ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆ ರಾಜ್ಯದ ಕೊರೊನೇತರ ರೋಗಿಗಳಿಗೆ ಟೆಲಿಮೆಡಿಸಿನ್ ಸಮಾಲೋಚನೆ

‘ಡಾಕ್ಟರ್ ಎ ಡಯಲ್‘ ಕಾರ್ಯಕ್ರಮದಡಿ 300 ವೈದ್ಯರ ಸೇವೆ
Last Updated 27 ಸೆಪ್ಟೆಂಬರ್ 2020, 6:16 IST
ಅಕ್ಷರ ಗಾತ್ರ

ಶ್ರೀನಗರ: ಕೊರೊನಾ ಸೋಂಕಿನಿಂದ ಅಷ್ಟೇ ಅಲ್ಲದೆ ಬೇರೆ ಬೇರೆ ರೋಗಳಿಂದ ಬಳಲುತ್ತಿರುವ ಜಮ್ಮ ಮತ್ತು ಕಾಶ್ಮೀರ ರಾಜ್ಯದ ನಿವಾಸಿಗಳಿಗೆ ನೆರವಾಗಲು ವಿಶ್ವದಾದ್ಯಂತವಿರುವ 300 ವೈದ್ಯರನ್ನೊಳಗೊಂಡ ತಂಡವೊಂದು ಉಚಿತ ಟೆಲಿ ಮೆಡಿಸಿನ್ ಸಮಾಲೋಚನೆ‌ ಸೇವಾ ಕೇಂದ್ರವನ್ನು ಆರಂಭಿಸಿದೆ.

‘ಡಯಲ್ ಎ ಡಾಕ್ಟರ್‌‘ ಕಾರ್ಯಕ್ರಮದ ಅಡಿಯಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ, ವಿವಿಧ ರೋಗಗಳ ತಜ್ಞರು ಸೇರಿದಂತೆ ಮುನ್ನೂರು ವೈದ್ಯರನ್ನೊಳಗೊಂಡ ತಂಡವೊಂದು ಸ್ವಯಂ ಪ್ರೇರಿತರಾಗಿ ಕಣಿವೆ ರಾಜ್ಯದಲ್ಲಿರುವ ಕೊರೊನೇತರ ರೋಗಿಗಳಿಗೆ ಆರೋಗ್ಯ ಸೇವೆ ನೀಡಲು ಮುಂದಾಗಿದೆ.

ಇಹ್ಸಾಸ್‌ಇಂಟರ್‌ನ್ಯಾಷನಲ್‌ ಮತ್ತು ಡರ್ಡ್ ವೆಲ್‌ಫೇರ್ ಸೊಸೈಟಿಯವರು, ಕಾಶ್ಮೀರ ಹೆಲ್ತ್‌ ಕೇರ್ ಸಪೋರ್ಟ್‌ ಗ್ರೂಪ್‌ ಸಹಯೋಗದೊಂದಿಗೆ ಈ ಟಲಿಮೆಡಿಸಿನ್‌ ಆರೋಗ್ಯ ಸಮಾಲೋಚನಾ ಸೇವೆಯನ್ನು ಆರಂಭಿಸಿರುವುದಾಗಿ ಇಹ್ಸಾಸ್‌ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿ ಹಕಿಮ್‌ ಮೊಹಮ್ಮದ್ ಇಲಿಯಾಸ್‌‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಕೋವಿಡ್‌ 19 ಸಾಂಕ್ರಾಮಿಕ ರೋಗವು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಆರೋಗ್ಯ ಮೂಲ ಸೌಕರ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮವನ್ನು ಗಮನಿಸಿ, ನಾವು ‘ಡಯಲ್‌ ಎ ಡಾಕ್ಟರ್‌‘ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ. ಈ ಮೂಲಕ ಕಣಿವೆ ರಾಜ್ಯದ ಜನರು ಮನೆಯಲ್ಲೇ ಕುಳಿತು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಬಹುದು‘ ಎಂದು ಅವರು ಹೇಳಿದ್ದಾರೆ.

‘ಕೊರೊನಾ ಸೋಂಕು ಅಲ್ಲದೇ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಬಹಳ ಅಪಾಯ ಎಂಬುದನ್ನು ಗಮನಿಸಿ ಹಾಗೂ ದೂರವಾಣಿ ಮೂಲಕ ಅನೇಕ ರೋಗಗಳನ್ನು ನಿರ್ವಹಣೆ ಮಾಡಬಹುದು ಎಂದು ತೀರ್ಮಾನಿಸಿ ಈ ಸೇವೆ ಆರಂಭಿಸಿದ್ದೇವೆ‘ ಎಂದು ವಿವರಿಸಿದ್ದಾರೆ.

ಆರೋಗ್ಯ ಸಮಾಲೋಚನೆಗಾಗಿ ಬರುವ ಕರೆಗಳನ್ನು ಹಾಗೂ ಪ್ರಕರಣಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದಕ್ಕಾಗಿ ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಯಿರುವ ನಿಯಂತ್ರಣ ಕೊಠಡಿ ತೆರೆದು, ಅದರಲ್ಲಿ ಉಚಿತ ಸಹಾಯವಾಣಿ(1800 889 2729 ) ಆರಂಭಿಸಿದ್ದಾರೆ.

‘ಇಲ್ಲಿಯವರೆಗೆ ಎರಡು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರಿಗೆ ಸಮಾಲೋಚನೆ ಮೂಲಕ ಉಚಿತ ಆರೋಗ್ಯ ಸೇವೆ ನೀಡಲಾಗಿದೆ‘ ಎಂದು ಇಲಿಯಾಸ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT