ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೀಕೆ ನಿಲ್ಲಿಸದಿದ್ದರೆ ನನ್ನ ಶಕ್ತಿ ತೋರಿಸುವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ

ಕಸದ ಟೆಂಡರ್‌ ಪಡೆದರು: ಕುಮಾರಸ್ವಾಮಿಗೆ ಶಿವಲಿಂಗೇಗೌಡ ತಿರುಗೇಟು
Published : 10 ನವೆಂಬರ್ 2023, 13:40 IST
Last Updated : 10 ನವೆಂಬರ್ 2023, 13:40 IST
ಫಾಲೋ ಮಾಡಿ
Comments

ಹಾಸನ: ‘ಬಿಬಿಎಂಪಿಯಲ್ಲಿ ಕಸದ ಟೆಂಡರ್ ಪಡೆದವರು, ನನ್ನ ಹಿನ್ನೆಲೆಯನ್ನು ಪದೇ ಪದೇ ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ನನ್ನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವುದು ಸರಿಯಲ್ಲ. ರಾಜಕೀಯ ಅವರವರ ಇಷ್ಟ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು .

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ 2–3 ಬಾರಿ ಸಾರ್ವಜನಿಕವಾಗಿ ನನ್ನ ಹಿಂದಿನ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದು, ಮಜ್ಜಿಗೆ ಮಾರಾಟ ಮಾಡುತ್ತಿದ್ದವರು ಎಂದು ಅಪಹಾಸ್ಯ ಮಾಡಿದ್ದಾರೆ’ ಎಂದರು.

‘ಈ ರೀತಿ ಹೇಳುವ ಮೂಲಕ ಅವರ ಗೌರವವನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ. ನಾನು ರಾಜಕೀಯಕ್ಕೂ ಮುನ್ನ ಜೀವನೋಪಾಯಕ್ಕೆ ಈ ರೀತಿ ವ್ಯವಹಾರ ಮಾಡಿರಬಹುದು. ಅದನ್ನೇ ನೆಪವಾಗಿ ಇಟ್ಟುಕೊಂಡು ಹಿಯಾಳಿಸುವ ಕೆಲಸ ಮಾಡಬಾರದು. ಮತ್ತೊಬ್ಬರ ತೇಜೋವಧೆ ಬೇಡ’ ಎಂದು ಹೇಳಿದರು.

‘ನನ್ನ ಬಗ್ಗೆ ಮಾತನಾಡುವ ಅವರು. ಈ ಹಿಂದೆ ಬಿಬಿಎಂಪಿಯಲ್ಲಿ ಕಸ ಎತ್ತುವ ಟೆಂಡರ್‌ ಪಡೆದಿದ್ದರು. ಅದನ್ನು ನಾನು ಹೇಳಿದರೆ, ನನಗೂ ಅವರಿಗೂ ವ್ಯತ್ಯಾಸ ಇರುವುದಿಲ್ಲ’ ಎಂದರು.

‘ಕ್ಷೇತ್ರದ ಜನರ ಆಶಯದಂತೆ ನಾನು ಪಕ್ಷಾಂತರ ಮಾಡಿ ಕಾಂಗ್ರೆಸ್ ಸೇರಿದ್ದೇನೆ. ಆದರೆ ಇವರು ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದಾರೆ. ಅವರು ದೊಡ್ಡವರು. ನಾವು ಅದನ್ನು ಕೇಳಬಾರದೇ’ ಎಂದು ಪ್ರಶ್ನಿಸಿದರು .

ನಾನು ಜೆಡಿಎಸ್‌ನಲ್ಲಿ ಇದ್ದುಕೊಂಡು ಜಿಲ್ಲಾ ಪಂಚಾಯತಿ ಸದಸ್ಯನಾಗಿ, 3 ಬಾರಿ ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಆ ಪಕ್ಷದ ಬಗ್ಗೆ ನನಗೂ ಗೌರವವಿದೆ. ದೇವೇಗೌಡರ ಮೇಲೆಯೂ ಗೌರವವಿದ್ದು, ಕುಮಾರಸ್ವಾಮಿ ಒಬ್ಬರೇ ಏಕೆ ನನ್ನ ಮೇಲೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

‘ನಾನು ಕೂಲಿ ನಾಲಿ ಮಾಡಿ ಇಂದು ಈ ಹಂತಕ್ಕೆ ಬಂದು ನಿಂತಿದ್ದೇನೆ. ದೇವೇಗೌಡರು ಸಹ ಹಳ್ಳಿಯಿಂದ ದೆಹಲಿಗೆ ಹೋದವರು. ಆ ವಿಷಯದಲ್ಲಿ ನನಗೂ ಹೆಮ್ಮೆ ಇದೆ. ಪದೇ ಪದೇ ಕುಮಾರಸ್ವಾಮಿ ನನ್ನ ವಿರುದ್ಧ ಸಾರ್ವಜನಿಕವಾಗಿ ಅಪಹಾಸ್ಯ ಮಾಡುತ್ತಿದ್ದರೆ, ನನ್ನ ಶಕ್ತಿ ತೋರಿಸುತ್ತೇನೆ. ಬೀದಿಗೆ ಇಳಿದು ಹೋರಾಟ ಮಾಡುವ ಶಕ್ತಿ ನನ್ನಲ್ಲೂ ಇದೆ’ ಎಂದು ಸವಾಲು ಹಾಕಿದರು.

‘ಜೆಡಿಎಸ್ ವಿರುದ್ಧ ನಿಂತು ಗೆದ್ದಿದ್ದೇನೆ. ಅವರು ನನ್ನನ್ನು ಸೋಲಿಸಿದ್ದರೆ ಮನೆಗೆ ಹೋಗಲು ಸಿದ್ಧನಿದ್ದೆ. ಅದಕ್ಕಾಗಿಯೇ ಹೊಟ್ಟೆ ಉರಿ ಪಡುವುದು ಸರಿಯಲ್ಲ. ನೀವು ನನ್ನನ್ನು ಸೋಲಿಸಿ ಮನೆಗೆ ಹೋಗಲು ಸಿದ್ದ’ ಎಂದು ಸವಾಲು ಹಾಕಿದ ಶಿವಲಿಂಗೇಗೌಡ, ‘ದೇವೇಗೌಡರು ಪ್ರಧಾನಿ ಹುದ್ದೆಯಿಂದ ಇಳಿದಾಗ ವಾಜಪೇಯಿ ಅವರು ದೇವೇಗೌಡರನ್ನು ಕರೆದು, ನಾಲ್ಕು ವರ್ಷ ಪ್ರಧಾನಿಯಾಗಿ ನೀವೇ ಮುಂದುವರಿಯಿರಿ ಎಂದು ಹೇಳಿದ್ದರು. ಅಂದು ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾದವರು, ಇಂದು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು .

‘ನಾನು ನಾಟಕವಾಡುತ್ತ ತೆಂಗಿನ ಮರದ ಕೆಳಗೆ ಮಲಗಿದ್ದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಕ್ಷೇತ್ರದಲ್ಲಿ ತೆಂಗು ಬೆಳೆಗಾರರೇ ಶೇ 80ರಷ್ಟು ಮಂದಿ ಮತ ಹಾಕಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸುವುದು ಬೇಡವೇ? ಬೆಳೆಗಾರರ ಪರ ಸದನದಲ್ಲೂ ಚರ್ಚೆ ನಡೆಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT