ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾಂಚೈಸಿ ವಂಚನೆ: ಮುಂಬೈನಲ್ಲಿ ಸೆರೆಸಿಕ್ಕ ‘ಇಡ್ಲಿ ಗುರು’ ಮಾಲೀಕ

Published 14 ಫೆಬ್ರುವರಿ 2024, 15:45 IST
Last Updated 14 ಫೆಬ್ರುವರಿ 2024, 15:45 IST
ಅಕ್ಷರ ಗಾತ್ರ

ಬೆಂಗಳೂರು: ಇಡ್ಲಿ ಮಾರಾಟಕ್ಕೆ ಫ್ರಾಂಚೈಸಿ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ‘ಇಡ್ಲಿ ಗುರು’ ಕಂಪನಿ ಮಾಲೀಕ ಕಾರ್ತಿಕ್ ಶೆಟ್ಟಿ ಅವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮುಂಬೈನಲ್ಲಿ ವಶಕ್ಕೆ ಪಡೆದಿದ್ದಾರೆ.

‘ಫ್ರಾಂಚೈಸಿಗೆ ಹಣ ಕೊಟ್ಟು ನಷ್ಟ ಅನುಭವಿಸಿದ್ದ ಚೇತನ್ ಅವರು ದೂರು ನೀಡಿದ್ದರು. ವಂಚನೆ ಆರೋಪದಡಿ ಕಾರ್ತಿಕ್ ಶೆಟ್ಟಿ, ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಕರಣ ದಾಖಲಾಗುತ್ತಿದ್ದಂತೆ ನಗರ ತೊರೆದಿದ್ದ ಕಾರ್ತಿಕ್, ಮುಂಬೈನಲ್ಲಿ ಉಳಿದುಕೊಂಡಿದ್ದ. ಮುಂಬೈಗೆ ಹೋಗಿರುವ ವಿಶೇಷ ತಂಡ, ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತರುತ್ತಿದೆ’ ಎಂದು ತಿಳಿಸಿವೆ.

10 ಜನರಿಗೆ ವಂಚನೆ: ‘ಚೇತನ್‌ ದೂರು ದಾಖಲಾದ ಸಂಗತಿ ತಿಳಿದು, ಹೊಸದಾಗಿ 9 ಮಂದಿ ಠಾಣೆಗೆ ಬಂದಿದ್ದರು. ಅವರಿಗೂ ಆರೋಪಿಗಳು ವಂಚನೆ ಮಾಡಿದ್ದಾರೆ. 9 ಮಂದಿಯೂ ಪ್ರತ್ಯೇಕ ದೂರು ನೀಡಿದ್ದಾರೆ. ಎಲ್ಲರ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

₹3 ಲಕ್ಷ ಠೇವಣಿ: ‘ಕಡಿಮೆ ಜಾಗದಲ್ಲಿ ಫುಡ್‌ಕಾರ್ಟ್‌ನಲ್ಲಿ ಇಡ್ಲಿ ಮಾರಾಟ ಮಾಡಿ ಹಣ ಗಳಿಸಿ’ ಎಂಬುದಾಗಿ ಹೇಳಿದ್ದ ಆರೋಪಿಗಳು, ಇಡ್ಲಿ ಗುರು ಮಳಿಗೆ ಆರಂಭಿಸಿದ್ದರು. ನಂತರ, ‘ಇಡ್ಲಿ ಗುರು’ ಹೆಸರಿನಲ್ಲಿ ಇಡ್ಲಿ ಮಾರಾಟಕ್ಕೆ ಫ್ರಾಂಚೈಸಿ ನೀಡುವುದಾಗಿ ಜಾಹೀರಾತು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಗಳ ಮಾತು ನಂಬಿದ್ದ 10 ಮಂದಿ, ಫ್ರಾಂಚೈಸಿ ಪಡೆಯಲು ಆಸಕ್ತಿ ತೋರಿಸುತ್ತಿದ್ದ. ಪ್ರತಿಯೊಬ್ಬರಿಂದ ತಲಾ ₹ 3 ಲಕ್ಷ ಠೇವಣಿ ಪಡೆದಿದ್ದ ಆರೋಪಿಗಳು, ಅವರೆಲ್ಲರಿಗೂ ವಂಚನೆ ಮಾಡಿರುವುದಾಗಿ ಗೊತ್ತಾಗಿದೆ.’

‘ಕೆಲವರಿಗೆ ಆರೋಪಿಗಳು, ಇಡ್ಲಿ ಗುರು ಫುಡ್‌ ಕಾರ್ಟ್‌ (ಗಾಡಿ) ನೀಡಿದ್ದರು. ಇಡ್ಲಿ ಮಾರಾಟದ ಮೇಲೆ ಕಮಿಷನ್ ಸಹ ಪಡೆಯುತ್ತಿದ್ದರು. ಫ್ರಾಂಚೈಸಿ ಪಡೆದವರಿಗೆ ಹೆಚ್ಚು ಆದಾಯ ಬರುತ್ತಿರಲಿಲ್ಲ. ಬೇಸತ್ತ ಜನ, ಫ್ರಾಂಚೈಸಿ ಹಣ ವಾಪಸು ನೀಡುವಂತೆ ಕೋರಿದ್ದರು. ಆದರೆ, ಆರೋಪಿಗಳು ಯಾವುದೇ ಹಣ ನೀಡಿಲ್ಲ. ಕೆಲವರಿಗೆ, ಫ್ರಾಂಚೈಸಿ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಣ ವಾಪಸು ಕೇಳಲು ಹೋದ ದೂರುದಾರರಿಗೆ ಆರೋಪಿಗಳು ಜೀವ ಬೆದರಿಕೆಯೊಡ್ಡಿದ್ದರು. ನೊಂದ ದೂರುದಾರರು, ಠಾಣೆ ಮೆಟ್ಟಿಲೇರಿದ್ದರು’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT