ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಲೋಕಸಭಾ ಕ್ಷೇತ್ರ: ಸಾಮಾನ್ಯರೊಂದಿಗೆ ಅರಸೊತ್ತಿಗೆಗೂ ಮಣೆ

ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯ ವಿಶೇಷ: ಯುವಕ, ಅರಸು, ಮಹಿಳೆ, ಪತ್ರಕರ್ತಗೆ ಮಣೆ
ಎಂ. ಮಹೇಶ
Published 21 ಮಾರ್ಚ್ 2024, 6:50 IST
Last Updated 21 ಮಾರ್ಚ್ 2024, 6:50 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರವು ಈವರೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಹಲವು ವಿಶೇಷಗಳನ್ನು ಕಂಡಿದೆ. ಕ್ಷೇತ್ರ ಪುನರ್‌ವಿಂಗಡಣೆ ನಂತರ ಪಲ್ಲಟಗಳಿಗೂ ಸಾಕ್ಷಿಯಾಗಿದೆ.

ಈ ಕ್ಷೇತ್ರವು ಅನೇಕ ಘಟಾನುಘಟಿ ನಾಯಕರನ್ನು ಹುಟ್ಟು ಹಾಕಿದೆ. ಎಂ.ಎಸ್. ಗುರುಪಾದಸ್ವಾಮಿ ಅವರು ಮುತ್ಸದ್ದಿ ಎನಿಸಿದ್ದರು. ರಾಜವಂಶಸ್ಥರು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬವಾದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಹಿಂದುಳಿದ ಅರಸು ಸಮಾಜದವರು ಒಟ್ಟು ಐದು ಬಾರಿ ಗೆದ್ದಿದ್ದಾರೆ. ಮಹಿಳೆಗೂ ಒಮ್ಮೆ ಅವಕಾಶ ಸಿಕ್ಕಿದೆ. ಪತ್ರಕರ್ತ ಆಗಿದ್ದ ಯುವಕ ರಾಜಕೀಯಕ್ಕೆ ಪ್ರವೇಶಿಸಿದಾಗ ಅವರಿಗೆ ನೀರೆರೆದು ‘ಪೋಷಿಸಿದ’ ಕ್ಷೇತ್ರವಿದು. ಒಟ್ಟು ನಾಲ್ಕು ಸಲ ಬಿಜೆಪಿ ಗೆದ್ದಿದೆ. ಜನತಾ ಪರಿವಾರದ ಅಭ್ಯರ್ಥಿಯನ್ನು ಈ ಕ್ಷೇತ್ರದ ಜನರು ಒಮ್ಮೆಯೂ ಗೆಲ್ಲಿಸಿಲ್ಲ.

ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿ ಇದ್ದಾಗಲೂ, ಆ ಪಕ್ಷದ ಅಭ್ಯರ್ಥಿ ಇಲ್ಲಿ ಗೆಲುವು ಸಾಧಿಸುವುದು ಸಾಧ್ಯವಾಗಿರಲಿಲ್ಲ. ಇಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆಯೇ ನೇರ ಹಣಾಹಣಿ ಮುಂದುವರಿದಿದೆ. ಆರಂಭದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ.

ಹಿಂದಣ ಹೆಜ್ಜೆ...:

ಇತಿಹಾಸವನ್ನು ಗಮನಿಸಿದರೆ, ಈ ಕ್ಷೇತ್ರದಲ್ಲಿ ಕುರುಬ ಸಮಾಜದವರು ಮೂರು ಬಾರಿ ಗೆದ್ದಿದ್ದಾರೆ. ವೀರಶೈವ– ಲಿಂಗಾಯತರೂ ಗೆಲುವಿನ ಸವಿ ಉಂಡಿದ್ದಾರೆ. ಆದರೆ, 1984ರ ಚುನಾವಣೆಯಿಂದ ಹಿಡಿದು 2004ರವರೆಗೆ ಪ್ರಬಲ ಜಾತಿಗಳೆನಿಸುವ ವೀರಶೈವ–ಲಿಂಗಾಯತ ಅಥವಾ ಒಕ್ಕಲಿಗರು ಆಯ್ಕೆಯಾಗಿರಲಿಲ್ಲ. 1984, 1989, 1996 ಹಾಗೂ 1999ರಲ್ಲಿ ಅರಸು ಸಮಾಜದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೆದ್ದಿದ್ದರು. 1991ರಲ್ಲಿ ಕೂಡ ಇದೇ ಸಮಾಜದ ಚಂದ್ರಪ್ರಭಾ ಅರಸು ಜಯಿಸಿದ್ದರು. 1998 ಹಾಗೂ 2004ರಲ್ಲಿ ಗೆದ್ದಿದ್ದವರು ಸಿ.ಎಚ್. ವಿಜಯಶಂಕರ್. ಅವರು ಕುರುಬ ಸಮಾಜಕ್ಕೆ ಸೇರಿದವರು. 2009ರಲ್ಲಿ ಜಯಿಸಿದ ಎಚ್.ವಿಶ್ವನಾಥ್ ಕೂಡ ಕುರುಬ ಸಮಾಜದವರು. 2004ರಿಂದೀಚೆಗೆ ನಡೆದ ಎರಡೂ ಚುನಾವಣೆಗಳಲ್ಲಿ ಒಕ್ಕಲಿಗ ಸಮಾಜದ ಪ್ರತಾಪ ಸಿಂಹ ಅವರಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ.

ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಕಾಂಗ್ರೆಸ್ ಮತ್ತು ಇತರರ ನಡುವೆಯೇ ಹೋರಾಟ ಕಂಡುಬಂದಿದೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಸಿಕ್ಕಿಲ್ಲ. ಪ್ರಮುಖ ಪಕ್ಷಗಳಿಂದ ಅವರಿಗೆ ಟಿಕೆಟ್ ಕೂಡ ದೊರೆತಿಲ್ಲ ಎನ್ನುತ್ತಾರೆ ಹಿರಿಯರು.

ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಕ್ಷ ಬಿಜೆಪಿಯು ಅರಸು ಸಮಾಜದ ಅಭ್ಯರ್ಥಿಗೆ ಮಣೆ ಹಾಕಿದೆ.

ದ್ವಿಸದಸ್ಯ ಕ್ಷೇತ್ರದಿಂದ ಈವರೆಗೆ:

ಮೈಸೂರು ಕ್ಷೇತ್ರವು ಮೊದಲಿಗೆ ದ್ವಿಸದಸ್ಯ ಕ್ಷೇತ್ರವಾಗಿತ್ತು. 1952ರಲ್ಲಿ ಕೆಎಂಪಿಪಿಯಿಂದ (ಕಿಸಾನ್‌ ಮಜ್ದೂರ್ ಪ್ರಜಾ ಸೋಷಿಯಲಿಸ್ಟ್ ಪಕ್ಷ) ಎಂ.ಎಸ್. ಗುರುಪಾದಸ್ವಾಮಿ ಮತ್ತು ಕಾಂಗ್ರೆಸ್‌ನಿಂದ ಎನ್.ರಾಚಯ್ಯ ಅವರು ಗೆದ್ದಿದ್ದರು. ಗುರುಪಾದಸ್ವಾಮಿ ಅವರು ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದಾಗ ಅವರಿಗೆ 29 ವರ್ಷ ವಯಸ್ಸಷ್ಟೇ ಆಗಿತ್ತು. ಕ್ರಮೇಣ ಅವರು ಜಿಲ್ಲೆಯ, ನಾಡಿನ ಪ್ರಮುಖ ರಾಜಕಾಣಿಯಾಗಿ ಹೊರಹೊಮ್ಮಿದ್ದರು.

1957ರಲ್ಲಿ ಕಾಂಗ್ರೆಸ್‌ನವರೇ ಆದ ಎಂ.ಶಂಕರಯ್ಯ ಹಾಗೂ ಎಸ್.ಎಂ. ಸಿದ್ದಯ್ಯ ಗೆದ್ದಿದ್ದರು. 1962ರಲ್ಲಿ ಕಾಂಗ್ರೆಸ್‌ನ ಎಂ.ಶಂಕರಯ್ಯ ಮತ್ತು ಎಚ್‌.ಡಿ.ತುಳಸೀದಾಸ್ ಲೋಕಸಭೆ ಪ್ರವೇಶಿಸಿದ್ದರು. 1971 ಮತ್ತು 1977ರ ಚುನಾವಣೆಯಲ್ಲೂ ತುಳಸೀದಾಸ್ ಕಾಂಗ್ರೆಸ್‌ನಿಂದಲೇ ಜಯ ಗಳಿಸಿದ್ದರು (ಅವರು ಗಾಂಧಿವಾದಿ ಯಶೋಧರಮ್ಮ ದಾಸಪ್ಪ ಅವರ ಪುತ್ರ) 1980ರಲ್ಲಿ ಕಾಂಗ್ರೆಸ್‌–ಐನಿಂದ ಕಣಕ್ಕಿಳಿಸಿದ್ದ ಎಂ.ರಾಜಶೇಖರ ಮೂರ್ತಿ ಗೆಲುವು ಸಾಧಿಸಿದ್ದರು.

ನಂತರ ಸತತ ಎರಡು ಬಾರಿಗೆ ಅಂದರೆ 1984 ಹಾಗೂ 1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾದವರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌. ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 1991ರಲ್ಲಿ ಬಿಜೆಪಿಯಿಂದ ಕಣಕ್ಕಿಳಿಸಿದ್ದ ಶ್ರೀಕಂಠದತ್ತ ಅವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪುತ್ರಿ ಕಾಂಗ್ರೆಸ್‌ನ ಚಂದ್ರಪ್ರಭಾ ಅರಸು ವಿರುದ್ಧ ಸೋತಿದ್ದರು. ಈ ಕ್ಷೇತ್ರದಲ್ಲಿ ಗೆದ್ದಿದ್ದ ಏಕೈಕ ಮಹಿಳೆ ಎನ್ನುವ ಹೆಗ್ಗಳಿಕೆ ಈವರೆಗೂ ಚಂದ್ರಪ್ರಭಾ ಅರಸು ಅವರ ಹೆಸರಿನಲ್ಲೇ ಇದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಎಂ.ಡಿ.ತುಳಸಿದಾಸಪ್ಪ ಗುರುಪಾದಸ್ವಾಮಿ
ಎಂ.ಡಿ.ತುಳಸಿದಾಸಪ್ಪ ಗುರುಪಾದಸ್ವಾಮಿ
ಸಿ.ಎಚ್.ವಿಜಯಶಂಕರ್
ಸಿ.ಎಚ್.ವಿಜಯಶಂಕರ್
ಎಚ್‌.ವಿಶ್ವನಾಥ್
ಎಚ್‌.ವಿಶ್ವನಾಥ್
ಪ್ರತಾಪ ಸಿಂಹ
ಪ್ರತಾಪ ಸಿಂಹ

ಕ್ಷೇತ್ರ ಪುನರ್‌ವಿಂಗಡಣೆ ನಂತರ...

2009ರಲ್ಲಿ ನಡೆದ ಕ್ಷೇತ್ರ ಪುನರ್‌ವಿಂಗಡಣೆ ನಂತರ ಜಿಲ್ಲೆಯ ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರವು ಚಾಮರಾಜನಗರಕ್ಕೆ ಮತ್ತು ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ. ಅಲ್ಲಿಯವರೆಗೂ ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಕೊಡಗು ಜಿಲ್ಲೆಯನ್ನು ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಗಿದೆ. ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದರೂ 8 ಕ್ಷೇತ್ರಗಳಷ್ಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಮೈಸೂರು ತಾಲ್ಲೂಕಿನ ಭಾಗಶಃ ಪ್ರದೇಶಗಳನ್ನು ಒಳಗೊಂಡ ವರುಣ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. ಕ್ಷೇತ್ರ ಪುನರ್‌ವಿಂಗಣಡೆ ನಂತರ ಈ ಬಾರಿ ನಡೆಯುತ್ತಿರುವುದು 4ನೇ ಚುನಾವಣೆಯಾಗಿದೆ. ಈವರೆಗೆ ನಡೆದ 3 ಚುನಾವಣೆಯಲ್ಲಿ ಕಾಂಗ್ರೆಸ್‌ ಒಮ್ಮೆ ಹಾಗೂ ಬಿಜೆಪಿ ಎರಡು ಬಾರಿ ಗೆದ್ದಿದೆ.

ಬಿಜೆಪಿ ಗೆಲುವು
1996ರಲ್ಲಿ ಪುಟಿದೆದ್ದ ಶ್ರೀಕಂಠದತ್ತ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರನ್ನು 1998ರಲ್ಲಿ ಚುನಾವಣೆಯಲ್ಲಿ ಸೋಲಿಸಿದವರು ಬಿಜೆಪಿಯ ಸಿ.ಎಚ್. ವಿಜಯಶಂಕರ್‌. ಇದರೊಂದಿಗೆ ಕ್ಷೇತ್ರದಲ್ಲಿ ಬಿಜೆಪಿಯು ಗೆಲುವಿನ ಖಾತೆ ತೆರೆದ ಸಾಧನೆಯೂ ಸಾಧ್ಯವಾಗಿತ್ತು. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಕಂಡ ಶ್ರೀಕಂಠದತ್ತರು ಬಿಜೆಪಿಯ ವಿರುದ್ಧ ಸೇಡು ತೀರಿಸಿಕೊಂಡಿದ್ದರು. 2004ರಲ್ಲಿ ಬಿಜೆಪಿಯ ಸಿ.ಎಚ್‌. ವಿಜಯಶಂಕರ್‌ ಜಯಿಸಿದ್ದರು. 2009ರಲ್ಲಿ ಕ್ಷೇತ್ರ ಮತ್ತೆ ಕಾಂಗ್ರೆಸ್‌ ಪಾಲಾಯಿತು. ಆಗ ಎಚ್‌. ವಿಶ್ವನಾಥ್ ಗೆದ್ದಿದ್ದರು. 2014 ಹಾಗೂ 2019 ಎರಡೂ ಚುನಾವಣೆಯಲ್ಲೂ ಬಿಜೆಪಿ ತನ್ನ ವಶಪಡಿಸಿಕೊಂಡಿತು. ಸತತ ಎರಡು ಚುನಾವಣೆಗಳಲ್ಲೂ ಪ್ರತಾಪ ಸಿಂಹ ಸ್ಪರ್ಧಿಸಿದ್ದರು; ಆಯ್ಕೆಯೂ ಆಗಿದ್ದರು. ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿಯಾಗಿಯೇ ಬಂದಿದ್ದ ಅವರಿಗೆ ಪಕ್ಷ ಈ ಬಾರಿ ಕೊಕ್ ಕೊಟ್ಟಿದೆ. ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಕಣಕ್ಕಿಳಿಸಿದೆ. ವಿಶೇಷವೆಂದರೆ ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಇಲ್ಲಿ ನಾಲ್ಕು ಬಾರಿ ಗೆದ್ದಿದ್ದಾರೆ; ಆಗೆಲ್ಲವೂ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿದ್ದರು. ಈಗ ಅವರ ಪುತ್ರ ಯದುವೀರ್ ಬಿಜೆಪಿಯಿಂದಲೇ ರಾಜಕೀಯ ಭವಿಷ್ಯ ಅರಸುತ್ತಾ ಜನಾದೇಶ ಬೇಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT