ಬೆಂಗಳೂರು: ‘ಅಹಿಂದ ಸಮುದಾಯದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನವನ್ನು ಬಿಜೆಪಿ– ಜೆಡಿಎಸ್‌ನವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರ ತುಮಕೂರಿನಲ್ಲಿ ಶೀಘ್ರದಲ್ಲಿ ಮೆರವಣಿಗೆ ಮಾಡುತ್ತೇವೆ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಪರ ಅಹಿಂದ ಹೋರಾಟ ರಾಜ್ಯದಾದ್ಯಂತ ವಿಸ್ತರಣೆ ಆಗಲೂಬಹುದು’ ಎಂದರು.
‘ಮುಖ್ಯಮಂತ್ರಿ ವಿರುದ್ಧ ಬಿಜೆಪಿ-ಜೆಡಿಎಸ್‌ನವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮುಡಾ ಹಗರಣ ತನಿಖೆಯಾಗಿ, ಸತ್ಯ ಹೊರಬರಲಿ. ಅಲ್ಲಿಯವರೆಗೆ ವಿರೋಧ ಪಕ್ಷದವರು ತಾಳ್ಮೆಯಿಂದ ಇರಲಿ’ ಎಂದರು.
‘ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಿದ್ದೆ. ಕೊಟ್ಟರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದೂ ಹೇಳಿದ್ದೆ. ಆ ಮಾತಿಗೆ ನಾನು ಈಗಲೂ ಬದ್ಧ’ ಎಂದೂ ಹೇಳಿದರು.