ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada–10: ಅಕ್ಟೋಬರ್ 8ರಿಂದ ಪ್ರಾರಂಭ

Published 3 ಅಕ್ಟೋಬರ್ 2023, 7:20 IST
Last Updated 3 ಅಕ್ಟೋಬರ್ 2023, 7:20 IST
ಅಕ್ಷರ ಗಾತ್ರ

ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ 10ನೇ ಆವೃತ್ತಿ ಅ.8ರಿಂದ ಪ್ರಾರಂಭವಾಗುತ್ತಿದೆ. ಕಿಚ್ಚ ಸುದೀಪ್‌ ನಿರೂಪಣೆಯ ಈ ಶೋ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ರಿಂದ ಪ್ರಸಾರಗೊಳ್ಳಲಿದೆ. ಹಿಂದಿನ ಸೀಸನ್‌ಗಳಂತೆ ವಾರಾಂತ್ಯದ ಸಂಚಿಕೆಗಳಲ್ಲಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ.

‘ಬೇರೆ ಬೇರೆ ಕ್ಷೇತ್ರಗಳಲ್ಲಿನ 16–18 ಸ್ಪರ್ಧಿಗಳು ಈ ವರ್ಷ ಮನೆಯೊಳಗೆ ಹೋಗುತ್ತಾರೆ. ಈ ಬಾರಿ ಅನೇಕ ಹೊಸತುಗಳು ಇರಲಿದ್ದು, ಶೋ ಪ್ರಾರಂಭಗೊಂಡಾಗ ತಿಳಿಯುತ್ತದೆ’ ಎಂದು ಕಲರ್ಸ್‌ ಕನ್ನಡ ವಾಹಿನಿ ಹೆಡ್‌ ಪ್ರಶಾಂತ್‌ ನಾಯಕ್‌ ಹೇಳಿದರು.

‘ಸ್ಪರ್ಧಿಗಳ ಆಯ್ಕೆಗೆ ಅದರದ್ದೇ ಆದ ಮಾನದಂಡಗಳಿವೆ. ಮನೆ ಎಂದಾಗ ಎಲ್ಲ ರೀತಿಯ ಪಾತ್ರಗಳು ಬೇಕಾಗುತ್ತವೆ. ಅದರಂತೆ ಸ್ಪರ್ಧಿಗಳ ಆಯ್ಕೆ ನಡೆಯುತ್ತದೆ. ಇಲ್ಲಿನ ಭಾವನೆಗಳನ್ನು ಸ್ಕ್ರಿಪ್ಟ್‌ ಮಾಡಿ ಹೊರತೆಗೆಸಲು ಸಾಧ್ಯವಿಲ್ಲ. ಈ ವರ್ಷ ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲವೂ ಬಿಗ್‌ಬಾಸ್‌ ಲೈವ್‌ ಅನ್ನು ಉಚಿತವಾಗಿ ವೀಕ್ಷಿಸಬಹುದು’ ಎಂದು ಪ್ರಶಾಂತ್‌ ತಿಳಿಸಿದರು. 

ಸೀಸನ್‌ 6ಕ್ಕೆ ಸಾಕೆನಿಸಿತ್ತು: 

‘6ನೇ ಸೀಸನ್‌ ಮುಗಿದ ಬಳಿಕ ಬಿಗ್‌ಬಾಸ್‌ ಸಾಕೆನ್ನಿಸಿತ್ತು. ಆದರೆ ವಾಹಿನಿಯವರು ಮತ್ತೆ ಒಪ್ಪಿಸಿ ಕರೆದುಕೊಂಡು ಬಂದರು. ಅಲ್ಲಿಂದ 10ನೇ ಸೀನ್‌ಗೆ ಬಂದು ನಿಂತಿದೆ. ಇದು ಜನ ಮಾತಾಡುವಂತೆ ಸ್ಕ್ರಿಪ್ಟೆಡ್‌ ಶೋ ಅಲ್ಲ. ನಾನು ವಾರಾಂತ್ಯದಲ್ಲಿ ನೀಡುವ ತೀರ್ಪುಗಳು ಅಲ್ಲಿಯೇ ತೆಗೆದುಕೊಳ್ಳುವ ತೀರ್ಮಾನಗಳು. ಅದನ್ನು ಸ್ಕ್ರಿಪ್ಟ್‌ ಮಾಡಲು ಸಾಧ್ಯವಿಲ್ಲ’ ಎಂದರು ನಟ ಸುದೀಪ್‌.

‘ಶೋನ ಸಾಕಷ್ಟು ನಿಯಮಗಳನ್ನು ಇಲ್ಲಿಗೆ ತಕ್ಕಂತೆ ಬದಲಿಸಿಕೊಂಡಿದ್ದೇವೆ. ನನಗೆ ಈ ಯಾಕಪ್ಪ ಈ ಸ್ಪರ್ಧಿಯನ್ನು ಒಳಗೆ ಕಳುಹಿಸಿದರು ಅನ್ನಿಸಿದ್ದಿದೆ. ಆದರೆ ಎರಡನೇ ವಾರಕ್ಕೆ ಅವರ ಮೇಲಿನ ಅಭಿಪ್ರಾಯ ಬದಲಾಗುತ್ತದೆ. ಜನರಿಗೆ ಇಷ್ಟವಾಗಿ ಮತ ಹಾಕುತ್ತಾರೆ. ಇದು ಈ ಶೋನ ವೈಶಿಷ್ಟ್ಯ. ನಾನು ವಾರಾಂತ್ಯದಲ್ಲಿ ಕಾಣಿಸಿಕೊಳ್ಳುವ ಮೊದಲು ಒಬ್ಬನೆ ಕುಳಿತು ಎಲ್ಲ ಸಂಚಿಕೆಗಳನ್ನು ವೀಕ್ಷಿಸಿರುತ್ತೇನೆ. ಹೀಗಾಗಿ ನಡೆದ ವಿವಾದ, ಜಗಳಗಳಿಗೆ ನನ್ನದೇ ಆದ ದೃಷ್ಟಿಕೋನದಲ್ಲಿ ತೀರ್ಪು ನೀಡುತ್ತೇನೆ’ ಎಂದು ಸುದೀಪ್‌ ತಿಳಿಸಿದರು. ‌

ಹೊಸ ಮನೆ: 

‘ಇಷ್ಟು ವರ್ಷ ಬಿಗ್‌ಬಾಸ್‌ ಇನೋವೆಟೀವ್‌ ಫಿಲ್ಮ್‌ ಸಿಟಿಯಲ್ಲಿ ನಡೆಯುತ್ತಿತ್ತು. ಆದರೆ ಈ ವರ್ಷ ದೊಡ್ಡ ಆಲದಮರದ ಬಳಿಯಲ್ಲಿನ ಹೊಸ ಮನೆಯಲ್ಲಿ ನಡೆಯಲಿದ್ದು, ಭಾರತದಲ್ಲಿ ಇರುವ ಅತಿದೊಡ್ಡ ‘ಬಿಗ್ ಬಾಸ್’ ಮನೆ ಎನ್ನುವ ಖ್ಯಾತಿ ಇದಕ್ಕೆ ಲಭಿಸಿದೆ. ನಾಲ್ಕು ತಿಂಗಳ ಕಾಲ ಹಗಲು-ರಾತ್ರಿ ಶ್ರಮ ಹಾಕಿ ಈ ಮನೆ ನಿರ್ಮಾಣ ಮಾಡಲಾಗಿದೆ. ಜೊತೆಗೆ ನಮ್ಮ ವಾಹಿನಿಯ ನಾನ್‌ಫಿಕ್ಷನ್‌ ವಿಭಾಗದ ಮುಖ್ಯಸ್ಥ ಪ್ರಕಾಶ್‌  ಈ ಸಲ ಶೋ ನಿರ್ದೇಶನ ಮಾಡಲಿದ್ದಾರೆ’ ಎಂದರು ಪ್ರಶಾಂತ್‌.

ಸಂಭಾವ್ಯ ಹೆಸರುಗಳು:

ಪ್ರತಿ ಸಲ ಬಿಗ್‌ಬಾಸ್‌ ಪ್ರಾರಂಭಕ್ಕೆ ಮೊದಲು ಒಂದಷ್ಟು ಸ್ಪರ್ಧಿಗಳ ಹೆಸರುಗಳು ಜನರ ಬಾಯಲ್ಲಿ ಓಡಾಡುತ್ತವೆ. ಈ ಸಲವೂ ‘ಕಾಂತಾರ’ ನಟ ಪ್ರಕಾಶ್‌ ತುಮ್ಮಿನಾಡು, ಕಿರುತೆರೆ ನಟಿಯರಾದ ನಮ್ರತಾಗೌಡ,  ಮೇಘಾ ಶೆಟ್ಟಿ, ಯೂಟ್ಯೂಬರ್‌ ಡಾ.ಬ್ರೊ, ಕ್ರಿಕೆಟಿಗ ವಿನಯ್‌ ಕುಮಾರ್‌ ಸೇರಿದಂತೆ ಕೆಲ ಹೆಸರುಗಳು ಕೇಳಿಬರುತ್ತಿವೆ.

‘ಸ್ಪರ್ಧಿ ವೇದಿಕೆಗೆ ಬರುವವರೆಗೂ ನನಗೂ ಸ್ಪರ್ಧಿ ಯಾರೆಂದು ಗೊತ್ತಿರುವುದಿಲ್ಲ. ಎಲಿಮಿನೇಷನ್‌ ವೇಳೆಯೂ ಹಾಗೇ. ಆಕಸ್ಮಾತ್‌ ಬಾಯಿತಪ್ಪಿ ಅವರ ಹೆಸರು ಹೇಳಿಬಿಟ್ಟರೆ ಪ್ರಮಾದವಾಗುತ್ತದೆಯೆಂದು ಅವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಹೀಗಾಗಿ ನೀವು ಕೇಳುವ ಯಾವ ಹೆಸರುಗಳೂ ಪೂರ್ತಿ ಸತ್ಯವಲ್ಲ ಅಥವಾ ಸುಳ್ಳೂ ಅಲ್ಲ. ಕರೆದವರೆಲ್ಲ ಬಿಗ್‌ಬಾಸ್‌ ಮನೆಗೆ ಬರುತ್ತಾರೆ ಎಂದುಕೊಳ್ಳಲು ಸಾಧ್ಯವಿಲ್ಲ’ ಎನ್ನುತ್ತಾರೆ ಸುದೀಪ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT