ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಭಕ್ತರನ್ನು ಬಂಧಿಸಿ ಕಿರುಕುಳ ಆರೋಪ: ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ

Published 4 ಜನವರಿ 2024, 0:35 IST
Last Updated 4 ಜನವರಿ 2024, 0:35 IST
ಅಕ್ಷರ ಗಾತ್ರ

ಬೆಂಗಳೂರು/ಹುಬ್ಬಳ್ಳಿ: ‘ಹುಬ್ಬಳ್ಳಿಯಲ್ಲಿ 31 ವರ್ಷ ಹಳೆಯ ಪ್ರಕರಣದಲ್ಲಿ ರಾಮಭಕ್ತರನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕವು ಬೆಂಗಳೂರು, ಹುಬ್ಬಳ್ಳಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ, ಹುಬ್ಬಳ್ಳಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ವಿಜಯೇಂದ್ರ, ‘ರಾಮಭಕ್ತರನ್ನು ಬಂಧಿಸುವ ಮೂಲಕ ಹಿಂದೂಗಳ ಹಕ್ಕುಗಳನ್ನು ದಮನ ಮಾಡುವ ಮತ್ತು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಆ ಬಳಿಕ ರಾಜ್ಯಪಾಲ ಥಾವರ ಚಂದ್ ಗೆಹೆಲೋತ್ ಅವರನ್ನು ಭೇಟಿ ಮಾಡಿ ಮನವಿ ಪತ್ರವೊಂದನ್ನು ಸಲ್ಲಿಸಿದರು.

ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ‘ಶ್ರೀರಾಮನ ವಿರುದ್ಧದ ಕಾಂಗ್ರೆಸ್ ನೀತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಜನರು ಒಗ್ಗಟ್ಟಾಗಿದ್ದಾರೆ. ಹಿಂದೂಗಳು ತೂಕಡಿಕೆ ಬಿಡಬೇಕು. ಸಿದ್ದರಾಮಯ್ಯ ಸರ್ಕಾರ ಕೀಳುಮಟ್ಟದ ರಾಜಕಾರಣ ಬಿಡಬೇಕು’ ಎಂದು ತಿಳಿಸಿದರು.

ಸರ್ಕಾರ ಹೆಚ್ಚು ಸಮಯ ಇರಲ್ಲ:

ಹುಬ್ಬಳ್ಳಿ ಪ್ರತಿಭಟನೆಯಲ್ಲಿ ಮಾತನಾಡಿದ ಆರ್.ಅಶೋಕ, ರಾಮಭಕ್ತರ ಬಂಧನ ಇದೇ ರೀತಿ ಮುಂದುವರೆಸಿದರೆ, ರಾಜ್ಯ ಸರ್ಕಾರ ಹೆಚ್ಚು ಸಮಯ ಅಧಿಕಾರದಲ್ಲಿ ಇರಲ್ಲ’ ಎಂದು ಎಚ್ಚರಿಕೆ ನೀಡಿದರು.

‘ವೀರಶೈವ, ಲಿಂಗಾಯತ ಸಮುದಾಯವನ್ನು ಒಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಹಿಂದೂ–ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ರಾಯಭಾರಿ ಆಗಿದ್ದಾರೆ. ಮತಾಂಧ ಟಿಪ್ಪು ಸಂಸ್ಕೃತಿ ಹೇರಲು ಹೊರಟಿದ್ದಾರೆ. ಇದು ಕಾಂಗ್ರೆಸ್‌ ಮನೆಯನ್ನು ಸುಡುತ್ತದೆ’ ಎಂದರು.

‘ಶ್ರೀರಾಮನ ಕೆಣಕಿದರೆ ಹನುಮಂತ ಸುಮ್ಮನೆ ಬಿಡಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸದಂತೆ
ನ್ಯಾಯಾಲಯದಲ್ಲಿ ಅರ್ಜಿ ಹಾಕಿದವರ ಹಿಂದೆ ಕಾಂಗ್ರೆಸ್‌ ಇತ್ತು. ರಾಮಾಯಣ ಕಾಲ್ಪನಿಕ ಕಥೆ ಎಂದಿದ್ದ ಅವರು ರಾಮನ ಜನನ ಪ್ರಮಾಣಪತ್ರ ಕೇಳಿದ್ದರು. ನಾವೇನು ಇತರೆ ಧರ್ಮಗಳ ದೇವರ ಜನನ ಪ್ರಮಾಣಪತ್ರ ಕೇಳಿದ್ದೇವೆಯೇ’ ಎಂದು ಅವರು ಛೇಡಿಸಿದರು.

ವಾರಂಟ್‌ ನೀಡಿಲ್ಲ: ‘ಶ್ರೀ

ಕಾಂತ ಪೂಜಾರಿ ಅವರನ್ನು ಬಂಧಿಸುವ ಮುನ್ನ ವಾರಂಟ್‌ ನೀಡಿಲ್ಲ. ವಕೀಲರನ್ನು ಸಂಪರ್ಕಿಸಲು ಅವಕಾಶ ನೀಡಿಲ್ಲ. 1992ರಲ್ಲಿ ನಡೆದ ಗಲಭೆ ಸಂಬಂಧ ದೂರೂ ಇಲ್ಲ, ಎಫ್‌ಐಆರ್‌ ಪ್ರತಿಯೂ ಠಾಣೆಯಲ್ಲಿ ಇಲ್ಲ. ನಿಮಗೆ ಕಾನೂನು ಜ್ಞಾನ ಇದೆಯೇ? ಜಾಮೀನು ಸಿಗದಂತೆ ಕುತಂತ್ರ ಮಾಡಿ, ಬಂಧಿಸಿದ್ದಾರೆ. ರಾಜ್ಯದ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ದೀರ್ಘ ಕಾಲದಿಂದ ಬಾಕಿಯುಳಿದಿರುವ 69 ಸಾವಿರ ‌ಪ್ರಕರಣಗಳಿವೆ. ಎಲ್ಲರನ್ನೂ ಬಂಧಿಸಿದ್ದೀರಾ?’ ಎಂದರು.

ಬೆಳಗಾವಿ, ವಿಜಯಪುರ, ಬಾಗಲ ಕೋಟೆ, ಹಾವೇರಿ, ಗದಗ, ಉತ್ತರ ಕನ್ನಡ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಯಿತು.

‘ಇದೇ 9 ರಂದು ಠಾಣೆಗೆ ಮುತ್ತಿಗೆ’

ಬೆಂಗಳೂರು: ‘ಶ್ರೀಕಾಂತ ಪೂಜಾರಿ ಅವರನ್ನು ಬಿಡುಗಡೆ ಮಾಡದಿದ್ದರೆ ಇದೇ 9 ರಂದು ಹುಬ್ಬಳ್ಳಿ ಶಹರ ಪೊಲೀಸ್‌ ಠಾಣೆಗೆ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗುವುದು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ತಿಳಿಸಿದರು.

‘ನಮ್ಮನ್ನೂ ಬಂಧಿಸಿ’

ಹುಬ್ಬಳ್ಳಿ: ‘1992ರಲ್ಲಿ ನಡೆದ ಗಲಭೆ ಪ್ರಕರಣ ಮುಗಿದ ಅಧ್ಯಾಯ. ಆದರೆ, ಸಿದ್ದರಾಮಯ್ಯ ಚಿತಾವಣೆಯಿಂದ ಕರಸೇವಕನನ್ನು ಬಂಧಿಸಲಾಗಿದೆ. ಇದು ಕಾಂಗ್ರೆಸ್‌ ಹೇಡಿತನ. ನಾನು ಮತ್ತು ಯಡಿಯೂರಪ್ಪ ಆ ಹೋರಾಟದಲ್ಲಿ ಇದ್ದೆವು. ನಮ್ಮನ್ನೂ ಬಂಧಿಸಿ’ ಎಂದು ಆರ್‌. ಅಶೋಕ ಅವರು ಸವಾಲು ಹಾಕಿದರು.

‘ರಾಮಭಕ್ತರು ನಿಮಗೆ ಅಪರಾಧಿಗಳಂತೆ ಕಾಣುತ್ತಾರೆ. ರಾಹುಲ್ ಗಾಂಧಿ ವಿರುದ್ಧ ಎಷ್ಟು ಪ್ರಕರಣಗಳಿವೆ? ಅಮ್ಮ (ಸೋನಿಯಾ ಗಾಂಧಿ), ಮಗ (ರಾಹುಲ್ ಗಾಂಧಿ) ಇಬ್ಬರೂ ಜಾಮೀನಿನಲ್ಲಿ ಇದ್ದಾರೆ. ರಾಹುಲ್‌ಗೆ ಜೈಲು ಶಿಕ್ಷೆಯಾದರೆ ಬೀದಿಗಿಳಿದು ಪ್ರತಿಭಟಿಸುತ್ತೀರಿ. ಕುಕ್ಕರ್ ಬಾಂಬ್ ಹಾಕಿದವನನ್ನು ‘ಬ್ರದರ್’ ಅನ್ನುತ್ತೀರಿ’ ಎಂದು ವ್ಯಂಗ್ಯವಾಡಿದರು.

‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 175 ಪ್ರಕರಣಗಳನ್ನು ವಾಪಸ್ ಪಡೆದಿರಿ. ಪೊಲೀಸ್ ಠಾಣೆಗೆ ನುಗ್ಗಿದವರು, ಕಮಿಷನರ್ ಕಾರು ಜಖಂಗೊಳಿಸಿ ದವರು, ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ದಾಂದಲೆ ಮಾಡಿದವರನ್ನು ಅಮಾಯಕರು ಎಂದು ಕರೆದು, ಅವರ ಬಿಡುಗಡೆಗೆ ‘ಪ್ರೇಮಪತ್ರ’ ಬರೆದ ನಿಮಗೆ ನಾಚಿಕೆ ಆಗಬೇಕು’ ಎಂದು ಅವರು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT