್ರೀಂ ಅಥವಾ ಲೋಶನ್ ಬಳಸಿ ಬಿಸಿಲಲ್ಲಿ ನಿಲ್ಲಬಹುದು. ಚರ್ಮಕ್ಕೆ ಇಂಥಹ ಸನ್ ಸ್ಕ್ರೀನ್ ಲೋಶನ್ ಹಚ್ಚಿದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್  ಡಿ  ಉತ್ಪತ್ತಿಗೆ ಇನ್ನೂ ಸ್ವಲ್ಪ ಹೆಚ್ಚಿನ ಸಮಯ ಬಿಸಿಲಲ್ಲಿ ನಿಲ್ಲಬೇಕಾಗುವುದು.

ಭಾರತೀಯರಲ್ಲಿ ವಿಟಮಿನ್  ಡಿ  ಕೊರತೆಗೆ ಮತ್ತೊಂದು ಕಾರಣ, ಆಹಾರ ಕೊರತೆ, ಬಡತನ !
ಸುಮಾರು ಒಂದು ದಶಕದಿಂದಲೂ, ಭಾರತೀಯರ ದೇಹದಲ್ಲಿನ ವಿಟಮಿನ್  ಡಿ  ಕೊರತೆಯ ಬಗ್ಗೆ ಅಧ್ಯಯನಗಳಿಂದ ತಿಳಿದಿದ್ದರೂ ಸಹ ಬಡತನ, ಸಿರಿತನ ಎಂಬ ಬೇಧ ಭಾವವಿಲ್ಲದೆ, ಯಾವುದೇ ವಯಸ್ಸಿನವರಲ್ಲೂ ವಿಟಮಿನ್  ಡಿ  ಕೊರತೆ ಮುಂದುವರಿಯುತ್ತಿದೆ.

ವಿಟಮಿನ್  ಡಿ  ಕೊರತೆಯ ಪ್ರಾರಂಭಿಕ ಹಂತದಲ್ಲಿ ದೇಹದಲ್ಲಿ ಫ್ಯಾರಾಥೈರಾಯಿಡ್ ಹಾರ್ಮೋನ್‌ನ ಪ್ರಮಾಣ ಹೆಚ್ಚಾಗುವುದು. ಇದರ ಸದುದ್ದೇಶವೆಂದರೆ, ರಕ್ತದಲ್ಲಿನ ಕ್ಯಾಲ್ಸಿಯಂ ಅಂಶವನ್ನು ಸರಿಪ್ರಮಾಣದಲ್ಲಿಡುವುದು. ರಕ್ತದಲ್ಲಿನ ಕ್ಯಾಲ್ಸಿಯಂ ಅಂಶವನ್ನು ಸರಿಯಾದ ಪ್ರಮಾಣದಲ್ಲಿರಿಸಲು  ವಿಟಮಿನ್ ಡಿ  ಅತ್ಯಗತ್ಯ.

ದಿನನಿತ್ಯ ನಮ್ಮ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಪ್ರಮಾಣ, ಒಂದು ಗ್ರಾಂ ನಷ್ಟು. ನಗರ ಪ್ರದೇಶದ ಜನರ ಆಹಾರದಲ್ಲಿ ಸುಮಾರು 340 ಮಿ.ಗ್ರಾಂ. ನಷ್ಟು ಕ್ಯಾಲ್ಸಿಯಂ ಲಭ್ಯವಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇದರ ಪ್ರಮಾಣ ಸುಮಾರು 280 ಮಿ.ಗ್ರಾಂ.ನಷ್ಟು. ಅಂದರೆ, ಆಹಾರದ ಮೂಲಕ ನಾವು ದೇಹಕ್ಕೆ ಒದಗಿಸುತ್ತಿರುವ ಕ್ಯಾಲ್ಸಿಯಂ ಅಂಶವು ನಿಗದಿತ ಪ್ರಮಾಣದಲ್ಲಿ ಒಂದನೇ ಮೂರು ಭಾಗದಷ್ಟು ಮಾತ್ರ!

ರಿಕೆಟ್ಸ್, ಆಸ್ಟಿಯೋಮಲೇಸಿಯಾ (ಮೆದುಮೂಳೆ), ಮೂಳೆಸವೆತದ ಜೊತೆಗೆ, ಎದೆಗೂಡಿನ ಮೂಳೆಗಳ ವಿಕೃತಿಯಿಂದ ಶ್ವಾಸಕೋಶದ ರೋಗಗಳು, ಉಸಿರಾಟದ ಸಮಸ್ಯೆ, ನರರೋಗಗಳು, ಹೃದಯರೋಗಗಳು, ಅನೇಕ ಕ್ಯಾನ್ಸರ್‌ಗಳು, ಥೈರಾಯಿಡ್ ಸಮಸ್ಯೆ, ಸುಲಭವಾಗಿ ಮೂಳೆಮುರಿಯುವುದು. ಇವೆಲ್ಲಕ್ಕೂ ವಿಟಮಿನ್  ಡಿ  ಕೊರತೆಯೇ ಕಾರಣ.

ರಾಷ್ಟ್ರೀಯ ಕಾರ್ಯಕ್ರಮ

ಹಾಗಾದರೆ ವಿಟಮಿನ್  ಡಿ  ಕೊರತೆಯನ್ನು ನೀಗಿಸುವುದು ಸರ್ಕಾರ ತೆಗೆದುಕೊಳ್ಳಬೇಕಾದ ರಾಷ್ಟ್ರೀಯ ಕಾರ್ಯಕ್ರಮ. ಡೈರಿ ಹಾಲನ್ನು ಸಾಕಷ್ಟು ವಿಟಮಿನ್  ಡಿ  ಯೊಂದಿಗೆ ಬಲಪಡಿಸುವಿಕೆ.
ಕ್ಯಾಲ್ಸಿಯಂಯುಕ್ತ ಆಹಾರಗಳು: ಹಾಲು, ಹಾಲಿನ ಉತ್ಪನ್ನಗಳು, ಸೋಯಾಬಿನ್ಸ್, ಕಾಳುಗಳು, ರಾಗಿ, ಬಾದಾಮಿ, ಸೊಪ್ಪು, ಹಸಿರು ತರಕಾರಿ, ಬೀನ್ಸ್, ಮುಂತಾದವು.

ವಿಟಮಿನ್  ಡಿ  ಯುಕ್ತ ಆಹಾರ: ಮೊಟ್ಟೆ, ಮೀನು, ಮಾಂಸ, ಕಾಡ್‌ಲಿವರ್ ಎಣ್ಣೆ, ಹಾಲು ಹಾಗೂ ಹಾಲಿನ ಉತ್ಪನ್ನಗಳು. ದಿನನಿತ್ಯದ ವಿಟಮಿನ್  ಡಿ  ಅವಶ್ಯಕತೆ - 200 ಯುನಿಟ್‌ಗಳು ವಯಸ್ಕರಿಗೆ, ವಯಸ್ಸಾದ ನಂತರ 400 ರಿಂದ 600 ಯುನಿಟ್.

ವಿಟಮಿನ್  ಡಿ  ಪಡೆಯಲು ಅತೀ ಸುಲಭ ಹಾಗೂ ಅತ್ಯುತ್ತಮವಾದ ಮಾರ್ಗವೆಂದರೆ ದಿನಕ್ಕರ್ಧ ಗಂಟೆ ಸೂರ್ಯನ ಕಿರಣಗಳು ಬೆನ್ನು ಹಾಗೂ ಮೈಮೇಲೆ ಬೀಳುವಂತೆ ಮಾಡುವುದು.

ಸೂಕ್ಷ್ಮ ಚರ್ಮವಿರುವವರು, ಜಾಗ್ರತೆಯಾಗಿರಿ. ಸ್ವಲ್ಪ ಸಮಯ ಬಿಸಿಲು ಚರ್ಮದ ಮೇಲೆ ಬಿದ್ದ ನಂತರ, ಸನ್ ಸ್ಕ್ರೀನ್ ಲೋಶನ್ ಬಳಸಿರಿ. ಸನ್ ಸ್ಕ್ರೀನ್ ಲೋಶನ್‌ನಲ್ಲಿ ಎಸ್.ಪಿ.ಎಫ್. 15 ಕ್ಕಿಂತ ಹೆಚ್ಚಿದ್ದಲ್ಲಿ ಅದು ಚರ್ಮವನ್ನು ಹಾನಿಕಾರಕ ಯು.ವಿ.ಕಿರಣಗಳಿಂದ ರಕ್ಷಿಸುವುದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT