ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ.ಬಂಗಾಳ ರಾಜ್ಯಪಾಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರಪತಿಗೆ ಮಹಿಳೆ ಪತ್ರ

Published 10 ಮೇ 2024, 11:24 IST
Last Updated 10 ಮೇ 2024, 11:24 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ರಾಜಭವನದ ಮಹಿಳಾ ಸಿಬ್ಬಂದಿ, ನ್ಯಾಯ ಕೊಡಿಸುವಂತೆ ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಮಹಿಳೆಯ ಆರೋಪವನ್ನು ಅಲ್ಲಗಳೆದಿದ್ದ ರಾಜ್ಯಪಾಲ ಆನಂದ ಬೋಸ್, ರಾಜಭವನದ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯನ್ನು ಸಾರ್ವಜನಿಕರಿಗೆ ಗುರುವಾರ ಬಹಿರಂಗಪಡಿಸಿದ್ದರು.

ಇದರಲ್ಲಿ ತನ್ನ ಗುರುತನ್ನು ಮರೆಮಾಚಿಲ್ಲ. ಇದರಿಂದ ದೌರ್ಜನ್ಯಕ್ಕೊಳಗಾದ ನನ್ನ ಗುರುತು ಬಹಿರಂಗಗೊಳಿಸಿ ಮಾನಹಾನಿ ಮಾಡಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ರಾಷ್ಟ್ರಪತಿ ಅವರನ್ನು ಕೋರಿದ್ದಾರೆ.

ಕೋಲ್ಕತ್ತ ಪೊಲೀಸರ ಮೇಲೆ ಹೆಚ್ಚಿನ ಭರವಸೆ ಇಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಹಸ್ತಕ್ಷೇಪದಿಂದಾಗಿ ಪೊಲೀಸರ ಕೈ ಕಟ್ಟಿಹಾಕಿದಂತಾಗಿದೆ. ಈ ಪ್ರಕರಣದಲ್ಲಿ ತಾನು ತೀರಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ರಾಷ್ಟ್ರಪತಿ ಅವರಲ್ಲಿ ನ್ಯಾಯ ಕೋರುವುದೊಂದೇ ಉಳಿದಿರುವ ಮಾರ್ಗ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಪ್ರಧಾನಿಗೆ ಪತ್ರ ಬರೆಯುವುದು ವ್ಯರ್ಥ

ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೆರವನ್ನು ಕೋರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂತ್ರಸ್ತೆ, ‘ಘಟನೆ ನಡೆದ ದಿನ ಪ್ರಧಾನಿ ಅವರು ರಾಜಭವನದಲ್ಲಿ ಉಳಿಯುವ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆದರೆ ಆ ದಿನ ಒತ್ತಡಕ್ಕೊಳಗಾಗಿ ನಾನು ಪ್ರತಿಭಟಿಸಿದ್ದೆ. ಪ್ರಧಾನಿ ಅವರ ಭದ್ರತಾ ಸಿಬ್ಬಂದಿ ಇದಕ್ಕೆ ಸಾಕ್ಷಿಯಾಗಿದ್ದಾರೆ. ಅವರು ಖಂಡಿತವಾಗಿಯೂ ಪ್ರಧಾನಿಗೆ ಈ ಮಾಹಿತಿ ಮುಟ್ಟಿಸಿರುತ್ತಾರೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಅವರಿಗೆ ಪತ್ರ ಬರೆಯುವುದು ವ್ಯರ್ಥವೆಂದು ತೋರುತ್ತದೆ’ ಎಂದಿದ್ದಾರೆ.

ಕಂಪ್ಯೂಟರ್ ಅಪ್ಲಿಕೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಸಂತ್ರಸ್ತೆ ಸದ್ಯ ತೀವ್ರ ಮಾನಸಿಕ ಒತ್ತಡದಲ್ಲಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

‘ಏ. 24 ಹಾಗೂ ಮೇ 2ರಂದು ರಾಜ್ಯಪಾಲ ಬೋಸ್ ನನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದಿಂದ ನಾನು ಆಘಾತ ಮತ್ತು ಅವಮಾನಗಳಿಂದ ಜರ್ಜರಿತಳಾಗಿದ್ದೇನೆ. ಮಧ್ಯಮವರ್ಗದ ಕುಟುಂಬದಿಂದ ಬಂದ ನನ್ನ ಬದುಕಿನಲ್ಲಿ ಇಂಥದ್ದೊಂದು ಸ್ಥಿತಿ ಎದುರಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ನನಗೆ ಹಾಗೂ ನನ್ನ ಪಾಲಕರಿಗೆ ಇದೊಂದು ದುಃಸ್ವಪ್ನವಾಗಿದೆ. ಈ ಪರಿಸ್ಥಿತಿಯಿಂದ ನನ್ನನ್ನು ನಾನು ಹೊರಕ್ಕೆ ತರಲು ಮಾನಸಿಕ ತಜ್ಞರ ಭೇಟಿ ಮಾಡಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.

ತೀರಾ ಅಸಹ್ಯಕರ ರೀತಿಯಲ್ಲಿ ರಾಜ್ಯಪಾಲರ ವರ್ತನೆ: ಆರೋಪ

‘ನನ್ನ ಅನುಮತಿಯೇ ಇಲ್ಲದೆ ರಾಜ್ಯಪಾಲರು ಸಿಸಿಟಿವಿ ದೃಶ್ಯವಾವಳಿಯನ್ನು ಸಾರ್ವಜನಿಕವಾಗಿ ಹೇಗೆ ಪ್ರದರ್ಶಿಸಿದರು? ಹಾಗೆ ಮಾಡುವ ಮೂಲಕ ಅವರು ಮತ್ತೊಂದು ಅಪರಾಧ ಎಸಗಿದ್ದಾರೆ. ಕೋಲ್ಕತ್ತ ಪೊಲೀಸರು ಆರಂಭದಲ್ಲಿ ತನಿಖೆ ನಡೆಸುವುದಾಗಿ ಹೇಳಿದ್ದರು. ಆದರೆ ಸಂವಿಧಾನವು ರಾಜ್ಯಪಾಲರಿಗೆ ಯಾವುದೇ ರೀತಿಯ ಅಪರಾಧ ಪ್ರಕರಣಗಳಿಂದ ರಕ್ಷಣೆ ನೀಡಿದೆ. ಈ ಪ್ರಕರಣದಲ್ಲಿ ರಾಜ್ಯಪಾಲರು ತೀರಾ ಅಸಹ್ಯಕರ ರೀತಿಯಲ್ಲಿ ವರ್ತಿಸಿದ್ದಾರೆ. ನಂತರ ತಮ್ಮ ತಪ್ಪು ಮರೆಮಾಚಲು ನಾಟಕವಾಡಿದ್ದಾರೆ’ ಎಂದು ಸಂತ್ರಸ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಭವನದ ಉತ್ತರ ದಿಕ್ಕಿನಲ್ಲಿರುವ ಮುಖ್ಯ ದ್ವಾರದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮೇ 2ರಂದು ಸಂಜೆ 5.32 ಹಾಗೂ 6.41ರ ನಡುವಿನ ದೃಶ್ಯಗಳನ್ನು ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಕೆಲ ಜನರು ಹಾಗೂ ಪತ್ರಿಕರ್ತರಿಗೆ ರಾಜಭವನದ ಸೆಂಟ್ರಲ್ ಮಾರ್ಬಲ್ ಹಾಲ್‌ನಲ್ಲಿ ಪ್ರದರ್ಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT