ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

VTU ಘಟಿಕೋತ್ಸವ: ISRO ಅಧ್ಯಕ್ಷ ಸೋಮನಾಥ್‌ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

Published : 15 ಜುಲೈ 2024, 11:33 IST
Last Updated : 15 ಜುಲೈ 2024, 11:33 IST
ಫಾಲೋ ಮಾಡಿ
Comments

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ 24ನೇ ವಾರ್ಷಿಕ ಘಟಿಕೋತ್ಸವ ಜುಲೈ 18ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌ ಹೇಳಿದರು.

‘ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕ ಪ್ರೊ. ಗೋವಿಂದನ್‌ ರಂಗರಾಜನ್‌ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ ಉಪಸ್ಥಿತರಿರುವರು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೂವರಿಗೆ ಗೌರವ ಡಾಕ್ಟರೇಟ್‌: ‘ಚಿಕ್ಕಬಳ್ಳಾಪುರದ ಮಧುಸೂದನ್‌ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಸದ್ಗುರು ಮಧುಸೂದನ್‌ ಸಾಯಿ, ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್‌. ಸೋಮನಾಥ್‌, ಬೆಂಗಳೂರಿನ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರಿ ಕೆ. ಮರಾರ್‌ ಅವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಲಾಗುವುದು. ವಿವಿಧ ರಂಗಗಳಲ್ಲಿ ಮಾಡಿದ ಸಾಧನೆ ಪರಿಗಣಿಸಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದರು.

‘ಒಟ್ಟು 52,615 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಪೈಕಿ 51,084 ವಿದ್ಯಾರ್ಥಿಗಳಿಗೆ (ಸ್ವಾಯತ್ತ ಮಹಾವಿದ್ಯಾಲಯದ 15,387 ವಿದ್ಯಾರ್ಥಿಗಳು) ಬಿ.ಇ, 45 ವಿದ್ಯಾರ್ಥಿಗಳಿಗೆ ಬಿ.ಟೆಕ್‌, 8 ವಿದ್ಯಾರ್ಥಿಗಳಿಗೆ ಬಿ.ಪ್ಲ್ಯಾನ್‌, 1,138 ವಿದ್ಯಾರ್ಥಿಗಳಿಗೆ (ಸ್ವಾಯತ್ತ ಮಹಾವಿದ್ಯಾಲಯದ 169 ವಿದ್ಯಾರ್ಥಿಗಳು) ಬಿ.ಆರ್ಕ್‌ ಮತ್ತು 40 ವಿದ್ಯಾರ್ಥಿಗಳಿಗೆ ಸಂಶೋಧನಾ ಪದವಿ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.

‘ಬಿ.ಇ ಪರೀಕ್ಷೆ ಎದುರಿಸಿದವರಲ್ಲಿ ಶೇ 79.40 ಯುವಕರು, ಶೇ 95.62 ಯುವತಿಯರು ಪಾಸಾಗಿದ್ದಾರೆ. ಕಳೆದ ಸಲ ಉತ್ತೀರ್ಣ ಪ್ರಮಾಣ ಶೇ 82.97ರಷ್ಟಿತ್ತು. ಈ ಬಾರಿ ಶೇ 85.83ಕ್ಕೆ ಏರಿದೆ. ಕಳೆದ ಬಾರಿ ಎಸ್‌ಸಿ/ಎಸ್‌ಟಿಯ ಶೇ 53.59 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಆ ಪ್ರಮಾಣವೂ ಶೇ 74.55ಕ್ಕೆ ಏರಿದೆ’ ಎಂದರು.

ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್‌.ಶ್ರೀನಿವಾಸ ಇತರರಿದ್ದರು.

ಸಾಹಿಲ್ ಸೋಮನಾಚೆ

ಸಾಹಿಲ್ ಸೋಮನಾಚೆ

ಪ್ರಜಾವಾಣಿ ಚಿತ್ರ

ಸಾಹಿಲ್‌ಗೆ 12 ಚಿನ್ನದ ಪದಕ

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಎಂ.ಎಸ್‌. ಶೇಷಗಿರಿ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್‌ ವಿಭಾಗದ ಸಾಹಿಲ್‌ ಸೋಮನಾಚೆ 12 ಚಿನ್ನದ ಪದಕ ಗಳಿಸಿ ಮೊದಲಿಗರಾಗಿದ್ದಾರೆ.

ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಜಿ. ವಿಷ್ಣುಪ್ರಿಯಾ 10, ಬೆಂಗಳೂರಿನ ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್ಸ್‌ ವಿಭಾಗದ ಜಿ.ರೇಷ್ಮಾ, ಇದೇ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಎಲ್‌.ಮೋಹನಕುಮಾರ್‌, ಬಳ್ಳಾರಿಯ ಬಳ್ಳಾರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಮ್ಯಾನೇಜ್‌ಮೆಂಟ್‌ನ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ವಿಭಾಗದ ಜಿ.ಹೃತಿಕಾ ಅವರು ತಲಾ ಏಳು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಬೆಂಗಳೂರಿನ ಏಟ್ರಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕೃತಿಕಾ ಸೆಂಥಿಲ್‌, ಆರ್‌ಎನ್‌ಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪಿ.ಅನುಶ್ರೀ ತಲಾ ನಾಲ್ಕು, ಕೆಜಿಎಫ್‌ನ ಡಾ.ಟಿ.ತಿಮ್ಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎನ್‌.ಮಾಲತೇಶ, ದಾವಣಗೆರೆಯ ಜಿ.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಡಿ.ಜನನಿ ಮತ್ತು ಮಂಗಳೂರಿನ ಶ್ರೀದೇವಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸೌರವ್‌ ಇಂಗಳೆ ತಲಾ ಎರಡು ಚಿನ್ನದ ಪದಕ ಪಡೆದಿದ್ದಾರೆ ಎಂದು ವಿವರಿಸಿದರು.

ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಮಂಗಳೂರಿನ ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಸ್ನಾತಕ ವಿಭಾಗದಲ್ಲಿ ತಲಾ 19 ರ್‍ಯಾಂಕ್‌ ಗಳಿಸಿ ಸಾಧನೆ ಮೆರೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT