ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಕಲಾಪಕ್ಕೆ ಅಡ್ಡಿ, ಕಾಂಗ್ರೆಸ್ ಸಂಸದರ ಅಮಾನತು

Last Updated 26 ಜುಲೈ 2022, 5:11 IST
ಅಕ್ಷರ ಗಾತ್ರ

ನವದೆಹಲಿ: ಬೆಲೆ ಏರಿಕೆ, ಜಿಎಸ್‌ಟಿ ಮತ್ತು ಇತರ ವಿಷಯಗಳ ಕುರಿತು ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆಯು ಸತತ ಆರನೇ ದಿನವೂ ಲೋಕಸಭೆಯಲ್ಲಿ ಕಲಾಪವನ್ನು ನುಂಗಿ ಹಾಕಿತು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಎಚ್ಚರಿಕೆಯ ಹೊರತಾಗಿಯೂ ಫಲಕಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ನ ನಾಲ್ವರು ಸಂಸದರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.

ಕಾಂಗ್ರೆಸ್ ಸಂಸದರಾದ ಮಾಣಿಕ್ಕಂ ಟಾಗೋರ್, ಟಿ.ಎನ್. ಪ್ರತಾಪನ್, ಜ್ಯೋತಿಮಣಿ ಹಾಗೂ ರಮ್ಯಾ ಹರಿದಾಸ್ ಅವರನ್ನು ಅಮಾನತು ಮಾಡಲಾಗಿದೆ.

ನಾಲ್ವರು ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡುವುದಕ್ಕೆ ಸಂಬಂಧಿಸಿದ ನಿಲುವಳಿಯನ್ನುಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಂಡಿಸಿದರು. ಧ್ವನಿಮತದ ಮೂಲಕ ನಿಲುವಳಿಗೆ ಅಂಗೀಕಾರ ಪಡೆಯಲಾಯಿತು.

ಕಲಾಪದ ವೇಳೆ ವಿರೋಧ ಪಕ್ಷಗಳ ಕೆಲವು ಸದಸ್ಯರು ಸದನದ ಬಾವಿಗಿಳಿದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯ ಫಲಕಗಳನ್ನು ಪ್ರದರ್ಶಿಸಿದರು. ಗದ್ದಲದ ನಡುವೆಯೇ 20 ನಿಮಿಷಗಳ ಕಾಲ ಪ್ರಶ್ನೋತ್ತರ ಅವಧಿ ನಡೆದ ನಂತರ ಕಲಾಪವನ್ನು ಮಧ್ಯಾಹ್ನ 3ಗಂಟೆಗೆ ಮುಂದೂಡಲಾಯಿತು.

ಕಲಾಪ ಪುನಾರಾರಂಭಗೊಂಡ ಬಳಿಕ ಮತ್ತೆ ವಿರೋಧ ಪಕ್ಷಗಳ ಸದಸ್ಯರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು. ಕಲಾಪಕ್ಕೆ ನಿರಂತರ ಅಡ್ಡಿಪಡಿಸಿದ ಕಾರಣಕಾಂಗ್ರೆಸ್‌ನ ನಾಲ್ವರು ಸಂಸದರನ್ನು ಅಮಾನತುಗೊಳಿಸಲಾಯಿತು. ಬಳಿಕ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಕಾಂಗ್ರೆಸ್‌ ಖಂಡನೆ: ಸಂಸದರ ಅಮಾನತನ್ನು ಕಾಂಗ್ರೆಸ್‌ ಖಂಡಿಸಿದೆ. ಸಂಸತ್‌ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ಕಾಂಗ್ರೆಸ್‌ ಉಪನಾಯಕ ಗೌರವ್‌ ಗೊಗೊಯ್‌, ‘ಸಂಸದರನ್ನು ಅಮಾನತು ಮಾಡುವ ಮೂಲಕ ಜನರ ಪರವಾಗಿ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ ಪಕ್ಷವನ್ನು ಬೆದರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಇಂಥ ಬೆದರಿಕೆಗೆ ಬಗ್ಗುವುದಿಲ್ಲ’ ಎಂದು ಹೇಳಿದರು.

‘ಸಂಸದರು ಫಲಕಗಳನ್ನು ಹಿಡಿದುಅಡುಗೆ ಅನಿಲ, ಹಾಲು, ಮೊಸರು ಮುಂತಾದ ಪದಾರ್ಥಗಳಿಗೆ ಜಿಎಸ್‌ಟಿ ವಿಧಿಸಿರುವ ಬಗ್ಗೆ ಧ್ವನಿ ಎತ್ತಿದ್ದರು. ಈ ಬಗ್ಗೆ ಚರ್ಚಿಸಲು ನಿಲುವಳಿ ಸೂಚನೆಗೆ ಕೋರಿದ್ದರು. ಆದರೆ ಯಾವುದೇ ಚರ್ಚೆ ನಡೆಯಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT