ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ ಇಲಾಖೆ: ವರ್ಗಾವಣೆಗೆ ಈ ಬಾರಿ ಕೌನ್ಸೆಲಿಂಗ್‌

Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಲ್ಲ ವೃಂದಗಳಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಕೌನ್ಸೆಲಿಂಗ್‌ ಮೂಲಕ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಕಳೆದ ಐದು ಸಾಲುಗಳಲ್ಲಿ (2019ರಿಂದ 2023) ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರೂಪ್‌ ‘ಎ’, ‘ಬಿ’,  ‘ಸಿ’ ಮತ್ತು ‘ಡಿ’ ವೃಂದದ ಅಧಿಕಾರಿ, ನೌಕರರ ವೃಂದ ಬಲ ಮೀರದಂತೆ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ನಡೆಸಲು ಅನುಮತಿ ಕೋರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆಯುಕ್ತರು ಪ್ರಸ್ತಾವ ಸಲ್ಲಿಸಿದ್ದಾರೆ.

ಪ್ರತಿವರ್ಷ ಏಪ್ರಿಲ್‌, ಮೇ ತಿಂಗಳಲ್ಲಿ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ಆದರೆ, ಈ ಬಾರಿ, ಲೋಕಸಭೆ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವುರಿಂದ ಈ ಪ್ರಕ್ರಿಯೆಗೆ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. 

‘2024–25ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಗಳನ್ನು ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ) ನಿಯಂತ್ರಣ ಕಾಯ್ದೆಯಂತೆ ಅರ್ಜಿ ಆಹ್ವಾನಿಸಿ, ಮಾರ್ಗಸೂಚಿಗಳ ಪ್ರಕಾರ ಕೌನ್ಸೆಲಿಂಗ್‌ ನಡೆಸಿ ವರ್ಗಾವಣೆಗಾಗಿ ಅಧಿಸೂಚನೆ ಹೊರಡಿಸಲು ಅನುಮತಿ ನೀಡಬೇಕು. ವಿವಿಧ ವೃಂದಗಳಲ್ಲಿ ಕೋರಿಕೆ ವರ್ಗಾವಣೆಗಳಿಗೆ ಅರ್ಜಿ ಸಲ್ಲಿಸಿದ ಅಧಿಕಾರಿ, ನೌಕರರನ್ನು ವರ್ಗಾವಣೆಗೆ ಪರಿಗಣಿಸಿ, ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿಗೆ ಅನುಮತಿ ನೀಡಬೇಕು’ ಎಂದೂ ಪ್ರಸ್ತಾವದಲ್ಲಿ ಆಯುಕ್ತರು ಕೋರಿದ್ದಾರೆ.

2015–16 ಮತ್ತು 2016– 2017ನೇ ಸಾಲುಗಳಲ್ಲಿ ನಡೆದ ವರ್ಗಾವಣೆ ಸಮಯದಲ್ಲಿ 10 ವರ್ಷಕ್ಕೂ ಹೆಚ್ಚು ಅವಧಿಯಿಂದ ಒಂದೇ ಸ್ಥಳದಲ್ಲಿ ಸುದೀರ್ಘ ಅವಧಿಯಿಂದ ಕರ್ತವ್ಯ ಸಲ್ಲಿಸುತ್ತಿದ್ದ ‘ಎ’ ವೃಂದದ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ‘ಬಿ’, ‘ಸಿ’ ಮತ್ತು ‘ಡಿ’ ವೃಂದಗಳ ಹುದ್ದೆಗಳನ್ನು ಖಾಲಿ ಹುದ್ದೆಗಳೆಂದು ಪ್ರಕಟಿಸಿ (ದೀರ್ಘ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ವಯೋನಿವೃತ್ತಿಗೆ ಎರಡು ವರ್ಷ ಸೇವೆ ಬಾಕಿ ಇರುವವರನ್ನು ಹೊರತುಪಡಿಸಿ) ಕೌನ್ಸೆಲಿಂಗ್‌ ಮೂಲಕ ಆ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಆ ಸ್ಥಳಗಳನ್ನು ಆಯ್ಕೆ ಮಾಡಿಕೊಂಡವರು ಕರ್ತವ್ಯಕ್ಕೆ ಹಾಜರಾದ ಬಳಿಕ, ಹುದ್ದೆಯಲ್ಲಿದ್ದವರನ್ನು ಬಿಡುಗಡೆ ಮಾಡಿ ಆಯುಕ್ತಾಲಯದಲ್ಲಿ ವರದಿ ಮಾಡಿಕೊಂಡ ಬಳಿಕ ಅವರುಗಳಿಗೆ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿತ್ತು. ಅದೇ ಪದ್ಧತಿಯನ್ನು ಈ ಬಾರಿಯೂ ಅಳವಡಿಸಿಕೊಳ್ಳಲು ಪ್ರಸ್ತಾವದಲ್ಲಿ ಆಯುಕ್ತರು ಅನುಮತಿ ಕೋರಿದ್ದಾರೆ.

ಜೂನ್‌ 10ರಂದು ವರ್ಗಾವಣೆ ಅಧಿಸೂಚನೆ, 12ರಿಂದ 26ರವರೆಗೆ ಅರ್ಜಿ ಸ್ವೀಕಾರ, ಜುಲೈ 18ರಿಂದ ವೃಂದವಾರು ಕೌನ್ಸೆಲಿಂಗ್‌ ಪ್ರಕ್ರಿಯೆ, 31ರಂದು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ತಾತ್ಕಾಲಿಕ ವೇಳಾಪಟ್ಟಿಯನ್ನೂ ಪ್ರಸ್ತಾವದಲ್ಲಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT