ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

11.9 ಲಕ್ಷದಷ್ಟು ಕೋವಿಡ್ ಸಾವು | ಸರ್ಕಾರದ ಲೆಕ್ಕಕ್ಕಿಂತ 8 ಪಟ್ಟು ಅಧಿಕ: ವರದಿ

ಕೋವಿಡ್: 2.6 ವರ್ಷ ಕುಗ್ಗಿದ ಜೀವಿತಾವಧಿ– ಅಧ್ಯಯನ ವರದಿ
Published : 19 ಜುಲೈ 2024, 23:13 IST
Last Updated : 19 ಜುಲೈ 2024, 23:13 IST
ಫಾಲೋ ಮಾಡಿ
Comments

ನವದೆಹಲಿ: ಭಾರತದಲ್ಲಿ 2020ರಲ್ಲಿ ಅಂದಾಜು 11.9 ಲಕ್ಷದಷ್ಟು ಹೆಚ್ಚುವರಿ ಕೋವಿಡ್-19 ಸಾವು ದಾಖಲಾಗಿದೆ. ಇದು ಸರ್ಕಾರದ ಅಧಿಕೃತ ಲೆಕ್ಕಕ್ಕಿಂತ ಎಂಟು ಪಟ್ಟು ಅಧಿಕ ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ.

ಕೋವಿಡ್‌ನ ಮೊದಲ ವರ್ಷದಲ್ಲಿ ಭಾರತದಲ್ಲಿ ಮುಸ್ಲಿಮರು, ಆದಿವಾಸಿಗಳು ಮತ್ತು ದಲಿತರು ಒಳಗೊಂಡಂತೆ ಸಮಾಜದ ಶೋಷಿತ ವರ್ಗದವರು ಹಾಗೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ ಎಂಬುದನ್ನು ಶುಕ್ರವಾರ ಪ್ರಕಟಗೊಂಡ ಅಧ್ಯಯನ ವರದಿ ಕಂಡುಕೊಂಡಿದೆ. 

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್‌ ಸಿಟಿ ವಿಶ್ವವಿದ್ಯಾಲಯದ ತಜ್ಞರ ತಂಡ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಕೋವಿಡ್‌ ಸಾಂಕ್ರಾಮಿಕವು ವಯಸ್ಸು, ಲಿಂಗ ಮತ್ತು ಸಮಾಜದ ವಿವಿಧ ವರ್ಗಗಳ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ಸರ್ಕಾರದ ಅಧಿಕೃತ ದತ್ತಾಂಶವನ್ನು ಬಳಸಿಕೊಂಡು ವಿಶ್ಲೇಷಿಸಲಾಗಿದೆ. 

‘ಮರಣ ಪ್ರಮಾಣವನ್ನು ವಯಸ್ಸು, ಲಿಂಗ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ನೋಡಿರುವುದರಿಂದ ನಮ್ಮ ಅಧ್ಯಯನವು ಇತರ ಅಧ್ಯಯನಗಳಿಗಿಂತ ಭಿನ್ನವಾಗಿದೆ. ಕೋವಿಡ್‌ ಪಿಡುಗು ಭಾರತದಲ್ಲಿ ಸಮಾಜದ ವಿವಿಧ ವರ್ಗಗಳ ಮೇಲೆ ಅಸಮಾನ ರೀತಿಯಲ್ಲಿ ಪರಿಣಾಮ ಬೀರಿದೆ ಎಂಬುದನ್ನು ಕಂಡುಕೊಳ್ಳಲು ಸಾಧ್ಯವಾಗಿದೆ’ ಎಂದು ಸಿಟಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞರಾದ ಸಂಗೀತಾ ವ್ಯಾಸ್‌ ತಿಳಿಸಿದರು.

ಭಾರತದಲ್ಲಿ 2020ರಲ್ಲಿ ಕೋವಿಡ್‌ನಿಂದ ಸುಮಾರು 8 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿ ತಿಳಿಸಿತ್ತು. ಕೇಂದ್ರ ಸರ್ಕಾರವು ಮೃತಪಟ್ಟವರ ಸಂಖ್ಯೆ 1.50 ಲಕ್ಷ ಎಂದು ಹೇಳಿತ್ತು.

‘ಡಬ್ಲ್ಯುಎಚ್‌ಒ ವರದಿಗಿಂತ ಒಂದೂವರೆ ಪಟ್ಟು ಅಧಿಕ ಹಾಗೂ ಸರ್ಕಾರದ ಅಧಿಕೃತ ಅಂಕಿ–ಅಂಶಕ್ಕಿಂತ ಎಂಟು ಪಟ್ಟು ಅಧಿಕ ಮಂದಿ ಮೃತಪಟ್ಟಿರುವುದನ್ನು ನಮ್ಮ ಅಧ್ಯಯನ ತಂಡ ಅಂದಾಜು ಮಾಡಿದೆ’ ಎಂದು ವ್ಯಾಸ್‌ ಹೇಳಿದ್ದಾರೆ.

ಕುಗ್ಗಿದ ಜೀವಿತಾವಧಿ:

ಕೋವಿಡ್ ಪಿಡುಗಿನ ಪರಿಣಾಮದಿಂದ ಭಾರತದಲ್ಲಿ ಜನರ ಜೀವಿತಾವಧಿಯು ಕುಗ್ಗಿದೆ. ಸಮಾಜದ ವಿವಿಧ ವರ್ಗಗಳಲ್ಲಿ ಜೀವಿತಾವಧಿ ಎಷ್ಟು ಕುಗ್ಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮುಸ್ಲಿಮರು (5.4 ವರ್ಷ) ಹೆಚ್ಚು ತೊಂದರೆಗೆ ಒಳಗಾಗಿರುವುದು ಕಂಡುಬಂದಿದೆ. 

ಪರಿಶಿಷ್ಟ ಪಂಗಡದವರ ಜೀವಿತಾವಧಿಯು 4.1 ವರ್ಷ ಹಾಗೂ ಪರಿಶಿಷ್ಟ ಜಾತಿಯವರ ಜೀವಿತಾವಧಿ 2.7 ವರ್ಷದಷ್ಟು ಕುಗ್ಗಿದೆ ಎಂದು ವರದಿ ತಿಳಿಸಿದೆ. 

ಪುರುಷರ ಜೀವಿತಾವಧಿ 3.1 ವರ್ಷ ಹಾಗೂ ಮಹಿಳೆಯರ ಜೀವಿತಾವಧಿಯಲ್ಲಿ 2.1 ವರ್ಷಗಳಷ್ಟು ಕುಸಿತ ಕಂಡಿದೆ. ಕೋವಿಡ್‌ನಿಂದಾಗಿ ಒಟ್ಟಾರೆಯಾಗಿ ಭಾರತದಲ್ಲಿ ಜೀವಿತಾವಧಿಯು 2.6 ವರ್ಷಗಳು ಕುಗ್ಗಿದೆ. ಇದಕ್ಕೆ ಹೋಲಿಸಿದರೆ, ಮೇಲ್ವರ್ಗದ ಹಿಂದೂಗಳು ಮತ್ತು ಇತರೆ ಹಿಂದುಳಿದ ವರ್ಗಗಳಲ್ಲಿ (ಒಬಿಸಿ) ಜೀವಿತಾವಧಿಯು 1.3 ವರ್ಷಗಳಷ್ಟು ಕುಸಿತ ಕಂಡಿದೆ. 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT