ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಪ್ರತ್ಯೇಕ ಪೀಠ

Last Updated 3 ಮಾರ್ಚ್ 2023, 11:09 IST
ಅಕ್ಷರ ಗಾತ್ರ

ನವದೆಹಲಿ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೋರಿದ್ದ ಕರ್ನಾಟಕ ಮುಸ್ಲಿಂ ವಿದ್ಯಾರ್ಥಿನಿಯರ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಪ್ರತ್ಯೇಕವಾಗಿ ತ್ರಿಸದಸ್ಯರ ಪೀಠವನ್ನು ರಚಿಸಲಿದೆ.

ಹಿಜಾಬ್ ಅನ್ನು ಧರಿಸಿ ತರಗತಿಗೆ ಬರುವುದನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

‘ಈ ವಿದ್ಯಾರ್ಥಿನಿಯರು ಮತ್ತೊಂದು ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು‘ ವಿದ್ಯಾರ್ಥಿನಿಯರ ಪರ ವಕೀಲೆಯು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವನ್ನು ಕೋರಿದರು. ಆಗ ‘ಪ್ರತ್ಯೇಕ ಪೀಠ ರಚಿಸಲಾಗುವುದು’ ಎಂದು ಸಿಜೆಐ ಹೇಳಿದರು.

ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಪೀಠದ ಇತರ ಸದಸ್ಯರು. ಇದಕ್ಕೆ ಮುನ್ನ ಪ್ರಕರಣದ ವಿಚಾರಣೆಯನ್ನು ಹೋಳಿ ರಜೆ ಅವಧಿ ಬಳಿಕ ನಡೆಸಲಾಗುವುದು ಎಂದು ತಿಳಿಸಿತ್ತು.

‘ಐದು ದಿನಗಳಲ್ಲಿ ಪರೀಕ್ಷೆಗಳು ಆರಂಭವಾಗಲಿವೆ. ವಿದ್ಯಾರ್ಥಿನಿಯರಿಗೆ ಈಗಾಗಲೇ ಒಂದು ಶೈಕ್ಷಣಿಕ ವರ್ಷ ನಷ್ಟವಾಗಿದೆ. ಮತ್ತೊಂದು ವರ್ಷ ಕಳೆದುಕೊಳ್ಳಬಹುದು’ ಎಂದು ವಕೀಲರು ಪೀಠದ ಗಮನಕ್ಕೆ ತಂದರು.

ಸದ್ಯ ಪ್ರಕರಣದ ವಿಚಾರಣೆಗೆ ರಜೆ ಅವಧಿ ಆರಂಭಕ್ಕೆ ಮುನ್ನಾ ದಿನವನ್ನು ನಿಗದಿಪಡಿಸಲಾಗಿದೆ. ಈ ಹಿಂದೆಯೂ ಎರಡು ಬಾರಿ ದಿನ ನಿಗದಿಪಡಿಸಲಾಗಿತ್ತು ಎಂದೂ ವಿದ್ಯಾರ್ಥಿನಿಯರನ್ನು ಪ್ರತಿನಿಧಿಸುತ್ತಿರುವ ವಕೀಲೆ ಶಾದನ್‌ ಫರಾಸತ್‌ ಅವರು ಪೀಠದ ಗಮನಕ್ಕೆ ತಂದರು.

ಹಿಜಾಬ್ ನಿಷೇಧಿಸಿದ ಆದೇಶವನ್ನು ಪ್ರಶ್ನಿಸಿದ್ದ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೋರ್ಟ್‌ ವಜಾ ಮಾಡಿತ್ತು. ‘ಇಸ್ಲಾಂ ನಂಬಿಕೆ ಅನುಸಾರ ಹಿಜಾಬ್ ಧಾರ್ಮಿಕ ಆಚರಣೆಯ ಭಾಗವಲ್ಲ’ ಎಂದು ಹೇಳಿತ್ತು. ಇದನ್ನು ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ, ಸುಪ್ರಿಂ ಕೋರ್ಟ್‌ನಲ್ಲಿ ಈ ಸಂಬಂಧ ಭಿನ್ನ ಅಭಿಪ್ರಾಯದ ತೀರ್ಪು ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT