ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

J &K ವಿಧಾನಸಭೆ ಚುನಾವಣೆ: ಕಾಂಗ್ರೆಸ್–ಎನ್‌ಸಿ ಮೈತ್ರಿ ಅಂತಿಮ– ಫಾರೂಕ್ ಅಬ್ದುಲ್ಲಾ

Published : 22 ಆಗಸ್ಟ್ 2024, 13:00 IST
Last Updated : 22 ಆಗಸ್ಟ್ 2024, 19:31 IST
ಫಾಲೋ ಮಾಡಿ
Comments

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಎಲ್ಲ 90 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಜತೆಗಿನ ಮೈತ್ರಿ ಅಂತಿಮಗೊಂಡಿದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಗುರುವಾರ ಪ್ರಕಟಿಸಿದ್ದಾರೆ.

ಮೈತ್ರಿ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಅಬ್ದುಲ್ಲಾ ಅವರ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ. ಸಭೆಯ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.

‘ನಾವು ಸೌಹಾರ್ದಯುತ ವಾತಾವರಣದಲ್ಲಿ ನಡೆಸಿದ ಸಭೆಯು ಫಲಪ್ರದವಾಗಿದೆ. ಕಾಂಗ್ರೆಸ್‌ ಮತ್ತು ಎನ್‌ಸಿ ನಡುವೆ ಎಲ್ಲ 90 ಕ್ಷೇತ್ರಗಳಲ್ಲೂ ಮೈತ್ರಿ ಆಂತಿಮಗೊಂಡಿದೆ’ ಎಂದು ಅಬ್ದುಲ್ಲಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ (ಸೆಪ್ಟೆಂಬರ್‌ 18, 25 ಮತ್ತು ಅಕ್ಟೋಬರ್‌ 1) ಮತದಾನ ನಡೆಯಲಿದ್ದು, ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಸೀಟು ಹಂಚಿಕೆ ಯಾವ ರೀತಿ ನಡೆಯಲಿದೆ ಎಂಬ ಪ್ರಶ್ನೆಗೆ, ‘ಮೊದಲ ಹಂತದ ಮತದಾನಕ್ಕೆ ಮುನ್ನ ಎಲ್ಲವೂ ಅಂತಿಮಗೊಳ್ಳಲಿದೆ’ ಎಂದು ಪ್ರತಿಕ್ರಿಯಿಸಿದರು. ತಮ್ಮ ಸ್ಪರ್ಧೆಯ ಬಗ್ಗೆ ಅವರು ಗುಟ್ಟು ಬಿಟ್ಟುಕೊಡಲಿಲ್ಲ.

ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಜತೆಗೆ ಚುನಾವಣಾ ಪೂರ್ವ ಅಥವಾ ಚುನಾವಣೆಯ ಬಳಿಕ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಅವರು ಸಂಪೂರ್ಣವಾಗಿ ತಳ್ಳಿ ಹಾಕಿಲ್ಲ.

‘ಮೊದಲು ನಾವು ಚುನಾವಣೆಯನ್ನು ಎದುರಿಸೋಣ. ಇಂತಹ ವಿಚಾರಗಳ ಬಗ್ಗೆ (ಪಿಡಿಪಿ ಜತೆಗೆ ಮೈತ್ರಿ) ಆ ಬಳಿಕ ನಿರ್ಧರಿಸೋಣ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯದ ಸ್ಥಾನಮಾನ: ಕಾಂಗ್ರೆಸ್‌ ಆದ್ಯತೆ’

ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನವನ್ನು ನೀಡುವುದು ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟದ ಆದ್ಯತೆಯಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಜನರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮರಳಿ ದೊರಕಿಸಿಕೊಡುವುದು ತಮ್ಮ ಪಕ್ಷದ ಗುರಿ ಎಂದು ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಬಹುದು ಎಂಬುದು ನಮ್ಮ ನಿರೀಕ್ಷೆಯಾಗಿತ್ತು. ಆದರೂ ಪರವಾಗಿಲ್ಲ, ಚುನಾವಣೆ ಘೋಷಣೆಯಾಗಿರುವುದು ಈ ದಿಸೆಯಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಎಂದು ಭಾವಿಸಿದ್ದೇವೆ. ರಾಜ್ಯದ ಸ್ಥಾನಮಾನ ಆದಷ್ಟು ಬೇಗ ಮರುಸ್ಥಾಪನೆಯಾಗಲಿದೆ ಎಂಬುದು ನಮ್ಮ ವಿಶ್ವಾಸ’ ಎಂದು ಹೇಳಿದರು.

‘ಕೇಂದ್ರಾಡಳಿತ ಪ್ರದೇಶಗಳು ರಾಜ್ಯಗಳಾಗಿ ಮಾರ್ಪಟ್ಟಿವೆ. ಆದರೆ ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು ಸ್ವಾತಂತ್ರ್ಯದ ಬಳಿಕ ಇದೇ ಮೊದಲು. ಜಮ್ಮು ಮತ್ತು ಕಾಶ್ಮೀರದ ಜನರು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮರಳಿ ಪಡೆಯುವುದು ನಮ್ಮ ಆದ್ಯತೆ ಎಂಬುದನ್ನು ರಾಷ್ಟ್ರೀಯ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT