ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮ–ಮಂಡಳಿ ನೇಮಕ ಪಟ್ಟಿ ಸೋರಿಕೆ: ಸಿಡಿದೆದ್ದ ಸಚಿವರು

Published 23 ಜನವರಿ 2024, 21:03 IST
Last Updated 23 ಜನವರಿ 2024, 21:03 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಇಲಾಖೆ ವ್ಯಾಪ್ತಿಯ ನಿಗಮ–ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡುವ ಮುನ್ನ ತಮ್ಮ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಸಚಿವರು ಸಿಡಿದೆದ್ದಿದ್ದಾರೆ.

ಸರ್ಕಾರ ಬಂದು ಆರು ತಿಂಗಳು ಕಳೆದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಹುದ್ದೆಗಳನ್ನು ಕೊಟ್ಟಿಲ್ಲ ಎಂಬ ಒಡಲುರಿ ಕಾಂಗ್ರೆಸ್‌ ಅನ್ನು ಕಂಗೆಡಿಸಿದೆ. ಅದರ ಮಧ್ಯೆಯೇ, ಪಕ್ಷದ ವರಿಷ್ಠರು ಮತ್ತು ರಾಜ್ಯ ನಾಯಕರ ಮಧ್ಯೆ ಜಟಾಪಟಿ ಹೊಸ ಬಿಕ್ಕಟ್ಟನ್ನು ಸರ್ಕಾರ ಮತ್ತು ಪಕ್ಷದಲ್ಲಿ ಸೃಷ್ಟಿಸಿದೆ.

‍ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ವಿವೇಚನೆಗೆ ಬಿಡಬೇಕಾದ ನೇಮಕಾತಿಯ ಹೊಣೆ ಯನ್ನು ಪ್ರಧಾನ ಕಾರ್ಯದರ್ಶಿ ವಹಿಸಿಕೊಂಡಿರುವುದಕ್ಕೆ ತಕರಾರು ತೆಗೆದಿರುವ ಕೆಲವು ಸಚಿವರು, ಕೆ.ಸಿ.ವೇಣುಗೋಪಾಲ್ ಹೆಸರು ಹೇಳದೆಯೇ ಅವರ ವಿರುದ್ಧ ಅತೃಪ್ತಿ ಹೊರಹಾಕಿದ್ದಾರೆ.

ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ ಸೋರಿಕೆಯಾಗಿರುವ ನೇಮಕ ಪಟ್ಟಿಯಲ್ಲಿರುವ ಹೆಸರುಗಳಿಗೆ ಸಂಬಂಧಿಸಿದಂತೆ ಸುಮಾರು 17 ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಸಹಿ ಹೊಂದಿದ್ದ 37 ಶಾಸಕರು ಮತ್ತು 39 ಕಾರ್ಯಕರ್ತರ ಹೆಸರು ಇದ್ದ ಪಟ್ಟಿ ಇನ್ನೇನು ಬಿಡುಗಡೆ ಆಗಬೇಕು ಎನ್ನುವ ಕ್ಷಣದಲ್ಲಿ ಸೋರಿಕೆಯಾಗಿತ್ತು. ಆ ಪಟ್ಟಿಯಲ್ಲಿದ್ದ ಶಾಸಕರ ಹೆಸರಿನ ಮುಂದೆ ನಿಗಮ–ಮಂಡಳಿಯ ಹೆಸರುಗಳೂ ಇದ್ದವು.

ಆದರೆ, ಕಾರ್ಯಕರ್ತರ ಹೆಸರಿನ ಪಟ್ಟಿಯಲ್ಲಿ ಒಬ್ಬರ ಹೆಸರು ಹೊರತುಪಡಿಸಿ, ಉಳಿದವರಿಗೆ ಯಾವ ನಿಗಮ–ಮಂಡಳಿ ನೀಡಲಾಗಿದೆ ಎಂಬ ಉಲ್ಲೇಖವೇ ಇರಲಿಲ್ಲ.

ಲೋಕಸಭೆ ಚುನಾವಣೆಗೆ ಕಾರ್ಯ ತಂತ್ರ ರೂಪಿಸಲು ಕೆಪಿಸಿಸಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಸಮಿತಿ ಸಭೆಯ ಬಳಿಕ ಪಟ್ಟಿ ಪ್ರಕಟಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಪಟ್ಟಿ ಪ್ರಕಟಗೊಳ್ಳುವ ಬದಲು, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ ಸಿಂಗ್‌ ಸುರ್ಜೇವಾಲಾ ಅವರ ಸೂಚನೆಯಂತೆ ತಡೆಹಿಡಿಯಲಾಗಿದೆ ಎಂಬ ಸಂದೇಶ ರವಾನೆಯಾಗಿತ್ತು. ವರಿಷ್ಠರು ಕಳುಹಿಸಿದ್ದ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿ, ಮರುಪರಿಶೀಲಿಸುವಂತೆ ಸೂಚಿಸಿದ್ದರು. ಈ ಪಟ್ಟಿಗೆ ಬಹುತೇಕ ಸಚಿವರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

‘ಎಲ್ಲರ ಅಭಿಪ್ರಾಯ ಪಡೆಯಲಾಗದು’
‘ನೇಮಕ ಮಾಡುವ ಮುನ್ನ ಎಲ್ಲರ ಅಭಿಪ್ರಾಯ ಪಡೆಯಲು ಕಷ್ಟವಾಗುತ್ತದೆ. ಪರಮೇಶ್ವರ ಜೊತೆ ನಾನು ಮಾತನಾಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ನಿಗಮ ಮಂಡಳಿಗಳಿಗೆ ಶಾಸಕರ ಹೆಸರು ಅಂತಿಮ ಗೊಳಿಸಲಾಗಿದೆ. ಕಾರ್ಯಕರ್ತರ ನೇಮಕದ ಬಗ್ಗೆ ನಾನು ಮತ್ತು ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿದ್ದೇವೆ. ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಬಳಿ ಪಟ್ಟಿ ಇದೆ. ಕೆ.ಸಿ. ವೇಣುಗೋಪಾಲ್‌ ಅವರ ಸಹಿ ಆಗಬೇಕಿದೆ’ ಎಂದು ಹೇಳಿದರು.

‘ತಮ್ಮ ಖಾತೆಯ ಅಡಿಯಲ್ಲಿರುವ ನಿಗಮಗಳನ್ನು ಶಾಸಕರಿಗೆ ಹಂಚಿಕೆ ಮಾಡುವಾಗ ಕುಳಿತು ಚರ್ಚಿಸಬೇಕಿತ್ತು. ಸೌಜನ್ಯಕ್ಕಾದರೂ ಅಭಿಪ್ರಾಯ ಕೇಳಬೇಕಿತ್ತು. ಪರಸ್ಪರ ಹೊಂದಿಕೊಂಡು ಹೋಗುವವರನ್ನು ನೇಮಿಸುವ ಬಗ್ಗೆ ಪರಿಶೀಲಿಸಬೇಕಿತ್ತು. ಅದ್ಯಾವುದನ್ನೂ ಮಾಡದೆ, ದೆಹಲಿಯಲ್ಲಿ ಕುಳಿತು ಶಾಸಕರಿಗೆ ನಿಗಮಗಳನ್ನು ಹಂಚಿಕೆ ಮಾಡಲಾಗಿದೆ’ ಎಂಬುದು ಸಚಿವರ ತಕರಾರು ಎಂದು ಮೂಲಗಳು ಹೇಳಿವೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ನಿವಾಸದಲ್ಲಿ ಇತ್ತೀಚೆಗೆ ಸಭೆ ಸೇರಿದ 10ಕ್ಕೂ ಹೆಚ್ಚು ಸಚಿವರು, ನಿಗಮ– ಮಂಡಳಿ ನೇಮಕದ ಬಗ್ಗೆ ಚರ್ಚೆ ನಡೆಸಿದ್ದಾರೆ. ಲೋಕೋಪಯೋಗಿ, ಕೈಗಾರಿಕೆ, ಸಮಾಜ ಕಲ್ಯಾಣ ಸೇರಿದಂತೆ ಕೆಲವು ಖಾತೆಗಳ ಅಡಿಯಲ್ಲಿರುವ ನಿಗಮಗಳಿಗೆ ಹೆಚ್ಚಿನ ಮೊತ್ತದ ಅನುದಾನ ಹಂಚಿಕೆಯಾಗುತ್ತದೆ. ಅದರಲ್ಲೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌), ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌), ಅಂಬೇಡ್ಕರ್‌ ಅಭಿವೃದ್ಧಿ ನಿಗಮಗಳ ಅಧ್ಯಕ್ಷ ಸ್ಥಾನ ‘ಆಯಕಟ್ಟು’ ಹುದ್ದೆಗಳು ಎಂದೇ ಗುರುತಿಸಿಕೊಂಡಿವೆ. ಇಲಾಖೆ ಗಳಿಗೆ ಹಂಚಿಕೆಯಾದ ಅನುದಾನದಲ್ಲಿ ದೊಡ್ಡ ಮೊತ್ತ ಇಂತಹ ನಿಗಮಗಳಿಗೆ ಹೋಗುತ್ತದೆ. ಹೀಗಾಗಿ, ಈ ನಿಗಮಗಳಿಗೆ ಶಾಸಕರನ್ನು ನೇಮಿಸುವ ವೇಳೆ ಸಮಾಲೋಚನೆ ನಡೆಸಬೇಕಿತ್ತು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದೂ ಗೊತ್ತಾಗಿದೆ.

ಜಿಲ್ಲಾವಾರು ಹಂಚಿಕೆಯಾಗಲಿ: ಉಡುಪಿಯಲ್ಲಿ ಮಂಗಳವಾರ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ‘ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ನವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಧಿಕಾರ ಸಮಾನವಾಗಿ ಜಿಲ್ಲಾವಾರು ಹಂಚಿಕೆ ಆಗಬೇಕು’ ಎಂದರು.

‘ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಕುರಿತು ಚರ್ಚೆ ನಡೆದಿದ್ದು, ಶೀಘ್ರ ಜವಾಬ್ದಾರಿ ಹಂಚಿಕೆಯಾಗಲಿದೆ’ ಎಂದೂ ತಿಳಿಸಿದರು.

ನಿಗಮ– ಮಂಡಳಿಗೆ ನೇಮಕ ಸಂದರ್ಭದಲ್ಲಿ ಎಲ್ಲರ ಅಭಿಪ್ರಾಯವನ್ನು ಪಡೆದು, ಮಾರ್ಗಸೂಚಿ ನಿಗದಿ ಮಾಡಿದ್ದು, ಅದರಂತೆ ಎಲ್ಲರಿಗೂ ಅಧಿಕಾರ ಹಂಚಲಾಗುವುದು.
–ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ

ಪ್ರಧಾನ ಕಾರ್ಯದರ್ಶಿ ಪಟ್ಟಿ; ಪರಮೇಶ್ವರ ಹೊಸ ಪಟ್ಟು

‘ನಿಗಮ–ಮಂಡಳಿಗೆ ಆಯ್ಕೆ ವಿಚಾರದ ಜವಾಬ್ದಾರಿಯನ್ನು ಮುಖ್ಯಮಂತ್ರಿ ಮತ್ತು ಪಕ್ಷದ ‌ಅಧ್ಯಕ್ಷರಿಗೆ ಬಿಡಬೇಕು. ಅವರು ಜಿಲ್ಲಾ ನಾಯಕರ ಜತೆ ಮಾತನಾಡಿ ಪಟ್ಟಿ ಮಾಡಬೇಕು. ಅದರೆ, ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಯವರೇ ಮಾಡುತ್ತಿದ್ದಾರೆ.‌ ಹೀಗಾಗಿ‌, ಪಟ್ಟಿ ಸಿದ್ಧಪಡಿಸುವುದು ನಿಧಾನವಾಗಿದೆ. ಏನು ಮಾಡುತ್ತಾರೆಂದು ನೋಡೋಣ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಿಗಮ- ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವಾಗ ನಮ್ಮ ಅಭಿಪ್ರಾಯ ವನ್ನು ಯಾರೂ ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿದ್ದೇನೆ. ಆದರೆ, ನಮ್ಮ ಜತೆ ಮಾತನಾಡಿ ಪಟ್ಟಿ ಮಾಡಿಲ್ಲ’ ಎಂದರು.

‘ನಾನು ಕೂಡಾ ಎಂಟು ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ. ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮುಖಂಡರ ಕೆಲಸ ನಮಗೆ ಗೊತ್ತಿರುತ್ತದೆ. ಹತ್ತಾರು ವರ್ಷ ಪಕ್ಷಕ್ಕೆ ದುಡಿದವರಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರುವುದರಿಂದ ಹೀಗೆ ಆಗಿದೆ. ಕೆಲಸ ಮಾಡದವರಿಗೆ ಅಧಿಕಾರ ಕೊಟ್ಟರೆ, ಕೆಲಸ ಮಾಡಿರುವವರಿಗೆ ನೋವು, ಅಸಮಾಧಾನವಾಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಲಹೆಗಳನ್ನು ಕೇಳಬೇಕಾಗುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT