ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಕ್ಷೇಪಾರ್ಹ’ ಪೋಸ್ಟ್‌ಗೆ 3 ವರ್ಷ ಜೈಲು

Last Updated 22 ನವೆಂಬರ್ 2020, 20:37 IST
ಅಕ್ಷರ ಗಾತ್ರ

ತಿರುವನಂತಪುರ: ಸಾಮಾಜಿಕ ಮಾಧ್ಯಮಗಳಲ್ಲಾಗಲಿ, ಬೇರೆ ಎಲ್ಲೇ ಆಗಲಿ ಮಾನಹಾನಿಕರ ಅಥವಾ ಅವಹೇಳನಕಾರಿ ವಿಚಾರಗಳನ್ನು ಪ್ರಸಾರ ಮಾಡುವವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ₹ 10,000 ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕೊಡುವ ಸುಗ್ರೀವಾಜ್ಞೆಗೆ ಕೇರಳದ ರಾಜ್ಯಪಾಲ ಅರೀಫ್‌ ಮೊಹಮ್ಮದ್‌ ಖಾನ್‌ ಅವರು ಶನಿವಾರ ಸಹಿ ಮಾಡಿದ್ದಾರೆ.

ಕೇರಳ ಪೊಲೀಸ್‌ ಕಾಯ್ದೆಗೆ ಮಾಡಿರುವ ಈ ತಿದ್ದುಪಡಿಗೆ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿವೆ. ‘ಮಾಧ್ಯಮಗಳನ್ನು ದಮನಿಸಲು ಮತ್ತು ಟೀಕಾಕಾರರನ್ನು ಶಿಕ್ಷಿಸಲು ಈ ಕಾನೂನು ಬಳಕೆಯಾಗುವ ಅಪಾಯವಿದೆ’ ಎಂದು ಅವು ಹೇಳಿವೆ. ಆಡಳಿತಾರೂಢ ಎಡಪಕ್ಷದ ಕೆಲವು ನಾಯಕರು ಸಹ ಈ ಸುಗ್ರೀವಾಜ್ಞೆಯನ್ನು ವಿರೋಧಿಸಿದ್ದಾರೆ ಎನ್ನಲಾಗಿದೆ.

‘ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಪತ್ರಿಕಾ ಸ್ವಾತಂತ್ರ್ಯಕ್ಕೆ ಈ ಕಾನೂನಿನಿಂದ ಯಾವುದೇ ಅಡ್ಡಿಯಾಗುವುದಿಲ್ಲ. ಕಾನೂನಿನ ಬಗ್ಗೆ ವಿರೋಧಪಕ್ಷಗಳ ಗ್ರಹಿಕೆ ಆಧಾರರಹಿತ’ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ಹೇಳಿದೆ.

‘ಮಾಧ್ಯಮ ಸ್ವಾತಂತ್ರ್ಯವನ್ನು ಕಾಪಾಡುವುದರ ಜತೆಗೆ ನಾಗರಿಕರಿಗೆ ಸಂವಿಧಾನವು ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಘನತೆಯನ್ನು ಕಾಪಾಡುವ ಜವಾಬ್ದಾರಿಯೂ ಸರ್ಕಾರದ ಮೇಲಿರುತ್ತದೆ. ಒಬ್ಬನ ಸ್ವಾತಂತ್ರ್ಯವು ಇನ್ನೊಬ್ಬನ ಮೂಗು ಆರಂಭವಾಗುವಲ್ಲಿ ಕೊನೆಗೊಳ್ಳುತ್ತದೆ ಎಂಬ ನೀತಿಯನ್ನು ಗೌರವಿಸಬೇಕು. ಈ ನೀತಿಯನ್ನು ಮೀರಿದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಕಾಂಗ್ರೆಸ್‌ ವಿರೋಧ:ಹೊಸ ಕಾನೂನಿನ ಬಗ್ಗೆ ಟ್ವೀಟ್‌ ಮೂಲಕ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ, ‘ಕೇರಳದ ಎಲ್‌ಡಿಎಫ್‌ ಸರ್ಕಾರ ರೂಪಿಸಿರುವ ಹೊಸ ಕಾನೂನು ಅಚ್ಚರಿ ಮೂಡಿಸಿದೆ. ಈ ದೌರ್ಜನ್ಯಕಾರಿ ನಿರ್ಧಾರಗಳನ್ನು ನನ್ನ ಸ್ನೇಹಿತ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ’ ಎಂದಿದ್ದಾರೆ.

ತಿರುವನಂತಪುರದ ಸಂಸದ ಶಶಿ ತರೂರ್‌, ‘ಇದು ತೊಂದರೆ ಉಂಟುಮಾಡುವ ಕಾನೂನು. ಇದನ್ನು ಎಷ್ಟೊಂದು ಸಡಿಲವಾಗಿ ರೂಪಿಸಲಾಗಿದೆ ಎಂದರೆ, ರಾಜಕೀಯ ವಿರೋಧಿಗಳ ವಿರುದ್ಧವೂ ಬಳಸಬಹುದಾಗಿದೆ’ ಎಂದಿದ್ದಾರೆ.

‘ಆಕ್ಷೇಪಾರ್ಹ ಟ್ವೀಟ್‌, ಹೇಳಿಕೆಗಳು, ಮಹಿಳೆಯರ ನಿಂದನೆ, ಬೆದರಿಕೆ ಹಾಕುವುದು ಮುಂತಾದ ವಿಚಾರಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಅವಕಾಶ ಮಾಡಿಕೊಡುತ್ತದೆ. ಆದರೆ ರಾಜಕೀಯ ವಿರೋಧಿಗಳು, ಪತ್ರಕರ್ತರು ಹಾಗೂ ಟೀಕಾಕಾರರ ವಿರುದ್ಧವೂ ಇದನ್ನು ಬಳಸಬಹುದಾದ ರೀತಿಯಲ್ಲಿ ರೂಪಿಸಲಾಗಿದೆ’ ಎಂದು ತರೂರ್‌ ಟ್ವೀಟ್‌ ಮಾಡಿದ್ದಾರೆ.

‘ಈ ಕಾನೂನಿನ ವಿರುದ್ಧ ನ್ಯಾಯಾಲಯದ ಮೊರೆಹೋಗಲಾಗುವುದು. ಒಂದು ರಾಜಕೀಯ ಪಕ್ಷ ಅಥವಾ ಜನವರ್ಗದ (ಉದಾ: ‘ಸಂಘಿ’ಗಳು, ಎಡಪಂಥೀಯ ಧೋರಣೆಯವರು– ‘ಲಿಬ್ಟಾರ್ಡ್ಸ್’) ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಟೀಕೆಗಳ ವಿರುದ್ಧವೂ ಈ ಕಾನೂನಿನಡಿ ಕ್ರಮ ಕೈಗೊಳ್ಳಲು ಅವಕಾಶ ಇದೆ. ನಿಂದನೆ ಮತ್ತು ಬೆದರಿಕೆಯ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವ ರೀತಿಯಲ್ಲಿ ಇದನ್ನು ಮರು ರೂಪಿಸಬೇಕಾಗಿದೆ’ ಎಂದು ತರೂರ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಸಮರ್ಥನೆ
‘ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಲಿ, ನಿಷ್ಪಕ್ಷಪಾತ ಮಾಧ್ಯಮದ ವಿರುದ್ಧವಾಗಲಿ ಈ ಕಾನೂನನ್ನು ಬಳಸುವುದಿಲ್ಲ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

‘ಸಂವಿಧಾನದ ಪರಿಧಿಯೊಳಗೆ ಸರ್ಕಾರವನ್ನು ಟೀಕಿಸುವ ವ್ಯಕ್ತಿ ಅಥವಾ ಮಾಧ್ಯಮದ ವಿರುದ್ಧ ಈ ಕಾನೂನಿನಡಿ ಕ್ರಮ ಕೈಗೊಳ್ಳುವುದಿಲ್ಲ. ಜನರ ವೈಯಕ್ತಿಕ ಇಷ್ಟಾನಿಷ್ಟಗಳನ್ನು, ರಾಜಕೀಯ ಅಥವಾ ರಾಜಕೀಯೇತರ ಹಿತಾಸಕ್ತಿಗಳನ್ನು ಟೀಕೆಗೆ ಬಳಸುವುದು, ಕುಟುಂಬಗಳ ಶಾಂತಿ ಕದಡುವುದು ಮುಂತಾದವು ಪತ್ರಿಕೋದ್ಯಮದ ವ್ಯಾಪ್ತಿಯೊಳಗೆ ಬರುವುದಿಲ್ಲ. ಅವೆಲ್ಲವೂ ವೈಯಕ್ತಿಕ ದ್ವೇಷ ಸಾಧನೆಗಳಾಗಿರುತ್ತವೆ. ಅನೇಕ ಸಂದರ್ಭಗಳಲ್ಲಿ ಇಂಥ ಟೀಕೆಗಳ ಹಿಂದೆ ಆರ್ಥಿಕ ಲಾಭದ ಗುರಿ ಇರುತ್ತದೆ. ಕೆಲವು ಆನ್‌ಲೈನ್‌ ಮಾಧ್ಯಮಗಳು ಸಾಮಾಜಿಕ ಮಾಧ್ಯಮಗಳನ್ನು ಸತತವಾಗಿ ದುರುಪಯೋಗಪಡಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ದೂರುಗಳು ಬರುತ್ತಿವೆ. ಆದ್ದರಿಂದ ಕಾನೂನು ರೂಪಿಸುವುದು ಅಗತ್ಯವಾಗಿದೆ’ ಎಂದು ಅವರು ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಆಕ್ಷೇಪ ಯಾಕೆ?
ಸಾಮಾಜಿಕ ಮಾಧ್ಯಮಗಳಲ್ಲಿ ವಿಶೇಷವಾಗಿ ಮಹಿಳೆಯರಿಗೆ ಆಗುತ್ತಿರುವ ತೇಜೋವಧೆಯನ್ನು ತಡೆಯುವ ಉದ್ದೇಶದಿಂದ ಕೇರಳ ಪೊಲೀಸ್‌ ಕಾಯ್ದೆಗೆ ‘118–ಎ’ ಸೆಕ್ಷನ್‌ ಅನ್ನು ಸೇರಿಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ, ರಾಜ್ಯಪಾಲರು ಸಹಿ ಮಾಡಿರುವ ಸುಗ್ರೀವಾಜ್ಞೆಯಲ್ಲಿ ‘ಸಾಮಾಜಿಕ ಮಾಧ್ಯಮ’ ಎಂಬ ಪದ ಬಳಕೆಯಾಗಿಲ್ಲ. ಬದಲಿಗೆ ‘ಯಾವುದೇ ರೀತಿಯ ಸಂವಹನ’ ಎಂದು ನಮೂದಿಸಲಾಗಿದೆ.

ಆದ್ದರಿಂದ ಈ ಕಾನೂನಿನ ಉದ್ದೇಶ, ಮುಖ್ಯವಾಹಿನಿಯ ಮಾಧ್ಯಮಗಳನ್ನು ಮತ್ತು ಅವುಗಳ ಮೂಲಕ ರಾಜಕಾರಣಿಗಳನ್ನು ಟೀಕಿಸುವವರನ್ನು ನಿಯಂತ್ರಿಸುವುದೇ ಆಗಿದೆ ಎಂಬ ಆತಂಕ ಉಂಟಾಗಿದೆ. ಅದೂ ಅಲ್ಲದೆ, ಯಾರಿಗೋ ಆದ ಅವಮಾನ, ತೇಜೋವಧೆಯ ವಿರುದ್ಧ ಯಾರು ಬೇಕಾದರೂ ದೂರು ದಾಖಲಿಸಬಹುದಾದಂಥ ಅವಕಾಶವನ್ನೂ ಈ ಕಾನೂನು ನೀಡುತ್ತದೆ.ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ವಿಚಾರಗಳ ಪ್ರಸಾರವನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಐಟಿ ಕಾಯ್ದೆಯ ಸೆಕ್ಷನ್‌ 66–ಎ ಹಾಗೂ ಕೇರಳ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 118–ಡಿ ಅನ್ನು ಹಿಂದೆ ಸುಪ್ರೀಂ ಕೋರ್ಟ್‌ ರದ್ದುಪಡಿಸಿತ್ತು.

ಮಾಧ್ಯಮಗಳು ಸಿಪಿಎಂ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿ ವಿಜಯನ್‌ ಹಾಗೂ ಆ ಪಕ್ಷದ ಕೆಲವು ನಾಯಕರು ಹಲವು ಬಾರಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT