ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಿಧಾನ ಹತ್ಯಾ ದಿವಸ್‌ಗೆ ಖಂಡನೆ: ಜೂನ್‌ 4 ಮೋದಿ ಮುಕ್ತಿ ದಿವಸ್ ಎಂದ ಕಾಂಗ್ರೆಸ್

Published : 13 ಜುಲೈ 2024, 3:37 IST
Last Updated : 13 ಜುಲೈ 2024, 3:37 IST
ಫಾಲೋ ಮಾಡಿ
Comments

ನವದೆಹಲಿ: ಜೂನ್‌ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ (ಸಂವಿಧಾನದ ಹತ್ಯೆಯ ದಿನ) ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಈ ಕ್ರಮವನ್ನು ಕಟುವಾಗಿ ಟೀಕಿಸಿದ ಕಾಂಗ್ರೆಸ್ ಜೂನ್‌ 4ನ್ನು 'ಮೋದಿ ಮುಕ್ತಿ ದಿವಸ್' ಎಂದು ಆಚರಿಸಬೇಕು ಎಂದು ಕಿಡಿಕಾರಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಜೈರಾಮ್ ರಮೇಶ್, ಅಜೈವಿಕ ಪ್ರಧಾನಿಯ ಬೂಟಾಟಿಕೆಯಲ್ಲಿ ಮತ್ತೊಂದು ತಲೆಬರಹದ ಕಸರತ್ತು. ಮೊದಲು ಹತ್ತು ವರ್ಷಗಳ ಕಾಲ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಅವರಿಗೆ 2024ರ ಜೂನ್ 4 ರಂದು ಭಾರತದ ಜನರು ನಿರ್ಣಾಯಕ, ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ನೀಡಿದ್ದಾರೆ. ಈ ದಿನ ಇತಿಹಾಸದಲ್ಲಿ 'ಮೋದಿ ಮುಕ್ತಿ ದಿವಸ್' ಎಂದು ದಾಖಲಾಗುತ್ತದೆ ಎಂದು ಹೇಳಿದ್ದಾರೆ.

'ಇವರು ಭಾರತದ ಸಂವಿಧಾನ ಮತ್ತು ಅದರ ತತ್ವಗಳು, ಮೌಲ್ಯಗಳು ಮತ್ತು ಸಂಸ್ಥೆಗಳನ್ನು ವ್ಯವಸ್ಥಿತ ದಾಳಿಗೆ ಒಳಪಡಿಸಿದ ಅಜೈವಿಕ ಪ್ರಧಾನಿ. ಮನುಸ್ಮೃತಿಯಿಂದ ಸ್ಫೂರ್ತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ 1949ರ ನವೆಂಬರ್‌ನಲ್ಲಿ ಭಾರತದ ಸಂವಿಧಾನವನ್ನು ತಿರಸ್ಕರಿಸಿದ ಸೈದ್ಧಾಂತಿಕ ಪರಿವಾರದ ಅಜೈವಿಕ ಪ್ರಧಾನಿ. ಇವರಿಗೆ ಪ್ರಜಾಪ್ರಭುತ್ವ ಎಂದರೆ ಡೆಮೋ-ಕುರ್ಸಿ ಮಾತ್ರ' ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

2016ರ ನವೆಂಬರ್ 8ರಂದು, ಪ್ರಧಾನಿ ಮೋದಿಯವರು ನೋಟು ಅಮಾನ್ಯೀಕರಣವನ್ನು ಘೋಷಿಸಿದಾಗ ಮಾಡಿದ ಭಾಷಣದ ವಿಡಿಯೊವನ್ನು ರಮೇಶ್ ಅವರು ಹಂಚಿಕೊಂಡಿದ್ದಾರೆ. ಇನ್ನು ಮುಂದೆ, ಪ್ರತಿ ವರ್ಷ ನವೆಂಬರ್ 8 ರಂದು, ಭಾರತದ ಜನ 'ಆಜೀವಿಕ ಹತ್ಯಾ ದಿವಸ್ (ಜೀವನ ಹತ್ಯೆ ದಿನ)' ಆಚರಿಸುತ್ತಾರೆ. ಅದರ ಗೆಜೆಟ್ ಅಧಿಸೂಚನೆಯನ್ನು ಸಹ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜೂನ್‌ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ (ಸಂವಿಧಾನದ ಹತ್ಯೆಯ ದಿನ) ಎಂದು ಘೋಷಿಸಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರ ದುರುಪಯೋಗದ ವಿರುದ್ಧ ಹೋರಾಡಿದವರಿಗೆ ಆ ದಿನದಂದು ಗೌರವ ಸಲ್ಲಿಸಲಾಗುವುದು ಎಂದು ಸರ್ಕಾರ ಹೇಳಿದೆ.

ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ‘ಸಂವಿಧಾನ ಉಳಿಸಿ’ ಅಭಿಯಾನಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ ಎನ್ನಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT