ಶನಿವಾರ, ಜುಲೈ 2, 2022
25 °C

ಪೈಲಟ್‌ಗೆ ಹೃದಯಾಘಾತ; ವಿಮಾನ ತುರ್ತು ಭೂಸ್ಪರ್ಶ: 11 ಗಂಟೆಗಳ ನಂತರ ಮತ್ತೆ ಸಂಚಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ಪೈಲಟ್‌ಗೆ ಹೃದಯಾಘಾತ ಆದ ಕಾರಣ, ಬಾಂಗ್ಲಾದೇಶದ ‘ಬಿಮನ್ ಏರ್‌ಲೈನ್ಸ್‌’ನ ವಿಮಾನವೊಂದು ನಾಗಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಸುಮಾರು 11 ಗಂಟೆಗಳ ನಂತರ ತನ್ನ ಸಂಚಾರವನ್ನು ಪುನರಾರಂಭಿಸಿತು.

ಮಸ್ಕತ್‌ನಿಂದ ಢಾಕಾಗೆ 126 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಬಾಂಗ್ಲಾದೇಶ ವಿಮಾನದ ಪೈಲಟ್‌ಗೆ ದಾರಿ ಮಧ್ಯೆ ಹೃದಯಾಘಾತವಾಯಿತು. ಹಾಗಾಗಿ ಶುಕ್ರವಾರ ಬೆಳಿಗ್ಗೆ ಸುಮಾರು 11.40ರ ಸುಮಾರಿಗೆ ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.

ಹೃದಯಾಘಾತಕ್ಕೆ ಒಳಗಾಗಿರುವ ಪೈಲಟ್‌ ಪರಿಸ್ಥಿತಿ ಈಗಲೂ ಗಂಭೀರವಾಗಿದ್ದು, ಅವರು ವಿಮಾನ ನಿಲ್ದಾಣಕ್ಕೆ 10 ಕಿ.ಮೀ ದೂರವಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಗ್ಲಾದೇಶದ ಬಿಮಾನ್ ಏರ್‌ಲೈನ್ಸ್‌ ಸಂಸ್ಥೆ ಪರ್ಯಾಯ ಸಿಬ್ಬಂದಿ ವ್ಯವಸ್ಥೆ ಮಾಡಿದ ನಂತರ, ವಿಮಾನವು ಶುಕ್ರವಾರ ರಾತ್ರಿ 10.37ಕ್ಕೆ ಪ್ರಯಾಣಿಕರೊಂದಿಗೆ ಢಾಕಾದತ್ತ ಹೊರಟಿತು ಎಂದು ನಾಗಪುರ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಢಾಕಾದತ್ತ ಹೊರಟಿದ್ದ ವಿಮಾನ, ರಾಯಪುರ ಸಮೀಪದಲ್ಲಿದ್ದಾಗ ಪೈಲಟ್‌ಗೆ ಹೃದಯಾಘಾತವಾಯಿತು. ವಿಮಾನ ಸಿಬ್ಬಂದಿ ಕೋಲ್ಕತ್ತ ವಾಯು ಸಂಚಾರ ನಿಯಂತ್ರಣ ಕೇಂದ್ರವನ್ನು (ಎಟಿಸಿ) ಸಂಪರ್ಕಿಸಿದಾಗ, ಹತ್ತಿರದಲ್ಲಿರುವ ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲು ಸೂಚಿಸಿತು.

ಎಟಿಸಿ ಸೂಚನೆ ಮೇರೆಗೆ ಸಹ ಪೈಲಟ್‌ ನಾಗಪುರದಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು