ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ನೀತಿ ಸಂಹಿತೆ ಉಲ್ಲಂಘನೆ: ತಡೆಯುವ ಛಾತಿ ಆಯೋಗಕ್ಕೆ ಇಲ್ಲ

Published 23 ಮೇ 2024, 22:30 IST
Last Updated 23 ಮೇ 2024, 22:30 IST
ಅಕ್ಷರ ಗಾತ್ರ

ಆಡಳಿತಾರೂಢ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚುನಾವಣಾ ಆಯೋಗವು ಈ ‍ಪಕ್ಷಗಳ ತಾರಾ ಪ್ರಚಾರಕರ ದ್ವೇಷ ಭಾಷಣಕ್ಕೆ ಸಂಬಂಧಿಸಿ ನಿರ್ದೇಶನಗಳನ್ನು ನೀಡಿದೆ. ‘ವಿಭಜನಕಾರಿ ಮಾತು’ಗಳಿಂದ ತಾರಾ ಪ್ರಚಾರಕರು ದೂರ ಇರುವಂತೆ ನೋಡಿಕೊಳ್ಳಿ ಎಂದು ಇಬ್ಬರೂ ಅಧ್ಯಕ್ಷರಿಗೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ದೂರು ಸಲ್ಲಿಕೆಯಾದ 27 ದಿನಗಳ ಬಳಿಕ ಚುನಾವಣಾ ಆಯೋಗವು ಕ್ರಮ ಕೈಗೊಂಡಿದೆ. ಬಹುಪಾಲು ಮತದಾನ ಮುಗಿದಿದೆ. 115 ಕ್ಷೇತ್ರಗಳಷ್ಟೇ
ಬಾಕಿ ಇವೆ. ಅದರಲ್ಲೂ ಆರನೇ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರ ಗುರುವಾರ ಮುಗಿದಿದೆ. ಕೊನೆಯ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ಇದೆ. ಇಷ್ಟು ವಿಳಂಬ ಧೋರಣೆ ಅನುಸರಿಸಲು ಕಾರಣವೇನು? ಆಯೋಗವು ತಡವಾಗಿಯಾದರೂ ಕ್ರಮ ಕೈಗೊಂಡಿದೆ ಎಂದು ಸಮಾಧಾನಪಡುವಂತಹ ವಿಚಾರವೂ ಅಲ್ಲ ಇದು. ಏಕೆಂದರೆ, ಚುನಾವಣಾ ಆಯೋಗವು ನೀತಿ ಸಂಹಿತೆ ಪಾಲನೆ ಆಗುವಂತೆ ನೋಡಿಕೊಳ್ಳುವ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ, ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ದೊರಕುವಂತೆ ಮಾಡುವ ತನ್ನ ಹೊಣೆಗಾರಿಕೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದೇ ಹೇಳಬೇಕಾ ಗುತ್ತದೆ. ಈ ಬಾರಿಯ ಚುನಾವಣಾ ಪ್ರಚಾರವೇ ಅದಕ್ಕೆ ಪುರಾವೆಯಾಗಿದೆ. ರಾಜಕೀಯ ಸಂವಾದ, ಚರ್ಚೆ ಮತ್ತು ಚುನಾವಣಾ ಪ್ರಚಾರದ ಗುಣಮಟ್ಟ ಚುನಾವಣೆಯಿಂದ ಚುನಾವಣೆಗೆ ಕುಸಿಯುತ್ತಲೇ ಸಾಗಿರುವುದಕ್ಕೆ ಆಯೋಗವೂ ಕಾರಣವಾಗಿದೆ.

ಚುನಾವಣೆಯ ಪ್ರಚಾರದಲ್ಲಿ ದ್ವೇಷ ಭಾಷಣ, ಕೋಮು ಧ್ರುವೀಕರಣದ ಹೇಳಿಕೆಗಳ ಮೇಲಾಟವೇ ನಡೆದಿದೆ. ಎಲ್ಲ ಪಕ್ಷಗಳ ಹಲವು ನಾಯಕರು ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರೇ ಚುನಾವಣಾ ಪ್ರಚಾರವನ್ನು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಸಿರುವುದರ ಮುಂಚೂಣಿಯಲ್ಲಿದ್ದರು ಎಂಬುದು ಶೋಭೆ ತರುವ ವಿಚಾರವಲ್ಲ. ಮುಸ್ಲಿಮರ ಕುರಿತಂತೆ ಅವರು ದ್ವೇಷ ಭಾಷಣ ಮಾಡಿದ್ದಾರೆ. ಚುನಾವಣಾ ಪ್ರಚಾರ ಆರಂಭವಾದಾಗಿನಿಂದ ಪ್ರತಿ ದಿನವೂ ಕೋಮು ಧ್ರುವೀಕರಣದ ಮಾತುಗಳನ್ನು ಆಡಿದ್ದಾರೆ. ಆಧಾರವಿಲ್ಲದ ಹಲವು ಆರೋಪಗಳನ್ನು ಮಾಡಿದ್ದಾರೆ. ಕೋಲ್ಕತ್ತ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮತ್ತು ತಮ್ಲುಕ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್‌ ಗಂಗೋಪಾಧ್ಯಾಯ ಅವರು ಮಮತಾ ಬ್ಯಾನರ್ಜಿ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಆಯೋಗವು ಮಂಗಳವಾರ ಕ್ರಮ ಕೈಗೊಂಡಿತ್ತು. ಅವರಿಗೆ 24 ತಾಸು ಪ್ರಚಾರ ನಿಷೇಧ ಹೇರಿತ್ತು. ಅದಕ್ಕೂ ಹಿಂದೆಯೂ ಕಾಂಗ್ರೆಸ್‌ನ ರಣದೀಪ್‌ ಸುರ್ಜೇವಾಲಾ, ಬಿಜೆಪಿಯ ಶೋಭಾ ಕರಂದ್ಲಾಜೆ ಮತ್ತು ದಿಲೀಪ್ ಘೋಷ್‌, ಬಿಆರ್‌ಎಸ್‌ನ ಕೆ.ಚಂದ್ರಶೇಖರ ರಾವ್‌, ವೈಎಸ್‌ಆರ್‌ ಕಾಂಗ್ರೆಸ್‌ನ ಜಗನ್‌ ಮೋಹನ್‌ ರೆಡ್ಡಿ ಮುಂತಾದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮೋದಿ ಮತ್ತು ರಾಹುಲ್‌ ಅವರ ವಿರುದ್ಧ ಕೈಗೊಂಡ ಕ್ರಮಗಳ ಹಿಂದೆ ಸಮಾನತೆಯನ್ನು ಸಾರುವ ಉದ್ದೇಶವನ್ನು ಆಯೋಗವು ಹೊಂದಿರಬಹುದು. ಆದರೆ, ವಿವಿಧ ಸಮುದಾಯಗಳ ಬದುಕಿನ ಮೇಲೆ ಪರಿಣಾಮ ಬೀರಬಲ್ಲ ವಿಚಾರಗಳ ವಿಮರ್ಶೆ ಹಾಗೂ ಜನಾಂಗೀಯ ದ್ವೇಷಕ್ಕೆ ಕಾರಣವಾಗಬಹುದಾದ ಕೋಮು ಧ್ರುವೀಕರಣದ ಭಾಷಣವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ. ಮಾದರಿ ನೀತಿ ಸಂಹಿತೆಯನ್ನು ಯಾವುದೇ ಪಕ್ಷ ಅಥವಾ ನಾಯಕ ಪಾಲಿಸುತ್ತಿಲ್ಲ ಎಂಬುದು ಸ್ಪಷ್ಟ. ಅದನ್ನು ಪಾಲಿಸುವಂತೆ ಮಾಡುವ ಛಾತಿಯನ್ನು ಚುನಾವಣಾ ಆಯೋಗವು ಕಳೆದುಕೊಂಡಿದೆ ಎಂಬುದು ಇನ್ನೂ ಸ್ಪಷ್ಟ. ಏಕೆಂದರೆ, ಕೋಮು ಧ್ರುವೀಕರಣದ ಮಾತುಗಳನ್ನು ಆಡಬಾರದು ಎಂದು ಮೋದಿ ಅವರಿಗೆ ಆಯೋಗ ಸೂಚಿಸಿದೆ. ಆದರೆ, ಈ ಸೂಚನೆ ನೀಡಿದ ದಿನ ಮತ್ತು ಅದರ ಮರುದಿನ ಕೂಡ ಮೋದಿ ಅವರು ಕೋಮು ಧ್ರುವೀಕರಣದ ಮಾತುಗಳನ್ನು ಆಡಿದ್ದಾರೆ. ಸಂವಿಧಾನ ಕುರಿತಂತೆ ಮಾತನಾಡಬಾರದು ಎಂದು ರಾಹುಲ್‌ ಅವರಿಗೆ ಹೇಳಲಾಗಿದೆ. ಅವರು ಕೂಡ ಸಂವಿಧಾನವನ್ನು ಬಿಜೆಪಿ ಬದಲಿಸಲಿದೆ ಎಂದಿದ್ದಾರೆ. ನಿಷ್ಪಕ್ಷಪಾತ ಚುನಾವಣೆ ನಡೆಸುವ ಹೊಣೆ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ದೇಶದ ಪ್ರಧಾನಿಗೇ ಗೌರವ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT