ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹ 2 ಸಾವಿರಕ್ಕಾಗಿ ಪ್ರಬುದ್ಧಾ ಕೊಲೆ: ಆತ್ಮಹತ್ಯೆ ಎಂಬಂತೆ ಬಿಂಬಿಸಿದ ಬಾಲಕ!

Published 24 ಮೇ 2024, 10:08 IST
Last Updated 24 ಮೇ 2024, 10:08 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ (20) ಕೊಲೆ ಪ್ರಕರಣ ಭೇದಿಸಿರುವ ಸುಬ್ರಮಣ್ಯಪುರ ಠಾಣೆ ಪೊಲೀಸರು, ಕೃತ್ಯ ಎಸಗಿದ್ದ ಆರೋಪದಡಿ ಅವರ ತಮ್ಮನ ಸ್ನೇಹಿತನಾಗಿರುವ ಬಾಲಕನನ್ನು ಸೆರೆ ಹಿಡಿದಿದ್ದಾರೆ.

ಪದ್ಮನಾಭನಗರದ ಬೃಂದಾವನ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಪ್ರಬುದ್ಧ ಮೃತಪಟ್ಟಿದ್ದರು. ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದ ತಾಯಿ, ಕೊಲೆ ಆರೋಪದಡಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಬಾಲಕನನ್ನು ಬಂಧಿಸಿದ್ದಾರೆ.

‘ಆರೋಪಿ ಬಾಲಕ, ಪ್ರಬುದ್ಧಾ ಅವರ ಪರ್ಸ್‌ನಿಂದ ₹ 2 ಸಾವಿರ ಕಳ್ಳತನ ಮಾಡಿದ್ದ. ಇದು ಗೊತ್ತಾಗುತ್ತಿದ್ದಂತೆ, ಹಣ ವಾಪಸು ನೀಡುವಂತೆ ಪ್ರಬುದ್ಧಾ ಒತ್ತಾಯಿಸಿದ್ದರು. ಇದೇ ಕಾರಣಕ್ಕೆ ಬಾಲಕ, ಪ್ರಬುದ್ಧಾ ಅವರನ್ನು ಕೊಲೆ ಮಾಡಿದ್ದಾನೆ’ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಪ್ರಕರಣದ ಬಗ್ಗೆ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ, ‘ಪ್ರಬುದ್ಧಾ ಅವರ ತಮ್ಮನ ಸ್ನೇಹಿತನಾಗಿರುವ ಬಾಲಕನೇ ಆರೋಪಿ ಎಂಬುದು ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಪುರಾವೆಗಳನ್ನು ಸಂಗ್ರಹಿಸಿ ಬಾಲಕನ್ನು ವಶಕ್ಕೆ ಪಡೆಯಲಾಗಿದೆ. ಈತ ಬಾಲಕ ಆಗಿರುವುದರಿಂದ ಹೆಸರು ಬಹಿರಂಗಪಡಿಸಲಾಗದು. ಈತನನ್ನು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದರು

‘ಮತ್ತೊಬ್ಬ ಸ್ನೇಹಿತನಾದ ಪ್ರಬುದ್ಧಾ ತಮ್ಮನನ್ನು ಮಾತನಾಡಿಸುವ ಸೋಗಿನಲ್ಲಿ ಅವರ ಮನೆಗೆ ಹೋಗಿದ್ದ ಬಾಲಕ, ಪರ್ಸ್‌ನಲ್ಲಿದ್ದ ₹ 2 ಸಾವಿರ ಕದ್ದೊಯ್ದಿದ್ದ. ಇದು ಪ್ರಬುದ್ಧಾಗೆ ಗೊತ್ತಾಗಿತ್ತು. ಹಣ ವಾಪಸು ತಂದುಕೊಡುವಂತೆ ಅವರು ಒತ್ತಾಯಿಸಿದ್ದರು. ಮನೆಗೆ ಬಂದು ಮಾತನಾಡುವುದಾಗಿ ಬಾಲಕ ಹೇಳಿದ್ದ’ ಎಂದು ಮೂಲಗಳು
ಹೇಳಿವೆ.

ಕ್ಷಮೆ ಕೋರಿ, ನಂತರ ಹತ್ಯೆ:

‘ಮೇ 15ರಂದು ಪ್ರಬುದ್ಧಾ ಮನೆಗೆ ಹೋಗಿದ್ದ ಬಾಲಕ, ‘ಅಕ್ಕ, ನನ್ನಿಂದ ತಪ್ಪಾಗಿದೆ. ನನ್ನ ಬಳಿ ಈಗ ಹಣವಿಲ್ಲ. ಹಣವಿದ್ದಾಗ ಕೊಡುತ್ತೇನೆ’ ಎಂದು ಕಾಲಿಗೆ ಬಿದ್ದು ಕ್ಷಮೆ ಕೋರಿದ್ದ. ‘ಕ್ಷಮಿಸುವುದಿಲ್ಲ; ಹಣ ಕೊಡು’ ಎಂದು ಪ್ರಬುದ್ಧಾ ಹೇಳಿದ್ದರು. ಆಗ ಆರೋಪಿ, ಪ್ರಬುದ್ಧಾ ಅವರ ಕಾಲು ಎಳೆದು ಬೀಳಿಸಿದ್ದ.  ತಲೆಗೆ ತೀವ್ರ ಪೆಟ್ಟಾಗಿತ್ತು ಪ್ರಬುದ್ಧಾ ಪ್ರಜ್ಞೆ ಕಳೆದುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಪ್ರಬುದ್ಧಾ ಅವರು ಈ ಹಿಂದೆ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿಷಯ ಬಾಲಕನಿಗೆ ಗೊತ್ತಿತ್ತು. ಇದೇ ಕಾರಣಕ್ಕೆ ಈತ, ಪ್ರಬುದ್ಧಾ ಕೈಯಲ್ಲಿದ್ದ ಹಳೇ ಗಾಯದ ಕಲೆಯ ಮೇಲೆಯೇ ಪುನಃ ಬ್ಲೇಡ್‌ನಿಂದ ಕೊಯ್ದಿದ್ದ. ನಂತರ, ಕತ್ತಿನ ಭಾಗದಲ್ಲಿ ಬ್ಲೇಡ್‌ನಿಂದ ಕೊಯ್ದು ಮೃತದೇಹವನ್ನು ಸ್ನಾನದ ಕೊಠಡಿಯಲ್ಲಿ ಇರಿಸಿ ಪರಾರಿಯಾಗಿದ್ದ. ಇದೊಂದು ಆತ್ಮಹತ್ಯೆ ಎಂಬುದಾಗಿ ಬಿಂಬಿಸುವುದು ಬಾಲಕನ ಉದ್ದೇಶವಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಆತ್ಮಹತ್ಯೆ’ ಎಂದ ಪೊಲೀಸರು: ಕೊಲೆ ಎಂದಿದ್ದ ತಾಯಿ
‘ಪ್ರಬುದ್ಧಾ ಅವರದ್ದು ಆತ್ಮಹತ್ಯೆ ಇರಬಹುದು’ ಎಂಬುದಾಗಿ ಪೊಲೀಸರು ಆರಂಭದಲ್ಲಿ ಶಂಕೆ ವ್ಯಕ್ತಪಡಿಸಿದ್ದರು. ‘ಆತ್ಮಹತ್ಯೆ ಅಲ್ಲ, ಇದೊಂದು ಕೊಲೆ’ ಎಂಬುದಾಗಿ ಹೇಳಿದ್ದ ಪ್ರಬುದ್ಧಾ ತಾಯಿ ಕೆ.ಆರ್ ಸೌಮ್ಯಾ, ‘ನನ್ನ ಪುತ್ರಿ ಎಂತಹ ಪರಿಸ್ಥಿತಿಯನ್ನೂ ಧೈರ್ಯದಿಂದ ಎದುರಿಸುತ್ತಿದ್ದಳು. ಅವಳು ಆತ್ಮಹತ್ಯೆ ಮಾಡಿಕೊಳ್ಳುವಂಥ ಹುಡುಗಿ ಅಲ್ಲ. ಯಾರೋ ರಾಕ್ಷಸರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸಾವಿನ ಕುರಿತು ಅನುಮಾನವಿದ್ದು, ಸೂಕ್ತ ತನಿಖೆ ನಡೆಸಿ’ ಎಂದು ಪೊಲೀಸರನ್ನು ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT