ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections: ಕೌತುಕ ಮೂಡಿಸಿದ ನಿತೀಶ್‌ ನಡೆ

Published 27 ಜನವರಿ 2024, 0:23 IST
Last Updated 27 ಜನವರಿ 2024, 0:23 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮಹಾಘಟಬಂಧನ್‌ನಲ್ಲಿಯೇ ಮುಂದುವರಿಯುತ್ತಾರೋ ಅಥವಾ ಅದನ್ನು ತ್ಯಜಿಸಿ, ಬಿಜೆಪಿಯೊಂದಿಗೆ ಕೈ ಜೋಡಿಸಿ ಅಧಿಕಾರದಲ್ಲಿ ಉಳಿಯುತ್ತಾರೋ ಎಂಬ ಕುತೂಹಲ ಮುಂದುವರಿದಿದೆ.

ಇದರ ನಡುವೆಯೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಲು ನಿತೀಶ್‌ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ನಿತೀಶ್‌ ಅವರನ್ನು ಸಮಾಧಾನಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ ನಾಯಕರು ಪ್ರಯತ್ನಿಸಿದರು. ಸೋನಿಯಾ ಗಾಂಧಿ ಮತ್ತು ನಿತೀಶ್‌ ನಡುವೆ ದೂರವಾಣಿ ಮೂಲಕ ಮಾತುಕತೆ ಸಾಧ್ಯವಾಗಿಸಲು ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಪ್ರಯತ್ನಗಳು ವಿಳಂಬವಾಯಿತು ಎಂದು ಜೆಡಿಯು ಮೂಲಗಳು ಪ್ರತಿಕ್ರಿಯಿಸಿವೆ.

ಗಣರಾಜ್ಯೋತ್ಸವ ದಿನದಂದು ಬಿಹಾರದಲ್ಲಿನ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಂಡಂತೆ ಭಾಸವಾಯಿತು. ನಾನಾ ರೀತಿಯ ಊಹಾಪೋಹ, ವಂದಂತಿಗಳು ಹರಿದಾಡಿದವು. ಇನ್ನೇನು ನಿತೀಶ್‌ ಅವರು ಬಿಜೆಪಿಯೊಂದಿಗೆ ಕೈಜೋಡಿಸಲು ಭಾನುವಾರವೇ ದಿನ ನಿಗದಿಯಾಗಿದೆ ಎಂಬ ಮಾತುಗಳೆಲ್ಲ ಕೇಳಿಬಂದವು. ಇದಕ್ಕಾಗಿ ಪಕ್ಷಗಳು ತಮ್ಮ ಶಾಸಕರನ್ನು ಒಂದೆಡೆ ಸೇರಿಸುವ ಕಸರತ್ತನ್ನೂ ಆರಂಭಿಸಿವೆ ಎಂದೂ ತಿಳಿದುಬಂದಿತ್ತು. ಆದರೆ, ಈ ಬೆಳವಣಿಗೆಗಳ ಬಗ್ಗೆ ಪಕ್ಷಗಳಿಂದ ಯಾವುದೇ ಅಧಿಕೃತ ಹೇಳಿಕೆಗಳು ಮಾತ್ರ ಹೊರಬೀಳಲಿಲ್ಲ.

‘ಎಲ್ಲವೂ ಸರಿಯಿದೆ’:

ಇದಕ್ಕೆ ಪ್ರತಿಕ್ರಿಯಿಸಿದ್ದ ಜೆಡಿಯು ಬಿಹಾರದ ರಾಜ್ಯ ಘಟಕದ ಅಧ್ಯಕ್ಷ ಉಮೇಶ್‌ ಸಿಂಗ್ ಕುಶ್ವಾಹ, ‘ಮಹಾಘಟಬಂಧನ್‌ನಲ್ಲಿ ಎಲ್ಲವೂ ಸರಿಯಿದೆ. ಹರಡುತ್ತಿರುವುದೆಲ್ಲ ವದಂತಿಗಳು. ಅವುಗಳಲ್ಲಿ ಸತ್ಯಾಂಶವಿಲ್ಲ’ ಎಂದು ಸಮಜಾಯಿಷಿ ನೀಡಿದರು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಆರ್‌ಜೆಡಿ ಸಂಸದ ಮನೋಜ್‌ ಕೆ ಝಾ ಅವರು, ‘ನಿತೀಶ್‌ ಕುಮಾರ್‌ ಅವರೇ ಈ ಗೊಂದಲಗಳಿಗೆ ಆದಷ್ಟು ಬೇಗ ತೆರೆ ಎಳೆಯುತ್ತಾರೆ’ ಎಂದು ತಿಳಿಸಿದರು.

ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ ಸೂಚನೆ:

ಬಿಹಾರದ ಪೂರ್ಣೆಯಾದಲ್ಲಿ ನಡೆಯಲಿರುವ ಕಾಂಗ್ರೆಸ್‌ನ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್‌ ತನ್ನ ಎಲ್ಲ 19 ಶಾಸಕರಿಗೆ ಸೂಚಿಸಿದೆ. ಈ ಮೂಲಕ ಅದು ತನ್ನ ಶಾಸಕರು ಪಕ್ಷಾಂತರ ಮಾಡದಂತೆಯೂ ಕ್ರಮ ವಹಿಸಲು ಮುಂದಾಗಿದೆ.

ನಿತೀಶ್‌ಗೆ ಯಾಕೆ ಮುನಿಸು?
ಲೋಕಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ನಿತೀಶ್‌ ಅವರು ತೇಜಸ್ವಿ ಅವರಿಗೆ ಬಿಟ್ಟುಕೊಡಬೇಕು ಎಂದು ಈ ಹಿಂದೆ ಮಾತುಕತೆ ಆಗಿತ್ತು ಎನ್ನಲಾಗಿದೆ. ಆದರೆ ಅದಕ್ಕೀಗ ನಿತೀಶ್‌ ಅವರಿಗೆ ಮನಸ್ಸಿದ್ದಂತಿಲ್ಲ. ಅಲ್ಲದೆ ‘ಇಂಡಿಯಾ’ ಮೈತ್ರಿಕೂಟದ ಸಂಚಾಲಕ ಸ್ಥಾನ ಸೇರಿದಂತೆ ಇತರ ವಿಷಯಗಳಿಂದಾಗಿ ನಿತೀಶ್‌ ಮುನಿಸಿಕೊಂಡಿರಬಹುದು ಎಂದೂ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.  ಇದನ್ನು ಅಲ್ಲಗಳೆದಿರುವ ಜೆಡಿಯು ಮೂಲಗಳು ‘ಇಂಡಿಯಾ’ ಮೈತ್ರಿಕೂಟದ ಜೊತೆಗಿನ ಸಂವಹನ ಸ್ಥಗಿತವಾಗಿದೆ ಎಂದಿವೆ. ಆರ್‌ಜೆಡಿ ಮತ್ತು ಕಾಂಗ್ರೆಸ್‌ ಒಗ್ಗೂಡಿ ನಿತೀಶ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮುಂದಾದರೆ ತನ್ನ ಹಿತಾಸಕ್ತಿ ಕಾಪಾಡಿಕಕೊಳ್ಳುವುದು ಹೇಗೆ ಎಂಬುದು ಜೆಡಿಯುಗೆ ತಿಳಿದಿದೆ. ಹಿಂದೆಯೂ ಬಿಜೆಪಿ ತನ್ನ ರಾಜಕೀಯ ಭವಿಷ್ಯಕ್ಕೆ ಬೆದರಿಕೆಯೊಡ್ಡಿದಾಗ ಅದು ಎನ್‌ಡಿಎ ತೊರೆದು ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದನ್ನು ಮರೆಯಬಾರದು ಎಂದು ಮೂಲಗಳು ಹೇಳುತ್ತವೆ.
ಊಹಾಪೋಹಕ್ಕೆ ಕಾರಣ ಏನು?:
ಪಟ್ನಾದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಅವರು ದೂರದಲ್ಲಿ ಕುಳಿತಿದ್ದರು. ಇದು ಸರ್ಕಾರದ ಮೈತ್ರಿ ಪಕ್ಷಗಳ ನಡುವೆ ಬಿಕ್ಕಟ್ಟು ಮೂಡಿರಬಹುದು ಎಂಬುದನ್ನು ಬಿಂಬಿಸಿತು. ನಂತರ ರಾಜ್ಯಪಾಲರು ಆಯೋಜಿಸಿದ್ದ ಚಹಾ ಕೂಟದಲ್ಲಿ ನಿತೀಶ್‌ ಅವರು ಪಾಲ್ಗೊಂಡಿದ್ದರೆ ಉಪ ಮುಖ್ಯಮಂತ್ರಿ ಗೈರಾಗಿದ್ದರು. ಈ ಎರಡೂ ಬೆಳವಣಿಗೆಗಳು ಬಿಹಾರದ ರಾಜಕೀಯದಲ್ಲಿ ಊಹಾಪೋಹ ತೀವ್ರಗೊಳ್ಳುವಂತೆ ಮಾಡಿದವು. ‘ಎನ್‌ಡಿಎ ಬಾಗಿಲು ಮುಚ್ಚಿಲ್ಲ’: ಇದರ ಬೆನ್ನಲ್ಲೇ ಮಾಜಿ ಉಪ ಮುಖ್ಯಮಂತ್ರಿ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ‘ರಾಜಕೀಯದಲ್ಲಿ ಎಂದಿಗೂ ಶಾಶ್ವತವಾಗಿ ಬಾಗಿಲು ಮುಚ್ಚುವುದಿಲ್ಲ. ಸಮಯ ಬಂದಾಗ ಬಾಗಿಲು ತೆರೆಯುತ್ತದೆ. ಇದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಈ ಮೂಲಕ ಅವರು ಎನ್‌ಡಿಎ ಮೈತ್ರಿ ಸೇರಲು ಜೆಡಿಯು ಬಂದರೆ ಸ್ವಾಗತಿಸುವ ಸಂದೇಶವನ್ನು ರವಾನಿಸಿದರು. ಇದಕ್ಕೆ ಪೂರಕವಾಗಿ ‘ಬಿಹಾರದಲ್ಲಿ ಮಹಾಘಟಬಂಧನ್‌ ಸರ್ಕಾರವು ಹಾಗೆಯೇ ಉಳಿಯುವುದಿಲ್ಲ. ನಿತೀಶ್‌ ಕುಮಾರ್‌ ಅವರು ಮಿತ್ರಪಕ್ಷಗಳಾದ ಕಾಂಗ್ರೆಸ್‌ ಮತ್ತು ಆರ್‌ಜೆಡಿಯನ್ನು ಗುರಿಯಾಗಿಸಿಕೊಂಡೇ ವಂಶ ರಾಜಕಾರಣದ ಕುರಿತು ಹೇಳಿಕೆ ನೀಡಿದ್ದಾರೆ’ ಎಂದು ಹಿಂದೂಸ್ತಾನ್ ಅವಾಮ್‌ ಮೋರ್ಚಾದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ಹೇಳಿಕೆ ನೀಡಿದರು. ‘ಬಿಹಾರದ ರಾಜಕೀಯ ವಾತಾವರಣದ ಬಗ್ಗೆ ಹೆಚ್ಚಿಗೆ ಹೇಳಲು ಏನೂ ಇಲ್ಲ. ವಂಶಾಡಳಿತದ ರಾಜಕೀಯಕ್ಕೆ ಸಂಬಂಧಿಸಿದಂತೆ ನಿತೀಶ್‌ ಅವರು ಹೇಳಿಕೆ ನೀಡಿದ ಬಳಿಕವೂ ಅವರೆಲ್ಲ ಒಗ್ಗಟ್ಟಾಗಿ ಉಳಿಯುತ್ತಾರೆ ಎಂದು ನೀವು ಭಾವಿಸುತ್ತೀರಾ’ ಎಂದು ಅವರು ಸುದ್ದಿಗಾರರನ್ನೇ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT