ಶನಿವಾರ, ಆಗಸ್ಟ್ 13, 2022
27 °C
‘ಪವರ್‌ ಸ್ಟಾರ್‌’ ಜನ್ಮದಿನದಂದೇ ದುರ್ಘಟನೆ: ಸಂತ್ರಸ್ತರಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಣೆ

ಬ್ಯಾನರ್ ಕಟ್ಟಲು ಹೋದ ಪವನ್‌ ಕಲ್ಯಾಣ್‌ನ ಮೂವರು ಅಭಿಮಾನಿಗಳ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ನ ‘ಪವರ್‌ ಸ್ಟಾರ್’ ಪವನ್‌ ಕಲ್ಯಾಣ್‌ ಅವರದ್ದು ಸಿನಿಮಾ ಮತ್ತು ರಾಜಕೀಯದ ಎರಡೂ ದೋಣಿಗಳ ಮೇಲಿನ ಪಯಣ. ಬಣ್ಣದಲೋಕದಲ್ಲಿ ಅವರಿಗೆ ಸಿಕ್ಕಿದಷ್ಟು ಯಶಸ್ಸು ರಾಜಕೀಯದಲ್ಲಿ ದಕ್ಕಿಲ್ಲ. ಹಾಗೆಂದು ರಾಜಕಾರಣದ ಸಖ್ಯ ಕಳೆದುಕೊಳ್ಳಲು ಅವರೂ ಸಿದ್ಧರಿಲ್ಲ.

ಅಂದಹಾಗೆ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅವರ ನಟನೆಯ ‘ವಕೀಲ್‌ ಸಾಬ್‌’ ಸಿನಿಮಾದ ಹೊಸ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ. ಆದರೆ, ಈ ವರ್ಷದ ಹುಟ್ಟುಹಬ್ಬವು ಅವರ ಪಾಲಿಗೆ ಸೂತಕದ ದಿನವಾಗಿ ಮಾರ್ಪಟ್ಟಿರುವುದು ವಿಷಾದನೀಯ. ಅವರ ಮೂವರು ಅಭಿಮಾನಿಗಳು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿರುವುದೇ ಇದಕ್ಕೆ ಕಾರಣ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಾಂತಿಪುರದ ಬಳಿಯ ಕುಪ್ಪಂ–ಪಲ್ಲಮನೇರು ಹೆದ್ದಾರಿ ಬಳಿ ತಮ್ಮ ನೆಚ್ಚಿನ ನಟನ ಜನ್ಮದಿನದ ಅಂಗವಾಗಿ ಬ್ಯಾನರ್‌ ಕಟ್ಟಲು ಹೋದ ಸೋಮಶೇಖರ್‌ (30), ಅವರ ಸಹೋದರ ರಾಜೇಂದ್ರ (32) ಮತ್ತು ಸ್ನೇಹಿತ ಅರುಣಾಚಲಂ (28) ನಿನ್ನೆ ಮೃತಪಟ್ಟಿದ್ದಾರೆ. ಹೆದ್ದಾರಿಯ ಬದಿ ಇದ್ದ 25 ಅಡಿ ಉದ್ದದ ವಿದ್ಯುತ್‌ ಕಂಬಕ್ಕೆ ಬ್ಯಾನರ್‌ ಕಟ್ಟುವ ವೇಳೆ ಈ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮೃತಪಟ್ಟವರು ಪವನ್‌ ಕಲ್ಯಾಣ್‌ ಅವರ ಅಪ್ಪಟ ಅಭಿಮಾನಿಗಳು. ಜೊತೆಗೆ, ಜನಸೇನಾ ಪಕ್ಷದ ಕಾರ್ಯಕರ್ತರೂ ಹೌದು. 2018ರಲ್ಲಿಯೂ ಇಂತಹದ್ದೇ ದುರ್ಘಟನೆ ನಡೆದಿತ್ತು.

‘‌ಕೋವಿಡ್‌–19 ಪರಿಣಾಮ ನನ್ನ ಹುಟ್ಟುಹಬ್ಬ ಆಚರಿಸುವುದು ಬೇಡ’ ಎಂದು ಪವನ್‌ ಕಲ್ಯಾಣ್‌ ವಾರದ ಹಿಂದೆಯೇ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಅವರ ಮಾತನ್ನು ಅಭಿಮಾನಿಗಳು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ‘ವಕೀಲ್‌ ಸಾಬ್‌’ ಚಿತ್ರತಂಡ ಮತ್ತು ಪವನ್ ಕಲ್ಯಾಣ್‌ ಸಂತ್ರಸ್ತ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಈ ದುರ್ಘಟನೆ ಬಗ್ಗೆ ಪವನ್‌ ಕಲ್ಯಾಣ್‌ ಕಂಬನಿ ಮಿಡಿದಿದ್ದಾರೆ. ಜನಸೇನಾ ಪಕ್ಷದ ಟ್ವಿಟರ್‌ ಖಾತೆಯ ಮೂಲಕ ಮೂವರ ನಿಧನಕ್ಕೆ ಸಂತಾಪ ಸೂಚಿಸಲಾಗಿದೆ. ‘ಸಂತ್ರಸ್ತ ಕುಟುಂಬಗಳ ಜವಾಬ್ದಾರಿ ಹೊರುವುದು ನನ್ನ ಕರ್ತವ್ಯ. ಇಂದು ನನ್ನ 49ನೇ ಜನ್ಮದಿನವನ್ನು ಆಚರಿಸಬೇಡಿ’ ಎಂದು ಪವನ್‌ ಕಲ್ಯಾಣ್‌ ಅವರು ಅಭಿಮಾನಿಗಳಿಗೆ ಕೋರಿದ್ದಾರೆ.

ಪೊಲೀಸರು ‍ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

‘ವಕೀಲ್ ಸಾಬ್‌’ ಸಿನಿಮಾ ಹಿಂದಿಯ ‘ಪಿಂಕ್‌’ ಚಿತ್ರದ ರಿಮೇಕ್‌. ಇದಕ್ಕೆ ವೇಣು ಶ್ರೀರಾಮ್‌ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ನಿವೇತಾ ಥಾಮಸ್‌, ಅಂಜಲಿ ಮತ್ತು ಅನನ್ಯಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು