ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಠಾಣಾಧಿಕಾರಿಗೆ ಬೆದರಿಕೆ: BJP ಶಾಸಕ ಹರೀಶ್‌ ಪೂಂಜ ವಿರುದ್ಧ ಪ್ರಕರಣ ದಾಖಲು

ಅಕ್ರಮ ಕಲ್ಲುಗಣಿಗಾರಿಕೆ ಆರೋಪಿ ಬಿಡುಗಡೆಗೆ ಆಗ್ರಹಿಸಿ ಠಾಣಾಧಿಕಾರಿಗೆ ಬೆದರಿಕೆ
Published 19 ಮೇ 2024, 14:49 IST
Last Updated 19 ಮೇ 2024, 14:49 IST
ಅಕ್ಷರ ಗಾತ್ರ

ಬೆಳ್ತಂಗಡಿ (ದಕ್ಷಿಣ ಕನ್ನಡ): ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಯ ಬಿಡುಗಡೆಗೆ ಆಗ್ರಹಿಸಿ ಇಲ್ಲಿನ ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿಗೆ ಅವಾಚ್ಯವಾಗಿ ಬೈದು, ಬೆದರಿಕೆ ಒಡ್ಡಿದ ಆರೋಪದ ಮೇಲೆ ಶಾಸಕ ಹರೀಶ್ ಪೂಂಜ ವಿರುದ್ಧ ಭಾನುವಾರ ಎಫ್‌ಐಆರ್‌ ದಾಖಲಾಗಿದೆ.

‘ಹರೀಶ್‌ ಪೂಂಜ ಅವರು ಆರೋಪಿಯನ್ನು ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿದ್ದಾರೆ’ ಎಂದು ಪೊಲೀಸರು ಆರೋಪಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 353 (ಅಧಿಕಾರಿ ಮೇಲೆ ಹಲ್ಲೆ ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸುವಿಕೆ) ಮತ್ತು ಸೆಕ್ಷನ್‌ 504ರ (ಉದ್ದೇಶ ಪೂರ್ವಕವಾಗಿ ಅವಮಾನಗೊಳಿಸುವುದು ಮತ್ತು ಸಾರ್ವಜನಿಕ ಶಾಂತಿ ಕದಡಲು ಪ್ರಚೋದಿಸುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಪ್ರತಿಭಟನೆ

ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಪ್ರತಿಭಟನೆ

ತಾಲ್ಲೂಕಿನ ಮೇಲಂತಬೆಟ್ಟು ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆ ತಹಶೀಲ್ದಾರ್‌ ಪೃಥ್ವಿ ಸಾನಿಕಂ ನೀಡಿದ ದೂರಿನ ಅನ್ವಯ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಬೆಳ್ತಂಗಡಿ ಠಾಣೆಯ ಪೊಲೀಸರು ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಶನಿವಾರ ದಾಳಿ ನಡೆಸಿದ್ದರು. ಅಕ್ರಮ ಗಣಿಗಾರಿಕೆ ನಡೆಸಿದ ಹಾಗೂ ಅದಕ್ಕಾಗಿ ಅಪಾಯಕಾರಿ ಸ್ಫೋಟಕಗಳನ್ನು ದಾಸ್ತಾನು ಮಾಡಿದ್ದ ಕುರಿತು ಪ್ರಮೋದ್‌ ಉಜಿರೆ ಹಾಗೂ ರೌಡಿ ಶೀಟರ್‌ ಶಶಿರಾಜ್‌ ಶೆಟ್ಟಿ (35 ವರ್ಷ) ವಿರುದ್ಧ 1884ರ ಸ್ಫೋಟಕ ಕಾಯ್ದೆ 9ಬಿ (1) (ಬಿ) (ಸ್ಫೋಟಕ ಹೊಂದಿರುವುದು, ಬಳಸುವುದು, ಮಾರಾಟ ಮಾಡುವುದು ಅಥವಾ ಸಾಗಾಣೆ) ಹಾಗೂ 1908ರ ಸ್ಫೋಟಕ ಸಾಮಗ್ರಿ ಕಾಯ್ದೆಯಡಿ (ಜನರಿಗೆ ಮತ್ತು ಆಸ್ತಿ ಪಾಸ್ತಿಗೆ ಹಾನಿಯುಂಟು ಮಾಡಬಲ್ಲ ಯಾವುದೇ ವಿಶೇಷ ಮಾದರಿಯ ಸ್ಫೋಟಕ ಸಾಮಗ್ರಿ ಹೊಂದುವುದು) ಶನಿವಾರ ಎಫ್‌ಐಆರ್‌ ದಾಖಲಿಸಿದ್ದರು. ಆರೋಪಿ ಪ್ರಮೋದ್‌ ಉಜಿರೆ ತಲೆಮರೆಸಿಕೊಂಡಿದ್ದು, ಇನ್ನೊಬ್ಬ ಆರೋಪಿ, ಬಿಜೆಪಿಯ ಬೆಳ್ತಂಗಡಿ ಮಂಡಲದ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆಯೇ ಶಾಸಕ ಹರೀಶ್ ಪೂಂಜ ಬೆಂಬಲಿಗರ ಜೊತೆ ಠಾಣೆಗೆ ಶನಿವಾರ ತಡರಾತ್ರಿ ತೆರಳಿದ್ದರು. ಆರೋಪಿ ಶಶಿರಾಜ್‌ ಶೆಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಪೊಲೀಸರು ಕೋರಿದರೂ ಅದಕ್ಕೊಪ್ಪದ ಪೂಂಜ ಠಾಣೆಯ ಒಳಗೆ ನೆಲದಲ್ಲಿ ಕುಳಿತು ಕೆಲಹೊತ್ತು ಧರಣಿ ನಡೆಸಿದ್ದರು. ‘ಕಾಂಗ್ರೆಸ್‌ ಏಜೆಂಟರಂತೆ ವರ್ತಿಸುತ್ತಿರುವ ಬೆಳ್ತಂಗಡಿ ಪೊಲೀಸ್‌ ಅಧಿಕಾರಿಗಳಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದ್ದರು. ಈ ವೇಳೆ ಪೂಂಜ ಮಾತನಾಡಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಅವರು ಪೊಲೀಸ್‌ ಅಧಿಕಾರಿಗೆ ಬೆದರಿಕೆ ಹಾಕಿದ ದೃಶ್ಯಗಳು ಸೆರೆಯಾಗಿವೆ.

‘ಠಾಣೆ ಏನು ನಿಮ್ಮ ಅಪ್ಪನದಾ. ನಮ್ಮ ಸರ್ಕಾರ ಬರುತ್ತದಲ್ಲಾ ಆವಾಗ ನಿಮ್ಮನ್ನು ನೋಡುತ್ತೇನೆ’ ಎಂದು ಬೆದರಿಕೆ ಒಡ್ಡಿದ್ದ ದೃಶ್ಯವೂ ವಿಡಿಯೋದಲ್ಲಿದೆ.

ಶಶಿರಾಜ್ ಶೆಟ್ಟಿ

ಶಶಿರಾಜ್ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT