ಜಮ್ಮು: ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜಮ್ಮು ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಇಂದು ಶ್ರೀನಗರಕ್ಕೆ ತೆರಳುವ ಕೈ ನಾಯಕರು ಬಳಿಕ ಜಮ್ಮುವಿಗೆ ಭೇಟಿ ನೀಡಿ ಪ್ರಮುಖ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹಮದ್ ಮಿರ್ ಪಿಟಿಐಗೆ ತಿಳಿಸಿದ್ದಾರೆ.
ಶ್ರೀನಗರದಲ್ಲಿ ಪಕ್ಷದ ನಾಯಕರು ಮತ್ತು 10 ಜಿಲ್ಲೆಗಳ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಜಮ್ಮುವಿನಲ್ಲಿಯೂ ಆ ಪ್ರದೇಶದ 10 ಜಿಲ್ಲೆಗಳ ಕಾರ್ಯಕರ್ತರೊಂದಿಗೆ ಚುನಾವಣಾ ತಯಾರಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಮಾಹಿತಿಯನ್ನು ಕಲೆಹಾಕಲಿದ್ದಾರೆ ಎಂದು ಮಿರ್ ಮಾಹಿತಿ ನೀಡಿದ್ದಾರೆ.
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೊದಲ ಹಂತದ ಮತದಾನ ಸೆ. 18ರಂದು ಆರಂಭವಾಗಲಿದೆ.