ರಾಂಚಿ: ಉತ್ತರ ಭಾರತ ಮತ್ತು ಈಶಾನ್ಯ ಭಾರತದ ಹಲವೆಡೆ ಬಿಸಿಲಿನ ಶಾಖ ಏರುತ್ತಿದ್ದು, ಜಾರ್ಖಂಡ್‌ನಲ್ಲಿ ಶಾಖಾಘಾತಕ್ಕೆ 4 ಮಂದಿ ಸಾವಿಗೀಡಾಗಿದ್ದಾರೆ. 1,326 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಖಾಘಾತಕ್ಕೆ ಒಳಗಾದ ರೋಗಿಗಳಿಗಾಗಿ ಎಲ್ಲ ಜಿಲ್ಲಾಸ್ಪತ್ರೆಗಳು ಮತ್ತು ಇತರೆ ಆಸ್ಪತ್ರೆಗಳಲ್ಲಿ ಹವಾ ನಿಯಂತ್ರಿತ ಕೊಠಡಿಗಳು ಮತ್ತು ಖಾಲಿ ಬೆಡ್‌ಗಳ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
ಪಲಮುವಿನಲ್ಲಿ ಮೂವರು ಮತ್ತು ಜೆಮ್‌ಶೆಡ್‌ಪುರದಲ್ಲಿ ಒಬ್ಬರು ಶಾಖಾಘಾತಕ್ಕೆ ಬಲಿಯಾಗಿದ್ದಾರೆ. ಇವರಲ್ಲಿ ಯಾರೂ ಸಹ ಆಸ್ಪತ್ರೆಯಲ್ಲಿ ಮೃತಪಟ್ಟಿಲ್ಲ. ಬಿಸಿಗಾಳಿ ಸಂಬಂಧಿತ ಸಮಸ್ಯೆಗೆ ಒಳಗಾಗಿರುವ ರಾಜ್ಯದ ವಿವಿಧ ಜಿಲ್ಲೆಗಳ 1,326 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಪೈಕಿ 63 ಮಂದಿ ಶಾಖಾಘಾತಕ್ಕೆ ಒಳಗಾಗಿರುವುದು ದೃಢಪಟ್ಟಿದೆ’ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕ ಡಾ. ಅಲೋಕ್ ತ್ರಿವೇದಿ ಹೇಳಿದ್ದಾರೆ.
ಜಾರ್ಖಂಡ್‌ನ 24 ಜಿಲ್ಲೆಗಳಲ್ಲಿ ಬಹುತೇಕ ಕಡೆ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದೆ. ದಾಲ್ಟೋಂಗಂಜ್ ಮತ್ತು ಗರ್ಹಾಗಳಲ್ಲಿ 47 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಶಾಖಾಘಾತವು ಪ್ರಾಣಿಗಳ ಮೇಲೂ ಪರಿಣಾಮ ಬೀರಿದ್ದು, ಹಜಾರಿಬಾಗ್, ರಾಂಚಿ, ಗರ್ಹಾ, ಪಲಮುಗಳಲ್ಲಿ ಬಾವುಲಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.