ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ 1,675 ಮಕ್ಕಳ ರಕ್ಷಣೆ

ಮಕ್ಕಳ ಕಳ್ಳಸಾಗಣೆ ತಡೆದ ಬಚಪನ್‌ ಬಚಾವೊ ಆಂದೋಲನ
Last Updated 6 ಡಿಸೆಂಬರ್ 2020, 12:33 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪಿಡುಗು, ಲಾಕ್‌ಡೌನ್‌ ಜನರ ಜೀವನದ ಎಲ್ಲ ಸ್ತರದ ಮೇಲೆ ಪರಿಣಾಮ ಬೀರಿದೆ. ಇದಕ್ಕೆ ಮಕ್ಕಳೂ ಹೊರತಾಗಿಲ್ಲ.

ಈ ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ಮಕ್ಕಳ ಕಳ್ಳಸಾಗಣೆ ನಡೆದಿದ್ದು, ಸಂಕಷ್ಟದಲ್ಲಿದ್ದ 1,675 ಮಕ್ಕಳನ್ನ ರಕ್ಷಿಸಲಾಗಿದೆ ಎಂದು ನೊಬೆಲ್‌ ಪುರಸ್ಕಾರ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇತೃತ್ವದ ಬಚಪನ್‌ ಬಚಾವೊ ಆಂದೋಲನ (ಬಿಬಿಎ) ಹೇಳಿದೆ.

ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಸಂಖ್ಯೆಯ ಪಾಲಕರು ಉದ್ಯೋಗ ಕಳೆದುಕೊಂಡು, ಜೀವನೋಪಾಯಕ್ಕಾಗಿ ಪರದಾಡುತ್ತಿದ್ದಾರೆ. ಈ ಕಾರಣದಿಂದಲೂ ಮಕ್ಕಳ ಕಳ್ಳಸಾಗಣೆ, ಅವರ ಶೋಷಣೆಯಂಥ ಪ್ರಕರಣಗಳು ಹೆಚ್ಚಿವೆ ಎಂದೂ ಸಂಸ್ಥೆ ಹೇಳಿದೆ.

‘ಲಾಕ್‌ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ ಕೆಲವರು ಸಾಲ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸಿದರು. ಇನ್ನೊಂದೆಡೆ, ಈ ಬೆಳವಣಿಗೆ ಉತ್ತಮ ಜೀವನೋಪಾಯದ ಭರವಸೆ ನೀಡಿ ಮಕ್ಕಳ ಮಾರಾಟ, ಕಳ್ಳಸಾಗಣೆಯಂತಹ ಪ್ರಕರಣಗಳು ಹೆಚ್ಚುವಂತೆ ಮಾಡಿತು’ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಧನಂಜಯ್‌ ಟಿಂಗಲ್‌ ಹೇಳಿದರು.

ಬಿಹಾರದ ಗ್ರಾಮವೊಂದರ ನಿವಾಸಿ ಕೃಷ್ಣ (ಹೆಸರು ಬದಲಾಯಿಸಲಾಗಿದೆ) ಎಂಬ 13 ವರ್ಷದ ಬಾಲಕನನ್ನು ಸಂಸ್ಥೆ ರಕ್ಷಿಸಿದೆ. ಈ ಬಾಲಕ ಗುಜರಾತ್‌ನ ಗಾಂಧಿನಗರದ ಗಾರ್ಮೆಂಟ್‌ ಕಾರ್ಖಾನೆಯೊಂದರಲ್ಲಿ ದುಡಿಯುತ್ತಿದ್ದ. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕಾಗಿತ್ತು ಎಂದು ಸಂಸ್ಥೆಯ ಅಧಿಕಾರಿಗಳು ವಿವರಿಸಿದರು.

‘ಕೃಷ್ಣನ ಜೊತೆಗೆ ಇತರ 6 ಜನ ಬಾಲಕರೂ ದುಡಿಯುತ್ತಿದ್ದರು. ಅವರಿಗೆ ವಾರಕ್ಕೆ ಅರ್ಧ ದಿನ ಮಾತ್ರ ವಿಶ್ರಾಂತಿ ನೀಡಲಾಗುತ್ತಿತ್ತು. ಒಳ್ಳೆಯ ವೇತನ ನೀಡುವ ಭರವಸೆ ನೀಡಲಾಗಿದ್ದರೂ, ಅವರಿಗೆ ಅಷ್ಟು ವೇತನ ನೀಡಲೇ ಇಲ್ಲ. ಉತ್ಪಾದನೆಯ ಗುರಿ ತಲುಪಬೇಕು ಎಂಬ ಕಾರಣಕ್ಕೆ ಈ ಬಾಲಕರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡಬೇಕಾಗಿತ್ತು’ ಎಂದೂ ವಿವರಿಸಿದರು.

‘ಇನ್ನೊಂದೆಡೆ, ಕೃಷ್ಣನ ಪಾಲಕರು ಮನೆಯ ಚಾವಣಿ ದುರಸ್ತಿಗಾಗಿ ಲಾಕ್‌ಡೌನ್‌ಗಿಂತಲೂ ಮೊದಲು ₹ 20,000 ಸಾಲ ಪಡೆದಿದ್ದರು. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದ ಅವರು ಸಾಲ ತೀರಿಸಲಾಗದೇ ಸಂಕಷ್ಟದಲ್ಲಿದ್ದರು. ಈ ಪರಿಸ್ಥಿತಿಯ ಲಾಭ ಪಡೆದ ಕಳ್ಳಸಾಗಣೆಯಲ್ಲಿ ನಿರತರು, ಪಾಲಕರಿಗೆ ₹ 20,000 ನೀಡಿ ಕೃಷ್ಣನನ್ನು ಗುಜರಾತ್‌ಗೆ ಕರೆದುಕೊಂಡು ಹೋದರು’ ಎಂದು ಹೇಳಿದರು.

‘ಬಳೆಗಳನ್ನು ತಯಾರಿಸುವ ಘಟಕಗಳು ಜೈಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಈ ಘಟಕಗಳಲ್ಲಿ ದುಡಿಯುವ ಬಾಲಕಾರ್ಮಿಕರ ಸಂಖ್ಯೆಯೂ ಅಧಿಕ. ಇವುಗಳ ಮೇಲೆ ನಿಗಾ ಇಡಲಾಗಿದೆ’ ಎಂದರು.

‘ಬಾಲ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತದೆ. ಅಲ್ಲದೇ, ಬಳೆಗಳನ್ನು ತಯಾರಿಸುವ ಸಂದರ್ಭದಲ್ಲಿ ಅವುಗಳ ಮೇಲ್ಮೈಯಲ್ಲಿ ಅಲಂಕಾರ ಮಾಡುವ ನಾಜೂಕಿನ ಕೆಲಸ ಮಾಡಲು ಮಕ್ಕಳ ಕೈಗಳೇ ಹೆಚ್ಚು ಅನುಕೂಲ. ಹೀಗಾಗಿ ಈ ಉದ್ದಿಮೆಯಲ್ಲಿ ಬಾಲಕಾರ್ಮಿಕ ಸಂಖ್ಯೆ ಹೆಚ್ಚು’ ಎಂದು ಧನಂಜಯ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT