ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರಲ್ಲಿ ಸರಣಿ ವಿಧಾನಸಭಾ ಚುನಾವಣೆಗಳು: ಲೋಕಸಭೆಗೆ ದಿಕ್ಸೂಚಿ?

Last Updated 1 ಜನವರಿ 2023, 10:30 IST
ಅಕ್ಷರ ಗಾತ್ರ

ನವದೆಹಲಿ: ಈಶಾನ್ಯ ರಾಜ್ಯಗಳಲ್ಲದೆ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿವೆ. 2024 ರ ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈ ವಿಧಾನಸಭೆ ಚುನಾವಣೆಗಳನ್ನು ಸೆಮಿಫೈನಲ್ ಎಂದು ಪರಿಗಣಿಸಲಾಗುತ್ತಿದೆ.

ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯದಲ್ಲಿ ಫೆಬ್ರವರಿ-ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಮಾರ್ಚ್‌ನ ವಿವಿಧ ದಿನಾಂಕಗಳಲ್ಲಿ ಈ ರಾಜ್ಯಗಳ ಆಡಳಿತ ಅವಧಿ ಕೊನೆಗೊಳ್ಳುತ್ತಿದೆ.

ತ್ರಿಪುರಾದಲ್ಲಿ ಬಿಜೆಪಿ ಸರ್ಕಾರವಿದ್ದರೆ, ನಾಗಾಲ್ಯಾಂಡ್‌ನಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಬಿಜೆಪಿ ಬೆಂಬಲದೊಂದಿಗೆ ಅಧಿಕಾರದಲ್ಲಿದೆ. ಈಶಾನ್ಯದಿಂದ ರಾಷ್ಟ್ರೀಯ ಪಕ್ಷದ ಮಾನ್ಯತೆ ಹೊಂದಿರುವ ಏಕೈಕ ಪಕ್ಷ ನ್ಯಾಷನಲ್ ಪೀಪಲ್ಸ್ ಪಾರ್ಟಿ, ಎನ್‌ಡಿಎ ಮೈತ್ರಿಕೂಟದೊಂದಿಗೆ ಮೇಘಾಲಯದಲ್ಲಿ ಸರ್ಕಾರವನ್ನು ನಡೆಸುತ್ತಿದೆ.

ಮೂರು ರಾಜ್ಯಗಳ ಚುನಾವಣೆ ಒಟ್ಟಿಗೆ ನಡೆಯಲಿದ್ದು, ನಂತರ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ಡಿಸೆಂಬರ್‌ನಲ್ಲಿ ಹೇಳಿದ್ದವು.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಅವಧಿ ಮೇ 24 ರಂದು ಕೊನೆಗೊಳ್ಳಲಿದ್ದು, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

2023 ರ ಕೊನೆಯಲ್ಲಿ ಅಥವಾ 2024 ರ ಜನವರಿಯಲ್ಲಿ ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದ ಶಾಸನ ಸಭೆಗಳ ಆಡಳಿತಾವಧಿ ಮುಕ್ತಾಯಗೊಳ್ಳಲಿವೆ.

40 ಸದಸ್ಯರ ಮಿಜೋರಾಂ ವಿಧಾನಸಭೆಯ ಅವಧಿಯು ಡಿಸೆಂಬರ್ 17 ರಂದು ಕೊನೆಗೊಂಡರೆ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ವಿಧಾನಸಭೆಗಳ ಅಧಿಕಾರಾವಧಿಯು ಕ್ರಮವಾಗಿ ಜನವರಿ 3 ಮತ್ತು ಜನವರಿ 6, 2024 ರಂದು ಮುಕ್ತಾಯಗೊಳ್ಳುತ್ತದೆ.

ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆಗಳ ಅಧಿಕಾರಾವಧಿಯು ಅನುಕ್ರಮವಾಗಿ ಜನವರಿ 14 ಮತ್ತು ಜನವರಿ 16, 2024 ರಂದು ಕೊನೆಗೊಳ್ಳುತ್ತದೆ. ಈ ಐದು ರಾಜ್ಯಗಳ ಚುನಾವಣೆ ಒಟ್ಟಿಗೆ ನಡೆಯುವ ಸಾಧ್ಯತೆ ಇದೆ.

ಒಂಬತ್ತು ನಿಗದಿತ ಚುನಾವಣೆಗಳ ಹೊರತಾಗಿ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಈ ವರ್ಷ ತಳ್ಳಿಹಾಕುವಂತಿಲ್ಲ.

2023 ರ ಬೇಸಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ನಡೆಯಬಹುದು ಮತ್ತು ಭದ್ರತಾ ಪರಿಸ್ಥಿತಿ ಅವಲಂಬಿಸಿ ಚುನಾವಣಾ ದಿನಾಂಕ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಅಂತಿಮ ಮತದಾರರ ಪಟ್ಟಿಯನ್ನು ಕಳೆದ ವರ್ಷ ನವೆಂಬರ್ 25 ರಂದು ಪ್ರಕಟಿಸಲಾಗಿತ್ತು. ಆರ್ಟಿಕಲ್ 370 ನಿಬಂಧನೆಗಳನ್ನು ರದ್ದುಗೊಳಿಸಿದ ನಂತರ ಮತ್ತು ಹಿಂದಿನ ರಾಜ್ಯವನ್ನು 2019 ರಲ್ಲಿ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ನಡೆಯಲಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT