‘ಮಣಿಪುರ ವಿದ್ಯಮಾನ ಪ್ರಸ್ತಾಪಿಸದ ಬಿಜೆಪಿ’
‘ಮಣಿಪುರದಲ್ಲಿ ಜನರ ಸಾಂವಿಧಾನಿಕ ಹಕ್ಕುಗಳನ್ನೇ ಕಿತ್ತುಕೊಳ್ಳಲಾಗಿದೆ. ಆದರೆ, ಸಂವಿಧಾನ ಕುರಿತ ಚರ್ಚೆಯ ವೇಳೆ ಬಿಜೆಪಿ ಸದಸ್ಯರು ಈ ವಿಚಾರವನ್ನು ಪ್ರಸ್ತಾಪಿಸದೇ ಇದ್ದದ್ದು ಖಂಡನೀಯ’ ಎಂದು ಪ್ರತಿಪಕ್ಷಗಳಾದ ಟಿಎಂಸಿ ಹಾಗೂ ಸಿಪಿಎಂ ಆರೋಪಿಸಿದವು. ‘ಮಣಿಪುರ ಜನರ ಸಾಂವಿಧಾನಿಕ ಹಕ್ಕುಗಳನ್ನು ದಮನ ಮಾಡಿದ್ದಕ್ಕಾಗಿ ಈಶಾನ್ಯ ಭಾಗದ ಎಲ್ಲ ಆಡಳಿತ ಪಕ್ಷಗಳ ಸಂಸದರು ರಾಜೀನಾಮೆ ನೀಡಬೇಕು’ ಎಂದು ಟಿಎಂಸಿ ಸಂಸದೆ ಸುಷ್ಮಿತಾ ದೇವ್ ಆಗ್ರಹಿಸಿದರು. ಈ ಮಾತಿಗೆ ದನಿಗೂಡಿಸಿದ ಸಿಪಿಎಂನ ಜಾನ್ ಬ್ರಿಟ್ಟಾಸ್,‘ಮಣಿಪುರ ವಿಚಾರವಾಗಿ ನರೇಂದ್ರ ಮೋದಿ ಅವರು ಒಬ್ಬ ಪ್ರಧಾನಿಯಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು’ ಎಂದು ಆಗ್ರಹಿಸಿದರು.