ಲಾಹೋರ್: ‘ದೇಶದಲ್ಲಿ ಮೇ 9ರಂದು ನಡೆದಿದ್ದ ಹಿಂಸಾಚಾರ ಕುರಿತಂತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಡೆಯು ‘ಉಗ್ರ ಸಂಘಟನೆಗಳ’ ಕಾರ್ಯಕ್ಕೆ ಸಮಾನವಾದುದು ಎಂದು ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮೇ 9ರಂದು ದೇಶದ ಸೇನಾ ನೆಲೆಗಳು, ಸರ್ಕಾರಿ ಆಸ್ತಿಗಳ ಮೇಲೆ ದಾಳಿಗೆ ಇಮ್ರಾನ್ ಪ್ರಚೋದಿಸಿದ್ದರು. ತಮ್ಮ ಬಿಡುಗಡೆಗೆ ಒತ್ತಡ ಹೇರಲು ಹಲವರಿಗೆ ಸೂಚಿಸಿದ್ದರು ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಹಿಂಸಾಚಾರ ಕುರಿತಂತೆ 71 ವರ್ಷ ವಯಸ್ಸಿನ, ಪಿಟಿಐ ಪಕ್ಷದ ಸ್ಥಾಪಕ ಇಮ್ರಾನ್ ಖಾನ್ ಹಾಗೂ ಅವರ ಪಕ್ಷದ ನೂರಾರು ಕಾರ್ಯಕರ್ತರು ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಭ್ರಷ್ಟಾಚಾರ ಪ್ರಕರಣ ಸಂಬಂಧ ಇಮ್ರಾನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದ ನಂತರ ದೇಶವ್ಯಾಪಿ ಪ್ರತಿಭಟನೆ ನಡೆದಿತ್ತು. ಲಾಹೋರ್‌ನ ‘ಜಿನ್ನಾ ಹೌಸ್’ ಸೇರಿ ಹಲವು ಸಂಕೀರ್ಣಗಳ ಮೇಲೆ ದಾಳಿ ನಡೆದಿತ್ತು.
ಮೇ 9ರಂದು ನಡೆದಿದ್ದ ಹಿಂಸೆಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಸಲ್ಲಿಸಿದ್ದ ಬಂಧನಪೂರ್ವ ಜಾಮೀನು ಅರ್ಜಿಯನ್ನು ಕೋರ್ಟ್ ಈ ವಾರದ ಆರಂಭದಲ್ಲಿ ವಜಾ ಮಾಡಿತ್ತು.