ಆನಂದಪುರ: ಮದುವೆ ಆಗುವಂತೆ ಕೇಳಿದ್ದಕ್ಕೆ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಿ ಸಮೀಪದ ಮುಂಬಾಳು ಗ್ರಾಮದ ರೈಲ್ವೆ ಹಳಿ ಪಕ್ಕ ಶವ ಹೂತು ಹಾಕಿದ್ದ ಪ್ರಕರಣವನ್ನು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.
ಕೊಪ್ಪ ತಾಲ್ಲೂಕಿನ ಗುಣವಂತೆಯ ನರ್ಸಿಂಗ್ ವಿದ್ಯಾರ್ಥಿನಿ ಸೌಮ್ಯಾ (27) ಕೊಲೆಯಾದವರು. ಸಾಗರ ತಾಲ್ಲೂಕಿನ ತಾಳಗುಪ್ಪದ ಸೃಜನ್ ಆರೋಪಿ ಯುವಕ.
ತೀರ್ಥಹಳ್ಳಿಯ ಫೈನಾನ್ಸ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೃಜನ್, ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸೌಮ್ಯಾರನ್ನು ಪ್ರೀತಿಸಿದ್ದ. ಯುವತಿಯ ತಾಯಿ ಫೈನಾನ್ಸ್‌ನಲ್ಲಿ ಸಾಲ ಪಡೆದಿದ್ದರಿಂದ ವಸೂಲಿಗೆ ತೆರಳಿದ್ದ ಈತನಿಗೆ ಸೌಮ್ಯಾ ಪರಿಚಯ ಆಗಿದ್ದರು. ನಂತರ ಇಬ್ಬರೂ ಪರಸ್ಪರ ಪ್ರೀತಿಸತೊಡಗಿದ್ದರು.
ಪ್ರೀತಿಯ ವಿಷಯ ತನ್ನ ತಾಯಿಗೂ ಹೇಳಿ ಮದುವೆಗೆ ಒಪ್ಪಿಗೆ ಪಡೆದಿದ್ದ ಸೌಮ್ಯಾ ಮದುವೆಯಾಗುವಂತೆ ಪ್ರಿಯಕರನನ್ನು ಒತ್ತಾಯಿಸುತ್ತಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಕಾರಣ ಮದುವೆಗೆ ತನ್ನ ಮನೆಯಲ್ಲಿ ಪಾಲಕರು ಒಪ್ಪುವುದಿಲ್ಲ ಎಂದು ಸೃಜನ್ ಹೇಳುತ್ತಿದ್ದ. ಇದರಿಂದ ಮನನೊಂದು ಸೌಮ್ಯಾ ವರ್ಷದ ಹಿಂದೆ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಆಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರಿಂದ ವರ್ಷದ ನಂತರ ಮದುವೆ ಆಗುವುದಾಗಿ ಸೌಮ್ಯಾ ಮನೆಯವರಿಗೆ ಸೃಜನ್ ಭರವಸೆ ನೀಡಿದ್ದ ಎನ್ನಲಾಗಿದೆ.
ಜುಲೈ 2ರಂದು ಹೊಸನಗರ ತಾಲ್ಲೂಕಿನ ಹೆದ್ದಾರಿಪುರದ ಬಳಿ ಸೌಮ್ಯಾ ಹಾಗೂ ಸೃಜನ್ ಭೇಟಿ ಆಗಿದ್ದರು. ಆಗ ಮದುವೆ ವಿಚಾರದಲ್ಲಿ ಜಗಳ ಆಗಿದೆ. ಈ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಿದ ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಕಾರಿನಲ್ಲಿ ಶವ ತಂದು ಮುಂಬಾಳು ಬಳಿ ರೈಲ್ವೆ ಹಳಿ ಪಕ್ಕ ಚರಂಡಿ ನಿರ್ಮಿಸಲು ತೋಡಿದ್ದ ತಗ್ಗಿನಲ್ಲಿ ಹಾಕಿ ಮುಚ್ಚಿದ್ದ ಎಂದು ಪೊಲಿಸರು ತಿಳಿಸಿದ್ದಾರೆ.
ಸೌಮ್ಯಾ ಕಾಣೆಯಾಗಿರುವ ಬಗ್ಗೆ ಜುಲೈ 3ರಂದು ಮನೆಯವರು ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಕೆಯ ಮೊಬೈಲ್ ಫೋನ್ ಸಿಡಿಆರ್ ದಾಖಲೆಯ ಆಧಾರದ ಮೇಲೆ ಆರೋಪಿ ಸೃಜನ್‌ನನ್ನು ಕರೆತಂದ ಪಿಎಸ್‌ಐ ಶಿವರುದ್ರಮ್ಮ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣವನ್ನು ಕೊಪ್ಪ ಠಾಣೆಯಿಂದ ಸಾಗರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.