ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಯಲ್ಲಿ ಮೂರು ಹೊಸ ಕ್ರಿಮಿನಲ್‌ ಕಾನೂನು ಮಸೂದೆ ಅಂಗೀಕಾರ

Published 20 ಡಿಸೆಂಬರ್ 2023, 12:59 IST
Last Updated 20 ಡಿಸೆಂಬರ್ 2023, 12:59 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ಮೂರು ಮಸೂದೆಗಳಿಗೆ ಲೋಕಸಭೆಯು ಬುಧವಾರ ಅಂಗೀಕಾರ ನೀಡಿದೆ. ಭಾರತೀಯ ನ್ಯಾಯ (ಎರಡನೆಯ) ಸಂಹಿತಾ ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮಸೂದೆ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ) ಮಸೂದೆ, ದೇಶದ ಜನರನ್ನು ವಸಾಹತು ಕಾಲದ ಮನಃಸ್ಥಿತಿಯಿಂದ ಮುಕ್ತಗೊಳಿಸಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈ ಮೂರು ಮಸೂದೆಗಳು ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ಬರಲಿವೆ. ‘ಬ್ರಿಟಿಷರ ಕಾಲದಲ್ಲಿ ಈ ಮೂರು ಕಾನೂನುಗಳನ್ನು  ರಚಿಸಲಾಯಿತು. ಈ ಕಾನೂನುಗಳನ್ನು ತೆಗೆದುಹಾಕುವವರೆಗೆ ಬ್ರಿಟನ್ನಿನ ಕಾನೂನುಗಳು ದೇಶದಲ್ಲಿ ಮುಂದುವರಿಯುತ್ತವೆ’ ಎಂದು ಶಾ ಅವರು ಹೊಸ ಮಸೂದೆಗಳ ವಿಚಾರವಾಗಿ ಮಾತನಾಡುವ ಸಂದರ್ಭದಲ್ಲಿ ಹೇಳಿದರು.

ಮೂರು ಮಸೂದೆಗಳು ‘ಸಂತ್ರಸ್ತರನ್ನು ಕೇಂದ್ರೀಕರಿಸಿಕೊಂಡ’, ‘ಸಾಕ್ಷ್ಯ ಆಧಾರಿತ’ ಹಾಗೂ ನ್ಯಾಯ ಪಡೆಯುವುದನ್ನು ಸುಲಲಿತವಾಗಿಸುವ ವ್ಯವಸ್ಥೆಯನ್ನು ಸೃಷ್ಟಿಸಲಿವೆ ಎಂದು ಶಾ ಹೇಳಿದರು. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳು, ಸಂಸದರು, ಶಾಸಕರು, ಐಪಿಎಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಂದ ಒಟ್ಟು 3,200ಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಇವುಗಳನ್ನು ರೂಪಿಸಲಾಗಿದೆ ಎಂಬ ಮಾಹಿತಿ ನೀಡಿದರು.

2014ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿರುವುದು ಬಿಜೆಪಿ ಮಾತ್ರ ಎಂದು ಕೂಡ ಅವರು ಹೇಳಿದರು. ‘ನಾವು ಅಯೋಧ್ಯೆಯ ಬಗ್ಗೆ ಹೇಳಿದ್ದೆವು. ಆದಷ್ಟು ಬೇಗ ರಾಮಮಂದಿರವನ್ನು ನಿರ್ಮಿಸುವುದಾಗಿ ಹೇಳಿದ್ದೆವು. ಜನವರಿ 22ರಂದು ರಾಮನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ’ ಎಂದು ಶಾ ಅವರು ಹೇಳಿದಾಗ ಆಡಳಿತ ಪಕ್ಷದ ಸದಸ್ಯರ ಕಡೆಯಿಂದ ‘ಜೈ ಶ್ರೀರಾಂ’ ಎಂಬ ಘೋಷಣೆಗಳು ಕೇಳಿಬಂದವು.

‘ಇದು ಹೇಳಿದ್ದನ್ನು ಮಾಡಿ ತೋರಿಸುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ. ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದ್ದೆವು. ಅದನ್ನು ಮಾಡಿದ್ದೇವೆ. ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ
ಸ್ಥಾನಮಾನವನ್ನು ಹಿಂಪಡೆಯುವುದಾಗಿ ಹೇಳಿದ್ದೆವು. ಅದನ್ನೂ ಮಾಡಿದ್ದೇವೆ. ಭಯೋತ್ಪಾದನೆಯ ವಿಚಾರದಲ್ಲಿ ಯಾವ ಸಹನೆಯನ್ನೂ ತೋರುವುದಿಲ್ಲ ಎಂದಿದ್ದೆವು. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ, ಈಶಾನ್ಯ ರಾಜ್ಯಗಳಲ್ಲಿ ಹಾಗೂ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳು ಗಣನೀಯವಾಗಿ ಕಡಿಮೆ ಆಗಿವೆ. ತ್ರಿವಳಿ ತಲಾಖ್‌ ರದ್ದು ಮಾಡಲಾಗುವುದು ಎಂದಿದ್ದೆವು. ಅದನ್ನೂ ಮಾಡಿದ್ದೇವೆ’ ಎಂದು ಶಾ ಹೇಳಿದರು.

97ಕ್ಕೂ ಹೆಚ್ಚು ಮಂದಿ ಸಂಸದರನ್ನು ಅಮಾನತು ಮಾಡಲಾಗಿರುವ ಕಾರಣ, ವಿರೋಧ ಪಕ್ಷಗಳ ಸಾಲಿನಲ್ಲಿ ಮೂರನೆಯ ಎರಡರಷ್ಟು ಸದಸ್ಯರು ಸದನದಲ್ಲಿ ಇರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಮಸೂದೆಯ ಬಗ್ಗೆ ಚರ್ಚೆ ನಡೆಯಿತು. ಎಐಎಂಐಎಂ ಸದಸ್ಯ ಅಸಾದುದ್ದೀನ್ ಒವೈಸಿ, ಶಿರೋಮಣಿ ಅಕಾಲಿದಳದ ಹರಸಿಮ್ರತ್ ಬಾದಲ್, ಬಿಜೆಡಿ ಸದಸ್ಯ ಭರ್ತೃಹರಿ ಮೆಹ್ತಾಬ್ ಸೇರಿದಂತೆ ಕೆಲವು ಸದಸ್ಯರು ಇದ್ದರು.

ಮೇಲ್ಮನವಿ ಸಲ್ಲಿಸುವ ಹಾಗೂ ಅರ್ಜಿ ಹಿಂಪಡೆಯುವ ಬಗ್ಗೆ ತೀರ್ಮಾನಿಸಲು ಪ್ರತಿ ಜಿಲ್ಲೆಯಲ್ಲಿಯೂ ಒಬ್ಬ ಅಭಿಯೋಜನಾ ನಿರ್ದೇಶಕ ಇರುತ್ತಾರೆ. ಮಸೂದೆಗಳಿಂದ ಬರಲಿರುವ ಸುಧಾರಣೆಯು ತ್ವರಿತ ನ್ಯಾಯದಾನಕ್ಕೆ ಹೆಸರುವಾಸಿ ಆಗಲಿದೆ ಎಂದು ವಿವರಿಸಿದರು.

ವಿಚಾರಣೆಗಳು ಮತ್ತೆ ಮತ್ತೆ ಮುಂದಕ್ಕೆ ಹೋಗುತ್ತ ಇರುತ್ತವೆ ಎಂಬ ಮಾತನ್ನು ನ್ಯಾಯ ಕೋರಿದವರು ಹೇಳುತ್ತಿರುತ್ತಾರೆ. ಹೊಸ ಮಸೂದೆಗಳು ಜಾರಿಗೆ ಬಂದ ನಂತರದಲ್ಲಿ, ವಿಚಾರಣೆಯ ಹಂತವು 45 ದಿನಗಳಲ್ಲಿ ಪೂರ್ಣಗೊಳ್ಳಬೇಕಾಗುತ್ತದೆ. ಶಿಕ್ಷೆ ನಿಗದಿ ಮಾಡುವ ಪ್ರಕ್ರಿಯೆಯು 60 ದಿನಗಳಲ್ಲಿ ಆಗಬೇಕಾಗು
ತ್ತದೆ. ವಕೀಲರು ಎರಡಕ್ಕಿಂತ ಹೆಚ್ಚು ಬಾರಿಗೆ ದಿನಾಂಕವನ್ನು ಮರುನಿಗದಿ ಮಾಡಿಕೊಳ್ಳಲು ಅವಕಾಶ ಇಲ್ಲ ಎಂದು ಶಾ ಹೇಳಿದರು.

ತಲೆಮರೆಸಿಕೊಂಡಿರುವ ಭಯೋತ್ಪಾದಕ ದಾವೂದ್ ಇಬ್ರಾಹಿಂ, ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಮತ್ತು ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್ ಪನ್ನೂ ಅಂಥವರನ್ನು ಕಾನೂನಿನ ಹಿಡಿತಕ್ಕೆ ತರಲು, ‘ಆರೋಪಿಯ ಅನುಪಸ್ಥಿತಿಯಲ್ಲಿ ವಿಚಾರಣೆ’ ಎಂದು ಪರಿಕಲ್ಪನೆಯನ್ನು ಮಸೂದೆಗಳಲ್ಲಿ ಅಳವಡಿಸಲಾಗಿದೆ ಎಂದರು. ಇದರ ಅಡಿಯಲ್ಲಿ ಎರಡು ವರ್ಷಗಳ ಅವಧಿಯೊಳಗೆ ವಿಚಾರಣೆ ಪೂರ್ಣಗೊಳಿಸಲಾಗುತ್ತದೆ.

‘ಈ ವ್ಯಕ್ತಿಗಳು ಬೇರೆ ದೇಶಗಳಲ್ಲಿ ಅಡಗಿಕೊಂಡಿರುವ ಕಾರಣ ವಿಚಾರಣೆ ನಡೆಯುತ್ತಿಲ್ಲ. ಅವರು 90 ದಿನಗಳಲ್ಲಿ ಕೋರ್ಟ್‌ಗೆ ಹಾಜರಾಗದೆ ಇದ್ದರೆ, ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ಶುರುವಾಗುತ್ತದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ ಒಬ್ಬರನ್ನು ನೇಮಕ ಮಾಡಲಾಗುತ್ತದೆ. ಅವರ ವಿರುದ್ಧ ಕ್ರಮ ಜರುಗಿಸಿದ ನಂತರ, ವಿದೇಶಗಳಲ್ಲಿ ಅವರ ಸ್ಥಾನಮಾನ ಬದಲಾಗುತ್ತದೆ. ಆಗ ಅವರನ್ನು ಹಿಂದಕ್ಕೆ ಕರೆತರುವುದು ಸುಲಭ ಆಗುತ್ತದೆ’ ಎಂದು ಅವರು ಹೇಳಿದರು.

ಸರ್ಕಾರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ. ಆದರೆ ದೇಶದ ವಿರುದ್ಧ ಮಾತನಾಡುವುದು ಹಾಗೂ ದೇಶದ ವಿರುದ್ಧ ಎಸಗುವ ಕೃತ್ಯಗಳು ಶಿಕ್ಷಾರ್ಹ ಆಗುತ್ತವೆ ಎಂದು ಶಾ ತಿಳಿಸಿದರು.

ಗುಂಪು ಹತ್ಯೆಯನ್ನು ಈ ಮಸೂದೆಗಳು ಶಿಕ್ಷಾರ್ಹವಾಗಿಸಿವೆ. ಗುಂಪು ಹತ್ಯೆಗೆ ಮರಣದಂಡನೆ ಶಿಕ್ಷೆಯನ್ನು ನಿಗದಿ ಮಾಡಲಾಗಿದೆ. ‘ಗುಂಪುಹತ್ಯೆಯ ಬಗ್ಗೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ನನ್ನನ್ನು ಕೇಳಿದ್ದರು. ಆದರೆ, ದೇಶ ಮೊದಲು ಎನ್ನುವ ಬಿಜೆಪಿ ಸಿದ್ಧಾಂತವನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರ ಪಕ್ಷದ ಸರ್ಕಾರವು ಗುಂಪುಹತ್ಯೆಯನ್ನು ಶಿಕ್ಷಾರ್ಹ ಆಗಿಸದೇ ಇದ್ದಿದ್ದು ಏಕೆ? ಭಾರತೀಯ ಮನಸ್ಸು ಇದ್ದರೆ ಕಾನೂನು ಅರ್ಥವಾಗುತ್ತದೆ, ಇಟಲಿಯ ಮನಸ್ಸು ಇದ್ದರೆ ಅರ್ಥ ಆಗುವುದಿಲ್ಲ’ ಎಂದು ಶಾ ವ್ಯಂಗ್ಯವಾಡಿದರು. ಈ ಮಸೂದೆಗಳು ರಾಜ್ಯಸಭೆಯಲ್ಲಿ ಗುರುವಾರ ಚರ್ಚೆಗೆ ಬರುವ ನಿರೀಕ್ಷೆ ಇದೆ.

‘ವಿಸ್ತೃತ ಚರ್ಚೆ ಆಗಿದೆ’

ಮೂರು ಮಸೂದೆಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆದಿದೆ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ), ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು, ಶಾಸಕರು ಮತ್ತು ಸಂಸದರು, ಕಾನೂನು ಸಂಸ್ಥೆಗಳಿಂದ ಅಭಿಪ್ರಾಯ ಕೋರಲಾಗಿತ್ತು ಎಂದು ಅಮಿತ್ ಶಾ ತಿಳಿಸಿದರು.

2019ರಲ್ಲಿ ಈ ಪ್ರಕ್ರಿಯೆ ಶುರುವಾಯಿತು. 2020ರ ಮಾರ್ಚ್‌ ವೇಳೆಗೆ ಸಲಹೆಗಳು ಬಂದವು. 18 ರಾಜ್ಯಗಳು, ಆರು ಕೇಂದ್ರಾಡಳಿತ ಪ್ರದೇಶಗಳು, ಸುಪ್ರೀಂ ಕೋರ್ಟ್‌, 16 ಹೈಕೋರ್ಟ್‌ಗಳು, ಐದು ಕಾನೂನು ಅಕಾಡೆಮಿಗಳು, 22 ನ್ಯಾಷನಲ್ ಲಾ ಯೂನಿವರ್ಸಿಟಿಗಳು, 42 ಸಂಸದರು, 200 ಮಂದಿ ಐಪಿಎಸ್ ಅಧಿಕಾರಿಗಳು ಸಲಹೆಗಳನ್ನು ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT