ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಡಿ ರಚನೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸದಸ್ಯರ ಸರಾಸರಿ ವಯಸ್ಸು 61 ವರ್ಷವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ, ಮಹಿಳೆಯರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ 66ರಷ್ಟು ಮೀಸಲಾತಿ ಸೌಲಭ್ಯ ದಕ್ಕಿದೆ.
90 ವರ್ಷದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸಮಿತಿಯಲ್ಲಿ ಇರುವ ಹಿರಿಯ ಸದಸ್ಯರಾದರೆ, 31ರ ಪ್ರಾಯದ ನೀರಜ್ ಕುಂದನ್ ಅತಿ ಕಿರಿಯ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುಂದನ್ ಅವರು ಎನ್‌ಎಸ್‌ಯುಐ ಮಾಜಿ ಅಧ್ಯಕ್ಷರಾಗಿದ್ದಾರೆ.
50 ವರ್ಷದ ಒಳಗಿರುವವರಿಗೆ ಸಮಿತಿಯ ಅರ್ಧದಷ್ಟು ಸದಸ್ಯತ್ವ ನೀಡುವುದಾಗಿ ಕಳೆದ ವರ್ಷ ಉದಯಪುರದಲ್ಲಿ ನಡೆದ ಪಕ್ಷದ ಚಿಂತನಾ ಶಿಬಿರದಲ್ಲಿ ಹೇಳಲಾಗಿತ್ತು. ಆದರೆ, ಈ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಆದರೆ, ರಾಯಪುರದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಎಸ್.ಸಿ, ಎಸ್.ಟಿ, ಒಬಿಸಿ, ಅಲ್ಪಸಂಖ್ಯಾತರು, ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸಲಾಗಿದೆ.
ಪಕ್ಷದ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಈ ಅತ್ಯುನ್ನತ ಸಮಿತಿಯಲ್ಲಿ ಎಸ್.ಸಿ 12, ಎಸ್.ಟಿ 4, ಹಿಂದುಳಿದ ವರ್ಗ 16, ಅಲ್ಪಸಂಖ್ಯಾತ ಸಮುದಾಯ 9 ಹಾಗೂ 15 ಮಹಿಳೆಯರು ಸೇರಿದಂತೆ ಸಾಮಾನ್ಯ ವರ್ಗದ 43 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ.
ಪ್ರಿಯಾಂಕಾ ಗಾಂಧಿ, ಸಚಿನ್ ಪೈಲಟ್, ದೀಪೇಂದರ್ ಹೂಡಾ, ಮೀನಾಕ್ಷಿ ನಟರಾಜನ್, ಪ್ರಣತಿ ಶಿಂದೆ, ಸುಪ್ರಿಯಾ ಶ್ರೀನತೆ, ಬಿ.ವಿ. ಶ್ರೀನಿವಾಸ್, ಅಲ್ಕಾ ಲಂಬಾ, ಫುಲೋ ದೇವಿ ನೇತಮ್, ಗುರುದೀಪ್ ಸಪ್ಪಲ್ ಸೇರಿದಂತೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 21 ಸದಸ್ಯರಿಗಷ್ಟೇ ಅವಕಾಶ ಸಿಕ್ಕಿದೆ.
ಸಮಿತಿಯ 39 ‘ಸಾಮಾನ್ಯ’ ಸದಸ್ಯರ ಸರಾಸರಿ ವಯಸ್ಸು 66 ವರ್ಷವಾಗಿದೆ. ರಾಜಕೀಯ ಅನುಭವವನ್ನು ಪರಿಗಣಿಸಿ ಮನಮೋಹನ್ ಸಿಂಗ್, ಎ.ಕೆ. ಆ್ಯಂಟನಿ, ಅಂಬಿಕಾ ಸೋನಿ ಸೇರಿದಂತೆ ಹಲವು ಹಿರಿಯರಿಗೆ ಮಣೆ ಹಾಕಲಾಗಿದೆ.